ಮೇಕೆದಾಟು ಯೋಜನೆಗೆ ವಿರೋಧ; ಇಂದು ಸರ್ವಪಕ್ಷಗಳ ಸಭೆ ಕರೆದ ಸಿಎಂ ಸ್ಟಾಲಿನ್​​​

ಮೇಕೆದಾಟು ಯೋಜನೆಗೆ ವಿರೋಧ; ಇಂದು ಸರ್ವಪಕ್ಷಗಳ ಸಭೆ ಕರೆದ ಸಿಎಂ ಸ್ಟಾಲಿನ್​​​

ಚೆನ್ನೈ: ಕಾವೇರಿ ನದಿಗಾಗಿ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣ ಮಾಡಲು ಸಿಎಂ ಬಿ.ಎಸ್​ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಮುಂದಾಗಿದೆ. ಕೋರ್ಟ್​​ ಆದೇಶದ ಬಳಿಕವೇ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಹೀಗಿದ್ದರೂ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್​​ ನೇತೃತ್ವದ ಸರ್ಕಾರ ಮೇಕೆದಾಟು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ. ಈ ಯೋಜನೆಯಿಂದ ತಮಿಳುನಾಡಿಗೆ ಪೂರೈಕೆಯಾಗುವ ನೀರಿಗೆ ಕೊರತೆಯಾಗಲಿದೆ ಎಂದು ಹೇಳಿದೆ.

ಇತ್ತೀಚೆಗೆ ಸಿಎಂ ಬಿ.ಎಸ್​ ಯಡಿಯೂರಪ್ಪ ಮತ್ತು ಎಂ.ಕೆ ಸ್ಟಾಲಿನ್ ನಡುವೆ ಮೇಕೆದಾಟು ವಿಚಾರವಾಗಿ ಪರಸ್ಪರ ಪತ್ರ ವ್ಯವಹಾರವೂ ನಡೆದಿತ್ತು. ಈ ಸಂದರ್ಭದಲ್ಲಿ ನಾವು ಮೇಕೆದಾಟು ಯೋಜನೆಗೆ ಬದ್ಧವಾಗಿದ್ದೇವೆ, ಇದರಿಂದ ತಮಿಳುನಾಡಿಗೆ ಹರಿಯುವ ನೀರಿನ ಪ್ರಮಾಣದಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದರು. ಇದಕ್ಕೆ ನಿಮ್ಮ ಹೇಳಿಕೆ ನಾವು ಒಪ್ಪೋದಿಲ್ಲ, ಮೇಕೆದಾಟು ಯೋಜನೆಯಿಂದ ನಮಗೆ ನೀರಿನ ಕೊರತೆಯಾಗಲಿದೆ ಎಂಬುದು ನಮ್ಮ ಸ್ಪಷ್ಟವಾದ ಅಭಿಪ್ರಾಯ ಎಂದು ಸ್ಟಾಲಿನ್​ ಕೂಡ ಪತ್ರ ಬರೆದಿದ್ದರು.

ಹೀಗೆ ಎರಡು ರಾಜ್ಯಗಳ ನಡುವೆ ಮೇಕೆದಾಟು ವಿಚಾರದಲ್ಲಿ ಕಿತ್ತಾಟ ನಡೆಯುತ್ತಿರುವಾಗಲೇ ಸಿಎಂ ಎಂ.ಕೆ ಸ್ಟಾಲಿನ್​​ ಇಂದು ಸರ್ವಪಕ್ಷಗಳ ಸಭೆ ಕರೆದಿದ್ದಾರೆ. ಕರ್ನಾಟಕ ಸರ್ಕಾರದ ವಿರುದ್ಧ ಹೋರಾಟ ಮಾಡಲು, ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ಮುಂದುವರಿಸಬಾರದು ಎಂದು ಒತ್ತಡ ಹೇರುವುದು ಈ ಸಭೆ ಉದ್ದೇಶವಾಗಿದೆ. ಇಂದಿನ ಸಭೆಯಲ್ಲಿ ಎಲ್ಲಾ ಪಕ್ಷಗಳ ಅಭಿಪ್ರಾಯ ಪಡೆದು ಎಂ.ಕೆ ಸ್ಟಾಲಿನ್​​​ ಒಂದು ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ.

The post ಮೇಕೆದಾಟು ಯೋಜನೆಗೆ ವಿರೋಧ; ಇಂದು ಸರ್ವಪಕ್ಷಗಳ ಸಭೆ ಕರೆದ ಸಿಎಂ ಸ್ಟಾಲಿನ್​​​ appeared first on News First Kannada.

Source: newsfirstlive.com

Source link