ಅನ್​ಲಾಕ್​ ಆಗುತ್ತಲೇ ಜೋಗ ಜಲಪಾತಕ್ಕೆ ಮುಗಿಬಿದ್ದ ಪ್ರವಾಸಿಗರು.. ಸಾಮಾಜಿಕ ಅಂತರದ್ದೇ ಸಮಸ್ಯೆ

ಅನ್​ಲಾಕ್​ ಆಗುತ್ತಲೇ ಜೋಗ ಜಲಪಾತಕ್ಕೆ ಮುಗಿಬಿದ್ದ ಪ್ರವಾಸಿಗರು.. ಸಾಮಾಜಿಕ ಅಂತರದ್ದೇ ಸಮಸ್ಯೆ

ಶಿವಮೊಗ್ಗ: ಕೊರೊನಾ ಹಾಗೂ ಲಾಕ್ ಡೌನ್ ಕಾರಣ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದ್ದ ವಿಶ್ವ ವಿಖ್ಯಾತ ಜೋಗ ಜಲಪಾತಕ್ಕೆ ಇದೀಗ ಪ್ರವಾಸಿಗರ ದಂಡೇ ಹರಿದು ಬರಲಾರಂಭಿಸಿದೆ.

ಅನ್​ಲಾಕ್ ನಂತರ ಪ್ರವಾಸಿ ತಾಣಗಳಿಗೆ ಪ್ರವೇಶಾವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಜೋಗ ಜಲಪಾತದ ವೈಭವವನ್ನು ಕಣ್ ತುಂಬಿಕೊಳ್ಳಲು ನಾಡಿನ ವಿವಿಧೆಡೆಯಿಂದ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಶುಕ್ರವಾರ ಅಂದರೆ ನಿನ್ನೆಯಿಂದಲೇ ಜೋಗ ಜಲಪಾತಕ್ಕೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ.

blank

ನಿನ್ನೆ ಒಂದೇ ದಿನಕ್ಕೆ ಸುಮಾರು ಎರಡು ಸಾವಿರ ಜನ ಬಂದಿದ್ದಾರೆ. ಇಂದು ವಾರಾಂತ್ಯದ ಹಿನ್ನೆಲೆಯಲ್ಲಿ ಮಧ್ಯಾಹ್ನದವರೆಗೆ ಅಂದಾಜು 5 ಸಾವಿರ ಪ್ರವಾಸಿಗರು ಆಗಮಿಸಿದ್ದಾರೆ. ನೀರಿಲ್ಲದೆ ಸೊರಗಿದ್ದ ಫಾಲ್ಸ್ ಹಾಗೂ ಪ್ರವಾಸಿಗರಲ್ಲದೆ ಭಣಗುಡುತ್ತಿದ್ದ ಜೋಗ ಪ್ರದೇಶ ಈಗ ಮತ್ತೆ ಕಳೆಗಟ್ಟತೊಡಗಿದೆ.

ಪ್ರವಾಸಿಗರ ದಟ್ಟಣೆಯಿಂದಾಗಿ ಜೋಗ್​ಫಾಲ್ಸ್​ನಲ್ಲಿ ವಾಹನಗಳ ಪಾರ್ಕಿಂಗ್, ಹೋಟೆಲ್ ಮಯೂರ, ಸಣ್ಣಪುಟ್ಟ ಅಂಗಡಿ, ಮುಂಗಟ್ಟುಗಳು ಜನರಿಂದ ತುಂಬಿ ಹೋಗಿವೆ. ಜೋಗ ಪ್ರದೇಶದಲ್ಲಿ ಮಳೆಯಾಗುತ್ತಿದ್ದು ಮಂಜಿನ ನಡುವೆಯೇ ಫಾಲ್ಸ್​ನ ವೈಭವವನ್ನು ಜನ ಕಣ್ಣು ತುಂಬಿಕೊಳ್ಳುತ್ತಿದ್ದಾರೆ.

ಧಾರ್ಮಿಕ ಕ್ಷೇತ್ರ ಸಿಗಂದೂರು ದೇವಿ ಹಾಗೂ ವರದಹಳ್ಳಿಯ ಶ್ರೀಧರಾಶ್ರಮಕ್ಕೆ ಭೇಟಿ ನೀಡುವ ಪ್ರವಾಸಿಗರು ಜೋಗಕ್ಕೂ ಬರುತ್ತಿದ್ದು ಮಳೆಯ ನಡುವೆಯೂ ಜಲಪಾತದ ಸೊಬಗನ್ನು ಸವಿಯುತ್ತಿದ್ದಾರೆ.

ಸಾಮಾಜಿಕ ಅಂತರದ್ದೇ ಸಮಸ್ಯೆ

ಒಂದೇ ಸಮನೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದು ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳುವುದು ಕಷ್ಟವಾಗುತ್ತಿದೆ. ಜಲಪಾತ ವೀಕ್ಷಣೆಯ ಪ್ರದೇಶ ಕಿರಿದಾಗಿದೆ. ಜೊತೆಗೆ ಪ್ರವಾಸಿಗರು ಕುಟುಂಬ ಸಮೇತ ಇಲ್ಲವೇ ಗುಂಪು ಗುಂಪಾಗಿ ಬರುತ್ತಾರೆ. ಹೀಗಿರುವಾಗ ಸಾಮಾಜಿಕ ಅಂತರ ಪಾಲಿಸುವಂತೆ ಮಾಡುವುದು ಕಷ್ಟವಾಗುತ್ತಿದೆ ಎಂದು ಜೋಗ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮೂಲಗಳು ಹೇಳುತ್ತವೆ.

ಒಟ್ಟಾರೆ ನಾಡಿಗೆ ಬೆಳಕು ನೀಡುವ ಶರಾವತಿ ನದಿಯ ವೈಭವಕ್ಕೆ ಸಾಕ್ಷಿಯಾದ ಜೋಗ ಜಲಪಾತವನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವು ಸಂತಸದ ವಿಷಯವಾಗಿದ್ದು ಸಾಮಾಜಿಕ ಅಂತರ ಕಾಯ್ದುಕೊಂಡರೆ ಜೋಗದ ಭೇಟಿ ಇನ್ನಷ್ಟು ಅರ್ಥಪೂರ್ಣವಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ.

The post ಅನ್​ಲಾಕ್​ ಆಗುತ್ತಲೇ ಜೋಗ ಜಲಪಾತಕ್ಕೆ ಮುಗಿಬಿದ್ದ ಪ್ರವಾಸಿಗರು.. ಸಾಮಾಜಿಕ ಅಂತರದ್ದೇ ಸಮಸ್ಯೆ appeared first on News First Kannada.

Source: newsfirstlive.com

Source link