ಫುಡ್ ಕಿಟ್‍ಗಾಗಿ ಕಾರ್ಮಿಕರ ನೂಕುನುಗ್ಗಲು – ವಿವಿಧ ಗ್ರಾಮಗಳಿಂದ ಬಂದ ಸಾವಿರಾರು ಜನ

– ಮಧ್ಯಾಹ್ನದ ಕಾರ್ಯಕ್ರಮಕ್ಕೆ ಬೆಳಗ್ಗೆಯೇ ಬಂದ ಕಾರ್ಮಿಕರು

ರಾಯಚೂರು: ನಗರದಲ್ಲಿ ಕಾರ್ಮಿಕ ಇಲಾಖೆ ಫುಡ್ ಕಿಟ್ ಗಾಗಿ ಬೆಳಗ್ಗೆ ನಾಲ್ಕು ಗಂಟೆಯಿಂದ ಜನ ಮುಗಿಬಿದ್ದಿದ್ದಾರೆ. ನಗರದ ಬಾಲಕಿಯರ ವಸತಿ ನಿಲಯದ ಮುಂದೆ ಸಾವಿರಾರು ಕಾರ್ಮಿಕರು ಗುಂಪು ಸೇರಿದ್ದಾರೆ. ಕೋವಿಡ್ ನಿಯಮ ಮರೆತು ಕಿಟ್ ಗಾಗಿ ಚಿಕ್ಕ ಮಕ್ಕಳು, ವೃದ್ಧರೊಂದಿಗೆ ಕಾರ್ಮಿಕರು ಕಾಯುತ್ತಿದ್ದಾರೆ.

ಕಾರ್ಮಿಕ ಇಲಾಖೆಯಿಂದ ಮಧ್ಯಾಹ್ನ 3-30 ರ ಬಳಿಕ ಕಿಟ್ ವಿತರಿಸುವುದಾಗಿ ಸೂಚನೆ ನೀಡಲಾಗಿದೆ. ಆದ್ರೆ ಮಾಹಿತಿಯಿಲ್ಲದೆ ಕಿಟ್ ಪಡೆಯಲು 12 ಗಂಟೆಗಳ ಮುಂಚೆಯೇ ಬಂದು ಕಾರ್ಮಿಕರು ಕಾದು ಕುಳಿತಿದ್ದಾರೆ. ರಾಯಚೂರು ತಾಲೂಕಿನಲ್ಲಿ ಒಟ್ಟು 25 ಸಾವಿರ ನೋಂದಾಯಿತ ಕಾರ್ಮಿಕರಿದ್ದು ಎಲ್ಲರಿಗೂ ಒಂದೇ ಕಡೆ ಕಿಟ್ ವಿತರಿಸಲಾಗುತ್ತಿದೆ. ಹೀಗಾಗಿ ವಿವಿಧ ಗ್ರಾಮಗಳಿಂದ ಬಂದಿರೋ ಕಟ್ಟಡ ಕಾರ್ಮಿಕರು ಕಿಟ್ ಗಾಗಿ ಕಾಯುತ್ತಿದ್ದಾರೆ.

ವಸತಿನಿಲಯದ ಮುಂದೆ ಜನಜಾತ್ರೆಯೇ ಆಗಿದ್ದರೂ ಕಾರ್ಮಿಕ ಇಲಾಖೆ ಅಧಿಕಾರಿಗಳಾಗಲಿ, ಪೊಲೀಸ್ ಅಧಿಕಾರಿಗಳಾಗಲಿ ಇತ್ತ ಸುಳಿದಿಲ್ಲ. ಹೀಗಾಗಿ ಕಾರ್ಮಿಕರು ಹೆಚ್ಚಾಗುತ್ತಿದ್ದಂತೆ ನೂಕುನುಗ್ಗಲು ಶುರುವಾಗಿದೆ. ಕಿಟ್ ವಿತರಣೆ ಬಗ್ಗೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಸೂಕ್ತ ಮಾಹಿತಿ ನೀಡದ ಹಿನ್ನೆಲೆ ಗೊಂದಲ ಉಂಟಾಗಿದೆ. ಇತ್ತ ಕಿಟ್ಟು ಇಲ್ಲದೇ, ಅತ್ತ ದಿನ ಕೆಲಸವೂ ಇಲ್ಲದೇ ಕಾರ್ಮಿಕರು ಕಾದು ಕುಳಿತಿದ್ದಾರೆ. ಗ್ರಾಮ ಪಂಚಾಯತಿ, ವಾರ್ಡ್ ಗಳ ಮಟ್ಟದಲ್ಲೇ ಕಿಟ್ ಗಳನ್ನ ವಿತರಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ ಅಂತ ಕಾರ್ಮಿಕರು ಮನವಿ ಮಾಡಿದ್ದಾರೆ.

The post ಫುಡ್ ಕಿಟ್‍ಗಾಗಿ ಕಾರ್ಮಿಕರ ನೂಕುನುಗ್ಗಲು – ವಿವಿಧ ಗ್ರಾಮಗಳಿಂದ ಬಂದ ಸಾವಿರಾರು ಜನ appeared first on Public TV.

Source: publictv.in

Source link