ಅಂಜನಾಪುರ ಜಲಾಶಯ ಭರ್ತಿ- ಬಾಗಿನ ಅರ್ಪಿಸಿದ ಬಿ.ವೈ.ರಾಘವೇಂದ್ರ

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ರೈತರ ಜೀವನಾಡಿ ಆಗಿರುವ ಅಂಜನಾಪುರ ಜಲಾಶಯ ಭರ್ತಿಯಾಗಿದ್ದು, ಸಂಸದ ಬಿ.ವೈ. ರಾಘವೇಂದ್ರ ಅವರು ಪತ್ನಿ ತೇಜಸ್ವಿನಿ ಜೊತೆ ಬಾಗಿನ ಅರ್ಪಿಸಿದ್ದಾರೆ.

ಬಿ.ವೈ ರಾಘವೇಂದ್ರ ದಂಪತಿ ಮೊದಲು ಜಲಾಶಯದ ದಡದಲ್ಲಿರುವ ಗಂಗಾ ದೇವಿಗೆ ಪೂಜೆ ಸಲ್ಲಿಸಿದರು. ಆ ಬಳಿಕ ಬಾಗಿನ ಅರ್ಪಿಸಿದ್ದಾರೆ. ಅಂಜನಾಪುರ ಜಲಾಶಯ ಶಿಕಾರಿಪುರ ತಾಲೂಕಿನ ರೈತರ ಜೀವನಾಡಿಯಾಗಿದೆ. ಸಾಮಾನ್ಯವಾಗಿ ಈ ಜಲಾಶಯ ವಾಡಿಕೆಯಂತೆ ಆಗಸ್ಟ್ ಮೊದಲ ವಾರದಲ್ಲಿ ಭರ್ತಿ ಆಗುತಿತ್ತು. ಆದರೆ ಈ ಬಾರಿ ಜುಲೈ ತಿಂಗಳಿನಲ್ಲಿಯೇ ಈ ಜಲಾಶಯ ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಶಿಕಾರಿಪುರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ, ಕೃಷಿ ಚಟುವಟಿಕೆಯ ನೀರಿಗಾಗಿ ಈ ಜಲಾಶಯ ಅವಲಂಬಿತವಾಗಿದೆ. ಇದನ್ನೂ ಓದಿ: ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ

ಅಂಜನಾಪುರ ಜಲಾಶಯ 1.80 ಟಿಎಂಸಿ ನೀರು ಸಂಗ್ರಹ ಸಾಮಥ್ರ್ಯ ಹೊಂದಿದೆ. ಹೊಸನಗರ ತಾಲೂಕಿನಲ್ಲಿ ಹುಟ್ಟುವ ಕುಮದ್ವತಿ ನದಿಯು ಹರಿದು ಶಿಕಾರಿಪುರ ತಾಲೂಕಿನ ಮೂಲಕ ಹಾವೇರಿ ಜಿಲ್ಲೆಯ ಮದಗದ ಕೆರೆಗೆ ಸೇರುತ್ತದೆ. ಹೀಗೆ, ಹರಿಯುವ ಕುಮದ್ವತಿ ನದಿಗೆ ಶಿಕಾರಿಪುರ ತಾಲೂಕಿನ ಅಂಜನಾಪುರ ಗ್ರಾಮದ ಬಳಿ ಸಣ್ಣ ಬ್ಯಾರೇಜ್ ನಿರ್ಮಾಣ ಮಾಡಲಾಗಿದೆ. ಬಾಗಿನ ಅರ್ಪಣೆ ವೇಳೆ ಮಲೆನಾಡು ಅಭಿವೃದ್ದಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಸೇರಿದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

The post ಅಂಜನಾಪುರ ಜಲಾಶಯ ಭರ್ತಿ- ಬಾಗಿನ ಅರ್ಪಿಸಿದ ಬಿ.ವೈ.ರಾಘವೇಂದ್ರ appeared first on Public TV.

Source: publictv.in

Source link