ಒಲಂಪಿಕ್ಸ್ ಮೇಲೆ ಮತ್ತೆ ಕೊರೊನಾ ಕರಿನೆರಳು.. ವೀಕ್ಷಕರಿಗಿಲ್ಲ ಅವಕಾಶ

ಒಲಂಪಿಕ್ಸ್ ಮೇಲೆ ಮತ್ತೆ ಕೊರೊನಾ ಕರಿನೆರಳು.. ವೀಕ್ಷಕರಿಗಿಲ್ಲ ಅವಕಾಶ

ಟೋಕಿಯೋ ಒಲಂಪಿಕ್ಸ್. ಅದೆಷ್ಟೋ ಕ್ರೀಡಾ ಪಟುಗಳ ಜೀವಮಾನದ ಕನಸು. ಒಲಂಪಿಕ್ಸ್ ತಿಂಗಳು ಅಂದ್ರೆ ನೋಡುಗರಿಗೆ ಹಬ್ಬವೇ ಸರಿ. ಆದ್ರೆ ಈ ಬಾರಿ ಒಲಂಪಿಕ್ಸ್ ಮಾತ್ರ ಒಂದರ ಮೇಲೊಂದು ಗೊಂದಲದಲ್ಲೇ ಕುಂಟುತ್ತಾ ಸಾಗ್ತಿದೆ. ಇಷ್ಟು ದಿನ ಒಲಂಪಿಕ್ಸ್ ನಡೆಯುತ್ತಾ ಇಲ್ವಾ ? ಎನ್ನುವ ಅನುಮಾನದಲ್ಲೇ ಇತ್ತು. ಆದ್ರೆ, ಒಲಂಪಿಕ್ ಜ್ಯೋತಿ ಕೂಡ ಟೊಕಿಯೋ ತಲುಪಿ ಆಗಿದೆ. ಅದ್ರೆ ಈ ಬಾರಿಯ ಒಲಂಪಿಕ್ ಗೆ ಜನಾನೇ ಬರಲ್ಲ ಅಂತಿದಾರೆ.

ಜಾಣ ಜಪಾನಿಗೂ ಕಂಟಕವಾದ ಕೊರೊನಾ

ಜಪಾನ್ ಅಂದ್ರೆ ಕಡಿಮೆನಾ. ವಿಶ್ವವೇ ತನ್ನತ್ತ ನೋಡುವಂತೆ ಮಾಡಿಕೊಂಡಿರುವ ದ್ವೀಪ ರಾಷ್ಟ್ರ. ಯಾವುದೇ ಕ್ಷೇತ್ರ ಇರಲಿ, ಯಾವುದೇ ತಂತ್ರಜ್ಞಾನ ಇರಲಿ ಜಪಾನ್ ಅಂದ್ರೆ ಅದಕ್ಕೆ ಮೊದಲ ಆದ್ಯತೆ. ಅಷ್ಟರ ಮಟ್ಟಿಗೆ ಆಧುನಿಕ ಜಗತ್ತಿನಲ್ಲಿ ಬೆಳೆದು ನಿಂತಿದೆ ಜಪಾನ್. ಇಲ್ಲಿನ ಒಂದೊಂದು ನಗರ, ಇಲ್ಲಿನ ಒಂದೊಂದು ಪ್ರದೇಶ, ಇಲ್ಲಿನ ಒಂದೊಂದು ಅಭಿವೃದ್ಧಿ ಕೆಲಸ ಎಲ್ಲವೂ ಒಮ್ಮೆಯಾದರೂ ನೋಡಿಕೊಂಡು ಬರಬೇಕು ಅನ್ನುವಷ್ಟರ ಮಟ್ಟಿಗೆ ಮಂದುವರೆದಿದೆ. ಇಂತಹ ಜಪಾನ್ ಇಷ್ಟೆಲ್ಲಾ ಮುಂದುವರೆದಿದ್ದರೂ ಕೊರೊನಾಗೆ ಬ್ರೇಕ್ ಹಾಕುವಲ್ಲಿ ಅಷ್ಟರಮಟ್ಟಿಗೆ ಸಕ್ಸಸ್ ಆಗ್ತಾ ಇಲ್ಲ. ಅಷ್ಟೇ ಅಲ್ಲ ಈಗ ಮತ್ತೆ ಜಪಾನ್​ನಲ್ಲೇ ಹೊಸ ಕೊರೊನಾ ರೂಪಾಂತರಿಯ ಕಾಟ ಶುರುವಾಗಿದೆ.

