ರಾಷ್ಟ್ರ ರಾಜಧಾನಿ ದೆಹಲಿಗೆ ಮಾನ್ಸೂನ್ ಎಂಟ್ರಿ – ಕೂಲ್ ಆದ ಜನರು

ನವದೆಹಲಿ: ನಿಗದಿತ ಅವಧಿಗಿಂತ 16 ದಿನಗಳ ಕಾಲ ವಿಳಂಬವಾಗಿ ನೈಋತ್ಯ ಮಾನ್ಸೂನ್ ಮಳೆ ರಾಷ್ಟ್ರ ರಾಜಧಾನಿ ದೆಹಲಿ ತಲುಪಿದ್ದು, ಇಂದು ಬೆಳಗ್ಗೆಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. 44 ಡಿಗ್ರಿ ಬಿಸಿಲ ಝಳಕ್ಕೆ ತತ್ತರಿಸಿದ ಜನರು ಮಾನ್ಸೂನ್ ಮಳೆಯಿಂದ ಕೊಂಚ ತಣ್ಣಗಾಗಿದ್ದಾರೆ.

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಜೂನ್ 27ಕ್ಕೆ ದೆಹಲಿಗೆ ಮಾನ್ಸೂನ್ ಪ್ರವೇಶಿಸಬೇಕಿತ್ತು. ಜುಲೈ 8 ವೇಳೆಗೆ ಇಡೀ ದೇಶವನ್ನು ಆವರಿಸಿಕೊಳ್ಳಬೇಕಿತ್ತು. 19 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ದೆಹಲಿಗೆ ಮಳೆ ತಡವಾಗಿ ಆಗಮಿಸಿದೆ. ಕಳೆದ ವರ್ಷ ಜೂನ್ 25 ರಂದು ದೆಹಲಿಯನ್ನು ತಲುಪಿ ಜೂನ್ 29ರ ವೇಳೆಗೆ ಇಡೀ ದೇಶವನ್ನು ಆವರಿಸಿತ್ತು.

ಈ ವರ್ಷ ಮಾನ್ಸೂನ್ ಕಣ್ಣಾಮುಚ್ಚಾಲೆ ಆಡುತ್ತಿದೆ ಎಂದು ಐಎಂಡಿ ಹಿರಿಯ ವಿಜ್ಞಾನಿ ಕೆ. ಜೆನಮಣಿ ಹೇಳಿದ್ದಾರೆ. ದೆಹಲಿಗೆ ಮಾನ್ಸೂನ್ ಆಗಮಿಸುವುದನ್ನು ಈ ಬಾರಿ ನಿರೀಕ್ಷಿಸಲು ತುಸು ಕಷ್ಟವಾಗುತ್ತಿದೆ. ಹಲವು ಬಾರಿ ಮುನ್ಸೂಚನೆ ಸಿಕ್ಕರೂ ಮಳೆಯಾಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಬೆಳಗ್ಗೆ 8:30ರ ವರದಿ ಪ್ರಕಾರ ಲೋಧಿ ರಸ್ತೆಯಲ್ಲಿ 19.4 ಮಿಲಿ ಮೀಟರ್, ಸಬ್ದರ್‍ಜಂಗ್‍ನಲ್ಲಿ 2.4 ಮತ್ತು ಪಾಲಮ್ ನಲ್ಲಿ 2.4 ಮಿಲಿ ಮೀಟರ್ ಮಳೆ ಸುರಿದದೆ. ಮುಂದಿನ 24 ಗಂಟೆಯಲ್ಲಿ 2.4 ನಿಂದ 64.4 ಮಿಲಿ ಮೀಟರ್ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಮುಂದಿನ ಎರಡು ಗಂಟೆಯಲ್ಲಿ ಬಹದ್ದೂರ್ ಘ್ರಹ್, ಗುರುಗ್ರಾಮ್, ಫರಿದಾಬಾದ್, ಲೋನಿ ಡೆಹತ್, ನೋಯ್ಡಾ, ಸೋನಿಪತ್ ಮತ್ತು ರೋಹ್ಟಕ್ ನಲ್ಲಿ ಮಳೆಯಾಗಲಿದೆ.

blank

ದೆಹಲಿಯಲ್ಲಿ ಸುರಿದ ಭಾರೀ ಮಳೆಯಿಂದ ಅನೇಕ ಫ್ಲೈ ಓವರ್ ಕೆಳಗೆ ಮಳೆ ನೀರು ನಿಂತು ಸಂಚಾರಕ್ಕೆ ಅಡ್ಡಿ ಉಂಟಾಯಿತು. ಕೆಲವು ಕಡೆ ವಾಹನಗಳು ಸಿಲುಕಿ ಸವಾರರು ಪರದಾಡುವಂತಾಯಿತು. ಇದರಿಂದ ಟ್ರಾಫಿಕ್ ಜಾಮ್ ಆಗಿ ಜನರು ಮಳೆಯಲ್ಲಿ ಕಾಲ ಕಳೆಯುವಂತಾಗಿದೆ.

ಮಾನ್ಸೂನ್ ಮಳೆಗೂ ಮುನ್ನ ದೆಹಲಿಯಲ್ಲಿ ಗರಿಷ್ಠ ತಾಪಮಾನ 44-46ಲಿ ಇದ್ದರೇ ಕನಿಷ್ಠ 34-36ಲಿ ತಾಪಮಾನ ದಾಖಲಾಗುತ್ತಿತ್ತು. ಬಿಸಿಲಿನ ಝಳಕ್ಕೆ ದೆಹಲಿಯ ಜನರು ಹೈರಣಾಗಿದ್ದರು. ಮಳೆಯಿಂದ ತಾಪಮಾನ 28ಲಿ. ಗೆ ಕುಸಿದಿದ್ದು, ವಾತಾವರಣ ತುಸು ತಣ್ಣಗಾಗಿದೆ.

The post ರಾಷ್ಟ್ರ ರಾಜಧಾನಿ ದೆಹಲಿಗೆ ಮಾನ್ಸೂನ್ ಎಂಟ್ರಿ – ಕೂಲ್ ಆದ ಜನರು appeared first on Public TV.

Source: publictv.in

Source link