ಜನಸಂಖ್ಯೆ ನಿಯಂತ್ರಣಕ್ಕೆ ಯೋಗಿ ಸರ್ಕಾರ ಹೊಸ ಮಸೂದೆ; 2ಕ್ಕಿಂತ ಹೆಚ್ಚು ಮಕ್ಕಳಿದ್ದವ್ರಿಗೆ ಢವಢವ

ಜನಸಂಖ್ಯೆ ನಿಯಂತ್ರಣಕ್ಕೆ ಯೋಗಿ ಸರ್ಕಾರ ಹೊಸ ಮಸೂದೆ; 2ಕ್ಕಿಂತ ಹೆಚ್ಚು ಮಕ್ಕಳಿದ್ದವ್ರಿಗೆ ಢವಢವ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಏನೇ ಮಾಡಿದ್ರೂ ಭರ್ಜರಿ ಸುದ್ದಿಯಾಗುತ್ತೆ. ಇದೀಗ ಯೋಗಿ ಸರ್ಕಾರ ಜನಸಂಖ್ಯೆ ನಿಯಂತ್ರಣಕ್ಕೆ ಜಾರಿಗೆ ತರಲು ಮುಂದಾಗಿರೋ ಹೊಸ ಕಾಯ್ದೆ ತೀವ್ರ ಕುತುಹಲ ಮೂಡಿಸಿದೆ.

ಉತ್ತರ ಪ್ರದೇಶ ದೇಶದ ಅತಿ ದೊಡ್ಡ ರಾಜ್ಯ. ಇಲ್ಲಿನ ಜನಸಂಖ್ಯೆಯೂ ವಿಪರೀತ. ಇಲ್ಲಿನ ರಾಜಕಾರಣವೂ ಅಷ್ಟೇ ಸಂಕೀರ್ಣ. ಇಂತಾ ರಾಜ್ಯವನ್ನು ಸಂಬಾಳಿಸಿಕೊಂಡು ಹೋಗೋದು ಅಷ್ಟು ಸುಲಭ ಅಲ್ಲ. ಆದರೆ, ಯೋಗಿ ಆದಿತ್ಯನಾಥ್ ಯಾವುದೇ ರಾಜಕೀಯ ಸವಾಲುಗಳು ಎದುರಾಗದಂತೆ ಸರ್ಕಾರ ನಡೆಿಸಿಕೊಂಡು ಹೋಗುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿ ಇದೊಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಯೋಗಿ
ಚುನಾವಣೆ ಪೂರ್ವದಲ್ಲಿ ಮತ್ತೆ ಗಮನ ಸೆಳೆದ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ ಸಮತಟ್ಟು ಭೂಮಿ ಹೊಂದಿದ ವಿಸ್ತಾರವಾದ ಪ್ರದೇಶ ಹೊಂದಿರುವ ವಿಶಾಲವಾದ ರಾಜ್ಯ. ಗಂಗಾ ನದಿ ತಟದಲ್ಲಿರುವ ಈ ರಾಜ್ಯದಲ್ಲಿ ಜನಸಂಖ್ಯೆಯೇ ಭಾರವಾಗಿ ಬಿಟ್ಟಿದೆ. ಎಷ್ಟರ ಮಟ್ಟಿಗೆ ಅಂದ್ರೆ ಉತ್ತರ ಪ್ರದೇಶದ ಜನಸಂಖ್ಯೆ 20 ಕೋಟಿಗೂ ಮೀರಿ ಬಿಟ್ಟಿದೆ. ಉತ್ತರ ಪ್ರದೇಶದ ಯಾವುದೇ ಮೂಲೆಗೆ ಹೋದರೂ ಅಲ್ಲಿ ಜನಸಂದಣಿ ವಿಪರೀತ. ಹೀಗಾದಾಗ ಎಲ್ಲವೂ ಇಕ್ಕಟ್ಟು. ಪ್ರಸಿದ್ಧ,ಅಷ್ಟೇ ಪವಿತ್ರ ಕ್ಷೇತ್ರ ಕಾಶಿಯಿಂದ ಹಿಡಿದು,ಲಖನೌ, ಅಯೋಧ್ಯೆಯವರೆಗೂ ಎಲ್ಲಾ ಕಡೆ ವಿಪರೀತ ಜನ ಸಂಖ್ಯೆ. ಹೀಗೆ ಜನಸಂಖ್ಯಾ ಸ್ಫೋಟದಿಂದ ಉತ್ತರ ಪ್ರದೇಶದಲ್ಲಿ ಸಮಸ್ಯೆಗಳು ಹೆಚ್ಚುತ್ತಿವೆ. ಜನಸಂಖ್ಯಾ ಸ್ಫೋಟದಿಂದ ಏನೇಲ್ಲಾ ಸಮಸ್ಯೆಗಳು ಸೃಷ್ಟಿಯಾಗಬಹುದೋ ಅದೆಲ್ಲವೂ ಉತ್ತರ ಪ್ರದೇಶದಲ್ಲಿ ಪ್ರತ್ಯಕ್ಷವಾಗಿ ಕಾಣ್ತಾ ಇವೆ. ಹೀಗಾಗಿ ಚುನಾವಣೆ ಕೆಲವೇ ತಿಂಗಳು ಇರುವಾಗ ಉತ್ತರ ಪ್ರದೇಶದಲ್ಲಿ ಅದೊಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ ಯೋಗಿ ಆದಿತ್ಯ ನಾಥ್. ಜನ ಸಂಖ್ಯೆ ನಿಯಂತ್ರಿಸಲು ಕಠಿಣ ಕಾನೂನು ತರಲು ಹೊರಟು ಬಿಟ್ಟಿದ್ದಾರೆ.

