ದರ್ಶನ್ ಮೇಲೆ ಇಂದ್ರಜಿತ್ ಆರೋಪ -ಬೊಮ್ಮಾಯಿಗೆ ಕೊಟ್ಟ ದೂರಿನಲ್ಲಿ ಏನಿದೆ?

ದರ್ಶನ್ ಮೇಲೆ ಇಂದ್ರಜಿತ್ ಆರೋಪ -ಬೊಮ್ಮಾಯಿಗೆ ಕೊಟ್ಟ ದೂರಿನಲ್ಲಿ ಏನಿದೆ?

ಬೆಂಗಳೂರು: ಮೈಸೂರು ಪೊಲೀಸ್​ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು ಸೂಕ್ತ ಹಾಗೂ ಕಠಿಣ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್,​ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನ ಒತ್ತಾಯಿಸಿದ್ದಾರೆ. ಆರ್​ಟಿ ನಗರದಲ್ಲಿರುವ ಬೊಮ್ಮಾಯಿ ಮನೆಗೆ ಭೇಟಿ ಮಾಡಿ ಅವರನ್ನ ಆಗ್ರಹಿಸಿದ್ದಾರೆ.

ಇಂದ್ರಜಿತ್ ಮನವಿಯಲ್ಲಿ ಏನಿದೆ..?
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಚಟುವಟಿಕೆಗಳು ಮಿತಿ ಮೀರಿವೆ. ಮಾದಕ ವಸ್ತು ಮಾರಾಟ ಜಾಲ ತನ್ನ ಕಬಂಧ ಬಾಹುವನ್ನ ಜಿಲ್ಲೆಯಾದ್ಯಂತ ವಿಸ್ತರಿಸಿದೆ. ಯುವಕ ಯುವತಿಯರು ಈ ಮಾದಕ ಜಾಲದ ಸುಳಿಗೆ ಸಿಲುಕಿ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ನೀವು ಗಮನಹರಿಸಿ; ಪತ್ರಿಕಾಗೋಷ್ಠಿ ನಡೆಸಿ ಕ್ರಮ ಕೈಗೊಂಡಿರೋದು ಸ್ವಾಗತಾರ್ಹ.

ಆದರೆ, ಪ್ರಭಾವಿಗಳು ಉದ್ಯಮಿಗಳು; ಸೆಲೆಬ್ರಿಟಿಗಳ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದು, ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾ ಪೊಲೀಸರು ವಿಫಲರಾಗಿದ್ದಾರೆ. ಇತ್ತೀಚೆಗೆ ಸಂದೇಶ್ ನಾಗರಾಜ್ ಅವರ ಹೋಟೆಲ್​​ನಲ್ಲಿ ವೇಟರ್​ ಮೇಲೆ ಸ್ಟಾರ್ ನಟರೊಬ್ಬರು ಹಲ್ಲೆ ನಡೆಸಿದ್ದು, ಆತನ ಕಣ್ಣುಗಳಿಗೆ ಹಾನಿಯಾಗಿದೆ. ಈ ವಿಚಾರವಾಗಿ ಹೋಟೆಲ್​​ನ ಸಿಸಿ ಟಿವಿ ದೃಶ್ಯಾವಳಿಗಳನ್ನ ಪರೀಕ್ಷಿಸಿ. ಅಲ್ಲಿನ ವೇಟರ್​​ಗಳ ವಿಚಾರಣೆಯನ್ನೂ ತುರ್ತಾಗಿ ನಡೆಸಿ, ತನಿಖೆಗೆ ಆದೇಶಿಸಬೇಕಿದೆ. ಬಡವರು, ಜನಸಾಮಾನ್ಯರು, ಶೋಷಿತರ ಜೀವಕ್ಕೆ ಸುರಕ್ಷತೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ವಿವಾದದಲ್ಲಿ ಮಹಿಳೆಯನ್ನು ಸ್ವಾರ್ಥಕ್ಕೆ ಬಳಸಿಕೊಂಡು, ಪೊಲೀಸರ ಮೇಲೆ ಒತ್ತಡ ತಂದು ರಾಜಕಾರಣಿಗಳು ಮಾತ್ರ ಈ ಪ್ರಕರಣದಿಂದ ನುಣುಚಿಕೊಳ್ತಿದ್ದಾರೆ. ಇದು ಸಾಮಾನ್ಯ ಮಹಿಳೆಯರಲ್ಲಿನ ನ್ಯಾಯದ ನಂಬಿಕೆಯನ್ನು ಪ್ರಶ್ನಿಸುವಂತಿದೆ. ಇದೇ ಸಾಮಾನ್ಯ ವ್ಯಕ್ತಿಯಾಗಿದ್ದರೆ ಸುಮ್ಮನೆ ಬಿಡುತ್ತೀರ? ಜನ ಸಾಮಾನ್ಯರಿಗೆ ಒಂದು ನ್ಯಾಯ ಪ್ರಭಾವಿಗಳಿಗೆ ಮತ್ತೊಂದು ನ್ಯಾಯಾನಾ? ಇದು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಾಕ್ಷಿಯಲ್ಲವೇ?

ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳಲ್ಲಿ ಜನ ಸಾಮಾನ್ಯರಿಗೆ ಅನ್ಯಯಾಯವಾಗುತ್ತಿದೆ. ಪ್ರಭಾವಿಗಳ ಎದುರು ಸಾಮಾನ್ಯರ ಹೋರಾಟಕ್ಕೆ ಬೆಲೆ ಇಲ್ಲದಂತಾಗಿದೆ. ಸಿಡಿ ವಿಚಾರದಲ್ಲೂ ಇಡೀ ವ್ಯವಸ್ಥೆ ಆಕೆಯೆ ಮೇಲೆ ಒತ್ತಡ ಹೇರಿತ್ತು. ಅರಣಾಕುಮಾರಿಯ ವಿಚಾರದಲ್ಲೂ ಇದು ಮುಂದುವರೆದಿದೆ. ಹೀಗೆ ಆದರೆ ವ್ಯವಸ್ಥೆಯ ಮೇಲೆ ಜನಸಾಮಾನ್ಯರ ನಂಬಿಕೆ ಹೋಗುತ್ತದೆ.

ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕಿ ಕಠಿಣ ಕ್ರಮಕೈಗೊಂಡು ಕಾನೂನು ಮತ್ತು ಸುವ್ಯವಸ್ಥೆ ಜವಾಬ್ದಾರಿಯನ್ನು ನಿಭಾಯಿಸಬೇಕಾದ ಮೈಸೂರು ಜಿಲ್ಲಾ ಪೊಲೀಸ್​ರು ಮೂಕ ಪ್ರೇಕ್ಷಕರಂತೆ ವರ್ತಿಸುತ್ತಿರುವುದು, ಸಾಕ್ಷಿಗಳಿದ್ದರೂ ಯಾರೊಬ್ಬರ ಮೇಲೂ ಕ್ರಮಕೈಗೊಳ್ಳದೆ ಇರುವುದನ್ನು ನೋಡಿದರೆ ಮೈಸೂರು ಜಿಲ್ಲಾ ಪೊಲೀಸ್ ವ್ಯವಸ್ಥೆಯೇ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆಯೇ ಎಂಬ ಅನುಮಾನ ಮೂಡುತ್ತಿದೆ.

ಈ ಕೂಡಲೇ ಎಲ್ಲಾ ವಿಚಾರಗಳ ಬಗ್ಗೆ ಗಮನ ಹರಿಸಿ ಜಡಗಟ್ಟಿರುವ ಮೈಸೂರು ಜಿಲ್ಲಾ ಪೊಲೀಸ್​ ವ್ಯವಸ್ಥೆಗೆ ಚುರುಕು ಮುಟ್ಟಿಸಬೇಕಿದೆ. ಭ್ರಷ್ಟರನ್ನು ಅಮಾನತುಗೊಳಿಸಿ ಸಮರ್ಥ ಅಧಿಕಾರಿಗಳನ್ನು ನೇಮಿಸಬೇಕಿದೆ. ಯಾರೇ ತಪ್ಪು ಮಾಡಿದರೂ ಅವರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅವರ ವಿರುದ್ಧ ತುರ್ತು ಹಾಗೂ ಕಠಿಣ ಕ್ರಮಕೈಗೊಳ್ಳುವಂತೆ ಆದೇಶಿಸುವ ಮೂಲಕ ದಲಿತರ, ಬಡವರ, ಜನಸಾಮಾನ್ಯರ, ಹಾಗೂ ಶೋಷಿತರ ರಕ್ಷಣೆ ನೀಡಬೇಕೆಂದು ನಮ್ಮ ಮನವಿ ಮಾಡುತ್ತೇನೆ ಎಂದು ಗೃಹಸಚಿವರ ಬಳಿ ಮನವಿ ಮಾಡಿಕೊಂಡಿದ್ದಾರೆ.

The post ದರ್ಶನ್ ಮೇಲೆ ಇಂದ್ರಜಿತ್ ಆರೋಪ -ಬೊಮ್ಮಾಯಿಗೆ ಕೊಟ್ಟ ದೂರಿನಲ್ಲಿ ಏನಿದೆ? appeared first on News First Kannada.

Source: newsfirstlive.com

Source link