ತುಂಬಿ ಹರಿಯುವ ನದಿಯಲ್ಲಿ ಗಾಯಾಳು ಮಹಿಳೆಯನ್ನು ಸ್ಟ್ರೆಚ್ಚರ್ ನಲ್ಲಿ ಹೊತ್ತೊಯ್ದರು

-ಸಚಿವ ಅಂಗಾರ ಕ್ಷೇತ್ರದ ದುರವಸ್ಥೆ

ಮಂಗಳೂರು: ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರ ಕ್ಷೇತ್ರದಲ್ಲಿ ತುಂಬಿ ಹರಿಯುವ ನದಿಯಲ್ಲಿ ಗಾಯಾಳು ಮಹಿಳೆಯನ್ನು ಸ್ಟ್ರೆಚರ್ ನಲ್ಲಿ ಎತ್ತಿಕೊಂಡು ಹೋದ ಘಟನೆ ಇಂದು ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಜಾಲ್ಸೂರಿನ ಮರಸಂಕ ಎಂಬಲ್ಲಿನ ನಿವಾಸಿ ದೇವಕಿಯವರು ಮನೆಯಲ್ಲಿ ಕಾಲು ಜಾರಿ ಬಿದ್ದು, ಕಾಲು ಮುರಿತಕ್ಕೊಳಗಾಗಿದ್ದರು. ಆದರೆ ಚಿಕಿತ್ಸೆಗಾಗಿ ನಗರಕ್ಕೆ ಹೋಗಬೇಕಾದರೆ ಮರಸಂಕದಲ್ಲಿರುವ ಕಿರುನದಿಯನ್ನು ದಾಟಿ ಹೋಗಬೇಕು. ಈ ನದಿಗೆ ಸೇತುವೆಯೇ ಇಲ್ಲ. ಆದ್ದರಿಂದ ತುಂಬಿ ಹರಿಯುವ ಹೊಳೆಯನ್ನೇ ದಾಟಿ ಹೋಗಬೇಕು. ಹೀಗಾಗಿ ತುಂಬಿ ಹರಿಯುವ ಹೊಳೆಯಲ್ಲಿ ದೇವಕಿಯವರನ್ನು ಸ್ಥಳೀಯರು ಸ್ಟ್ರೆಚರ್ ನಲ್ಲಿ ಹೊತ್ತುಕೊಂಡು ಹೋದರು. ಬಳಿಕ ಹೊಳೆ ದಾಟಿ ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಿದರು. ಇದು ಅಂಗಾರ ಅವರ ಕ್ಷೇತ್ರದ ದುರವಸ್ಥೆಯಾಗಿದೆ.  ಇದನ್ನೂ ಓದಿ: ಅಂಗಾರ ವಿರುದ್ಧ ಭೋಜೇಗೌಡ ಕಿಡಿ – ಡಿಸಿ ಕಚೇರಿ ಬಳಿ ಏಕಾಂಗಿ ಪ್ರತಿಭಟನೆ

ಜಾಲ್ಸೂರಿನ ಮರಸಂಕದಲ್ಲಿ 9 ಮನೆಗಳಿದ್ದು ಸುಮಾರು 50 ಜನ ವಾಸಿಸುತ್ತಿದ್ದಾರೆ. ಸುಮಾರು ಅರ್ಧ ಕಿಲೋಮೀಟರ್ ಹೊಳೆ ದಾಟಿ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಇಲ್ಲಿದೆ. ಪಯಸ್ವಿನಿ ನದಿಗೆ ಸೇರುವ ಈ ಹೊಳೆಯಲ್ಲಿ ಬಾರಿ ಮಳೆ ಬರುತ್ತಿರುವಾಗ ನೀರು ಅಪಾಯದ ಮಟ್ಟ ತಲುಪುತ್ತದೆ. ಕಳೆದ ವರ್ಷ ಗರ್ಭಿಣಿಯನ್ನು ಹೊತ್ತುಕೊಂಡು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಈ ಊರಿನ ಜನ 15 ವರ್ಷದಿಂದ ಸೇತುವೆಗಾಗಿ ಮನವಿ ಮಾಡಿದ್ರೂ ಇಂದಿಗೂ ಸೇತುವೆ ಕನಸಿನ ಭರವಸೆ ಹಾಗೇ ಉಳಿದಿದೆ.

The post ತುಂಬಿ ಹರಿಯುವ ನದಿಯಲ್ಲಿ ಗಾಯಾಳು ಮಹಿಳೆಯನ್ನು ಸ್ಟ್ರೆಚ್ಚರ್ ನಲ್ಲಿ ಹೊತ್ತೊಯ್ದರು appeared first on Public TV.

Source: publictv.in

Source link