ಎತ್ತಿನ ಮುಂದೆ ಚಕ್ಕಡಿ ಹೂಡಿದಂತೆ – ಜಿಂದಾಲ್ ಕೇಸ್, ಸರ್ಕಾರಕ್ಕೆ ಚಾಟಿ

ಬೆಂಗಳೂರು: ಜಿಂದಾಲ್ ಸಂಸ್ಥೆಗೆ 3,667 ಎಕರೆ ಜಮೀನು ಪರಭಾರೆ ವಿಚಾರವಾಗಿ ಹೈಕೋರ್ಟ್ ಚಾಟಿ ಬೀಸಿದೆ. ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳದೇ ಸರ್ಕಾರ ಆದೇಶ ನೀಡಿದ್ಯಾ ಎಂದು ಪ್ರಶ್ನಿಸಿ ಇದು ಎತ್ತಿನ ಮುಂದೆ ಚಕ್ಕಡಿ (ಎತ್ತಿನ ಗಾಡಿ) ಹೂಡಿದ ಹಾಗೆ ಎಂದು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯ ಪಟ್ಟಿದೆ.

ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಪಿಐಎಲ್ ವಿಚಾರಣೆ ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯಿತು. ಜಿಂದಾಲ್ ಕಂಪನಿಗೆ 3,667 ಎಕರೆ ಭೂಮಿ ವರ್ಗಾವಣೆ/ಮಾರಾಟ ವಿಚಾರವಾಗಿ ವಾಸ್ತವಾಂಶವನ್ನು ಬಹಿರಂಗಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿದೆ.

ಸಾಮಾಜಿಕ ಕಾರ್ಯಕರ್ತ ಕೆಎ ಪೌಲ್ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಸಿಜೆ ಎ.ಎಸ್ ಓಕಾ ಮತ್ತು ನ್ಯಾ. ಸೂರಜ್ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠ, ಸಂಪುಟ ಸಭೆ ಒಪ್ಪಿಗೆ ಪಡೆಯದೇ ಮೇ 6 ರಂದು ಸರ್ಕಾರಿ ಆದೇಶ ಹೊರಡಿಸಲಾಗಿದೆಯೇ? ಈ ಸಂಬಂಧ ಮಾಹಿತಿ ಪಡೆದುಕೊಳ್ಳುವಂತೆ ರಾಜ್ಯ ಸರ್ಕಾರದ ವಕೀಲರಿಗೆ ನಿರ್ದೇಶನ ನೀಡಿದೆ.

ಸಂಪುಟದ ಒಪ್ಪಿಗೆ ಇಲ್ಲದೆ ಸರ್ಕಾರಿ ಆದೇಶ ಹೊರಡಿಸಿದ್ದು ಹೇಗೆ?. ಮೇ 6ರ ಸರ್ಕಾರಿ ಆದೇಶದ ಪ್ರತಿ ಹಾಗೂ ಜೂನ್ 15 ರ ಆದೇಶ ಕಾರ್ಯರೂಪ ಮೆಮೋ, ಸಂಪುಟದ ಒಪ್ಪಿಗೆ ಇಲ್ಲದೇ ಜಾರಿ ಮಾಡಿದ ಆದೇಶದ ಕುರಿತು ನಿರ್ದಿಷ್ಟವಾಗಿ ಸರ್ಕಾರಿ ವಕೀಲರು ಮಾಹಿತಿ ಪಡೆದುಕೊಳ್ಳಬೇಕು. ಸಂಪುಟದ ಒಪ್ಪಿಗೆ ಇಲ್ಲದಿದ್ದರೂ ಸರ್ಕಾರಿ ಆಸ್ತಿಯ ಮಾರಾಟ/ವರ್ಗಾವಣೆ ಆದೇಶ ಹೊರಡಿಸಬಹುದೇ? ಎಂಬುದರ ಬಗ್ಗೆ ಸರ್ಕಾರಿ ವಕೀಲರು ಮಾಹಿತಿ ಪಡೆದುಕೊಳ್ಳಬೇಕು ಎಂದು ಸೂಚಿಸಿದ ಕೋರ್ಟ್ ಜುಲೈ 16ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದೆ. ಇದನ್ನೂ ಓದಿ: ಜಿಂದಾಲ್‍ಗೆ 3,667 ಎಕರೆ ಪರಭಾರೆ ಆದೇಶ ವಾಪಸ್ – ಕ್ಯಾಬಿನೆಟ್‍ನಲ್ಲಿ ಏನಾಯ್ತು?

ಸಂಪುಟದ ಹಲವು ಸಚಿವರ ವಿರೋಧದ ಹೊರತಾಗಿ ಪರಭಾರೆ ಮಾಡಲಾಗಿದೆ. ಅತ್ಯಂತ ಕಡಿಮೆ ದರಕ್ಕೆ ಭೂಮಿ ಪರಭಾರೆ ಮಾಡುವ ಪ್ರಸ್ತಾವನೆ ಸರ್ಕಾರ ಮಂಡಿಸಿತ್ತು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

ಕಳೆದ ವಿಚಾರಣೆ ವೇಳೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜೂನ್.14ರಂದು ಬರೆದಿರುವ ಪತ್ರದ ಜೊತೆಗೆ ಅನುಪಾಲನಾ ಮೆಮೊವನ್ನು ಸಲ್ಲಿಸಿದ್ದರು. ಅದರಲ್ಲಿ ಸರ್ಕಾರ ಏಪ್ರಿಲ್ 26ರ ಸಂಪುಟ ಸಭೆಯಲ್ಲಿ ಜೆಎಸ್‍ಡಬ್ಲ್ಯು ಲಿಮಿಟೆಡ್‍ಗೆ ಕ್ರಮವಾಗಿ 2000.58 ಎಕರೆ ಮತ್ತು 1666.73 ಎಕರೆ ಭೂಮಿ ಪರಭಾರೆ ಮಾಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಬಳಿಕ ನಡೆದ ಸಭೆಗಳಲ್ಲಿ ನಿರ್ಧಾರ ಫೈನಲ್ ಆಗಿರಲಿಲ್ಲ ಎಂದು ಉಲ್ಲೇಖ ಮಾಡಲಾಗಿತ್ತು. ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ. ಕೆ ಇ ರಾಧಾಕೃಷ್ಣರನ್ನು ಪಿಐಎಲ್‍ನಲ್ಲಿ ಸಹ ಅರ್ಜಿದಾರರನ್ನಾಗಿ ಸೇರಿಸಲು ಒಪ್ಪಿಗೆ ಕೊಟ್ಟಿತ್ತು.

The post ಎತ್ತಿನ ಮುಂದೆ ಚಕ್ಕಡಿ ಹೂಡಿದಂತೆ – ಜಿಂದಾಲ್ ಕೇಸ್, ಸರ್ಕಾರಕ್ಕೆ ಚಾಟಿ appeared first on Public TV.

Source: publictv.in

Source link