ಮಕ್ಕಳು ಎಷ್ಟು ಅನ್ನೋದ್ರ ಮೇಲೆ ನಿರ್ಧಾರ ಆಗುತ್ತೆ ಸೌಲಭ್ಯ
ಜನಸಂಖ್ಯಾ ನಿಯಂತ್ರಣಕ್ಕೆ ಸಿದ್ಧವಾಯ್ತು ಹೊಸ ಪ್ಲಾನ್‌

ಭಾರತದಲ್ಲಿ 130 ಕೋಟಿ ಜನಸಂಖ್ಯೆ ಇದ್ದರೆ ಅದರಲ್ಲಿ ದೊಡ್ಡ ರಾಜ್ಯವಾಗಿರೋ ಉತ್ತರ ಪ್ರದೇಶದಲ್ಲಿ 20 ಕೋಟಿಗೂ ಹೆಚ್ಚು ಜನರಿದ್ದಾರೆ. ಜನಸಂಖ್ಯಾ ನಿಯಂತ್ರಣಕ್ಕೆ ಸರ್ಕಾರ ಹಾಕಿಕೊಳ್ಳೋ ಯೋಜನೆಗಳೆಲ್ಲ ನೀರಲ್ಲಿ ಮಾಡಿದ ಹೋಮದಂತೆ ನಿರುಪಯೋಗ ಆಗಿಬಿಡ್ತಾ ಇದೆ. ಏನೇ ಜಾಗೃತಿ ಮೂಡಿಸಿದ್ರೂ ಜನ ಕಿವಿ ಕೋಡ್ತಾ ಇಲ್ಲ. ಉತ್ತರ ಪ್ರದೇಶ ಅಂತ ಅಲ್ಲ. ಭಾರತದ ಜನಸಂಖ್ಯೆಯ ಬಗ್ಗೆ ಚರ್ಚೆ ಶುರುವಾಗಿ ದಶಕಗಳೇ ಕಳೆದು ಹೋಗಿವೆ. ಇಬ್ಬರೇ ಮಕ್ಕಳು ಸಾಕು ಅಂತ ದೇಶದೆಲ್ಲೆಡೆ ಜಾಗೃತಿ ಯೋಜನೆ ತಂದರೂ ಯಾವುದೇ ಪ್ರಯೋಜನ ಆಗುತ್ತಿಲ್ಲ. ಇದೀಗ ಭಾರತದ ಜನಸಂಖ್ಯೆ 130 ಕೋಟಿ ಮೀರಿ ಬಿಟ್ಟಿದೆ. ಹೀಗಾದಾಗ ಇಷ್ಟು ದೊಡ್ಡ ಸಂಖ್ಯೆಯನ್ನು ನಿಭಾಯಿಸೋದು,ದೇಶ ಪ್ರಗತಿ ಪಥದಲ್ಲಿ ಸಾಗೋದು ಕೂಡ ಸವಾಲಾಗಿ ಹೋಗಿದೆ. ಇದೀಗ ಉತ್ತರ ಪ್ರದೇಶ ಸರ್ಕಾರ ಜನಸಂಖ್ಯಾ ನಿಯಂತ್ರಣಕ್ಕಾಗಿಯೇ ಹೊಸ ಪ್ಲಾನ್‌ ಒಂದನ್ನು ಸಿದ್ಧಪಡಿಸಿದೆ. ಆ ಮಸೂದೆ ಪ್ರಕಾರ ಎಲ್ಲಾ ಸೌಲಭ್ಯಗಳು ನಿರ್ಧಾರವಾಗುವುದು ಮಕ್ಕಳು ಎಷ್ಟು ಅನ್ನೋದರ ಮೇಲೆ. ಒಂದು ಮಗು ಇದ್ರೆ ಅದೃಷ್ಟ ಲಕ್ಷ್ಮೀ ನಿಮ್ಮ ಮನೆಬಾಗಿಲೆ ಹುಡುಕಿಕೊಂಡು ಬರ್ತಾಳೆ. ಒಮ್ಮೆ ಎರಡಕ್ಕಿಂತ ಹೆಚ್ಚಿನ ಮಕ್ಕಳಿದ್ರೆ ನಿಮ್ಮ ಮನೆಯಲ್ಲಿರುವ ಅದೃಷ್ಟ ಲಕ್ಷ್ಮೀ ಓಡಿಹೋಗೋ ಎಲ್ಲಾ ಸಾಧ್ಯತೆಯೂ ಇದೆ.

