ಬೆಂಗಳೂರಲ್ಲಿ ಮಳೆರಾಯನ ಆರ್ಭಟ; ರಾಜ್ಯದಲ್ಲಿ ಮೂರು ದಿನ ಸುರಿಯಲಿದೆ ಮಹಾಮಳೆ

ಬೆಂಗಳೂರಲ್ಲಿ ಮಳೆರಾಯನ ಆರ್ಭಟ; ರಾಜ್ಯದಲ್ಲಿ ಮೂರು ದಿನ ಸುರಿಯಲಿದೆ ಮಹಾಮಳೆ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಮಳೆರಾಯ ಆರ್ಭಟ ಶುರು ಮಾಡಿದ್ದಾನೆ. ಮುಂಜಾನೆಯಿಂದಲೂ ನಗರದ ಕೆಲ ಪ್ರದೇಶಗಳಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ವಾಹನ ಸವಾರರು, ಕೆಲಸಕ್ಕೆ ಹೋಗುವವರು ಪರದಾಡುವಂತಾಗಿದೆ.

blank

ಹವಾಮಾನ ಇಲಾಖೆ ರಾಜ್ಯದಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆಯ ಮುನ್ಸೂಚನೆ ನೀಡಿದ್ದು ಮುಂಜಾಗ್ರತಾ ಕ್ರಮವಾಗಿ ಕರಾವಳಿ ಪ್ರದೇಶದಲ್ಲಿ ಈಗಾಗಲೇ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಸೌರಾಷ್ಟ್ರ ಭಾಗದಲ್ಲಿ ವಾಯುಭಾರ ಕುಸಿತ ಪರಿಣಾಮ ಕರಾವಳಿ ಪ್ರದೇಶ ಸೇರಿದಂತೆ ಉತ್ತರ ಒಳನಾಡಿನಲ್ಲಿ ಜುಲೈ 17 ರವರೆಗೂ ಭರ್ಜರಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

blank

ಈ ಹಿನ್ನೆಲೆಯಲ್ಲಿ ರಾಜ್ಯದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮತ್ತು ಬೀದರ್, ರಾಯಚೂರು, ಕಲಬುರಗಿ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್‌ ನ್ಯೂಸ್​ಫಸ್ಟ್​ಗೆ ಮಾಹಿತಿ ನೀಡಿದ್ದಾರೆ.

blank

ಕೊಡಗಿನಲ್ಲಿ ಆರೆಂಜ್ ಅಲರ್ಟ್ ಘೋಷಣೆ 
ಇನ್ನು ಕೊಡಗು ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ಅವಾಂತರ ಸೃಷ್ಟಿಸಿದೆ. ಮಡಿಕೇರಿ ಭಾಗಮಂಡಲ, ತಲಕಾವೇರಿ ಸುತ್ತಮುತ್ತ ಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು ಕಾವೇರಿ ನದಿ ಭರ್ತಿಯಾಗಿ ಹರಿಯುತ್ತಿದೆ. ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದಿರುವಂತೆ ಜಿಲ್ಲಾಡಳಿತ ಸೂಚನೆ ನೀಡಿದ್ದು ಜಿಲ್ಲೆಯಲ್ಲಿ 17ರ ವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ..

blank

ಕುಮಾರಧಾರ ಸ್ನಾನಘಟ್ಟ ಮುಳುಗಡೆ
ಪಶ್ಚಿಮ ಘಟ್ಟದಲ್ಲಿ ಕೂಡ ವರುಣ ತನ್ನ ಆರ್ಭಟವನ್ನು ಮುಂದುವರೆಸಿದ್ದು ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಘಟ್ಟ ಪ್ರದೇಶ ಮತ್ತು ಕುಮಾರಧಾರ ಪರ್ವತಗಳಿಂದ ನೀರು ಹರಿದು ಬಂದು ಸ್ನಾನಘಟ್ಟ ಮುಳಗಡೆಯಾಗಿದೆ. ತೀರ್ಥ ಸ್ನಾನಕ್ಕೆ ಸದ್ಯ ನಿರ್ಬಂಧ ಹೇರಲಾಗಿದ್ದು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.

blank

ಐದು ದಿನ ಆರೆಂಜ್ ಅಲರ್ಟ್
ಪಕ್ಕದ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಕೂಡ ಮುಂದಿನ ಐದು ದಿನ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜಿಲ್ಲೆಯಲ್ಲಿ ಮುಂದಿನ ಐದು ದಿನ ಆರೆಂಜ್ ಅಲರ್ಟ್ ಘೋಷಿಸಿದ್ದು ಜನರು ಮುನ್ನೆಚ್ಚರಿಕೆಯಿಂದಿರಬೇಕು ಎಂದು ಜಿಲ್ಲಾಡಳಿತ ಹೇಳಿದೆ.

blank

ಬೀಚ್ ಗೆ ಆಗಮಿಸುವ ಪ್ರವಾಸಿಗರು ಸಮುದ್ರ ಪ್ರಕ್ಷುಬದ್ಧವಾಗಿರುವುದರಿಂದ ನೀರಿಗಿಳಿಯದಂತೆ ಆದೇಶ ಮಾಡಿದೆ. ಮಳೆಯಿಂದ ಏನಾದರು ಅವಘಡ ಸಂಭವಿಸಿದಲ್ಲಿ ತುರ್ತು ಸಹಾಯಕ್ಕಾಗಿ ತಾಲೂಕು ಮಟ್ಟದಲ್ಲಿ ತಹಶೀಲ್ದಾರರು, ಹಾಗೂ ಜಿಲ್ಲಾಮಟ್ಟದಲ್ಲಿ ಕಂಟ್ರೋಲ್ ರೂಂ ಸಂಪರ್ಕಿಸಲು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.

ಇನ್ನು ಭಾರಿ ಮಳೆ ಸಂಭವವಿರುವ ಕಾರಣ ಯಾವ ಅಧಿಕಾರಿಗೂ ರಜೆ ನೀಡಿಲ್ಲ, ಎಲ್ಲ ಅಧಿಕಾರಿಗಳು ಅವರವರ ಕೇಂದ್ರಸ್ಥಾನದಲ್ಲಿ ಅಲರ್ಟ್​ ಆಗಿದ್ದು ಈ ಮೂಲಕ ಮಳೆ ಎದುರಿಸಲು ಜಿಲ್ಲಾಡಳಿತ ಸರ್ವ ಸನ್ನಧ್ದವಾಗಿದೆ ಎಂದು ನ್ಯೂಸ್​ಫಸ್ಟ್​ಗೆ ಮಾಹಿತಿ ನೀಡಿದ್ದಾರೆ.

The post ಬೆಂಗಳೂರಲ್ಲಿ ಮಳೆರಾಯನ ಆರ್ಭಟ; ರಾಜ್ಯದಲ್ಲಿ ಮೂರು ದಿನ ಸುರಿಯಲಿದೆ ಮಹಾಮಳೆ appeared first on News First Kannada.

Source: newsfirstlive.com

Source link