ಹುಡುಗ್ರು ಗಡ್ಡಕ್ಕೆ ಕತ್ತರಿ ಹಾಕುವಂತಿಲ್ಲ, ಹೆಣ್ಮಕ್ಕಳು ಶಾಲೆಗೆ ಹೋಗಂಗಿಲ್ಲ -ಉಗ್ರರಿಗೆ ಬೆಂಡಾಯ್ತ ಈ ದೇಶ

ಹುಡುಗ್ರು ಗಡ್ಡಕ್ಕೆ ಕತ್ತರಿ ಹಾಕುವಂತಿಲ್ಲ, ಹೆಣ್ಮಕ್ಕಳು ಶಾಲೆಗೆ ಹೋಗಂಗಿಲ್ಲ -ಉಗ್ರರಿಗೆ ಬೆಂಡಾಯ್ತ ಈ ದೇಶ

ಈ ದೇಶದ ಜನ ಸಾಮಾನ್ಯರು ಕಳೆದ 20 ವರ್ಷಗಳಿಂದ ನೆಮ್ಮದಿಯ ಭವಿಷ್ಯದ ಕನಸು ಕಂಡಿದ್ದರು. ಆದರೆ ಅದು ಈಗ ಭಗ್ನವಾಗಿ ಹೋಗಿದೆ. ದೇಶಕ್ಕೇ ದೇಶವೇ ಉಗ್ರರ ಹಿಡಿತಕ್ಕೆ ಸಿಕ್ಕಿಬಿಡ್ತಾ ಇದೆ. ಅಕ್ಷರಶಃ ಇಲ್ಲಿ ನರಕ ಸದೃಶ್ಯ ಪರಿಸ್ಥಿತಿ ಮತ್ತೆ ನಿರ್ಮಾಣವಾಗುತ್ತಿದೆ.
ಇಲ್ಲಿ ಬಾಯಿ ತೆಗೆದರೆ ಬಂದೂಕೇ ಮಾತನಾಡುತ್ತೆ. ಹೊರಗೆ ಬಂದರೆ ಮದ್ದು ಗುಂಡುಗಳದ್ದೇ ಸದ್ದು. ಎಲ್ಲಿ ಎಷ್ಟೊತ್ತಿಗೆ ಬಾಂಬ್ ಸ್ಫೋಟವಾಗುತ್ತೋ ಗೊತ್ತಾಗುವುದಿಲ್ಲ. ಎಲ್ಲಿ ರಕ್ತದೋಕುಳಿ ಹರಿಯುತ್ತೋ ಹೇಳಲಾಗುವುದಿಲ್ಲ. ಅದ್ಯಾವ ಕಡೆಯಿಂದಲೋ ಗುಂಪು ಗೂಡಿಕೊಂಡು ಒಂದು ಗಾಡಿ ಹತ್ತಿ ಅದೇನೋ ಘೋಷಣೆ ಕೂಗುತ್ತ ಬಂದು ಬಿಡುತ್ತಾರೆ. ಇವರು ಬಂದರು ಅಂದ್ರೆ ಊರಿಗೆ ಊರೇ ನಡುಗಿ ಹೋಗುತ್ತೆ. ಇವರು ಹೇಳಿದ್ದೇ ಕಾನೂನು, ಇವರು ಹೇಳಿದ ಹಾಗೆಯೇ ಆಡಳಿತ. ಇವರು ಮಾಡಿದ್ದೇ ದರ್ಬಾರು. ಎಂಥಾ ಪರಿಸ್ಥಿತಿ ಬಂದು ಬಿಟ್ಟಿದೆ ಇಲ್ಲಿ ಅಂದ್ರೆ ಅದನ್ನು ಅನುಭವಿಸಿದಷ್ಟು ಬಾಯಲ್ಲಿ ಹೇಳೋದು ತುಂಬು ಕಷ್ಟ. ಈ ದೇಶವೇ ಅಫ್ಘಾನಿಸ್ತಾನ.

ನೆಮ್ಮದಿಯ ಭವಿಷ್ಯದ ಕನಸು ಕಂಡಿದ್ದವರಿಗೆ ಮತ್ತೆ ಆಘಾತ
ಅಫ್ಘಾನಿಸ್ತಾನದ ಜನರಿಗೆ ಭವಿಷ್ಯವೇ ಇಲ್ಲದ ವಾತಾವರಣ

