ಕ್ರೂರಿ ಕೊರೊನಾಗೆ ಒಂದೇ ದಿನ ಬಲಿಯಾದ ಅಕ್ಕ-ತಂಗಿ

ಕ್ರೂರಿ ಕೊರೊನಾಗೆ ಒಂದೇ ದಿನ ಬಲಿಯಾದ ಅಕ್ಕ-ತಂಗಿ

ಶಿವಮೊಗ್ಗ: ಮಹಾಮಾರಿ ಕೊರೊನಾ ಜನಸಾಮಾನ್ಯರ ಬದುಕನ್ನ ಹಿಂಡುತ್ತಿದೆ. ಅದೆಷ್ಟೋ ಕುಟುಂಬಗಳು ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿವೆ. ಕೊರೊನಾದ ಕ್ರೂರತೆಗೆ ನಿದರ್ಶನ ಎಂಬಂತೆ ಸೋಂಕಿಗೆ ಸೋದರಿಯರಿಬ್ಬರು ಒಂದೇ ದಿನ ಮೃತಪಟ್ಟ ಹೃದಯವಿದ್ರಾವಕ ಘಟನೆ ಹೊಸನಗರ ಪಟ್ಟಣ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ಕ್ರಿಶ್ಚಿಯನ್ ಕಾಲೋನಿಯಲ್ಲಿ ಒಂದೇ ಕುಟುಂಬದ 7 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಗುರುವಾರದಂದು ಸೋಂಕಿಗೀಡಾಗಿದ್ದ ಅಕ್ಕ-ತಂಗಿ ಒಂದೇ ದಿನ ಸಾವನ್ನಪ್ಪಿದ್ದು, ಹೊಸನಗರದ ಪಟ್ಟಣದ ಜನರಲ್ಲಿ ಭೀತಿ ಮೂಡಿಸಿದೆ. ವ್ಯಾನಿ ಗೊನ್ಸಾಲ್ವಿಸ್ (59) ಮತ್ತು ಅಪ್ಪಿ ಗೊನ್ಸಾಲ್ವಿಸ್ (52) ಮೃತ ಸಹೋದರಿಯರು.

ಮೂರು ದಿನದ ಹಿಂದೆ ಕುಟುಂಬದವರು ಕೊರೊನಾ ಟೆಸ್ಟ್‌ ಮಾಡಿಸಿದ್ದು ಕುಟುಂಬದ 7 ಜನರ ವರದಿ ಪಾಸಿಟಿವ್ ಬಂದಿತ್ತು. ನಂತರ ಕ್ರಿಶ್ಚಿಯನ್ ಕಾಲೋನಿಯನ್ನು ಸೀಲ್ ಡೌನ್ ಮಾಡಲಾಗಿತ್ತು. ಸಹೋದರಿಯರಿಗೆ ಸೋಂಕಿನ ತೀವ್ರತೆ ಹೆಚ್ಚಿದ ಕಾರಣ ಹೊಸನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಇಬ್ಬರಿಗೂ ತೀವ್ರ ಉಸಿರಾಟ ತೊಂದರೆ ಕಾಣಿಸಿಕೊಂಡ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ  ಕಳುಹಿಸಿಕೊಡಲಾಗಿತ್ತು. ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಕೆಲವೇ ಗಂಟೆಯ ಅಂತರದಲ್ಲಿ ಇಬ್ಬರೂ ಮೃತಪಟ್ಟಿದ್ದಾರೆ. ಸಹೋದರಿಯರ ಸಾವಿನಿಂದ  ಕುಟುಂಬ ಸದಸ್ಯರು ತುಂಬ ಆಘಾತಕ್ಕೊಳಗಾಗಿದ್ದಾರೆ.

The post ಕ್ರೂರಿ ಕೊರೊನಾಗೆ ಒಂದೇ ದಿನ ಬಲಿಯಾದ ಅಕ್ಕ-ತಂಗಿ appeared first on News First Kannada.

Source: newsfirstlive.com

Source link