52 ಮಂದಿ ಬಲಿ ಪಡೆದ ಢಾಕಾ ಅಗ್ನಿ ದುರಂತ ಆಕಸ್ಮಿಕವಲ್ಲ? -ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್

52 ಮಂದಿ ಬಲಿ ಪಡೆದ ಢಾಕಾ ಅಗ್ನಿ ದುರಂತ ಆಕಸ್ಮಿಕವಲ್ಲ? -ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್

ಇಂದು ಅಂಬಿ ಅಭಿಮಾನಿಗಳ ಪ್ರತಿಭಟನೆ?

blank
ಸುಮಲತಾ ವಿರುದ್ಧದ ಸಮರದಲ್ಲಿ ಮಾಜಿ ಸಿಎಂ ಹೆಚ್​ಡಿಕೆ ಕದನ ವಿರಾಮ ಘೋಷಿಸಿದಂತಿದೆ. ಆದ್ರೆ ಇದು ಅಂಬರೀಶ್ ಅವರ ಅಭಿಮಾನಿಗಳು ಹೆಚ್​ಡಿಕೆ ವಿರುದ್ಧ ಪ್ರತಿಭಟನೆ ನಡೆಸಲು ಪ್ಲಾನ್ ರೂಪಿಸಿದ್ದಾರೆ ಎನ್ನಲಾಗಿದೆ. ಇಂದು ಬೆಳಗ್ಗೆ 11.30 ರ ಸುಮಾರಿಗೆ ಕಂಠೀರವ ಸ್ಟುಡಿಯೋದ ಅಂಬಿ ಸಮಾಧಿ ಬಳಿ ಶಾಂತಿಯುತ ಪ್ರತಿಭಟನೆ ಮಾಡಿ ಸುಮಲತಾಗೆ ಬೆಂಬಲ ಸೂಚಿಸಲು ನಿರ್ಧರಿಸುವ ಮಾಹಿತಿ ಲಭ್ಯವಾಗಿದೆ. ಇನ್ನು, ಕೊರೊನ ಹಿನ್ನಲೆ ಮೈಸೂರು ಬ್ಯಾಂಕ್ ಸರ್ಕಲ್​​ನಲ್ಲಿ ಪ್ರತಿಭಟನೆಗೆ ಅವಕಾಶ ಸಿಗದ ಹಿನ್ನೆಲೆ ಕಂಠೀರವದಲ್ಲಿ ಸೇರಲು ಸಿದ್ದತೆ ನಡೆಸಿದ್ದಾರೆ.

ಸಚಿವರ ಜೊತೆ ಜುಲೈ 14ಕ್ಕೆ ಮೋದಿ ಸಂಪುಟ ಸಭೆ

blank
ಪ್ರಧಾನಿ ನರೇಂದ್ರ ಮೋದಿ ಜುಲೈ 14ರಂದು ತಮ್ಮ ಸಂಪುಟ ಸಚಿವರ ಜೊತೆ ಸಭೆ ನಡೆಸಲಿದ್ದಾರೆ. ಸಂಪುಟ ಪುನಾರಚನೆಯ ಬಳಿಕ ನಡೆಯುತ್ತಿರುವ ಮೊದಲ ಸಭೆ ಇದಾಗಿರುವುದರಿಂದ ಭಾರೀ ಮಹತ್ವ ಪಡೆದುಕೊಂಡಿದೆ. ಕೊರೊನಾ ನಿಯಮಾವಳಿ ಪಾಲನೆ, 3ನೇ ಅಲೆ ಮೊದಲಾದ ವಿಚಾರಗಳು ಸಭೆಯಲ್ಲಿ ಚರ್ಚೆಯಾಗುವ ಸಾಧ್ಯತೆ ಇದೆ. ಮೊನ್ನೆಯಷ್ಟೇ ಪ್ರಧಾನಿ ಮೋದಿ ನೂತನ ಸಚಿವರನ್ನ ತಮ್ಮ ಸಂಪುಟಕ್ಕೆ ಸೇರಿಸಿಕೊಂಡಿದ್ರು..

