ಮಳೆಗಾಲದ ಅಧಿವೇಶನದಲ್ಲಿ 20 ಮಸೂದೆ ಮಂಡನೆ: ಪ್ರಹ್ಲಾದ್ ಜೋಶಿ

– ಕೆ.ಎರ್.ಎಸ್. ಅಣೆಕಟ್ಟಿನ ವಿಷಯದಲ್ಲಿ ರಾಜಕಾರಣ ಸಲ್ಲದು

ಹುಬ್ಬಳ್ಳಿ: ಸಂಸತ್ತಿನ ಮಳೆಗಾಲದ ಅಧಿವೇಶನ ಪ್ರಾರಂಭವಾಗಲಿದೆ. ಅಧಿವೇಶನದಲ್ಲಿ 5 ಸುಗ್ರೀವಾಜ್ಞೆಗಳು ಸೇರಿದಂತೆ 20 ಪ್ರಮುಖ ಮಸೂದೆಗಳನ್ನು ಮಂಡಿಸಲಾಗುವುದು ಎಂದು ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ  ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಅವರು, ಕೊರೊನಾ ಎರಡನೇ ಅಲೆಯನ್ನು ಕೇಂದ್ರ ಸರ್ಕಾರ ಯಶಸ್ವಿಯಾಗಿ ನಿಭಾಯಿಸಿದೆ. ವಿಶ್ವ ಅತಿ ದೊಡ್ಡ ಲಸಿಕಾ ಅಭಿಯಾನ ದೇಶದಲ್ಲಿ ಯಶಸ್ವಿಯಾಗಿ ಜರುಗುತ್ತಿದೆ. ಸುಮಾರು 37 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಬರುವ ದಿನಗಳಲ್ಲಿ ಲಸಿಕೆಯನ್ನು ಚುರುಕುಗೊಳಿಸಲಾಗುವುದು. ಜುಲೈ 18 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಂಸತ್ ಸದಸ್ಯರ ಸರ್ವಪಕ್ಷ ಸಭೆಯನ್ನು ಕರೆದಿದ್ದಾರೆ. ಸರ್ಕಾರ ಎಲ್ಲಾ ರೀತಿಯ ರಚನಾತ್ಮಕ ಚರ್ಚೆಗೆ ಸಿದ್ಧವಿದೆ ಎಂದಿದ್ದಾರೆ.

ಆರೇಳು ವರ್ಷಗಳ ಕಾಲ ಸಚಿವರಾಗಿ ಸೇವೆ ಸಲ್ಲಿಸಿದವರನ್ನು ಸಚಿವ ಸಂಪುಟ ಪುನರ್‌ರಚನೆ ವೇಳೆ ಕೈಬಿಡಲಾಗಿದೆ. ಸಚಿವ ಸಂಪುಟಕ್ಕೆ ಹೊಸ ರಕ್ತ ತರುವ ಕೆಲಸ ಮಾಡಲಾಗಿದೆ. ಡಾ.ಹರ್ಷವರ್ಧನ್ ಅವರು ಆರೋಗ್ಯ ಸಚಿವರಾಗಿ ಉತ್ತಮ ಕೆಲಸ ನಿರ್ವಹಿಸಿದ್ದಾರೆ. ಅವರಿಗೆ ಪಕ್ಷ ಸಂಘಟನೆ ಮಹತ್ವದ ಜಬ್ದಾರಿಯನ್ನು ನೀಡಲಾಗುವುದು. ಸದ್ಯ ಕೋವಿಡ್ ನಿರ್ವಹಣೆ ಆದ್ಯತೆಯ ಕೆಲಸವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ರಾಜ್ಯದ ಪಕ್ಷ ಉಸ್ತುವಾರಿ ನೋಡಿಕೊಳ್ಳುತ್ತಿರುವ ಅರುಣ್ ಸಿಂಗ್ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ.

ದೇಶದಲ್ಲಿ 135 ಕೋಟಿ ಜನಸಂಖ್ಯೆ ಇದೆ. ಸದ್ಯ 37 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ರಾಜ್ಯಗಳಿಗೆ ಅಗತ್ಯಾನುಸಾರ ಲಸಿಕೆ ಪೂರೈಸಲಾಗುತ್ತಿದೆ. ಹಂತ ಹಂತವಾಗಿ ಲಸಿಕೆ ನೀಡಲಾಗುವುದು. ಕೆ.ಎರ್.ಎಸ್. ಅಣೆಕಟ್ಟಿನ ವಿಷಯದಲ್ಲಿ ರಾಜಕಾರಣ ಸಲ್ಲದು. ಏನಾದರೂ ದೂರುಗಳು ಇದ್ದರೆ ಕಾವೇರಿ ನಿಗಮಕ್ಕೆ ನೀಡಬಹುದು. ಅಣೆಕಟ್ಟಿನ ಸ್ಥಿರತೆ ಬಗ್ಗೆ ನಿಗಮ ಈಗಾಗಲೇ ಸ್ಪಷ್ಟೀಕರಣ ನೀಡಿದೆ ಎಂದರು.

The post ಮಳೆಗಾಲದ ಅಧಿವೇಶನದಲ್ಲಿ 20 ಮಸೂದೆ ಮಂಡನೆ: ಪ್ರಹ್ಲಾದ್ ಜೋಶಿ appeared first on Public TV.

Source: publictv.in

Source link