ಎರಡಕ್ಕಿಂತ ಹೆಚ್ಚು ಮಕ್ಕಳಿದ್ರೆ ಸೌಲಭ್ಯ ಕಟ್‌
ಸ್ಥಳೀಯ ಸಂಸ್ಥೆ ಚುನಾವಣೆ ಸ್ಪರ್ಧೆಗೂ ಅವಕಾಶ ಇಲ್ಲ

ಹೌದು, ಉತ್ತರ ಪ್ರದೇಶದ ಯೋಗಿ ಸರ್ಕಾರ ಜಾರಿಗೆ ತರಲು ಮುಂದಾಗಿರೋ ಹೊಸ ಮಸೂದೆ ಭಾರೀ ಸಂಚಲನ ಸೃಷ್ಟಿಸುತ್ತಿದೆ. ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ದವರು ಆತಂಕಕ್ಕೆ ಒಳಗಾಗಿದ್ರೆ, ಒಂದೇ ಮಕ್ಕಳು ಇರುವವರು ಬಂಪರ್‌ ಲಾಟರಿ ನಿರೀಕ್ಷೆಯಲ್ಲಿದ್ದಾರೆ. ಬಹುಮುಖ್ಯವಾಗಿ ಎರಡಕ್ಕಿಂತ ಹೆಚ್ಚಿನ ಮಕ್ಕಳು ಹೊಂದಿರೋರಿಗೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಇರಲ್ಲ. ಅಂದ್ರೆ, ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ನಗರ ಸಭೆ, ಪಟ್ಟಣ ಸಭೆ, ಪುರಸಂಭೆ. ಹೀಗೆ ಯಾವುದೇ ಚುನಾವಣೆಗೆ ಸ್ಪರ್ಧಿಸುವ ಅವಕಾಶವೇ ಇರುವುದಿಲ್ಲ. ಒಮ್ಮೆ ನಾಮಪತ್ರ ಸಲ್ಲಿಸಿದ್ರೂ ಅದು ತಿರಸ್ಕೃತವಾಗುತ್ತೆ.