ಜುಲೈ 17 ರಿಂದ 5 ದಿನ ಅಯ್ಯಪ್ಪನ ದರ್ಶನಕ್ಕೆ ಅವಕಾಶ

blank
ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರಿಗೆ ದೇಗುಲದ ಆಡಳಿತ ಮಂಡಳಿ ಸಿಹಿ ಸುದ್ದಿ ನೀಡಿದೆ. ಮಾಸಿಕ ಪೂಜೆಗಳ ಪ್ರಯುಕ್ತ ದೇವಸ್ಥಾನವನ್ನು 5 ದಿನಗಳ ಕಾಲ ಭಕ್ತಾದಿಗಳ ದರ್ಶನಕ್ಕೆ ಮುಕ್ತಗೊಳಿಸುವುದಾಗಿ ಹೇಳಿದೆ. ಜುಲೈ 17 ರಿಂದ ಜುಲೈ 21 ರವರೆಗೆ ಅಯ್ಯಪ್ಪ ಸ್ವಾಮಿ ದೇವಾಲಯ ತೆರೆದಿರಲಿದೆ. 48 ಗಂಟೆಗಳೊಳಗಿನ ಅವಧಿಯ ಕೊರೊನಾ ನೆಗೆಟಿವ್ ರಿಪೋರ್ಟ್​ ಹಾಗೂ ಲಸಿಕೆ ಪಡೆದಿರುವ ಭಕ್ತಾದಿಗಳಿಗೆ ಮಾತ್ರ ದೇವರ ದರ್ಶನಕ್ಕೆ ಪಡೆಯಲು ಅವಕಾಶವಿರಲಿದೆ. ಪ್ರತಿದಿನ ಗರಿಷ್ಠ 5 ಸಾವಿರ ಭಕ್ತಾದಿಗಳು ದೇವರ ದರ್ಶನ ಪಡೆಯಬಹುದಾಗಿದ್ದು, ಆನ್​​ಲೈನ್​ ಬುಕ್ಕಿಂಗ್​ ಮಾಡಿದವರಿಗೆ ಮಾತ್ರ ಈ ದೇವರ ದರ್ಶನ ಸಿಗಲಿದೆ.

ಇಂದಿನಿಂದ ಕೃಷ್ಣ ಮಠ ದರ್ಶನಕ್ಕೆ ಮುಕ್ತ
ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಕಡಿಮೆಯಾಗ್ತಿದ್ದಂತೆ ದೇವಸ್ಥಾನದೊಳಗೆ ಭಕ್ತರ ಪ್ರವೇಶಕ್ಕೆ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಉಡುಪಿಯ ಕೃಷ್ಣ ಮಠ ಒಂದು ವಾರದ ಬಳಿಕ ಇಂದಿನಿಂದ ಭಕ್ತರ ಪ್ರವೇಶಕ್ಕೆ ಅವಕಾಶ ಕೊಡಲಾಗಿದೆ. ಈ ಕುರಿತು ಮಠದ ವ್ಯವಸ್ಥಾಪಕರು ಪ್ರಕಟಣೆ ಹೊರಡಿಸಿದ್ದು ಇಂದಿನಿಂದ ಶ್ರೀ ಕೃಷ್ಣ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಧ್ಯಾಹ್ನ 2 ಗಂಟೆಯಿಂದ ಸಂಜೆ 6ರ ತನಕ ಭಕ್ತರಿಗೆ ಶ್ರೀ ಕೃಷ್ಣ ಮುಖ್ಯಪ್ರಾಣ ದರ್ಶನಕ್ಕೆ ಅವಕಾಶವಿದ್ದು, ಭಕ್ತರು ಕಡ್ಡಾಯವಾಗಿ ಮಾಸ್ಕ್‌ ಧರಿಸಿ ಸಾಮಾಜಿಕ ಅಂತರ ಕಾಪಾಡುವಂತೆ ಮಠದ ಪ್ರಕಟಣೆಯಲ್ಲಿ ತಿಳಿಸಿದೆ..

ಕೋವಿಡ್ ಸೆಂಟರ್​ನಲ್ಲಿ ಹುಟ್ಟುಹಬ್ಬ ಆಚರಣೆ
ಕೋವಿಡ್ ಕೇರ್ ಸೆಂಟರ್​ನಲ್ಲಿನ ಕೆಲಸ ಮಾಡುತ್ತಿದ್ದ ಯುವತಿಯ ಹುಟ್ಟುಹಬ್ಬವನ್ನ ಹೊನ್ನಾಳಿ ಶಾಸಕ‌ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಭರ್ಜರಿಯಾಗಿ ಆಚರಿಸಿದ್ದಾರೆ. ಹೊನ್ನಾಳಿ ತಾಲೂಕಿನ ಅರಬಗಟ್ಟೆಯಲ್ಲಿನ ಕೋವಿಡ್ ಕೇರ್ ಸೆಂಟರ್​ನಲ್ಲಿ ಕೇಕ್ ಕತ್ತರಿ ಹುಟ್ಟುಹಬ್ಬ ಆಚರಿಸಿಕೊಂಡಿದಲ್ಲದೇ ಯುವತಿ ಹಾಗೂ ಹಲವಾರು ಮಂದಿ ಕೋವಿಡ್ ಸೋಂಕಿತರು ಕುಣಿದು ಕುಪ್ಪಳಿಸಿದ್ದಾರೆ. ಈ ಹಿಂದೆ ಕೋವಿಡ್​​ ಕೇರ್​​ ಸೆಂಟರ್​​ನಲ್ಲಿ ಹೋಮ ಹವನ ನಡೆಸಿ ಶಾಸಕರು ವಿವಾದವನ್ನು ಮೈಮೇಲೆಳೆದುಕೊಂಡಿದ್ದರು.