ಜಪಾನ್ ದೇಶದ ಸದ್ಯದ ಮತ್ತೊಂದು ಗೊಂದಲ ಅಂದ್ರೆ ಅದು ಒಲಂಪಿಕ್ಸ್. ಎಲ್ಲ ಅಡೆತಡೆಗಳನ್ನು ಎದುರಿಸಿ, ಈ ಬಾರಿ ಒಲಂಪಿಕ್ಸ್ ನಡೆಸಲೇಬೇಕು ಎಂದು ಪಣ ತೊಟ್ಟು ನಿಂತಿರುವ ಟೋಕಿಯೊಗೆ, ಕೊರೊನಾ ಮತ್ತೊಂದು ಶಾಕ್ ನೀಡಿದೆ. ಕಳೆದ ವರ್ಷವೇ ಒಲಂಪಿಕ್ಸ್ ಗೆ ಸಜ್ಜಾಗಿತ್ತು ಜಪಾನ್. ಆದ್ರೆ ಇದೇ ಕೊರೊನಾ ಕಾರಣದಿಂದ ಮುಂದೂಡಲಾಗಿತ್ತು. ಈ ವರ್ಷ ಮಾತ್ರ ಒಲಂಪಿಕ್ಸ್ ನಡೆಸಿಯೇ ನಡೆಸುತ್ತೇವೆ ಅಂತ ಜಪಾನ್ ನಿರ್ಧಾರ ಮಾಡಿಬಿಟ್ಟಿತ್ತು. ಅದೆಷ್ಟೋ ಜನರು ಈ ನಿರ್ಧಾರವನ್ನು ಕೊನೆಗೂ ಒಪ್ಪಲೇ ಇಲ್ಲ. ಈ ವಾದಗಳಿಗೆಲ್ಲ ಉತ್ತರಿಸುತ್ತ, ಜುಲೈ 23ರಿಂದ ಒಲಂಪಿಕ್ ನಡೆಸುವುದಾಗಿ ತೀರ್ಮಾನ ನಡೆದಿತ್ತು. ಅತಿಥಿಗಳನ್ನು ಅದ್ಭುತವಾಗಿ ಸ್ವಾಗತಿಸಿ ಸತ್ಕರಿಸಿ ಅದ್ದೂರಿ ಕ್ರೀಡಾಕೂಟಕ್ಕೆ ಒಲಂಪಿಕ್ಸ್ ಕಮಿಟಿ ಸಿದ್ಧವಾಗಿತ್ತು. ಆದ್ರೆ ಇದೀಗ ಕಮಿಟಿಯ ತೀರ್ಮಾನಗಳೆಲ್ಲ ಉಲ್ಟಾ ಹೊಡೀತಾ ಇದೆ. ಕಾರಣ, ಜಪಾನ್ ನಲ್ಲಿ ಕೊರೊನಾದಿಂದ ಮತ್ತೆ ತುರ್ತು ಪರಿಸ್ಥಿತಿ ಘೋಷಿಸಿ ಬಿಟ್ಟಿದ್ದಾರೆ.

ಕೊರೊನಾ ಮಧ್ಯೆ ಈ ಬಾರಿಯ ಒಲಿಂಪಿಕ್ಸ್ ಹೇಗೆ ನಡೆಯುತ್ತೆ?

