ಮನೆ ಗೋಡೆ ಕುಸಿದು ಗಾಯಗೊಂಡಿದ್ದ ಮಹಿಳೆ ಸಾವು

– ತಾಯಿ ಕಳೆದುಕೊಂಡು ಕಂದಮ್ಮಗಳು ಕಣ್ಣೀರು

ಚಿತ್ರದುರ್ಗ: ಮನೆ ಗೋಡೆ ಕುಸಿದು ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಇದೀಗ ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಮೃತರನ್ನು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕು ಕೆಲ್ಲೋಡ್ ಗ್ರಾಮದ ಸಾವಿತ್ರಮ್ಮ(33) ಎಂದು ಗುರುತಿಸಲಾಗಿದೆ. ಮನೆಯ ಗೋಡೆ ಕುಸಿತದಿಂದಾಗಿ ಕಳೆದ ಮೂರು ದಿನಗಳ ಹಿಂದೆಯಷ್ಟೇ ಮೂರು ವರ್ಷದ ಕಂದಮ್ಮ ಸಾವನ್ನಪ್ಪಿತ್ತು. ಇದೀಗ ಈ ಬೆನ್ನಲ್ಲೇ ಮಹಿಳೆ ಕೂಡ ಮೃತಪಟ್ಟಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಕೆಲ್ಲೋಡು ಗ್ರಾಮದಲ್ಲಿ ಮಳೆಯಲ್ಲಿ ನೆನೆದಿದ್ದ ಮನೆಯ ಗೋಡೆ ಕುಸಿದು ಮೂರು ವರ್ಷದ ಮಗು ಸಾವನ್ನಪ್ಪಿದ್ದು, ತಂದೆ-ತಾಯಿ ತೀವ್ರವಾಗಿ ಗಾಯಗೊಂಡಿದ್ದರು. ಹೀಗಾಗಿ ತುಂಬಾ ಅಸ್ವಸ್ಥರಾಗಿದ್ದ ಮಗುವಿನ ತಾಯಿ ಸಾವಿತ್ರಮ್ಮನನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಆಕೆ ಕೂಡ ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಗಂಡ ಓಂಕಾರಪ್ಪ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

8 ತಿಂಗಳ ಹಸುಗೂಸು ಸೇರಿದಂತೆ 6 ವರ್ಷದ ಬಾಲಕ ತಾಯಿಯನ್ನು ಕಳೆದುಕೊಂಡು ಕಣ್ಣೀರಾಕುತ್ತಿದ್ದಾರೆ. ಹೀಗಾಗಿ ಸರ್ಕಾರದಿಂದ ಸಾವಿಗೀಡಾದ ಮಗುವಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಆದರೆ ತಾಯಿಯ ನಿಧನದಿಂದ ಪುಟ್ಟ ಮಕ್ಕಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದನ್ನೂ ಓದಿ: ಬೀದರ್‌ನಲ್ಲಿ ಸಿಡಿಲಿಗೆ ತಾಯಿ, ಮಗಳು ಬಲಿ

The post ಮನೆ ಗೋಡೆ ಕುಸಿದು ಗಾಯಗೊಂಡಿದ್ದ ಮಹಿಳೆ ಸಾವು appeared first on Public TV.

Source: publictv.in

Source link