ಡಿಎಂಕೆ ಆಗಲಿ, ಅಣ್ಣಾ ಡಿಎಂಕೆ ಆಗಲಿ.. ಮೇಕೆದಾಟು ವಿಚಾರದಲ್ಲಿ ನಾವು ಸರ್ಕಾರದ ಪರ- ಡಿಕೆಎಸ್​

ಡಿಎಂಕೆ ಆಗಲಿ, ಅಣ್ಣಾ ಡಿಎಂಕೆ ಆಗಲಿ.. ಮೇಕೆದಾಟು ವಿಚಾರದಲ್ಲಿ ನಾವು ಸರ್ಕಾರದ ಪರ- ಡಿಕೆಎಸ್​

ಬೆಂಗಳೂರು: ‘ಇನ್ನು ನೂರು ವರ್ಷ ಕಳೆದರೂ ತಮಿಳುನಾಡು ಮೇಕೆದಾಟು ಯೋಜನೆಗೆ ತಗಾದೆ ಎತ್ತುತ್ತಲೇ ಇರುತ್ತದೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರಕಾರ ಇದೆ ಎನ್ನುವ ಬಿಜೆಪಿ ಕೇಂದ್ರದಲ್ಲಿ ತಮ್ಮ ಅಧಿಕಾರ ಬಳಸಿ, ಅಗತ್ಯ ಅನುಮತಿ ಪಡೆದು ಈ ಯೋಜನೆಗೆ ನಾಳೆಯೇ ಭೂಮಿ ಪೂಜೆ ಮಾಡಲಿ. ರಾಜಕೀಯ ಭಿನ್ನಾಭಿಪ್ರಾಯ ಮರೆತು ಸರ್ಕಾರದ ಜತೆಗೆ ನಾವೆಲ್ಲರೂ ನಿಲ್ಲುತ್ತೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.

ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ತೊರೆದ ನಾಯಕರನ್ನು ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಳಿಕ ಮಾತನಾಡಿದ ಅವ್ರು, ‘ಮೇಕೆದಾಟು ಯೋಜನೆಗೆ ಅಡ್ಡಿ ಮಾಡುವುದು ತಮಿಳುನಾಡಿನ ಎಲ್ಲ ಪಕ್ಷಗಳ ಅಜೆಂಡಾ. ಇನ್ನೂ ನೂರು ವರ್ಷವಾದರೂ ಅವರ ರಾಜಕೀಯ ಅಜೆಂಡಾ ಇದೇ ಆಗಿರುತ್ತದೆ. ಮೇಕೆದಾಟು ಯೋಜನೆ ಮಾಡಲು ಯಡಿಯೂರಪ್ಪನವರಿಗೆ ರಾಜಕೀಯ ಇಚ್ಛಾಶಕ್ತಿ ಬೇಕು. ಈಗ ಕೇಂದ್ರ ಪರಿಸರ ಮಂಡಳಿಯಿಂದ ಅನುಮತಿ ಸಿಕ್ಕಿದೆ ಎಂಬ ಮಾಹಿತಿ ಇದೆ. ನಮ್ಮ ದುಡ್ಡು, ನಮ್ಮ ಜಾಗ, ನಮ್ಮ ನೀರು. ತಮಿಳುನಾಡು ಪಾಲಿನ ನೀರಿಗೆ ನಮ್ಮ ಯಾವುದೇ ತಕರಾರು ಇಲ್ಲ. ಅವರ ಪಾಲು ಅವರಿಗೆ ಸಿಗಲಿದೆ ಅಂತ ಹೇಳಿದ್ದಾರೆ.