ಒಲಂಪಿಕ್​ ಅಂದರೆ ಸುಮ್ನೇನಾ. 339 ಚಿನ್ನದ ಪದಕಗಳಿಗೆ ಸುಮಾರು 200 ದೇಶಗಳಿಂದ 11 ಸಾವಿರಕ್ಕಿಂತ ಹೆಚ್ಚು ಕ್ರೀಡಾ ಪಟುಗಳು ಸೇರುವ ಕ್ರಿಡಾಕೂಟವೇ ಒಲಂಪಿಕ್ಸ್. ಬಂಗಾರದ ಬೇಟೆಗಾಗಿ ಈ ಆಟಗಾರರು ತಮ್ಮ ಪ್ರಾಣವನ್ನ ಪಣಕ್ಕಿಟ್ಟಾದರೂ ಕ್ರೀಡೆಯಲ್ಲಿ ಭಾಗಿಯಾಗ್ತಾರೆ. ಆ ಒಂದು ಪದಕ ಆಟಗಾರನ ದೇಶದ ಪ್ರತಿಷ್ಠೆಯೂ ಹೌದು. ದೇಶದ ಗೌರವದ ವಿಚಾರವಾಗಿರೋ ಕಾರಣ ಒಲಂಪಿಕ್ಸ್ ನಲ್ಲಿ ಒಂದೊಂದು ಆಟವೂ ಮೈ ನವಿರೇಳಿಸುವಂತಿರುತ್ತದೆ. ಇಂತಹ ಮಹಾ ಕೂಟ ನಡೆಯುತ್ತಾ ಇಲ್ವಾ ಅನ್ನೋದೇ ಡೌಟ್ ಆಗಿ ಉಳಿದಿತ್ತು. ಇಡೀ ಟೋಕಿಯೋ ಒಂದೇ ಸಮನೆ “SAY NO TO OLYMPICS” ಎನ್ನುವ ಕೂಗು ಹಬ್ಬಿಸ್ತಾ ಇತ್ತು. ಆದರೆ ಒಲಂಪಿಕ್ ಕಮಿಟಿ ಮಾತ್ರ, ತನ್ನ ನಿರ್ಧಾರದಲ್ಲಿ ಅದಲು ಬದಲು ಮಾಡ್ಲೇ ಇಲ್ಲ. ಈ ಬಾರಿ ಒಲಂಪಿಕ್ಸ್ ನಡೆದೆ ನಡೆಯುತ್ತೆ ಎಂದು ಪಟ್ಟು ಹಿಡಿದು ಕೂತಿತ್ತು. ಅದರಂತೆ ಜುಲೈ 23ಕ್ಕೆ ಸಕಲ ಸಿದ್ಧತೆಗಳು ನಡೀತಾ ಇದೆ. ಕ್ರೀಡಾ ಪಟುಗಳನ್ನು ಬಯೋ ಬಬಲ್ ನಲ್ಲಿ ತಂದಿರಿಸಿದ್ದಾರೆ. ಈ ಎಲ್ಲ ಹೆಜ್ಜೆಗಳು ಒಲಂಪಿಕ್ಸ್ ನಡೆಯೋದನ್ನ ಖಚಿತಗೊಳಿಸಿವೆ.

ಒಲಂಪಿಕ್ಸ್​ಗೆ 2 ವಾರ ಇರುವಾಗಲೇ ಸ್ಟೇಟ್ ಎಮರ್ಜೆನ್ಸಿಗೆ ಕರೆ!

