ಅನಂತ್ ನಾಗ್‍ಗೆ ಪದ್ಮ ಪ್ರಶಸ್ತಿ ನೀಡುವಂತೆ ಅಭಿಯಾನ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಅಭಿನಯ ಬ್ರಹ್ಮ ಅನಂತ್ ನಾಗ್ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು 2022ರ ಸಾಲಿನಲ್ಲಿ ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳಿಗೆ ಜನರೇ ತಮ್ಮ ನಡುವಿನ ಸಾಧಕರನ್ನು, ಪ್ರತಿಭಾವಂತರ ಹೆಸರನ್ನು ಶಿಫಾರಸು ಮಾಡಬಹುದು ಎಂದು ಮನವಿ ಮಾಡಿದ್ದರು.

ಈ ಮನವಿಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲೂ ‘#PeoplesPadma’ ಹ್ಯಾಷ್‍ಟ್ಯಾಗ್‍ನಲ್ಲಿ ಅಭಿಯಾನವೊಂದು ಆರಂಭವಾಗಿದ್ದು, ಇದಕ್ಕೆ ಕನ್ನಡ ಖ್ಯಾತ ನಟ ಅನಂತ್ ನಾಗ್ ಅವರಿಗೆ ಈ ವರ್ಷದ ಪದ್ಮ ಪ್ರಶಸ್ತಿಯನ್ನು ನೀಡಬೇಕೆಂದು ಅಭಿಯಾನ ಪ್ರಾರಂಭವಾಗಿದೆ. #AnanthnagforPadma ಎಂಬ ಹ್ಯಾಷ್‍ಟ್ಯಾಗ್‍ನಡಿ ಅಭಿಯಾನ ಪ್ರಾರಂಭವಾಗಿದೆ.

ಚಿತ್ರರಂಗದ ಮಹನ್ ಪ್ರತಿಭೆಗಳಲ್ಲೊಬ್ಬರಾದ ಅನಂತ್ ನಾಗ್ ಅವರು ಕನ್ನಡ ಭಾಷೆಗೆ, ನಾಡಿಗೆ, ಚಿತ್ರರಂಗಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕೆಂದು ಕೇಳೋಣ. ನಮ್ಮ ನಾಡಿನ ಪರವಾಗಿ ಅನಂತ್ ನಾಗ್ ಅವರನ್ನು #PeoplesPadma  ಪ್ರಶಸ್ತಿಗೆ ಹೆಸರನ್ನು ಸೂಚಿಸಿ ಎಂದು ನಟ, ನಿರ್ದೇಶಕ ರಿಷಭ್ ಶೆಟ್ಟಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಕೆಜಿಎಫ್‍ನಲ್ಲಿ ಪತ್ನಿ ಪಾತ್ರವನ್ನು ಹೇಳಿ ಧನ್ಯವಾದ ಹೇಳಿದ ಅನಂತ್ ನಾಗ್!

ಅನಂತ್ ನಾಗ್ ಅವರು ಕನ್ನಡ, ಹಿಂದಿ, ಮರಾಠಿ, ತಮಿಳು, ಮಲೆಯಾಳಂ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸ್ಮರಣೇಯ ಪಾತ್ರಗಳನ್ನು ಮಾಡಿದ್ದಾರೆ. ಇವರಿಗೆ ಅತ್ಯುತ್ತಮ ನಟ, ರಾಜ್ಯೋತ್ಸವ ಪ್ರಶಸ್ತಿ ಇನ್ನೂ ಹಲವು ಪ್ರಶಸ್ತಿಗಳು ದೊರಕಿದೆ. 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಭಾರತದಲ್ಲಿ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತರಿದ್ದಾರೆ. ಅವರನ್ನು ದೇಶದ ಮುಂದೆ ತಂದು ಎಲ್ಲರಿಗೂ ಪರಿಚಯಿಸುವ ಉದ್ದೇಶದಿಂದ ತೆರೆಯ ಹಿಂದೆ ಇರುವ ಸಾಧಕರನ್ನು ಜನರೇ ಶಿಫಾರಸು ಮಾಡಲಿ ಎಂದು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. #PeoplesPadma ಹ್ಯಾಷ್‍ಟ್ಯಾಗ್ ನಡಿ ಜನರೆ ತಮ್ಮ ನಡುವಿನ ಸಾಧಕರನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ. ಸೆಪ್ಪೆಂಬರ್ 15ರವರೆಗೆ ಈ ಹ್ಯಾಷ್ ಟ್ಯಾಗ್‍ನಡಿ ನಾಮಿನೇಟ್ ಮಾಡಲು ಅವಕಾಶವಿದೆ. ಇದರಲ್ಲಿ ಅತ್ಯುತ್ತಮವಾದವರನ್ನು ಆಯ್ಕೆ ಮಾಡಿ ಪದ್ಮ ಪ್ರಶಸ್ತಿಯನ್ನು ನೀಡಲಾಗುತ್ತದೆ.

The post ಅನಂತ್ ನಾಗ್‍ಗೆ ಪದ್ಮ ಪ್ರಶಸ್ತಿ ನೀಡುವಂತೆ ಅಭಿಯಾನ appeared first on Public TV.

Source: publictv.in

Source link