ದಲಿತ ವೇಟರ್ ಮೇಲೆ ದರ್ಶನ್, ಸ್ನೇಹಿತರಿಂದ ಹಲ್ಲೆ – ಇಂದ್ರಜಿತ್ ಆರೋಪ

– ವ್ಯವಹಾರ ಮಾಡಲು ಅರುಣಾ ಕುಮಾರಿಯನ್ನು ಕರೆದಿದ್ದಾರೆ
– ಜನ ಸಾಮಾನ್ಯರು ಪೆದ್ದರಲ್ಲ

ಬೆಂಗಳೂರು: 25 ಕೋಟಿ ರೂ. ವಂಚನೆ ಪ್ರಕರಣ ಮುಕ್ತಾಯವಾಗುತ್ತಿದ್ದಂತೆ ಈಗ ಮತ್ತೊಂದು ವಿಚಾರ ಬೆಳಕಿಗೆ ಬಂದಿದ್ದು, ನಟ ದರ್ಶನ್ ಮತ್ತು ಸ್ನೇಹಿತರು ದಲಿತ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ ಮಾಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮೈಸರಿನ ಸಂದೇಶ್ ಪ್ರಿನ್ಸ್ ಹೋಟೆಲಿನಲ್ಲಿ ದಲಿತ ವೇಟರ್ ಮೇಲೆ ದರ್ಶನ್ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ವೇಟರ್ ಕಣ್ಣುಗಳಿಗೆ ಹಾನಿಯಾಗಿದೆ. ಈ ಘಟನೆಯ ಸಂದರ್ಭದಲ್ಲಿ ದರ್ಶನ್, ರಾಕೇಶ್, ಹರ್ಷ ಮೇಲಾಂಟ, ಮತ್ತು ಪವಿತ್ರ ಗೌಡ ಇರುತ್ತಾರೆ. ಘಟನೆಯ ಬಳಿಕ 50 ಸಾವಿರ ರೂ. ನೀಡಿ ರಾಜಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಈ ಘಟನೆ ಹೊರಗಡೆ ಬರಬಾರದು ಎಂಬ ಕಾರಣಕ್ಕೆ ಸಿಸಿಟಿವಿ ದೃಶ್ಯಗಳನ್ನು ಡಿಲೀಟ್ ಮಾಡಿಸಿದ್ದಾರೆ. ಮೈಸೂರು ಪೊಲೀಸರು ಬಳೆ ತೊಟ್ಟಿದ್ದಾರಾ ಈ ಎಲ್ಲ ಘಟನೆಗಳ ಬಗ್ಗೆ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.

ಆರೋಪಕ್ಕೆ ಮಾಧ್ಯಮಗಳು ಸಾಕ್ಷ್ಯ ನೀಡುವಂತೆ ಕೇಳಿದ್ದಕ್ಕೆ, ಈಗ ನಾನು ಬೊಮ್ಮಾಯಿ ಅವರಲ್ಲಿ ದೂರು ನೀಡಿದ್ದೇನೆ. ಪೊಲೀಸರು ತನಿಖೆ ನಡೆಸಲಿ. ಮುಂದೆ ನೋಡೋಣ ಎಂದು ಉತ್ತರಿಸಿದರು. ಇದನ್ನೂ ಓದಿ: ಬೊಮ್ಮಾಯಿಗೆ ಇಂದ್ರಜಿತ್ ನೀಡಿದ ದೂರಿನಲ್ಲಿ ಏನಿದೆ? 

ಅರುಣಾ ಕುಮಾರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆಕೆಯನ್ನು ಮನೆಗೆ ಕರೆಸಿಕೊಂಡಿದ್ದು ಯಾಕೆ? ತೋಟಕ್ಕೆ ಕರೆಸಿಕೊಂಡಿದ್ದು ಯಾಕೆ? 25 ಕೋಟಿ ವಂಚನೆಗೆ ಒಳಗಾದವರು ಇಷ್ಟು ಬೇಗ ರಾಜಿ ಹೇಗೆ ಆಗುತ್ತಾರೆ? ಏನೇನು ನಡೆದಿದೆ ಎನ್ನುವುದು ಎಲ್ಲರಿಗೆ ಗೊತ್ತಿದೆ ಎಂದು ಹೇಳಿದರು.

blank

ಈ ಹುಡುಗಿ ಮೂಲಕ ಅನೇಕ ವ್ಯವಹಾರ ಮಾಡಿಸಲು ಕರೆದಿದ್ದಾರೆ. ಜನ ಸಾಮಾನ್ಯರು ಪೆದ್ದರಲ್ಲ. ಪಾಪಣ್ಣ ನಡೆಸುವ ಬಾರಿಗೆ, ತೋಟಕ್ಕೆ ಅರುಣ ಕುಮಾರಿ ಹೋಗುತ್ತಾರೆ. ದರ್ಶನ್ ಯಾಕೆ ಹೊಡೆದಿದ್ದಾರೆ ಎಂಬುದನ್ನು ಅವರನ್ನು ಕೇಳಿ. ತನಿಖೆಯೇ ಶುರುವಾಗಿಲ್ಲ. ಆಗಲೇ ರಾಜಿ ಮಾತುಕತೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಅರುಣಾ ಕುಮಾರಿಗೆ ಬೆದರಿಕೆ ಹಾಕಲಾಗಿದೆ. ರಾಘವೇಂದ್ರ ಸ್ವಾಮೀಜಿಗಳ ಮೇಲೆ ದರ್ಶನ್ ನಾನು ಹೊಡೆದಿಲ್ಲ ಎಂದು ಆಣೆ ಮಾಡಿ ಹೇಳಲಿ. ನಾನು ಮಹಿಳೆಯರ ಪರ ಇದ್ದೇನೆ ಎಂದರು.

ದರ್ಶನ್ ಕೃಷಿ ಇಲಾಖೆಯ ರಾಯಭಾರಿಯಾಗಿದ್ದಾರೆ. ಕತ್ತರಿಸುತ್ತೇನೆ, ತುಂಡರಿಸುತ್ತೇನೆ ಎಂದು ಹೇಳುತ್ತಾರೆ. ನಟನಾಗಿ ಈ ರೀತಿ ಮಾತನಾಡುವುದು ಸರಿಯಲ್ಲ. ನಾನು ದೊಡ್ಡ ದೊಡ್ಡ ನಟರ ಬಗ್ಗೆ ವಿಮರ್ಶೆ ಮಾಡಿದ್ದೇನೆ. ನಾನು ಯಾರಿಗೂ ಭಯ ಬೀಳುವುದಿಲ್ಲ. ಅಭಿಮಾನಿಗಳು ಚಿತ್ರಗಳನ್ನು ಚಿತ್ರಗಳನ್ನು ನೋಡಿ ಸಂತೋಷ ಪಡಬೇಕು. ಅದನ್ನು ಬಿಟ್ಟು ಬೆದರಿಕೆ, ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ಹೇಳಿದರು.

The post ದಲಿತ ವೇಟರ್ ಮೇಲೆ ದರ್ಶನ್, ಸ್ನೇಹಿತರಿಂದ ಹಲ್ಲೆ – ಇಂದ್ರಜಿತ್ ಆರೋಪ appeared first on Public TV.

Source: publictv.in

Source link