ಒಲಂಪಿಕ್ಸ್​ಗೆ ಇನ್ನು ಕೇವಲ 2 ವಾರಗಳು ಮಾತ್ರ ಬಾಕಿ ಇದೆ. ಅದಾದ ನಂತರ ಅದ್ದೂರಿ ಆರಂಭೋತ್ಸವಕ್ಕೆ ನಾವೆಲ್ಲ ಸಾಕ್ಷಿಯಾಗುತ್ತೇವೆ ಎಂದು ಸಾಕಷ್ಟು ಜನ ತುದಿಗಾಲಿನಲ್ಲಿ ನಿಂತು ಸಿದ್ದರಾಗಿದ್ದರು. ಆದ್ರೆ ಕೊರೊನಾ ಆರ್ಭಟ ಜಪಾನ್​ನಲ್ಲಿ ಅದರಲ್ಲೂ ಟೋಕಿಯೋದಲ್ಲಿ ಹೆಚ್ಚಾಗಿ ಹೋಗಿದೆ. ಈ ಕಾರಣದಿಂದ ಜಪಾನ್ ಸರ್ಕಾರ, ಜುಲೈ 12 ರಿಂದ ಆಗಸ್ಟ್ 22ರ ವರೆಗೂ ದೇಶದ ನಾಲ್ಕನೇ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಅಲ್ಲದೆ ಟೋಕಿಯೋದಲ್ಲಿ ಹೊಸ ರೂಪಾಂತರಿ ಡೆಲ್ಟಾ ವೇರಿಯಂಟ್ ನ ಗೇಮ್ ಶುರುವಾಗಿದ್ದು, ಇದು ಒಲಂಪಿಕ್ಸ್ ಗೆ ತಡೆಯಾಗಬಹುದು ಎನ್ನುವ ಆತಂಕ ಶುರುವಾಗಿತ್ತು. ಜಪಾನ್ ಸರ್ಕಾರ ತುರ್ತು ಪರಿಸ್ಥಿತಿ ಹೇರಿರುವ ಟೋಕಿಯೋ, ಒಸಾಕ, ಕ್ಯೂಟೋ, ಹ್ಯೋಗೋ ಪ್ರಾಂತ್ಯಗಳ ಕೊರೊನಾ ಅಂಕಿ ಅಂಶ ನೋಡೋದಾದ್ರೆ.

ಜಪಾನ್ ನಲ್ಲಿ ಕೊರೊನಾ ಹಾವಳಿ

ಟೋಕಿಯೋ

ಒಟ್ಟು ಕೇಸ್​ಗಳು- 1,73,635

ಗುಣಮುಖರು-1,71,626

ಸಾವು- 2,230 ಜನ ಮೃತರಾಗಿದ್ದು

ಸಕ್ರಿಯ ಪ್ರಕರಣಗಳು- 8,009

ಒಸಾಕ

ಒಟ್ಟು ಕೇಸ್​​ಗಳು-1,04,200

ಗುಣಮುಖರು- 93,390

ಸಾವು- 2,686

ಸಕ್ರಿಯ ಪ್ರಕರಣಗಳು- 1,08,10

ಹ್ಯೋಗೋ

ಒಟ್ಟು ಕೇಸ್​​ಗಳು- 41,322

ಗುಣಮುಖರು- 39,511

ಸಾವು- 1,307

ಸಕ್ರಿಯ ಪ್ರಕರಣಗಳು-1,811

ಕ್ಯೂಟೋ

ಒಟ್ಟು ಕೇಸ್​ಗಳು- 16,742

ಗುಣಮುಖರು- 16,302

ಸಾವು- 243

ಸಕ್ರಿಯ ಪ್ರಕರಣಗಳು- 440

12 ಕೋಟಿ ಜನಸಂಖ್ಯೆ ಇರುವ ಈ ಪುಟ್ಟ ದ್ವೀಪ ಜಪಾನ್ ಕೊರೊನಾ ನಾಲ್ಕನೇ ಅಲೆ ಪ್ರಾರಂಭದ ಭೀತಿ ಶುರುವಾಗಿದೆ. ಇದುವರೆಗೂ ದೇಶದಲ್ಲಿ 8 ಲಕ್ಷಕ್ಕೂ ಅಧಿಕ ಮಂದಿ ಕೊರೊನಾ ಸಂಕಟಕ್ಕೆ ಒಳಗಾಗಿ 20 ಸಾವಿರಕ್ಕೂ ಹೆಚ್ಚು ಬಲಿಯಾಗಿದ್ದಾರೆ. ಇದೀಗ ಟೋಕಿಯೋ ಮತ್ತು ಇನ್ನಿತರ ಪ್ರಮುಖ ನಗರಗಳಲ್ಲಿ ಡೆಲ್ಟಾ ವೇರಿಯಂಟ್ ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿದ್ದು. ಇದು ಮತ್ತೊಂದು ಅವಾಂತರಕ್ಕೆ ಕಾರಣವಾಗಲಿದೆ ಎಂದು ಅಲ್ಲಿಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ದೇಶದಲ್ಲಿ ಬಹುತೇಕ ಜನರಿಗೆ ಒಂದು ಡೋಸ್ ವ್ಯಾಕ್ಸಿನೇಷನ್ ಕೂಡ ಆಗಿಲ್ಲದಿರೋದು ಇನ್ನಷ್ಟು ಆತಂಕ ತಂದಿದೆ.