ಕಳೆದ 20 ವರ್ಷಗಳಿಂದ ಇಲ್ಲಿ ಅಮೆರಿಕಾದ ಸೇನೆಯೇ ನೆಲೆ ನಿಂತು ಬಿಟ್ಟಿತ್ತು. ತನ್ನ ದೇಶದ ಮೇಲೆಯೇ ಅಟ್ಯಾಕ್ ಮಾಡಿದ ಒಸಾಮಾನ ದಂಡು ಹಿಂಡುಗಳನ್ನೆಲ್ಲ ಸದೆ ಬಡಿಯಬೇಕೆಂದು ಸಂಕಲ್ಪ ಮಾಡಿದ್ದ ಅಮೆರಿಕಾ ಅದ್ಯಾಕೋ ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ನಿರ್ಧಾರ ಮಾಡಿ ಸೈನಿಕರು ಹೆಚ್ಚು ಕಡಿಮೆ ವಾಪಸ್ ಹೋಗಿ ಬಿಟ್ಟಿದ್ದಾರೆ. 20 ವರ್ಷಗಳ ಹಿಂದೆ ಪಕ್ಕಾ ಭಯೋತ್ಪಾದಕರ ನೆಲೆಯಾಗಿದ್ದ, ಉಗ್ರರ ಕಾರ್ಖಾನೆಯೇ ಆಗಿದ್ದ ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಸುಧಾರಿಸಿತ್ತು. ಇಲ್ಲಿ ಒಂದು ಜನರ ಸರ್ಕಾರವೂ ಸ್ಥಾಪನೆಯಾಗಿತ್ತು. ಇಲ್ಲೊಂದು ಪಾರ್ಲಿಮೆಂಟನ್ನು ಕೂಡ ನಿರ್ಮಾಣ ಮಾಡಿಕೊಟ್ಟಿತ್ತು ಭಾರತ. ನೆರೆಯ ದೇಶಗಳ ಹಾಗೆ ಇಲ್ಲಿಯೂ ಭಯೋತ್ಪಾದಕರು ನಾಶವಾಗಿ ಭವಿಷ್ಯ ಉತ್ತಮವಾಗುತ್ತೆ ಅಂತ ಅಪ್ಘಾನಿಸ್ತಾನದ ಜನ ಕನಸು ಕಟ್ಟಿಕೊಂಡಿದ್ದರು.

ಇದನ್ನೂ ಓದಿ: ಬಾಂಗ್ಲಾ ಬೆಂಕಿ ಅವಘಡದಲ್ಲಿ 52 ಮಂದಿ ಸಾವು; ಫ್ಯಾಕ್ಟರಿಯ ಮಾಲೀಕ.. 4 ಮಕ್ಕಳು ಅರೆಸ್ಟ್

ಆದ್ರೆ ಇವರ ಕನಸು ಕಮರಿ ಹೋಗಿದೆ. ಮತ್ತೆ ಮರಳಿ ಅಫ್ಘಾನಿಸ್ತಾನ ಉಗ್ರರ ತೆಕ್ಕೆಗೆ ಜಾರಿ ಬಿಡ್ತಾ ಇದೆ. ಈಗಾಗಲೇ ಅಫ್ಘಾನಿಸ್ತಾನದ ಸೈನಿಕರನ್ನೇ ಓಡಿಸುವ ಮಟ್ಟಿಗೆ ತಾಲಿಬಾನಿಗಳು ಹೊರ ಬಂದು ಹೊಡೆಯುತ್ತಿದ್ದಾರೆ ಅಂದರೆ ಊಹಿಸಿಕೊಳ್ಳಿ ಅಫ್ಘಾನಿಸ್ತಾನದಲ್ಲಿ ಎಷ್ಟರ ಮಟ್ಟಿಗೆ ಉಗ್ರರು ಬಾಲ ಬಿಚ್ಚಿರಬಹುದು ಅಂತ. ಯಾವಾಗ ಅಮೆರಿಕದ ಸೈನ್ಯ ಇಲ್ಲಿಂದ ಕಾಲ್ತೆಗೆಯುತ್ತೆ ಅಂತ ಕಾಯ್ತಾ ಇದ್ರು ಉಗ್ರರು. ಅಲ್ಲೆಲ್ಲೋ ಗುಹೆಯಲ್ಲಿ ತಲೆ ಮರೆಸಿಕೊಂಡಿದ್ದರು ತಾಲಿಬಾನಿಗಳು. ಈಗ ಎಲ್ಲರೂ ಹೊರಗೆ ಬಂದಿದ್ದಾರೆ. ಹುತ್ತದಿಂದ ಹೊರ ಬಂದ ಹಾವುಗಳಂತೆ ಬುಸು ಗುಡುತ್ತಿದ್ದಾರೆ. ಇಲ್ಲೀಗ ಉಗ್ರರದ್ದೇ ಹಿಡಿತ. ಅಫ್ಘಾನಿಸ್ತಾನದ ಬಹುತೇಕ ಪ್ರದೇಶಗಳು ಉಗ್ರರ ಹಿಡಿತಕ್ಕೆ ಜಾರಿ ಬಿಟ್ಟಿವೆ. ಇಲ್ಲಿನ ಸರ್ಕಾರ ಅಸಹಾಯಕತೆಯಿಂದ ನೋಡ್ತಾ ಇದೆ. ಮಿಲಿಟರಿ ಇದ್ದೂ ಈ ತಾಲಿಬಾನಿಗಳನ್ನು ಎದುರಿಸಲಾಗ್ತಾ ಇಲ್ಲ. ಬೇರೆ ದೇಶಗಳಂತೆಯೇ ಅಫ್ಘಾನಿಸ್ತಾನ ಕೂಡ ಆಧುನಿಕ ಜಗತ್ತಿನೆಡೆಗೆ ತನ್ನನ್ನು ತಾನು ತೆರೆದುಕೊಳ್ತಾ ಇತ್ತು. ಶಿಕ್ಷಣ, ಆರೋಗ್ಯ, ಕೃಷಿ ಹೀಗೆ ಹತ್ತು ಹಲವು ರಂಗಗಳಲ್ಲಿ ಇಲ್ಲಿನ ಜನ ಆಸಕ್ತಿಯಿಂದ ತೊಡಗಿಸಿ ಕೊಳ್ತಾ ಇದ್ರು. ಆದರೆ ಈಗ ಮತ್ತೆ ಪರಿಸ್ಥಿತಿ ಉಲ್ಟಾ ಆಗಿದೆ. ಎಲ್ಲವೂ ಉಗ್ರರ ಮೂಗಿನ ನೇರಕ್ಕೆ ನಡೆಯುತ್ತಿದೆ ಆಡಳಿತ.

