ಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿದೆ ಅಂತ ನಾನು ಹೇಳಿಯೇ ಇಲ್ಲ: ಸುಮಲತಾ ಅಂಬರೀಶ್​

ಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿದೆ ಅಂತ ನಾನು ಹೇಳಿಯೇ ಇಲ್ಲ: ಸುಮಲತಾ ಅಂಬರೀಶ್​

ಮೈಸೂರು: ಕೆಆರ್‌ಎಸ್ ಬಿರುಕು ವಿಚಾರ ಇನ್ನೂ ತಣ್ಣಗಾಗಿಲ್ಲ. ದಿನೇ, ದಿನೆ ಬೇರೆ ಬೇರೆ ರೂಪ ಪಡೆಯುತ್ತಾ ಸಾಗಿದೆ. ಇಂದು ಕೂಡ ಸಂಸದೆ ಸುಮಲತಾ ಈ ವಿಚಾರವಾಗ ಪ್ರತಿಕ್ರಿಯಿಸಿದ್ದು, ನಾನು ಕೆಆರ್‌ಎಸ್ ಬಿರುಕು ಬಿಟ್ಟಿದೆ ಅಂತ ಹೇಳಿಲ್ಲ. ಬಿರುಕು ಬಿಟ್ಟಿದೆಯಾ ಎಂದು ಸಭೆಯಲ್ಲಿ ಕೇಳಿದ್ದೇನೆ ಎಂದು ಕೆಆರ್‌ಎಸ್ ಕಲಹ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು.. ಗಣಿಗಾರಿಕೆಯಿಂದ ಕೆಆರ್‌ಎಸ್ ಬಿರುಕಾಗುತ್ತೆ ಎಂಬ ಆತಂಕ ನನ್ನಲ್ಲಿ ಇನ್ನೂ ಇದೆ. ನಾನು ಇದನ್ನೇ ದಿಶಾ ಸಭೆಯಲ್ಲಿ ಹೇಳಿದ್ದೇನೆ. ಆದರೆ ಹೊರಗಡೆ ನನ್ನ ಈ ಹೇಳಿಕೆಗೆ ಇಷ್ಟೆಲ್ಲ ಅರ್ಥ ಕಲ್ಪಿಸಿದ್ದಾರೆ ಎಂದಿದ್ದಾರೆ. ಅಕ್ರಮ ಗಣಿಗಾರಿಕೆಯಿಂದ ಸರ್ಕಾರಕ್ಕೆ 1200ಕೋಟಿ ನಷ್ಟ ಆಗಿದೆ.

ಸಿಬಿಐ ತನಿಖೆಯಾಗಲಿ
ಇಷ್ಟು ರಾಜಧನ ವಸೂಲಿ ಮಾಡಿದ್ರೆ ಮಂಡ್ಯ ಅಭಿವೃದ್ಧಿಗೆ ಬಳಸಬಹುದಿತ್ತು. ಜಿಲ್ಲೆಯ ಗಣಿ ಅಧಿಕಾರಿಗಳ ಮೇಲೆ ಒತ್ತಡಗಳು ಇರಬಹುದು. ಹೀಗಾಗಿ ಅವರು ಕೂಡ ಏನೂ ಆಗಿಲ್ಲ ಎನ್ನುವಂತೆ ಮಾತನಾಡ್ತಾರೆ. ಈಗ ಗಣಿ ಡ್ರೋಣ್ ಸರ್ವೇಗೂ ಹಣ ಇಲ್ಲ ಎನ್ನುತ್ತಿದ್ದಾರೆ ಅಧಿಕಾರಿಗಳು. ಈ ಕುರಿತು ಸ್ವತಂತ್ರ ತನಿಖೆಯಾಗಬೇಕು ರಾಜ್ಯದ ಅಧಿಕಾರಿಗಳಿಗೆ ಇದು ಸಾಧ್ಯವಾಗದಿದ್ದರೆ ಸಿಬಿಐ ತನಿಖೆ ಮಾಡಿಸಲಿ ಎಂದು ಸುಮಲತಾ ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ‘KRS ಜಲಾಶಯದ ಬಾಗಿಲಿನಲ್ಲಿ ಸಂಸದರನ್ನೇ ಮಲಗಿಸಿಬಿಟ್ರೆ ಆಯ್ತು’ -ಸುಮಲತಾ ವಿರುದ್ಧ ಹೆಚ್​​ಡಿಕೆ ಕಿಡಿ