ಪ್ರೇಕ್ಷಕರೇ ಇಲ್ಲದಂತೆ ಆಟವಾಡಿಸಲು ಕಮಿಟಿಯ ತೀರ್ಮಾನ

ವಿಶ್ವ ಒಲಂಪಿಕ್ಸ್ ಕ್ರೀಡಾಕೂಟ ಅಂದ್ರೆ ಪ್ರೇಕ್ಷಕರಿಗೆ ಹಬ್ಬದ ವಾತಾವರಣ, ಬಣ್ಣ ಬಣ್ಣದ ಉಡುಗೆ ತೊಟ್ಟು ತಮ್ಮ ದೇಶದ ಕ್ರೀಡಾಪಟುವಿಗೆ ಜೈ-ಕಾರ ಕೂಗಲು ವಿಶ್ವದೆಲ್ಲೆಡೆಯಿಂದ ಕ್ರೀಡಾಸಕ್ತರು, ಕ್ರೀಡಾಭಿಮಾನಿಗಳು ಓಡೋಡಿ ಬರ್ತಾರೆ. ಆ ಒಳಾಂಗಣದಲ್ಲಿ ರೂಫ್ ಹಾರಿ ಹೋಗುವವರೆಗೂ ಚೀರಾಟ, ಕೂಗಾಟಗಳು ಪ್ರೋತ್ಸಾಹದ ಸುರಿಮಳೆಯನ್ನೇ ಆಟಗಾರನಿಗೆ ನೀಡ್ತಾ ಇರ್ತಾರೆ. ಪ್ರೇಕ್ಷಕರ ಕೂಗು ಕೇಳಿದಷ್ಟು ಪಟುವಿನ ಹುಮ್ಮಸ್ಸು ಹೆಚ್ಚುತ್ತದೆ, ದೇಶದ ಮೇಲಿನ ಪ್ರೀತಿ ಗಟ್ಟಿಗೊಳ್ಳುತ್ತದೆ. ಆಗ ಆಟ ಇನ್ನೂ ರೋಚಕ ಟ್ವಿಸ್ಟ್ ಆ್ಯಂಡ್ ಟರ್ನ್ಸ್ ಗಳು ಕಂಡುಬರುತ್ತೆ. ಆದ್ರೆ ಈ ಬಾರಿ ಒಲಂಪಿಕ್ಸ್ ನಲ್ಲಿ ಈ ಒಂದು ಸಂಭ್ರಮವನ್ನು ನಾವು ಮಿಸ್ ಮಾಡ್ಕೊಬೇಕಿದೆ. ಹೌದು! ಟೋಕಿಯೋ ಒಲಂಪಿಕ್ಸ್ ಕ್ರೀಡಾ ಕೂಟವನ್ನು ನೋಡಲು ಪ್ರೇಕ್ಷಕರಿಗೆ ಅವಕಾಶವನ್ನು ಒಲಂಪಿಕ್ಸ್ ಕಮಿಟಿ ಕಿತ್ತುಕೊಂಡಿದೆ. ಕೊರೊನಾ ಸಾಂಕ್ರಮಿಕ ತಡೆಗೆ ಈ ಒಂದು ಮಹತ್ವದ ನಿರ್ಧಾರವನ್ನು ಒಲಂಪಿಕ್ ಕಮಿಟಿ ತೀರ್ಮಾನಿಸಿದೆ.

ಕೊನೆ ಕ್ಷಣದಲ್ಲಿ ಸಾವಿರಾರು ಪ್ರೇಕ್ಷಕರಿಂದ ಒಲಿಂಪಿಕ್ ಟೂರ್ ರದ್ದು!

