ವೈದ್ಯರಿಗೆ ಕೋವಿಡ್ ಕರ್ತವ್ಯ ನೆಪ – ಚಿಕಿತ್ಸೆ ಸಿಗದೆ ವಂಚಿತರಾಗುತ್ತಿರೋ ರೋಗಿಗಳು

– ರಾಯಚೂರಿನ ಓಪೆಕ್ ಆಸ್ಪತ್ರೆಗೆ ಬೇಕಿದೆ ಮೇಜರ್ ಸರ್ಜರಿ
– ಖಾಲಿಯಿರುವ ಹುದ್ದೆ ಭರ್ತಿಗೂ ಅಧಿಕಾರಿಗಳ ನಿರ್ಲಕ್ಷ್ಯ

ರಾಯಚೂರು: ಜಿಲ್ಲೆಯಲ್ಲಿ ಕೊವಿಡ್ ಸೋಂಕಿತರ ಪ್ರಮಾಣ ಗಣನೀಯ ಇಳಿಕೆಯಾಗಿದೆ. ಆದರೆ ಕೋವಿಡ್ ಕರ್ತವ್ಯದ ಹೆಸರಲ್ಲಿ ಇಲ್ಲಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಓಪೆಕ್ ನಲ್ಲಿ ಉಳಿದ ರೋಗಿಗಳಿಗೆ ಚಿಕಿತ್ಸೆಯೇ ಸಿಗುತ್ತಿಲ್ಲ. ವೈದ್ಯರು ಇಲ್ಲದೆ ರೋಗಿಗಳು ಬೆಂಗಳೂರು, ಹೈದರಾಬಾದ್ ಹೋಗುವ ಪರಸ್ಥಿತಿ ಎದುರಿಸುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದ ಪ್ರತಿಷ್ಠಿತ ಆಸ್ಪತ್ರೆ ಓಪೆಕ್ ಇದ್ದರೂ ಇಲ್ಲದಂತಾಗಿದೆ.

ಓಪೆಕ್ ನೆರವಿನಿಂದ ಆರಂಭವಾದ ರಾಯಚೂರಿನ ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹೆಸರಿಗೆ ಮಾತ್ರ ದೊಡ್ಡ ಆಸ್ಪತ್ರೆ. ಆದ್ರೆ ಇಲ್ಲಿಗೆ ಬರುವ ರೋಗಿಗಳಿಗೆ ಸರಿಯಾದ ಚಿಕಿತ್ಸಾ ಸೌಲಭ್ಯಗಳೇ ಸಿಗುತ್ತಿಲ್ಲ. ಈಗಂತೂ ಕೋವಿಡ್ ಕಾರಣ ಹೇಳಿ ಡಯಾಲಿಸಿಸ್ ಸೇರಿ ಕೆಲ ಸೇವೆ ಹೊರತುಪಡಿಸಿ ಉಳಿದ ಯಾವುದೇ ಚಿಕಿತ್ಸೆ ಆಸ್ಪತ್ರೆಯಲ್ಲಿ ನೀಡುತ್ತಿಲ್ಲ. ಇಲ್ಲಿನ ವೈದ್ಯರನ್ನ ಕೋವಿಡ್ ಕಾರ್ಯಕ್ಕೆ ನಿಯೋಜನೆ ಮಾಡಿರುವ ನೆಪದಲ್ಲಿ ರೋಗಿಗಳು ಪರದಾಡುವಂತಾಗಿದೆ. ಜಿಲ್ಲೆಯ ಕೋವಿಡ್ ಪಾಸಿಟಿವಿಟಿ ರೇಟ್ 0.5 ಕ್ಕಿಂತಲೂ ಕಡಿಮೆಯಾಗಿದೆ. ನಿತ್ಯ ಒಂದಂಕಿಯಲ್ಲಿ ಪ್ರಕರಣಗಳು ದಾಖಲಾಗುತ್ತಿವೆ. ಆದರೂ ವೈದ್ಯರನ್ನ ಕೋವಿಡ್ ಕರ್ತವ್ಯದಲ್ಲೇ ಮುಂದುವರೆಸಿರುವುದು ಉಳಿದ ರೋಗಿಗಳಿಗೆ ತೊಂದರೆಯಾಗಿದೆ. ಇದನ್ನೂ ಓದಿ : ಮೂರು ವಿಷಯ ಹೇಳಬೇಡಿ ಅಂದಿದ್ದಾರೆ ದರ್ಶನ್ ಸರ್: ಉಮಾಪತಿ