ಅಫ್ಘಾನಿಸ್ತಾನದಲ್ಲಿ ಕೈ ಚೆಲ್ಲಿ ಕುಳಿತಿರುವ ಮಿಲಿಟರಿ
ಅಮೆರಿಕ ಸೈನ್ಯ ಇಲ್ಲಿಲ್ಲ,ಬೇರೆ ದೇಶಗಳ ನೆರವು ಸಿಗ್ತಾ ಇಲ್ಲ
ಮತ್ತೆ ಉಗ್ರರ ಭಯದ ನೆರಳಿನಲ್ಲೇ ಬದುಕಿಬೇಕಿದೆ ಜನರು

ಅಮೆರಿಕ ಮತ್ತು ನ್ಯಾಟೋ ಸೇನಾಪಡೆ ಅಫ್ಘಾನ್‌ನಿಂದ ಪಾಪಸ್‌ ಆಗಿದ್ದೆ ತಡ. ಅತ್ತ ತಾಲಿಬಾನ್‌ ಉಗ್ರರು ಚಿಗುರಿಕೊಂಡು ಬಿಟ್ಟಿದ್ದಾರೆ. ಅವರ ನಾಗಾಲೋಟಕ್ಕೆ ತಡೆ ನೀಡುವವರೇ ಇಲ್ಲವಾಗಿ ಬಿಟ್ಟಿದೆ. ಆಫ್ಘಾನ್‌ನ ಮಿಲಿಟರಿ ಪಡೆ ಅವರಿಗೆ ಲೆಕ್ಕಕ್ಕೆ ಇಲ್ಲ. ವೇಗವಾಗಿಯೇ ಅಫ್ಘಾನಿಸ್ತಾನದ ಜಿಲ್ಲೆಗಳನ್ನು ತಮ್ಮ ಹಿಡಿತಕ್ಕೆ ಕೆಗೆದುಕೊಂಡಿದ್ದಾರೆ. ಈಗಾಗಲೇ ಶೇಕಡಾ 80 ರಷ್ಟು ತಾಲಿಬಾನಿಗಳ ವಶಕ್ಕೆ ಸಿಕ್ಕಿದೆ. ಉಗ್ರರ ವಶಕ್ಕೆ ಸಿಕ್ಕಿದ್ರೆ ಕೇಳಬೇಕಾ? ಆನೆ ನಡೆದಿದ್ದೇ ದಾರಿ ಅಂತ ಆದೇಶ ನೀಡುತ್ತಾರೆ. ಒಮ್ಮೆ ಆದೇಶ ಪಾಲನೆ ಮಾಡಿಲ್ಲ ಅಂದ್ರೆ ಅವರು ಮಾತಾಡಲ್ಲ, ಅವರ ಕೈಯಲ್ಲಿರೋ ಬಂದೂಕು ಮಾತನಾಡುತ್ತೆ.