ಜಪಾನ್ ಡೆಲ್ಟಾ ವೇರಿಯಂಟ್ ನಿಂದ ನಲುಗಿ ಹೋಗಿದೆ. ಇದೆ ಕಾರಣಕ್ಕೆ ಇಡಿ ಜಪಾನ್ ಒಲಂಪಿಕ್ಸ್ ವಿರುದ್ಧ ಹೋರಾಡಿದ್ದು. ಆದರೆ ತನ್ನ ಹಠ ಬಿಡದ ಕಮಿಟಿ, ಒಲಂಪಿಕ್ಸ್ ಕ್ರೀಡಾ ಪಟ್ಟಿಯನ್ನು ಸಿದ್ಧ ಮಾಡಿ, ದೇಶ ವಿದೇಶದಿಂದ ಅತಿಥಿಗಳನ್ನು ಸ್ವಾಗತಿಸಿತ್ತು. ಶುರುವಿನಲ್ಲೇ ಶೇಕಡ 50ರಷ್ಟು ಜನಕ್ಕೆ ಮಾತ್ರ ಆದ್ಯತೆಯೆಂದು ಟಿಕೆಟ್ಸ್ ಗಳನ್ನು ಮಾರಾಟ ಮಾಡಿಬಿಟ್ಟಿದ್ದಾರೆ. ಟಿಕೆಟ್ ಸಿಕ್ಕ ಕಾರಣಕ್ಕೆ ವೀಕ್ಷಕರು ಸಹ ಉತ್ಸಾಹದಿಂದ ಸಿದ್ದರಾಗಿದ್ದರು. ಆದರೆ ಜಪಾನ್ ನ ಹೊಸ ನಿಯಮದಂತೆ ಈ ಬಾರಿ ಒಲಂಪಿಕ್ಸ್ ಕೇವಲ ಕ್ರೀಡಾ ಪಟುಗಳು, ಹಾಗೂ ಅಂಪೈರ್ ಗಳು ಮಾತ್ರ ಪಂದ್ಯದಲ್ಲಿ ಭಾಗಿಯಾಗಲಿದ್ದಾರೆ, ಟಿಕೆಟ್ ಪಡೆದ ಸಾವಿರಾರು ಕ್ರೀಡಾಭಿಮಾನಿಗಳಿಗೆ ಈ ನಿರ್ಧಾರ ನಿರಾಸೆ ಮೂಡಿಸಿದೆ.

ಹಲವರ ವಿರೋಧ, ಹಲವು ಚರ್ಚೆಗಳ ನಡುವೆಯೂ ಪ್ರೇಕ್ಷಕರು, ತಮ್ಮ ನೆಚ್ಚಿನ ಕ್ರೀಡೆ ಹಾಗೂ ನೆಚ್ಚಿನ ಆಟಗಾರರನ್ನು ನೋಡಲು ಕಾತುರದಿಂದಿದ್ದರು. ಇದಕ್ಕಾಗಿ ಟೋಕಿಯೋ ಹಾಗೂ ಸುತ್ತಮುತ್ತಲಿನ ಕ್ರೀಡಾಂಗಣದಲ್ಲಿ ಕೋವಿಡ್ ಸೂಚನೆಗಳನ್ನು ಅನುಸರಿಸಿ ಎಲ್ಲ ಸಿದ್ದತೆಗಳನ್ನು ಕಮಿಟಿ ಮಾಡಿಕೊಂಡಿತ್ತು. ಕೊನೆಗೆ ಕೇವಲ 10 ಸಾವಿರ ಪ್ರೇಕ್ಷಕರಿಗೆ ಮಾತ್ರ ಒಲಂಪಿಕ್ ನೋಡುವ ಅವಕಾಶ ಎಂದು ಘೋಷಣೆ ಮಾಡಿದ್ದರು. ಆದರೆ ಇದೀಗ ಯಾವ ಕ್ರೀಡಾಂಗಣದಲ್ಲೂ ಕ್ರೀಡಾಪಟುಗಳ ಹೊರತಾಗಿ ಯಾರಿಗೂ ಒಳಗೆ ಪ್ರವೇಶವಿಲ್ಲ ಎಂದಿದೆ ಕಮಿಟಿ. ಇದರಿಂದ ಟಿಕೆಟ್ ಪಡೆದು ಕಾಯುತ್ತಿದ್ದವರಿಗೆ ಕ್ಷಮೆ ಕೋರಿದೆ.