₹4 ಕೋಟಿ ದಂಡ ವಸೂಲಿ ಮಾಡಿರುವ ಪೊಲೀಸರು
ಕೊರೊನಾ ಟೈಮ್​ನಲ್ಲಿ ಬೆಂಗಳೂರು ಪಶ್ಚಿಮ ವಿಭಾಗ ಪೊಲೀಸರು ದಾಖಲೆ ಪ್ರಮಾಣದಲ್ಲಿ ದಂಡ ವಸೂಲಿ ಮಾಡಿದ್ದಾರೆ. 2020, ಜುಲೈ 4ರಿಂದ 2021 ಜುಲೈ 10ರ ವೆರೆಗೆ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸರು ಒಟ್ಟು 4 ಕೋಟಿ ದಂಡ ಕಲೆಕ್ಟ್​ ಮಾಡಲಾಗಿದೆ. ಜುಲೈ 4, 2020 ರಿಂದ ಏಪ್ರಿಲ್ 1, 2021 ರವರಿಗೆ ಪೊಲೀಸರು ಒಟ್ಟು 1 ಲಕ್ಷದ 38 ಸಾವಿರದ 505 ಕೇಸ್​ಗಳನ್ನ ದಾಖಲಿದ್ದಾರೆ. ಈ ಮೂಲಕ ಸಂಗ್ರಹಿಸಲಾದ ದಂಡದ ಮೊತ್ತ 3 ಕೋಟಿಯ 46 ಲಕ್ಷದ 26 ಸಾವಿರದ 250 ರೂಪಾಯಿಯಾಗಿದೆ..

ಇಂದು ಬಾಹ್ಯಾಕಾಶಕ್ಕೆ ಹಾರಲಿರುವ ಸಿರಿಶಾ ಬಾಂದ್ಲಾ
ಭಾರತದ ಮೂಲದ ಏರೋನಾಟಿಕಲ್ ಎಂಜಿನಿಯರ್‌ ಸಿರಿಶಾ ಬಾಂದ್ಲಾ ಇಂದು ಬಾಹ್ಯಾಕಾಶಕ್ಕೆ ಹಾರಲು ಸಜ್ಜಾಗಿದ್ದಾರೆ. ವರ್ಜಿನ್ ಗ್ಯಾಲಕ್ಟಿಕ್‌ನ ವಿಎಸ್‌ಎಸ್ ಯೂನಿಟಿ ಗಗನ ನೌಕೆಯಲ್ಲಿ ಪ್ರಯಾಣಿಸಲಿರುವ 6 ಗಗನಯಾತ್ರಿಗಳಲ್ಲಿ ಸಿರಿಶಾ ಕೂಡ ಒಬ್ಬರು. ಇಂದು ನ್ಯೂ ಮೆಕ್ಸಿಕೋದಿಂದ ಬಾಹ್ಯಾಕಾಶದತ್ತ ಪ್ರಯಾಣ ಆರಂಭಿಸಲಿದ್ದಾರೆ. ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲಿಯಮ್ಸ್ ನಂತರ ಸಿರಿಶಾ ಬಾಹ್ಯಾಕಾಶಕ್ಕೆ ಹಾರುತ್ತಿರುವ 3ನೇ ಭಾರತೀಯ ಮೂಲದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಹುಟ್ಟಿದ ಸಿರಿಶಾ ಬಾಂದ್ಲಾ, ಹೂಸ್ಟನ್‌ ನಗರದಲ್ಲೇ ಬಾಲ್ಯ ಕಳೆದ್ರು..