ಇದನ್ನೂ ಓದಿ: ಜಸ್ಟ್ 11 ವರ್ಷಕ್ಕೆ ಫಿಸಿಕ್ಸ್​ನಲ್ಲಿ ಡಿಗ್ರಿ ಮುಗಿಸಿದ ಬಾಲಕ; ಈತನ ಗುರಿಯೇ ಭಯಂಕರ

ಹೆಣ್ಣು ಮಕ್ಕಳು ಮನೆಯೊಳಗೆಯೇ ಇರಬೇಕಂತೆ
ಒಂದು ಕಾಲ ಇತ್ತು. ಹೆಣ್ಣು ಮಕ್ಕಳು ಅಂದ್ರೆ ಮನೆಯಲ್ಲಿಯೇ ಇರಬೇಕು. ಅವರು ಮನೆ ಬಿಟ್ಟು ಹೊರಡಬಾರದು. ಒಮ್ಮೆ ಹೊರಟರೂ ಪುರಷರ ರಕ್ಷಣೆಯಲ್ಲಿಯೇ ಹೋಗಬೇಕು. ಉನ್ನತ ಶಿಕ್ಷಣಕ್ಕೆ ಹೋಗಬೇಕಾದರೆ ಹತ್ತು ಹಲವು ಮಾತು. ಇನ್ನು ಪುರುಷರಿಗೆ ಸಮಾನವಾಗಿ ನಿಲ್ಲೋದು ಬೇರೆ ಮಾತು. ಆದ್ರೆ ಈಗ ಕಾಲ ಬದಲಾಗಿದೆ. ಜಗತ್ತಿನ ಎಲ್ಲೆಡೆ ಮಹಿಳೆಯರು ಪುರುಷರಿಗೆ ಸರಿ ಸಮಾನರಾಗಿ ಬೆಳೆಯುತ್ತಿದ್ದಾರೆ. ಎಲ್ಲಾ ರಂಗಗಳಲ್ಲೂ ಸಾಧನೆ ಮಾಡ್ತಿದ್ದಾರೆ. ಆದರೆ ಅಫ್ಘಾನಿಸ್ತಾನದಲ್ಲಿ ಪರದೆಯ ಹಿಂದೆಯೇ ಬದುಕು ಸವೆಸಬೇಕಿದೆ ಇಲ್ಲಿನ ಹೆಣ್ಣುಮಕ್ಕಳು. ಮನೆ ಬಿಟ್ಟು ಹೊರಬರುವಂತೆಯೇ ಇಲ್ಲ. ಇಲ್ಲಿನ ಮಹಿಳೆಯರ ಸ್ಥಿತಿ ನಿಜಕ್ಕೂ ಶೋಚನೀಯ. ಅಫ್ಘಾನಿಸ್ತಾನದಲ್ಲಿ ಒಂದು ಸರ್ಕಾರ ಸ್ಥಾಪಿತವಾದ ಮೇಲೆ ವಾತಾವರಣ ಬದಲಾಗಿತ್ತು. ಹೆಣ್ಣು ಮಕ್ಕಳು ಶಾಲೆಯ ಕಡೆ ಮುಖ ಮಾಡಿದ್ರು. ಆದರೆ ಈಗ ಮತ್ತೆ ಇಲ್ಲಿ ಅಂಧ ತಾಲೀಬಾನಿಗಳ ಆಡಳಿತ. ಹೌದು, ಆಫ್ಘಾನ್‌ನಲ್ಲಿ ಇನ್ಮೇಲೆ ಹೆಣ್ಣು ಮಕ್ಕಳು ಮನೆ ಬಿಟ್ಟು ಹೊರಡೋಹಾಗಿಲ್ಲ. ಅಂತಹವೊಂದು ಆದೇಶ ತಾಲಿಬಾನ್‌ ಉಗ್ರರಿಂದ ಹೊರ ಬಿದ್ದಿದೆ.

 