blank

ಸರ್ಕಾರಿ ನೌಕರಿ ಪಡೆಯಲು ಅರ್ಹರಲ್ಲ
ಉತ್ತರ ಪ್ರದೇಶದಲ್ಲಿ ಜನರಿಗೆ ಎರಡಕ್ಕಿಂತ ಹೆಚ್ಚಿನ ಮಕ್ಕಳು ಇದ್ರೆ ಸರ್ಕಾರಿ ನೌಕರಿ ಆಸೆ ಬಿಡಲೇಬೇಕು. ಸರ್ಕಾರಿ ನೌಕರನಾಗಬೇಕು ಅನ್ನೋ ಕನಸು ಹೊಂದಿದ್ರೆ ಎರಡಕ್ಕಿಂತ ಹೆಚ್ಚಿನ ಮಕ್ಕಳು ಇರಲೇಬಾರದು. ಒಮ್ಮೆ ಅರ್ಜಿ ಸಲ್ಲಿಸಿದ್ರೂ ಅದು ತಿರಸ್ಕೃತವಾಗುತ್ತೆ. ಹೌದು, ಇದೊಂದು ಹೊಸ ಪ್ರಸ್ತಾಪಿತ ಕಾಯ್ದೆಯಲ್ಲಿರುವ ಪ್ರಮುಖ ಅಂಶ. ಆದ್ರೆ, ಈಗಾಗಲೇ ಸರ್ಕಾರಿ ನೌಕರಿಯಲ್ಲಿದ್ದು, ಎರಡಕ್ಕಿಂತ ಹೆಚ್ಚಿನ ಮಕ್ಕಳು ಹೊಂದಿದ್ದವರಿಗೆ ಕೆಲಸ ಹೋಗಲ್ಲ. ಅಬ್ಬಾ! ಬಚಾವ್‌ ಆದೆ ಅಂತ ಖುಷಿ ಪಡಬಹುದು. ಆದ್ರೆ, ಅಂತವರಿಗೂ ನಿರಾಸೆ ಕಾದಿದೆ. ಅದೇನಂದ್ರೆ ಅಂಥವರಿಗೆ ತಮ್ಮ ಸೇವೆಯಲ್ಲಿ ಸಿಗಬೇಕಾದ ಬಡ್ತಿ ಸಿಗಲ್ಲ. ಸಿಗಬೇಕಾದ ಇನ್‌ಕ್ರಿಮೆಂಡ್‌ ಕೂಡ ಸಿಗಲ್ಲ.

ಸರ್ಕಾರ ನೀಡುತ್ತಿದ್ದ ಎಲ್ಲಾ ರೀತಿಯ ಸಬ್ಸಿಡಿ ಕಟ್‌
ಎಷ್ಟೇ ಚಿಕ್ಕ ಹಿಡುವಳಿದಾರರಾದ್ರೂ ಸಬ್ಸಿಡಿ ಸಿಗಲ್ಲ

ಪ್ರಮುಖವಾಗಿ ಕೃಷಿ, ಕೈಗಾರಿಕೆಯಲ್ಲಿ ಸರ್ಕಾರ ಸಬ್ಸಿಡಿ ನೀಡುತ್ತದೆ. ಅರ್ಹರಿಗೆ ಪರ್ಸೆಂಟೇಜ್‌ ಲೆಕ್ಕದಲ್ಲಿ ಸಬ್ಸಿಡಿ ನೀಡಲಾಗುತ್ತದೆ. ಉದಾಹರಣೆಗೆ ಒಂದು ಲಕ್ಷ ರೂಪಾಯಿ ಕೃಷಿ ಉಪಕರಣ ಖರೀದಿಸಿದ್ರೆ ಅದಕ್ಕೆ ಶೇಕಡಾ 30 ರಷ್ಟು ಸಬ್ಸಿಡಿ ನೀಡಲಾಗುತ್ತೆ ಅಂಥ ಇಟ್ಟುಕೊಳ್ಳಿ. ಅದರಲ್ಲಿ ರೈತರು 70 ಸಾವಿರ ಮಾತ್ರ ನೀಡಿದ್ರೆ ಆಯ್ತು. ಉಳಿದ ಮೂವತ್ತು ಸಾವಿರವನ್ನು ಸಬ್ಸಿಡಿ ಲೆಕ್ಕದಲ್ಲಿ ಸರ್ಕಾರ ತುಂಬಿಕೊಳ್ಳುತ್ತೆ. ಆದ್ರೆ, ಈಗ ಉತ್ತರ ಪ್ರದೇಶ ಸರ್ಕಾರ ಜಾರಿಗೆ ತರಲು ಮುಂದಾಗಿರೋ ಕಾಯ್ದೆಯಲ್ಲಿ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದ್ರೆ ಸಬ್ಸಿಡಿ ಸಿಗಲ್ಲ. ಎಷ್ಟೇ ಬಡವರಾಗಿದ್ರೂ, ಎಷ್ಟೇ ಚಿಕ್ಕ ಹಿಡುವಳಿದಾರನಾಗಿದ್ರೂ ಸಬ್ಸಿಡಿ ಸಿಗಲ್ಲ. ಪೂರ್ತಿ ಮೊತ್ತವನ್ನು ತುಂಬಿ ಕೃಷಿ ಉಪಕರಣ ಖರೀದಿಸಬೇಕಾಗುತ್ತದೆ.