ಬರೋಬ್ಬರಿ ₹2,500 ಕೋಟಿ ಮೌಲ್ಯದ ಹೆರಾಯಿನ್​ ವಶ
ಅತಿದೊಡ್ಡ ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಭೇದಿಸಿರುವ ದೆಹಲಿ ಪೊಲೀಸರು ಭಾರೀ ಪ್ರಮಾಣದ ಹೆರಾಯಿನ್​ ವಶಪಡಿಸಿಕೊಂಡಿದ್ದಾರೆ. ಅಂದಾಜು 2 ಸಾವಿರದ ಐನೂರು ಕೋಟಿ ರೂಪಾಯಿಯ ಹೆರಾಯಿನ್​ ವಶಕ್ಕೆ ಪಡೆಯಲಾಗಿದೆ.. 354 ಕೆ.ಜಿ ತೂಕದ ಹೆರಾಯಿನ್​​ನ ಜೊತೆಗೆ ಮೂವರನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಮೂವರಲ್ಲಿ ಒಬ್ಬ ಅಫ್ಘಾನಿಸ್ತಾನ ಮೂಲದವನಾಗಿದ್ದು, ಒಬ್ಬ ಪಂಜಾಬ್​​ ಹಾಗೂ ಮತ್ತೊಬ್ಬ ಕಾಶ್ಮೀರ ಮೂಲದವನಾಗಿದ್ದಾನೆ. ಈ ಬೃಹತ್​ ಪ್ರಮಾನದ ಮಾದಕವಸ್ತು ಅಫ್ಘಾನಿಸ್ಥಾನದಿಂದ ಮುಂಬೈಗೆ ತಲುಪಿದೆ ಅಂತಾ ಮಾಹಿತಿ ಲಭ್ಯವಾಗಿದೆ.

ಢಾಕಾ ಅಗ್ನಿ ದುರಂತ ಆಕಸ್ಮಿಕವಲ್ಲ, ಉದ್ದೇಶಪೂರ್ವಕ ಕೃತ್ಯ!

blank
ಬಾಂಗ್ಲಾದೇಶದ ಢಾಕಾ ಜ್ಯೂಸ್​ ಫ್ಯಾಕ್ಟರಿಯ ಅಗ್ನಿದುರಂತ ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದೆ. ಪ್ರಕರಣ ಸಂಬಂಧ ಫ್ಯಾಕ್ಟರಿಯ ಮಾಲೀಕ ಹಾಗೂ ಆತನ ನಾಲ್ವರು ಪುತ್ರರು ಸೇರಿ ಒಟ್ಟು 8 ಮಂದಿಯನ್ನ ಬಂಧಿಸಲಾಗಿದೆ.. ಫ್ಯಾಕ್ಟರಿಯಲ್ಲಿ ಬೆಂಕಿಹೊತ್ತಿಕೊಂಡ ಸಮಯದಲ್ಲಿ ಫ್ಯಾಕ್ಟರಿಯ ಬಾಗಿಲು ಕ್ಲೋಸ್ ಆಗಿತ್ತು ಎನ್ನಲಾಗಿದ್ದು, ಇದೊಂದು ಉದ್ದೇಶಪೂರ್ವಕ ಕೃತ್ಯ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಅಗ್ನಿ ದುರಂತದಲ್ಲಿ ಬರೋಬ್ಬರಿ 52 ಮಂದಿ ಸಾವನ್ನಪ್ಪಿದ್ದಾರೆ.

ಶಿವಣ್ಣನ 126ನೇ ಚಿತ್ರಕ್ಕೆ ರಿಷಬ್ ಶೆಟ್ಟಿ ಸಾರಥಿ

blank
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹುಟ್ಟುಹಬ್ಬದ ಮುಂಚೆಯೇ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. 125ನೇ ಚಿತ್ರ ಸೆಟ್ಟೇರುವ ಮುಂಚೆಯೇ‌ ಶಿವಣ್ಣನ 126ನೇ ಚಿತ್ರ ಗಾಂಧಿ ನಗರದಲ್ಲಿ ಭಾರೀ ಸದ್ದು ಮಾಡುತ್ತಿದ್ದೆ.. ಶಿವರಾಜ್​ಕುಮಾರ್​ರವರ 126ನೇ ಚಿತ್ರಕ್ಕೆ ರಿಷಬ್ ಶೆಟ್ಟಿ ಸಾರಥಿಯಾಗಲಿದ್ದಾರೆ. ರಿಷಬ್​ ನಿರ್ದೇಶನದಲ್ಲಿ ಚಿತ್ರ ಮೂಡಿಬರಲಿದ್ದು ಜಯಣ್ಣ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಲಿದೆ. ಇನ್ನು, ಮುಂದಿನ ವರ್ಷ ಚಿತ್ರ ಸೆಟ್ಟೇರಲಿದ್ದು ಚಿತ್ರದ ಬಗ್ಗೆ ಎಲ್ಲಾ ಮಾತುಕತೆ ಕತೆ ಮುಗಿದಿದೆ ಎಂದು ನ್ಯೂಸ್ ಫಸ್ಟ್​​​ಗೆ ನಿರ್ದೇಶಕ ರಿಷಬ್ ಶೆಟ್ಟಿ ತಿಳಿಸಿದ್ದಾರೆ.

The post 52 ಮಂದಿ ಬಲಿ ಪಡೆದ ಢಾಕಾ ಅಗ್ನಿ ದುರಂತ ಆಕಸ್ಮಿಕವಲ್ಲ? -ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್ appeared first on News First Kannada.

Source: newsfirstlive.com

Source link