ಅಫ್ಘಾನಿಸ್ತಾನದಲ್ಲಿ ಮಾನವ ಹಕ್ಕು ಮಾಯ
ಹೆಣ್ಮಕ್ಕಳು ಮನೆ ಬಿಟ್ಟು ಹೊರಡುವ ಹಾಗೆ ಇಲ್ಲ ಅಂತ ಅದೇಶ ನೀಡಿದ ಬೆನ್ನಲ್ಲಿಯೇ ಶಾಲೆಗೂ ಹೋಗುವಂತಿಲ್ಲ ಅಂತ ಆದೇಶ ನೀಡಲಾಗಿದೆ. ತಾನು ಶಾಲೆಗೆ ಹೋಗಬೇಕು, ಶಿಕ್ಷಣವಂತರಾಗಬೇಕು, ಉದ್ಯೋಗಿ ಆಗಬೇಕು ಅಂದುಕೊಂಡಿದ್ದ ಹೆಣ್ಣು ಮಕ್ಕಳ ಆಸೆಗೆ ತಣ್ಣೀರು ಬಿತ್ತು. ಈಗಾಗಲೇ ಶಾಲೆಗೆ ಹೋಗುತ್ತಿದ್ದ ಮಕ್ಕಳು ಅರ್ಧಕ್ಕೆ ನಿಲ್ಲಿಸಬೇಕು. ಯಾವುದೇ ಕಾರಣಕ್ಕೂ ಶಾಲೆಯತ್ತ ಮುಖ ಮಾಡುವಂತಿಲ್ಲ. ಯಾರಾದರೂ ಹೆಣ್ಣುಮಕ್ಕಳು ಇಲ್ಲಿ ತಾಲೀಬಾನಿಗಳ ವಿರುದ್ಧ ನಿಂತು ಹೋರಾಡಲು ಸಾಧ್ಯವೇ. ಸರ್ಕಾರವೇ ನಡು ಬಗ್ಗಿಸಿ ನಿಂತಿರುವಾಗ ಇನ್ನು ಮಹಿಳೆಯರು ಪರದೆಯ ಮರೆಯಲ್ಲೇ ಬದುಕಬೇಕು. 24 ಗಂಟೆಯೂ ಮುಖ ಮುಚ್ಚಿಕೊಂಡೇ ಮಹಿಳೆಯರು ಇಲ್ಲಿ ಬದುಕು ಸವೆಸಬೇಕು. ಗಂಡ ಅದೇನು ತಂದು ಹಾಕ್ತಾನೋ ಅದನ್ನು ಮಾಡ್ತಾ ಸೇವೆ ಮಾಡೋದಷ್ಟೇ ಕೆಲಸ.

ಹೊರ ಬೀಳುತ್ತಿವೆ ವಿಚಿತ್ರ ವಿಚಿತ್ರವಾದ ಆದೇಶಗಳು
ಬಾಯಿ ಬಿಟ್ಟರೆ ಬಂದೂಕಿನ ನಳಿಕೆಯೇ ಮುಂದೆ ಬರುತ್ತೆ
ಪುರುಷರಿಗೆ ಗಡ್ಡ ಬಿಡುವುದನ್ನು ಕಡ್ಡಾಯ ಮಾಡಿದ ಉಗ್ರರು

ಹೌದು, ಇಷ್ಟು ದಿನಗಳ ಕಾಲ ಅಫ್ಘಾನ್‌ ಪ್ರಜೆಗಳಿಗೆ ಗಡ್ಡಬಿಡಲು, ತೆಗೆಯಲು ಸ್ವಾತಂತ್ರ್ಯ ಇತ್ತು. ಇನ್ನು ಮೇಲೆ ಅವರಿಗೆ ಆ ಸ್ವಾತಂತ್ರ್ಯ ಸಿಗುವುದಿಲ್ಲ. ತಮಗೆ ಇಷ್ಟಬಂದಾಗ ಗಡ್ಡ ಬಿಡುವುದು, ತಮಗೆ ಇಷ್ಟ ಬಂದಾಗ ಗಡ್ಡ ತೆಗೆಯುವುದು ಮಾಡೋ ಹಾಗೆ ಇಲ್ಲ. ಎಲ್ಲ ಪುರುಷರು ಗಡ್ಡ ಬಿಡಲೇಬೇಕು. ಗಡ್ಡ ಬಿಡೋದು ತೆಗೆಯೋದು ತಮ್ಮ ಇಷ್ಟ ಅಂತ ಒಮ್ಮೆ ಏನಾದ್ರೂ ಗಡ್ಡ ತೆಗೆದ್ರೆ ಗುಂಡೇಟು ಬೀಳುತ್ತೆ. ಇಲ್ಲಾ ಚಡಿ ಏಟು ತಿನ್ನಲು ಸಿದ್ಧರಾಗಿರಬೇಕು. ಇದೇ ಕಾರಣಕ್ಕೆ ಇರಬೇಕು ಆಫ್ಘಾನ್‌ ಯುವಕರು ಗಡ್ಡ ಬಿಟ್ಟುಕೊಂಡೆ ಓಡಾಟ ಆರಂಭಿಸಿದ್ದಾರೆ.

ಪ್ರತಿ ದಿನ ಕೇಳಿ ಬರ್ತಾ ಇದೆ ಮದ್ದುಗುಂಡುಗಳ ಸದ್ದು
ಒಂದೊಂದೆ ಜಿಲ್ಲಾಗಳು ತಾಲಿಬಾನ್‌ ವಶಕ್ಕೆ ಹೋಗ್ತಿದೆ
ಶೀಘ್ರವೇ ಪೂರ್ಣ ಅಫ್ಘಾನ್‌ ತಾಲಿಬಾನ್‌ ವಶಕ್ಕೆ?