ಓಪೆಕ್ ಆಸ್ಪತ್ರೆಯಲ್ಲಿ ಗ್ಯಾಸ್ಟ್ರೋ, ಪ್ಲಾಸ್ಟಿಕ್ ಸರ್ಜರಿ, ಕಾರ್ಡಿಯಾಲಜಿ, ಪಿಡಿಯಾಟ್ರಿಕ್ ಸರ್ಜರಿ, ಯೂರಾಲಜಿ, ನೆಫ್ರಾಲಜಿ, ನ್ಯೂರಾಲಜಿ ವಿಭಾಗಗಳಿದ್ದು ಕೇವಲ 14 ಜನ ತಜ್ಞವೈದ್ಯರಿದ್ದಾರೆ. ಜೂನಿಯರ್ ಡಾಕ್ಟರ್ ಹುದ್ದೆಗಳು ಖಾಲಿಯಿವೆ. 24 ಸ್ಟಾಫ್ ನರ್ಸ್ ಹುದ್ದೆ ಖಾಲಿಯಿದೆ. ಎಂಡೋಸ್ಕೋಪಿ ಮಾಡಲು ಓರ್ವ ಟೆಕ್ನಿಷಿಯನ್ ಮಾತ್ರ ಇದ್ದು ಅವರನ್ನೂ ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಆಸ್ಪತ್ರೆಯ ಲಿಫ್ಟ್ ಕೆಟ್ಟು ಎರಡು ವರ್ಷವಾಗಿದೆ, ಶೌಚಾಲಯ ಹಾಳಾಗಿವೆ. ಯಂತ್ರೋಪಕರಣಗಳು ಬಳಕೆಯಿಲ್ಲದೆ ಇಟ್ಟಲ್ಲೇ ಧೂಳು ಹಿಡಿಯುತ್ತಿವೆ. ಇದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸ್ಥಿತಿ. ಇಂತಹ ಪರಸ್ಥಿತಿಯಲ್ಲಿ ಇದ್ದ ತಜ್ಞ ವೈದ್ಯರಿಗೆ ಹೆಚ್ಚು ಜವಾಬ್ದಾರಿವಹಿಸಿರುವುದರಿಂದ ರೋಗಿಗಳು ಚಿಕಿತ್ಸೆಯಿಲ್ಲದೆ ಪರದಾಡುವಂತಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳು ವೈದ್ಯರನ್ನ ಅಗತ್ಯ ಸೇವೆಗಳಿಗೆ ನಿಯೋಜಿಸುವಂತೆ ಸೂಚಿಸಿದ್ದರು. ಓಪೆಕ್‍ನ ಆಡಳಿತ ಮಂಡಳಿ ನಿರ್ಲಕ್ಷ್ಯ ಮಾಡುತ್ತಿದೆ. ಇದನ್ನೂ ಓದಿ: ಉಮಾಪತಿ ನನ್ನನ್ನು ಬಳಸಿಕೊಂಡಿದ್ದು ದೊಡ್ಡ ತಪ್ಪು – ಅರುಣಾ ಕುಮಾರಿ

blank

ಒಟ್ನಲ್ಲಿ, ಕಲ್ಯಾಣ ಕರ್ನಾಟಕದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ರಾಯಚೂರು ಜಿಲ್ಲೆ ಮಾತ್ರವಲ್ಲದೆ ಯಾದಗಿರಿ ,ತೆಲಂಗಾಣ ಗಡಿ ಭಾಗದ ರೋಗಿಗಳು ಸಹ ಓಪೆಕ್ ಆಸ್ಪತ್ರೆಯನ್ನ ನಂಬಿಕೊಂಡಿದ್ದಾರೆ. ಕನಿಷ್ಠ ಈಗಲಾದ್ರೂ ಸಂಬಂಧಪಟ್ಟವರು ಎಚ್ಚೆತ್ತು ಕೂಡಲೇ ಆಸ್ಪತ್ರೆಯಲ್ಲಿನ ಎಲ್ಲಾ ಸೇವೆಗಳನ್ನ ಆರಂಭಿಸಬೇಕಿದೆ. ಅಗತ್ಯ ವೈದ್ಯರು ಹಾಗೂ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕಿದೆ.

blank

The post ವೈದ್ಯರಿಗೆ ಕೋವಿಡ್ ಕರ್ತವ್ಯ ನೆಪ – ಚಿಕಿತ್ಸೆ ಸಿಗದೆ ವಂಚಿತರಾಗುತ್ತಿರೋ ರೋಗಿಗಳು appeared first on Public TV.

Source: publictv.in

Source link