ಮೇಕೆದಾಟು ಯೋಜನೆ ನನ್ನ ಕ್ಷೇತ್ರದಲ್ಲೇ ಬರಲಿದ್ದು, ಇದು ಕೇವಲ ಬೆಂಗಳೂರಿನ ಜನರಿಗೆ ಕುಡಿಯುವ ನೀರು ಪೂರೈಕೆಗೆ ಹಾಗೂ ವಿದ್ಯುತ್ ಉತ್ಪಾದನೆಗೆ ಮಾತ್ರ ಬಳಕೆ ಆಗುತ್ತದೆ. ನನ್ನ ಕ್ಷೇತ್ರದ ಹತ್ತು ಎಕರೆಗೂ ಈ ನೀರು ಬಳಸಿಕೊಳ್ಳುವುದಿಲ್ಲ. ಈ ಯೋಜನೆಗೆ ಸುಮಾರು 500 ರಿಂದ 1000 ಎಕರೆಯಷ್ಟು ರೆವಿನ್ಯೂ ಜಾಗ ಹೋಗಬಹುದು. ಯಾವ ಪ್ರದೇಶವೂ ಮುಳುಗಡೆಯಾಗುವ ಭೀತಿ ಇಲ್ಲ. ಹೀಗಾಗಿ ಇದು ಅತ್ಯಂತ ಅಗ್ಗದ ಹಾಗೂ ಉಪಯುಕ್ತ ಯೋಜನೆ. ತಮಿಳುನಾಡಿನವರು ರಾಜಕಾರಣ ಮಾಡುತ್ತಿದ್ದಾರೆ. ಡಿಎಂಕೆ ಆಗಲಿ, ಅಣ್ಣಾಡಿಎಂಕೆ ಆಗಲಿ, ಅವರ ರಾಜಕೀಯ ಅಜೆಂಡಾ ಒಂದೇ. ಆ ಬಗ್ಗೆ ನಮ್ಮ ತಕರಾರಿಲ್ಲ. ನಮ್ಮ ರಾಜ್ಯ ಸರ್ವಪಕ್ಷ ನಿಯೋಗ ಯಾಕೆ ಕೊಂಡೊಯ್ಯಬೇಕು? ಮೇಕೆದಾಟು ವಿಚಾರದಲ್ಲಿ ನಾವು ಸರ್ಕಾರದ ಪರವಾಗಿ ನಿಲ್ಲುತ್ತೇವೆ.

ಮುಖ್ಯಮಂತ್ರಿಗಳು ನಾಳೆ ಬೆಳಗ್ಗೆಯೇ ಟೆಂಡರ್ ಕರೆದು ಗುದ್ದಲಿ ಪೂಜೆ ಮಾಡಲಿ, ಅವರ ಜತೆ ನಾವು ನಿಲ್ಲುತ್ತೇವೆ. ನಾವು ಯೋಜನೆ ಮಾಡುತ್ತಿರುವವರು, ಹೀಗಾಗಿ ಸರ್ವಪಕ್ಷ ನಿಯೋಗ ಕೊಂಡೊಯ್ಯುವ ಅಗತ್ಯ ನಮಗಿಲ್ಲ. ತಮಿಳುನಾಡಿನವರು ಸರ್ವಪಕ್ಷ ನಿಯೋಗ ತೆಗೆದುಕೊಂಡು ಹೋಗಲಿ, ಏನಾದರೂ ಮಾಡಿಕೊಳ್ಳಲಿ. ಇದರಲ್ಲಿ ನಾವು ಒತ್ತಡ ಹೇರುವ ಅವಶ್ಯಕತೆ ಏನಿದೆ. ಯೋಜನೆ ಅನುಷ್ಠಾನಕ್ಕೆ ತರಬೇಕು ಅಷ್ಟೇ. ಬಿಜೆಪಿಯದು ಡಬಲ್ ಇಂಜಿನ್ ಸರ್ಕಾರ ಅಂತಾರೆ, ಈ ಯೋಜನೆಗೆ ಅಗತ್ಯ ಅನುಮತಿ ಪಡೆಯಲು ತೊಂದರೆ ಏನು? ಅಂತ ಪ್ರಶ್ನಿಸಿದ್ದಾರೆ.

The post ಡಿಎಂಕೆ ಆಗಲಿ, ಅಣ್ಣಾ ಡಿಎಂಕೆ ಆಗಲಿ.. ಮೇಕೆದಾಟು ವಿಚಾರದಲ್ಲಿ ನಾವು ಸರ್ಕಾರದ ಪರ- ಡಿಕೆಎಸ್​ appeared first on News First Kannada.

Source: newsfirstlive.com

Source link