ಎರಡು ದಶಕಗಳಿಂದ ಶಾಂತವಾಗಿಯೇ ಜೀವನ ಮಾಡ್ತಾ ಇದ್ದ ಅಫ್ಘಾನ್‌ ಪ್ರಜೆಗಳಿಗೆ ಈ ಸ್ವಾತಂತ್ರ್ಯವೇ ಇಲ್ಲದಂತಾಗಿದೆ. ತಾಲಿಬಾನಿ ಉಗ್ರರು ಅಫ್ಘಾನ್‌ನ ಒಂದೊಂದೆ ಜಿಲ್ಲೆಯನ್ನು ವಶಪಡಿಸಿಕೊಳ್ಳುತ್ತ ಮುಂದೆ ಸಾಗುತ್ತಿದ್ದಾರೆ. ಆಫ್ಘಾನ್‌ ಸೈನಿಕರಿಗೆ ಉಗ್ರರನ್ನು ನಿಯಂತ್ರಿಸಲಾಗುತ್ತಿಲ್ಲ. ಭಾರೀ ದೊಡ್ಡ ಸಂಖ್ಯೆಯಲ್ಲಿ ತಾಲಿಬಾನಿಗಳು ನುಗ್ಗುತ್ತಿರುವುದೇ ಸಮಸ್ಯೆಯಾಗಿ ಬಿಟ್ಟಿದೆ. ಆಫ್ಘಾನ್‌ ಸೈನಿಕರಲ್ಲಿ ಇರುವ ಶಸ್ತ್ರಾಸ್ತ್ರಗಳಿಗಿಂತಲೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ತಾಲಿಬಾನಿಗಳ ಕೈಯಲ್ಲಿವೆ. ಇದೇ ಕಾರಣಕ್ಕೆ ಪ್ರತಿನಿತ್ಯ ಮದ್ದು ಗುಂಡಗಳ ಸದ್ದು ಕೇಳಿ ಬಿರ್ತಿದೆ. ಉಗ್ರರ ದಾಳಿ ಎದುರಿಸಲಾಗದೇ ಆಫ್ಘಾನ್‌ನ ಸಾವಿರಾರು ಸೈನಿಕರು ದೇಶ ಬಿಟ್ಟು ಓಡುತ್ತಿದ್ದಾರೆ.

ತಾಲಿಬಾನಿಗಳಿಗೆ ಪಾಕ್‌ ಬೆಂಬಲ ಇದೆಯಾ?
ತಾಲಿಬಾನಿಗಳು ಪ್ರಭಾವಿ ಆಗಿದ್ದು ಹೇಗೆ?

ಅಮೆರಿಕ ಮತ್ತು ನ್ಯಾಟೋ ಸೇನಾಪಡೆಗಳು ಎರಡು ದಶಕಗಳ ಕಾಲ ಇದ್ರೂ ತಾಲಿಬಾನ್‌ ಉಗ್ರರನ್ನು ಮಟ್ಟಹಾಕಲು ಸಾಧ್ಯವಾಗಿಲ್ವ? ಹೌದು, ಇಂತಹ ಒಂದು ಪ್ರಶ್ನೆ ಸಹಜವಾಗಿ ಕೇಳಿಬರುತ್ತೆ. ಆದ್ರೆ, ಅಲ್ಲಿ ಇರುವ ಸಮಸ್ಯೆ ಬೇರೆ. ತಾಲಿಬಾನಿಗಳು ಅನ್ನೋದು ಯಾವುದೋ ಒಂದು ಉಗ್ರಗಾಮಿ ಸಂಘಟನೆ ಅಲ್ಲ. ನೂರಾರು ಸಂಘಟನೆಗಳು ಸೇರಿಕೊಂಡು ರಚಿಸಿಕೊಂಡಿರುವ ಪಡೆ. ಕಳೆದ ಕೆಲವು ವರ್ಷಗಳಿಂದ ಅವುಗಳು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಂಡಿವೆ. ಜೊತೆಗೆ ಅವುಗಳಿಗೆ ಪಾಕ್‌ನ ಮಿಲಿಟರಿ ಮತ್ತು ಗುಪ್ತಚರ ಇಲಾಖೆಯ ಬೆಂಬಲವೂ ಇದೆ ಎನ್ನಲಾಗುತ್ತಿದೆ.

ಅಮೆರಿಕ ಸೇನೆ ವಾಪಸ್‌ ಹೋಗಿದ್ದು ಯಾಕೆ?
ಅಮೆರಿಕದ 60 ಲಕ್ಷ ಕೋಟಿ ಡಾಲರ್‌ ಹೋಯ್ತಾ?