ಒಂದೇ ಮಕ್ಕಳಿದ್ದವರಿಗೆ ಭಾರೀ ಅನುಕೂಲ
ಎರಡಕ್ಕಿಂತ ಹೆಚ್ಚಿನ ಮಕ್ಕಳನ್ನು ಹೊಂದಿರೋರಿಗೆ ಬಹುತೇಕ ಎಲ್ಲಾ ರೀತಿಯ ಸೌಲಭ್ಯವೂ ಕಟ್‌ ಆಗುತ್ತವೆ. ಆದ್ರೆ, ಒಂದೇ ಮಕ್ಕಳನ್ನು ಹೊಂದಿರೋರಿಗೆ ಸೌಲಭ್ಯಗಳ ಮೇಲೆ ಸೌಲಭ್ಯಗಳು ದೊರಕಲಿವೆ. ಅದೃಷ್ಟ ಲಕ್ಷ್ಮೀ ಅಂತವರ ಮನೆಯನ್ನು ಹುಡುಕಿಕೊಂಡು ಬರಲಿದೆ. ಅದೇನಂದ್ರೆ ಒಂದೇ ಮಕ್ಕಳನ್ನು ಹೊಂದಿದ್ರೆ ಆ ಮಗುವಿನ ಪದವಿ ಶಿಕ್ಷಣ ಮುಗಿಸೋವರೆಗೂ ಉಚಿತವಾಗಿ ಸರ್ಕಾರದಿಂದಲೇ ಶಿಕ್ಷಣ ನೀಡಲಾಗುತ್ತೆ. ಒಂದೇ ಒಂದು ರೂಪಾಯಿ ಶುಲ್ಕ ನೀಡಬೇಕಾಗಿಲ್ಲ. ಇದಷ್ಟೇ ಅಲ್ಲದೇ ಬಿಪಿಎಲ್‌ ಕಾರ್ಡ್‌ದಾರರು ಒಂದೇ ಮಗುಹೊಂದಿದ್ದರೆ ಗಂಡು ಮಗುವಿಗೆ 80 ಸಾವಿರ, ಹೆಣ್ಣು ಮಗುವಿಗೆ 1 ಲಕ್ಷ ನೆರವು ಸಿಗಲಿದೆ. ಮಕ್ಕಳ ಖಾತೆಯಲ್ಲಿ ಹಣವನ್ನು ಠೇವಣಿ ರೂಪದಲ್ಲಿ ಇಡಲಾಗುತ್ತದೆ.

