ಕುಂದಾಪುರದಲ್ಲಿ ಭಾರೀ ಮಳೆ- ಮರ ಬಿದ್ದು ದಂಪತಿ ಆಸ್ಪತ್ರೆಗೆ ದಾಖಲು

ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಬಸ್ರೂರಿನ ಮಕ್ಕಿ ಮನೆಯಲ್ಲಿ ಭಾರಿ ಗಾಳಿ ಮಳೆಯಿಂದ ಮನೆ ಮೇಲೆ ಮರ ಬಿದ್ದಿದೆ. ಮನೆ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ. ಮನೆಯೊಳಗಿದ್ದ ದಂಪತಿಗೆ ಗಂಭೀರ ಗಾಯವಾಗಿದ್ದು, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಳೆದ ರಾತ್ರಿ ಈ ಘಟನೆ ನಡೆದಿದ್ದು ಮನೆಯ ಪಕ್ಕದಲ್ಲಿದ್ದ ತೆಂಗಿನ ಮರ ಮತ್ತು ಬೃಹತ್ ಗಾತ್ರದ ಧೂಪದ ಮರ ಬಿದ್ದು ಮನೆ ಹಾನಿಯಾಗಿದೆ. ಬಸ್ರೂರು ಮಕ್ಕಿಮನೆ ಗಣಪಯ್ಯ ಗಾಣಿಗರಿಗೆ ಸೇರಿದ ಮನೆ ಇದಾಗಿದ್ದು, ದಂಪತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಇದನ್ನೂ ಓದಿ: ಉಡುಪಿಯಲ್ಲಿ ಗಾಳಿ ಮಳೆ- ಪ್ರವಾಸಿಗರಿಗೆ ಜಿಲ್ಲಾಧಿಕಾರಿಗಳ ಎಚ್ಚರಿಕೆ

ಗಣಪಯ್ಯ ಗಾಣಿಗ ಮತ್ತು ಪತ್ನಿ ವಾರಿಜ ಗಂಭೀರ ಗಾಯವಾಗಿದ್ದು ಮನೆಯಲ್ಲಿ ಇದ್ದ ಮಕ್ಕಳಿಗೆ ಯಾವುದೇ ಅಪಾಯವಾಗದೆ ಅದೃಷ್ಟವಶಾತ್ ಪಾರಾಗಿದ್ದಾರೆ. ಮನೆಯ ಗೋಡೆಗಳು ಕುಸಿದು ಬಿರುಕು ಬಿಟ್ಟಿದೆ. ಮೇಲ್ಛಾವಣಿ ಕುಸಿದಿದ್ದು ಸದ್ಯ ಆಸ್ಪತ್ರೆಯಲ್ಲಿ ದಂಪತಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮನೆಗುರುಳಿದ ಮರ- ಪಾರಾದ ಉಡುಪಿ ವೆಂಕಟರಮಣ ಐತಾಳ್ ಅನುಭವ ಭಯಾನಕ

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜಿಲ್ಲೆಯಲ್ಲಿ ಇನ್ನೂ ಒಂದು ವಾರ ಮಳೆ ಮುಂದುವರಿಯುವ ಸಾಧ್ಯತೆ ಇದೆ. ನದಿ ಮತ್ತು ಸಮುದ್ರ ತೀರದ ಜನ ಬಹಳ ಎಚ್ಚರಿಕೆಯಿಂದಿರಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ. ಅಪಾಯದಲ್ಲಿರುವ ಪ್ರದೇಶದ ಜನರು ಮುಂಜಾಗೃತಾ ಕ್ರಮವಾಗಿ ಎತ್ತರ ಪ್ರದೇಶಗಳಿಗೆ ತೆರಳಬೇಕು. ಆಶ್ರಯ ತಾಣಗಳಿಗೆ ಅಗತ್ಯಬಿದ್ದರೆ ತೆರಳಬೇಕು ಎಂದು ಡಿಸಿ ಸೂಚನೆ ನೀಡಿದ್ದಾರೆ.

The post ಕುಂದಾಪುರದಲ್ಲಿ ಭಾರೀ ಮಳೆ- ಮರ ಬಿದ್ದು ದಂಪತಿ ಆಸ್ಪತ್ರೆಗೆ ದಾಖಲು appeared first on Public TV.

Source: publictv.in

Source link