ಕಳೆದ 20 ವರ್ಷಗಳ ಹೋರಾಟ ಅಮೆರಿಕಾಗೆ ಸಾಕು ಸಾಕಾಗಿ ಹೋಗಿದೆ. ಆರ್ಥಿಕವಾಗಿಯೋ ಆ ರಾಷ್ಟ್ರಕ್ಕೆ ದೊಡ್ಡ ಹೊಡೆತವೇ ಬಿದ್ದಿದೆ. ಒಂದು ಅಂದಾಜಿನ ಪ್ರಕಾರ ಆಫ್ಘಾನ್‌ನಲ್ಲಿ ತಾಲಿಬಾನಿಗಳ ವಿರುದ್ಧ ಹೋರಾಟಕ್ಕೆ ಅಮೆರಿಕ ಬರೋಬ್ಬರಿ 60 ಲಕ್ಷ ಕೋಟಿ ಡಾಲರ್‌ ವೆಚ್ಚ ಮಾಡಿದೆ. ಮೊದಲೇ ಕೊರೊನಾದಿಂದ ಆರ್ಥಿಕ ಹಿಂಜರಿತಕ್ಕೆ ಸಿಲುಕಿದ ಅಮೆರಿಕಾಗೆ ಇದು ಮತ್ತೊಂದು ರೀತಿಯ ದೊಡ್ಡ ಹೊಡೆತವಾಗಿ ಬಿಟ್ಟಿದೆ. 20 ವರ್ಷಗಳ ಹೋರಾಟದಲ್ಲಿ 2400 ಸೈನಿಕರನ್ನು ಅದು ಕಳೆದುಕೊಂಡಿದೆ. ಇಷ್ಟೇ ಅಲ್ಲ, ಅಮೆರಿಕ ಮತ್ತು ಇರಾನ್‌ ನಡುವಿನ ಸಂಬಂಧವೂ ಹಳಿಸಿದೆ.

ಇರಾನ್‌ಗೆ ಪರೋಕ್ಷವಾಗಿ ಬುದ್ಧಿ ಕಲಿಸಲು ಅಮೆರಿಕ ತನ್ನ ಸೇನೆಯನ್ನು ವಾಪಸ್‌ ಪಡೆದಿದೆ ಅಂತಲೂ ಹೇಳಲಾಗುತ್ತಿದೆ. ಯಾಕೆಂದ್ರೆ ಆಫ್ಘಾನ್‌ನಲ್ಲಿ ತಾಲಿಬಾನಿಗಳು ಪ್ರಭಾವಿಯಾದ್ರೆ ಪಕ್ಕದ ಇರಾನ್‌ಗೆ ಸಂಕಷ್ಟ ಎದುರಾಗುತ್ತೆ. ತಾಲಿಬಾನಿಗಳು ಇರಾನ್‌ ಮೇಲೆ ದಾಳಿಗೆ ಮುಂದಾಗುತ್ತಾರೆ. ಇದೇ ಕಾರಣಕ್ಕೆ ಅಮೆರಿಕ ಸೇನೆ ಹಿಂದೆ ಪಡೆದಿದೆ ಅಂತಲೂ ಹೇಳಲಾಗುತ್ತಿದೆ.

ತಾಲಿಬಾನ್‌ಗೂ ಕಾಶ್ಮೀರಕ್ಕೂ ಇರೋ ಲಿಂಕ್‌ ಏನು?
ಮತ್ತೆ ಕಾಶ್ಮೀರದಲ್ಲಿ ಉಗ್ರಗಾಮಿಗಳ ಚಟುವಟಿಕೆ ಹೆಚ್ಚುತ್ತಾ?

ಭಾರತ ಮತ್ತು ಆಫ್ಘಾನ್‌ ಗಡಿ ಹಂಚಿಕೊಂಡಿಲ್ಲ. ಆದ್ರೆ, ತಾಲಿಬಾನ್‌ ಸಂಘಟನೆಗಳಿಗೂ ಕಾಶ್ಮೀರದಲ್ಲಿ ನಡೆಯುವ ಭಯೋತ್ಪಾದನೆ ಸಂಘಟನೆಗೂ ಲಿಂಕ್‌ ಇದೆ. ಅಫ್ಘಾನ್‌ನಲ್ಲಿ ತಾಲಿಬಾನಿಗಳು ಯಾವಾಗ ಪ್ರಭುತ್ವ ಸಾಧಿಸುತ್ತಾರೋ ಆವಾಗೆಲ್ಲ ಭಾರತ ಸವಾಲನ್ನು ಎದುರಿಸಬೇಕಾಗುತ್ತದೆ.