ಈ ಅಕ್ರಮದ ಕುರಿತು ಗಣಿ ಸಚಿವ ಮುರುಗೇಶ್ ನಿರಾಣಿ ಅವರಿಗೆ ಎಲ್ಲವನ್ನೂ ಹೇಳಿದ್ದೇನೆ. ಬೆಟ್ಟ ಸುತ್ತಮುತ್ತಲಿನ ಗಣಿಗಾರಿಕೆ ಪ್ರದೇಶಕ್ಕೆ ಅವರನ್ನು ಕರೆದುಕೊಂಡು ಬಂದು ಪರಿಶೀಲಿಸಿ ತದನಂತರದಲ್ಲಿ ವಸ್ತುಸ್ಥಿತಿ ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ತಿಳಿಸುವೆ ಎಂದಿದ್ದಾರೆ.

ಕೆಆರ್‌ಎಸ್ ಡ್ಯಾಂನಲ್ಲಿ ಕಂಪನ ದಾಖಲಾಗಿದೆ
ಮಂಡ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ನಾನು ಅದನ್ನು ಎಕ್ಸ್‌ಪೋಸ್ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ ಅಷ್ಟೇ. ಕೆಆರ್‌ಎಸ್ ಡ್ಯಾಂ ಸುತ್ತಮುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ಬ್ಲಾಸ್ಟಿಂಗ್ ಮಾಡುವಂತಿಲ್ಲ. ಈ ಪ್ರದೇಶದಲ್ಲಿ ಅಕ್ರಮ, ಸಕ್ರಮ ಅನ್ನುವ ಪ್ರಶ್ನೆಯೇ ಬರಲ್ಲ. ಹೀಗಿದ್ದರೂ ಕೂಡ ಗಣಿಗಾರಿಕೆಯಿಂದ  ಕೆಆರ್‌ಎಸ್ ಡ್ಯಾಂನಲ್ಲಿ ಕಂಪನ ದಾಖಲಾಗಿದೆ. ಈ ಸಂಬಂಧ ಅಧಿಕೃತ ದಾಖಲೆಗಳೂ ಇವೆ ಎಂದರು.

ಸರ್ಕಾರವನ್ನಾಗಲೀ, ಮತ್ಯಾರನ್ನೋ ಆಗಲಿ ಚಾರ್ಜ್ ಮಾಡೋದು ನನ್ನ ಉದ್ದೇಶ ಅಲ್ಲ. ವಿರೋಧ ಪಕ್ಷದವರನ್ನೂ ಎಳೆದು ತಂದು ಇದಕ್ಕೆ ರಾಜಕೀಯ ರೂಪ ಕೊಡೋದಕ್ಕೂ ನಾನು ಬಯಸಲ್ಲ. ಆದರೆ ಅಕ್ರಮದ ಬಗ್ಗೆ ಹೋರಾಡುವ ಮನಸ್ಥಿತಿ ಇರುವ ಎಲ್ಲರ ಸಹಕಾರ ಕೇಳುತ್ತೇನೆ. ಇದನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುವವರೆಗೂ ಹೋರಾಟ ಮಾಡ್ತೇನೆ ಎಂದಿದ್ದಾರೆ.

ಇದನ್ನೂ ಓದಿ: ಕೆಆರ್​​ಎಸ್​​ ಡ್ಯಾಂಗೆ ಕಲ್ಲು ಹೊಡೆಯದಂತೆ ಸುಮಲತಾಗೆ ನಿಖಿಲ್​ ಸಲಹೆ

The post ಕೆಆರ್‌ಎಸ್ ಡ್ಯಾಂ ಬಿರುಕು ಬಿಟ್ಟಿದೆ ಅಂತ ನಾನು ಹೇಳಿಯೇ ಇಲ್ಲ: ಸುಮಲತಾ ಅಂಬರೀಶ್​ appeared first on News First Kannada.

Source: newsfirstlive.com

Source link