ಮನೆಕಟ್ಟಲು ಕಡಿಮೆ ಬಡ್ಡಿ ದರದಲ್ಲಿ ಸಾಲ
ನೀರು, ವಿದ್ಯುತ್‌, ಗೃಹ ತೆರಿಗೆಯಲ್ಲಿ ರಿಯಾಯಿತಿ

blank

ಯಾರಿಗೆ ಆದ್ರೂ ತಾವು ಹೊಸ ಮನೆ ಕಟ್ಟಬೇಕು ಇಲ್ಲವೇ ಹೊಸ ಮನೆ ತೆಗೆದುಕೊಳ್ಳಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಅದಕ್ಕಾಗಿಯೇ ಕಡಿಮೆ ಬಡ್ಡಿಯಲ್ಲಿ ಸಾಲ ಸಿಗುತ್ತಾ ಅಂತಾ ಬ್ಯಾಂಕ್‌ಗಳಿಗೆ ಅಲೆಯುತ್ತಾರೆ. ಎಷ್ಟೋ ಜನ ಮನೆ ಖರೀದಿಗೆ ತೆಗೆದುಕೊಂಡ ಹೆಚ್ಚಿನ ಬಡ್ಡಿಯ ಸಾಲ ತೀರಿಸಲಾಗದೇ ಒದ್ದಾಡುತ್ತಾರೆ. ಆದ್ರೆ, ಯೋಗಿ ಸರ್ಕಾರ ಜಾರಿಗೆ ತರಲು ಮುಂದಾಗಿರೋ ಮಸೂದೆಯಲ್ಲಿ ಅಂಥವರಿಗೆ ನೆರವು ಇದೆ. ಆದ್ರೆ, ಅದಕ್ಕೂ ಕಂಡಿಷನ್‌ ಹಾಕಲಾಗಿದೆ. ಅದೇನಂದ್ರೆ, ಒಂದೇ ಮಕ್ಕಳನ್ನು ಹೊಂದಿರಬೇಕು. ಹೌದು, ಒಂದೇ ಮಕ್ಕಳನ್ನು ಹೊಂದಿರೋ ಕುಟುಂಬದವರು ಮನೆ ಕಟ್ಟಲು ಮುಂದಾದರೆ, ಹೊಸ ಮನೆ ಖರೀದಿಗೆ ಮುಂದಾದರೆ ಕಡಿಮೆ ಬಡ್ಡಿದರದಲ್ಲಿಯೇ ಸಾಲ ಸೌಲಭ್ಯ ಸಿಗಲಿಗೆ. ಇದರ ಜೊತೆಗೆ ನೀರು, ವಿದ್ಯುತ್, ಗೃಹ ತೆರಿಗೆಯಲ್ಲಿಯೂ ರಿಯಾಯಿತಿ ಸಿಗಲಿದೆ.

ಯುಪಿಎಸ್ಎಲ್‌ಸಿ ವೆಬ್‌ಸೈಟ್‌ನಲ್ಲಿ ಉಲ್ಲೇಖ
ಶೀಘ್ರದಲ್ಲಿಯೇ ಈ ಕಾನೂನು ಜಾರಿ ಸಾಧ್ಯತೆ

ಉತ್ತರ ಪ್ರದೇಶ ಸರ್ಕಾರ ಇಂತಹ ಒಂದು ಕಾಯ್ದೆ ಜಾರಿಗೆ ಮುಂದಾಗಿರೋದು ಅಚ್ಚರಿ ಹುಟ್ಟಿಸುತ್ತೆ. ಒಂದು ಮಕ್ಕಳನ್ನು ಹೊಂದಿದ್ರೆ ಯಾರಿಗೆ ಯಾವ ರೀತಿಯ ಸೌಲಭ್ಯಗಳು ಸಿಗುತ್ತವೆ. ಎರಡು ಮಕ್ಕಳಿಗಿಂತ ಹೆಚ್ಚಿ ಮಕ್ಕಳನ್ನು ಹೊಂದಿದ್ರೆ ಯಾವ ಯಾವ ಸೌಲಭ್ಯಗಳು ಕಟ್‌ ಆಗಲಿವೆ ಅನ್ನೋದನ್ನು ಸರ್ಕಾರದ ಅಧಿಕೃತ ವೆಬ್‌ಸೈಟ್‌ ಆಗಿರುವ ಯುಪಿಎಸ್‌ಸಿ ವೆಬ್‌ಸೈಟ್‌ನಲ್ಲಿಯೇ ಪ್ರಕಟಿಸಲಾಗಿದೆ. ಈ ಪ್ರಸ್ತಾವಿತ ಕಾಯ್ದೆಯ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಲು ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ. ಹೀಗಾಗಿ ಈ ಕಾಯ್ದೆ ಜಾರಿ ಶೀಘ್ರವೇ ಆಗಬಹುದು ಅನ್ನೋ ನಿರೀಕ್ಷೆಯನ್ನೂ ಮಾಡಲಾಗುತ್ತಿದೆ.