1988-89ರಲ್ಲಿ ರಷ್ಯಾ ಪಡೆಗಳು ಹಿಂದೆ ಸರಿದಿದ್ದವು
ಅನಂತರ ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಳ

ಆಫ್ಘಾನ್‌ನಲ್ಲಿ ಅಲ್ಲಿಯ ಸರ್ಕಾರ ಮತ್ತು ತಾಲಿಬಾನಿ ಉಗ್ರರ ನಡುವೆ ತಲೆ ತಲಾಂತರದ ಬಿಕ್ಕಟ್ಟು ಇದೆ. 1988-89 ಕ್ಕೂ ಮುನ್ನ ಆಫ್ಘಾನ್‌ ಶಾಂತಿಗಾಗಿ ನೆಲೆನಿಂತಿದ್ದ ಸೋವಿಯತ್‌ ರಷ್ಯಾ ಪಡೆಗಳು ಕೂಡ ಹಿಂದೆ ಸರಿದಿದ್ದವು. ಆ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ವಿಪರೀತವಾಗಿ ಹೆಚ್ಚಾಗಿದ್ದವು. 1999ರಲ್ಲಿ ಕಂದಹಾರ್‌ ವಿಮಾನ ಅಪಹರಣವು ನಡೆದಿತ್ತು. ಆ ಸಂದರ್ಭದಲ್ಲಿ ವಿಮಾನದಲ್ಲಿರುವ ಪ್ರಯಾಣಿಕರ ಸುರಕ್ಷತೆಗಾಗಿ ಭಾರತದ ಜೈಲಿನಲ್ಲಿದ್ದ ಉಗ್ರಗಾಮಿಗಳನ್ನು ಬಿಡಬೇಕಾದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು.

ಕಾಶ್ಮೀರದ ಬಗ್ಗೆ ತಾಲಿಬಾನಿಗಳು ಹೇಳಿದ್ದೇನು?
ಭಾರತದ ಆಂತರಿಕ ವಿಚಾರ ಅಂದಿದ್ದು ಯಾಕೆ?

ಆಫ್ಘಾನ್‌ ಸಂಪೂರ್ಣ ವಶಪಡಿಸಿಕೊಂಡ ಬಳಿಕ ತಾಲಿಬಾನಿಗಳು ಕಾಶ್ಮೀರ ಟಾರ್ಗೆಟ್‌ ಮಾಡ್ತಾರೆ ಎನ್ನಲಾಗುತ್ತಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅದು ಜೋರಾಗಿಯೇ ಸದ್ದು ಮಾಡುತ್ತಿತ್ತು. ಆದ್ರೆ, ಈ ಬಗ್ಗೆ ಮಾತನಾಡಿದ ತಾಲಿಬಾನಿಗಳು ತಾವು ಭಾರತದ ಆಂತರಿಕ ವಿಚಾರಕ್ಕೆ ಹೋಗಲ್ಲ ಅಂದಿದ್ದಾರೆ. ತಾಲಿಬಾನಿಗಳು ಹಾಗೆ ಹೇಳುವುದಕ್ಕೂ ಒಂದು ಕಾರಣ ಇದೆ. ಅದೇನಂದ್ರೆ, ಭಾರತ ಈಗ ಮೊದಲಿನ ಹಾಗೆ ಇಲ್ಲ. ಒಮ್ಮೆ ಯಾರಾದ್ರೂ ತಂಟೆಗೆ ಬಂದ್ರೆ ಮುಟ್ಟಿ ನೋಡಿಕೊಳ್ಳುವ ಏಟು ನೀಡುತ್ತಿದೆ. ಸರ್ಜಿಕಲ್‌ ಸ್ಟ್ರೈಕ್‌ ಅದಕ್ಕೊಂದು ದೊಡ್ಡ ನಿರ್ದಶನ. ಇತ್ತೀಚೆಗೆ ಗಡಿಯಲ್ಲಿ ತಕರಾರು ತೆಗೆಯುತ್ತಿರುವ ಚೀನಾಕ್ಕೂ ಭಾರತ ತಕ್ಕ ಏಟು ನೀಡಿದೆ. ಇದೇ ಕಾರಣಕ್ಕೆ ತಾಲಿಬಾನಿಗಳು ಭಾರತದ ತಂಟೆಗೆ ಹೋಗಲ್ಲ ಅಂತ ಘೋಷಿಸಿಕೊಂಡು ಬಿಟ್ಟಿದ್ದಾರೆ.

ಇದನ್ನೂ ಓದಿ: ಆಫ್ಘಾನ್​ನಿಂದ ಸೈನ್ಯ ಹಿಂಪಡೆಯಲು ನಿರ್ಧರಿಸಿದ ಅಮೆರಿಕಾ; ಭಾರತದ ಭದ್ರತೆಗೆ ಉಂಟಾಗುತ್ತಾ ಸಮಸ್ಯೆ..?

The post ಹುಡುಗ್ರು ಗಡ್ಡಕ್ಕೆ ಕತ್ತರಿ ಹಾಕುವಂತಿಲ್ಲ, ಹೆಣ್ಮಕ್ಕಳು ಶಾಲೆಗೆ ಹೋಗಂಗಿಲ್ಲ -ಉಗ್ರರಿಗೆ ಬೆಂಡಾಯ್ತ ಈ ದೇಶ appeared first on News First Kannada.

Source: newsfirstlive.com

Source link