ರಾಜ್ಯಪಾಲರಾಗಿ ಗೆಹಲೋತ್​ ಇಂದು ಅಧಿಕಾರ ಸ್ವೀಕಾರ; ಅವರ ರಾಜಕೀಯ ಹಿನ್ನೆಲೆ ಇಲ್ಲಿದೆ

ರಾಜ್ಯಪಾಲರಾಗಿ ಗೆಹಲೋತ್​ ಇಂದು ಅಧಿಕಾರ ಸ್ವೀಕಾರ; ಅವರ ರಾಜಕೀಯ ಹಿನ್ನೆಲೆ ಇಲ್ಲಿದೆ

ರಾಜ್ಯದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿರುವ ಥಾವರ್​ ಚಂದ್ ಗೆಹಲೋತ್​ ಇವತ್ತು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಕರ್ನಾಟಕದ 19ನೇ ಗವರ್ನರ್​ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ. ನೂತನ ರಾಜ್ಯಪಾಲರ ಪದಗ್ರಹಣಕ್ಕೆ ಗಾಜಿನ ಮನೆಯಲ್ಲಿ ಸಕಲ ಸಿದ್ಧತೆಗಳಾಗಿದ್ದು, ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳು ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣವಚನ ಬೋಧಿಸಲಿದ್ದಾರೆ.

19ನೇ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಲಿರುವ ಗೆಹಲೋತ್​
ನಿರ್ಗಮಿತ ರಾಜ್ಯಪಾಲ ವಜುಭಾಯಿ ವಾಲಾರವರು ಸುಮಾರು 6 ವರ್ಷ 10 ತಿಂಗಳು ಕರ್ನಾಟಕದ ರಾಜ್ಯಪಾಲರಾಗಿ ಕರ್ತವ್ಯನಿರ್ವಹಿಸಿದ್ದಾರೆ. ಇದೀಗ ಅವರ ಸ್ಥಾನಕ್ಕೆ ಥಾವರ್​ಚಂದ್​ ಗೆಹಲೋತ್​ರನ್ನ ನೇಮಕ ಮಾಡಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರವರು ಆದೇಶ ಹೊರಡಿಸಿದ್ದಾರೆ. ರಾಜ್ಯದ 19ನೇ ರಾಜ್ಯಪಾಲರಾಗಿ ನೇಮಕ ಆಗಿರುವ ಗೆಹಲೋತ್​ರವರು ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಗೆಹಲೋತ್​ರವರರ ನಡೆದುಬಂದ ಹಾದಿಯನ್ನ ನೋಡೋದಾದ್ರೆ..

blank

ಥಾವರ್​ಚಂದ್ ಗೆಹಲೋತ್ ಹಿನ್ನೆಲೆ
ಮಧ್ಯಪ್ರದೇಶದ ಹಿರಿಯ ರಾಜಕಾರಣಿಯಾಗಿರುವ ಗೆಹಲೋತ್, ಮೂರು ಬಾರಿ ಶಾಜಾಪುರ ಮೀಸಲು ಕ್ಷೇತ್ರದ ಶಾಸಕರಾಗಿದ್ದರು. ನಾಲ್ಕು ಬಾರಿ ಲೋಕಸಭಾ ಸಂಸದರಾಗಿ ಕಾರ್ಯ ನಿರ್ವಹಿಸಿದ್ದರು. ಇನ್ನು, ಕೇಂದ್ರದಲ್ಲಿ ಸಾಮಾಜಿಕ ನ್ಯಾಯ & ಸಬಲೀಕರಣ ಸಚಿವರೂ ಆಗಿದ್ದ ಗೆಹಲೋತ್​ರನ್ನ ಈಗ ರಾಜ್ಯದ ರಾಜ್ಯಪಾಲರನ್ನಾಗಿ ನೇಮಕ ಮಾಡಲಾಗಿದೆ. ಬಿಜೆಪಿ ಸಂಘಟನೆಯಲ್ಲಿ ಮತ್ತು ಸರ್ಕಾರದಲ್ಲಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿರುವ ಗೆಹಲೋತ್​, 2013ರಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿಯೂ ಆಗಿಯೂ ಜವಾಬ್ದಾರಿ ನಿಭಾಯಿಸಿದ್ದಾರೆ.

ಗೆಹಲೋತ್​ರವರಿಗೆ ರಾಜ್ಯದ ರಾಜಕಾರಣಿಗಳು, ಹಾಗೂ ಇಲ್ಲಿನ ವಿದ್ಯಾಮಾನಗಳ ಬಗ್ಗೆ ಚೆನ್ನಾಗಿ ತಿಳಿದಿದೆ. ಇನ್ನು, ರಾಜಭವನದ ಗಾಜಿನ ಮನೆಯಲ್ಲಿ ಬೆಳಗ್ಗೆ 10:30ಕ್ಕೆ ಗೆಹಲೋತ್​ರವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ, ಅಭಯ್ ಶ್ರೀನಿವಾಸ್​ ಓಕಾ ಅವರು ನೂತನ ರಾಜ್ಯಪಾಲರಿಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಿದ್ದಾರೆ.

Image

ನಿನ್ನೆಯಷ್ಟೇ ಕುಟುಂಬ ಸಮೇತ ಬೆಂಗಳೂರಿಗೆ ಆಗಮಿಸಿರುವ ಗೆಹಲೋತ್​ ಅವರನ್ನು ರಾಜ್ಯ ಸರ್ಕಾರದ ಪರವಾಗಿ ಕಂದಾಯ ಸಚಿವ ಆರ್. ಅಶೋಕ್ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರಿದ್ರು. ಒಟ್ಟಾರೆ, ಬರೋಬ್ಬರಿ 6 ವರ್ಷಗಳ ಬಳಿಕ ರಾಜ್ಯಕ್ಕೆ ನೂತನ ರಾಜ್ಯಪಾಲರ ಎಂಟ್ರಿಯಾಗಿದ್ದು, ತಮ್ಮ ಹೊಸ ಜವಾಬ್ದಾರಿಯನ್ನು ಯಾವ ರೀತಿ ನಿಭಾಯಿಸಲಿದ್ದಾರೆ ಎಂಬುದು ಕುತೂಹಲ ಸೃಷ್ಟಿಸಿದೆ.

The post ರಾಜ್ಯಪಾಲರಾಗಿ ಗೆಹಲೋತ್​ ಇಂದು ಅಧಿಕಾರ ಸ್ವೀಕಾರ; ಅವರ ರಾಜಕೀಯ ಹಿನ್ನೆಲೆ ಇಲ್ಲಿದೆ appeared first on News First Kannada.

Source: newsfirstlive.com

Source link