ಸಾರ್ವಜನಿಕರಿಂದ ಸಲಹೆ ಕೇಳಿದ ಸರ್ಕಾರ
ಸಲಹೆ ನೀಡಲು ಜುಲೈ 19 ಕೊನೆಯ ದಿನ

ಕರಡು ಮಸೂದೆಯನ್ನು ಸಿದ್ಧಪಡಿಸಿರೋ ಉತ್ತರ ಪ್ರದೇಶ ಸರ್ಕಾರ ಏಕಾಏಕಿ ಕಾಯ್ದೆ ಜಾರಿಗೆ ಮುಂದಾಗಿಲ್ಲ. ಅದಕ್ಕೂ ಮುನ್ನ ಕಾಯ್ದೆಯ ಬಗ್ಗೆ ಜನರ ಅಭಿಪ್ರಾಯವನ್ನು ಕೇಳಿದೆ. ಜನ ಯಾವುದನ್ನು ಇಟ್ಟುಕೊಳ್ಳಬೇಕು ಯಾವುದನ್ನು ಕಾಯ್ದೆಯಿಂದ ತೆಗೆಯಬೇಕು ಅನ್ನೋದನ್ನು ಸಲಹೆ ನೀಡಬಹುದು. ಆನಂತರ ಸಾರ್ವಜನಿಕರ ಅಭಿಪ್ರಾಯವನ್ನು ಸರ್ಕಾರ ಪರಿಶೀಲನೆ ನಡೆಸುತ್ತದೆ. ಮಸೂದೆಯ ಬಗ್ಗೆ ಜನರ ಅಭಿಪ್ರಾಯ ಏನಿದೆ ಅನ್ನೋದು ತಿಳಿದು ಬಿಡುತ್ತೆ. ಆನಂತರ ಮುಂದಿನ ಹೆಜ್ಜೆಯನ್ನು ಸರ್ಕಾರ ಇಡಲಿದೆ. ಜುಲೈ 19 ಸಾರ್ವಜನಿಕರ ಸಲಹೆಗೆ ಕೊನೆಯ ದಿನಾಂಕವಾಗಿದೆ. ಆನಂತರ ಬರುವ ಸಲಹೆಗಳು ಸ್ವೀಕಾರವಾಗುವುದಿಲ್ಲ.

ಯಾವುದೇ ಒಂದು ಧರ್ಮಕ್ಕೆ ಸಂಬಂಧಿಸಿದ್ದಲ್ಲ
ಎಲ್ಲಾ ಜಾತಿ, ಧರ್ಮದವರಿಗೂ ನಿಯಮ ಅನ್ವಯ

ಸರ್ಕಾರಗಳು ಜಾರಿಗೆ ತರುವ ಮಸೂದೆಗಳಲ್ಲಿ ಕೆಲವರಿಗೆ ರಿಯಾಯಿತಿ ಇರುತ್ತವೆ. ಬಡವರಿಗೆ, ಅಲ್ಪಸಂಖ್ಯಾತರಿಗೆ ವಿನಾಯಿತಿಗಳನ್ನು ನೀಡಲಾಗುತ್ತದೆ. ಆದ್ರೆ, ಈ ಮಸೂದೆಯಲ್ಲಿ ಯಾವ ಬಡವರಿಗೂ ಯಾವ ಧರ್ಮದವರಿಗೂ ವಿನಾಯಿತಿ ಇಲ್ಲವೇ ಇಲ್ಲ. ಎಲ್ಲರಿಗೂ ಅನ್ವಯವಾಗುತ್ತೆ. ಇದೇ ಉತ್ತರ ಪ್ರದೇಶದಲ್ಲಿ ಮುಂದೆ ದೊಡ್ಡ ವಿವಾದವನ್ನು ಹುಟ್ಟುಹಾಕಬಹುದು. ಅಥವಾ ವ್ಯಾಪಕ ವಿರೋಧವೂ ಕೇಳಿ ಬರಬಹುದು. ಆದ್ರೆ ಯೋಗಿ ಆದಿತ್ಯನಾಥ್ ಇಟ್ಟ ಹೆಜ್ಜೆ ಹಿಂದೆ ಸರಿಯುವವರಲ್ಲ. ಹೀಗಾಗಿ ಯೋಗಿ ಚುನಾವಣೆ ಪೂರ್ವದಲ್ಲೇ ಈ ಹೊಸ ಕಾಯ್ದೆ ಜಾರಿಗೆ ತರುವ ಎಲ್ಲಾ ಸಾಧ್ಯತೆ ಕಾಣಿಸ್ತಾ ಇದೆ.

ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಮುಂದಾದ್ರಾ ಯೋಗಿ?
2022ಕ್ಕೆ ಪೂರ್ವಾರ್ಧದಲ್ಲೇ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಡುವೆ ಕೋವಿಡ್‌ ನಿರ್ವಹಣೆ ಸರಿಯಾಗಿಲ್ಲ ಅಂತ ಯೋಗಿ ಸರ್ಕಾರದ ಬಗ್ಗೆ ಅಲ್ಲಿಯ ಜನರಲ್ಲಿ ಅಸಮಾಧಾನ ಇದೆ. ಪಕ್ಷದಲ್ಲಿಯೂ ಭಿನಾಭಿಪ್ರಾಯ ವ್ಯಕ್ತವಾಗಿತ್ತು. ಈ ನಡುವೆ ಮುಂದಿನ ಮುಖ್ಯಮಂತ್ರಿ ಯೋಗಿ ಅಲ್ಲ ಅನ್ನುವಂತಹ ಚರ್ಚೆಯೂ ತಾರಕಕ್ಕೇರಿತ್ತು. ಇದೆಲ್ಲದರ ನಡುವೆ ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ಯೋಗಿ ಎಲ್ಲಾ ಉಹಾಪೋಹಗಳಿಗೂ ತೆರೆ ಎಳೆದು ಬಿಟ್ರು. ಆದ್ರೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಕಳೆದ ಬಾರಿಯಷ್ಟು ಪೂರಕ ವಾತಾವರಣ ಇಲ್ಲ ಎನ್ನಲಾಗ್ತಾ ಇದೆ. ಇದೇ ಉದ್ದೇಶಕ್ಕೆ ಯೋಗಿ ಸರ್ಕಾರ ಈಗ ಜನಸಂಖ್ಯಾ ನಿಯಂತ್ರಣಕ್ಕಾಗಿ ಹೊಸ ಕಾಯ್ದೆ ತಂದು ರಾಷ್ಟ್ರ ಮಟ್ಟದಲ್ಲಿ ವರ್ಚಸ್ಸು ಹೆಚ್ಚಿಸಿಕೊಳ್ಳಲು ಯೋಗಿ ಹೊರಟ್ರಾ ಅನ್ನೋ ಪ್ರಶ್ನೆಗಳು ಶುರುವಾಗಿವೆ.

blank

ಹೆಚ್ಚುತ್ತಿರುವ ಜನಸಂಖ್ಯಾ ಸ್ಫೋಟದಿಂದ ಬಡತನ, ನಿರುದ್ಯೋಗದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಹೀಗಾಗಿಯೇ ಜನಸಂಖ್ಯಾ ನಿಯಂತ್ರಣಕ್ಕೆ ಕಠಿಣ ಕಾಯ್ದೆ ಖಂಡಿತ ಅಗತ್ಯ ಇದೆ. ಈಗ ಯೋಗಿ ಸರ್ಕಾರ ಅಂತಹವೊಂದು ಪ್ರಯತ್ನಕ್ಕೆ ಕೈಹಾಕಿದೆ. ಅದನ್ನು ಜನ ಹೇಗೆ ಸ್ವೀಕರಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

The post ಜನಸಂಖ್ಯೆ ನಿಯಂತ್ರಣಕ್ಕೆ ಯೋಗಿ ಸರ್ಕಾರ ಹೊಸ ಮಸೂದೆ; 2ಕ್ಕಿಂತ ಹೆಚ್ಚು ಮಕ್ಕಳಿದ್ದವ್ರಿಗೆ ಢವಢವ appeared first on News First Kannada.

Source: newsfirstlive.com

Source link