ವೀಕ್ಷಕರಿಲ್ಲದೆ ನಡೆಸುವ ಒಲಂಪಿಕ್ಸ್​ನಿಂದ $23 ಬಿಲಿಯನ್ ಲಾಸ್

ಹೌದು! ಕಳೆದ ಬಾರಿ ಒಲಂಪಿಕ್ಸ್ ನಡೆಸದೆ ಹಲವು ಹೂಡಿಕೆದಾರರು ನಷ್ಟ ಅನುಭವಿಸಿದ್ದರು. ಇದೆ ಕಾರಣಕ್ಕೆ ಈ ಬಾರಿ ಒಲಂಪಿಕ್ಸ್ ನಡೆಸಲೇಬೇಕು ಎಂದು ಹಠ ಹಿಡಿದಿತ್ತು ಕಮಿಟಿ. ಆದರೆ ಪ್ರೇಕ್ಷಕರಿಲ್ಲದೆ ನಡೆಯುತ್ತಿರುವ ಈ ಒಲಂಪಿಕ್ಸ್ ಬಾರಿ ನಷ್ಟ ಅನುಭವಿಸಲಿದೆ. ಕೇವಲ 50% ಪ್ರೇಕ್ಷಕರ ಜೊತೆ ಒಲಂಪಿಕ್ ನಡೆಸುವಾಗ 13.5 ಬಿಲಿಯನ್ ಡಾಲರ್ ನಷ್ಟ ಎಂದು ಹೇಳಿದ್ದರು. ಆದರೆ ಒಲಂಪಿಕ್ ಹಳ್ಳಿಯಲ್ಲಿ ಜನರ ಸಂಚಾರವೇ ಇಲ್ಲದಿದ್ದರೆ ಸಂಪೂರ್ಣ 23 ಬಿಲಿಯನ್ ಡಾಲರ್ ನಷ್ಟದಲ್ಲಿ ಕ್ರೀಡಾಕೂಟ ನಡೆಸಲಾಗ್ತಾ ಇದೆ. ಅಲ್ಲದೆ ಈಗಾಗಲೇ ಹಲವು ಹೂಡಿಕೆದಾರರು, ಕಮಿಟಿಯ ಕೈ-ಬಿಟ್ಟಿದ್ದಾರೆ. ಇದರಿಂದ ಸಂಪೂರ್ಣ ನಷ್ಟದಿಂದ ಈ ಒಲಂಪಿಕ್ ನಡೆಯುವುದು ಖಚಿತವಾಗಿದೆ.

ಒಂದಾದ ಮೇಲೊಂದು ಗೊಂದಲವನ್ನು ಬೆನ್ನ ಮೇಲೆ ಹೊತ್ತು, ಹಲವರ ವಿರೋಧ ಕಟ್ಟಿಕೊಂಡು, ನಷ್ಟದಲ್ಲಾದರೂ ಸರಿ ಕ್ರೀಡಾಕೂಟ ಆಯೋಜಿಸಬೇಕು ಎಂದು ಕಮಿಟಿ ನಿರ್ಧಾರ ಮಾಡಿದೆ. ಈಗಾಗಲೇ ಒಲಂಪಿಕ್ ಜ್ಯೋತಿಯನ್ನು ಬೆಳಗಿದ್ದಾಗಿದೆ. ಇನ್ನು ಮುಂದೆ ಏನೇನೆಲ್ಲ ಬದಲಾವಣೆ ಆಗುತ್ತೋ.. ಕ್ರೀಡಾಪಟುಗಳಿಗೆ ಇನ್ನೇನು ತೊಂದರೆ ಕಾದಿದ್ಯೋ.. ಜುಲೈ 23ರ ನಂತರ ನೋಡಬೇಕು.

The post ಒಲಂಪಿಕ್ಸ್ ಮೇಲೆ ಮತ್ತೆ ಕೊರೊನಾ ಕರಿನೆರಳು.. ವೀಕ್ಷಕರಿಗಿಲ್ಲ ಅವಕಾಶ appeared first on News First Kannada.

Source: newsfirstlive.com

Source link