“ಅಪ್ಪ-ಅಮ್ಮನ ಸಂಬಂಧ ಅನಧಿಕೃತ ಆದ್ರೂ.. ಅವರ ಮಗು ಅಧಿಕೃತ”- ಏನಿದು ಹೈಕೋರ್ಟ್ ತೀರ್ಪು..?

“ಅಪ್ಪ-ಅಮ್ಮನ ಸಂಬಂಧ ಅನಧಿಕೃತ ಆದ್ರೂ.. ಅವರ ಮಗು ಅಧಿಕೃತ”- ಏನಿದು ಹೈಕೋರ್ಟ್ ತೀರ್ಪು..?

ಬೆಂಗಳೂರು: ತಂದೆ ತಾಯಿಯ ಸಂಬಂಧ ಅನಧಿಕೃತವಾಗಿದ್ದರೂ ಅವರ ಮಗು ಅಧಿಕೃತ.. ಎರಡನೇ ಪತ್ನಿ ಮಕ್ಕಳಿಗೂ ಅನುಕಂಪದ ಉದ್ಯೋಗ ನೀಡಬಹುದು ಎಂದು ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಆದೇಶ ಹೊರಡಿಸಿದೆ. ಹಿರಿಯ ನ್ಯಾಯಮೂರ್ತಿ ಬಿ.ವಿ ನಾಗರತ್ನ ನೇತೃತ್ವದ ವಿಭಾಗೀಯ ಪೀಠ ಹೀಗೆ ಅಭಿಪ್ರಾಯಪಟ್ಟಿದೆ.

ತಂದೆ ತಾಯಿಯವರ ಸಂಬಂಧ ಅನಧಿಕೃತ ಇರಬಹುದು. ಆದರೆ, ಹುಟ್ಟುವ ಮಕ್ಕಳು ಅನಧಿಕೃತವಲ್ಲ. ತಂದೆ ತಾಯಿ ಇಲ್ಲದೇ ಮಗು ಜನಿಸುವುದಿಲ್ಲ. ಜನ್ಮ ಪಡೆಯುವ ಪ್ರಕ್ರಿಯೆಯಲ್ಲಿ ಮಗುವಿನ ಪಾತ್ರ ಏನೇನೂ ಇರುವುದಿಲ್ಲ. ಈ ಅಂಶವನ್ನು ಕಾನೂನು ಪರಿಗಣಿಸಬೇಕಾಗುತ್ತದೆ. ಇಂತಹ ಮಕ್ಕಳನ್ನು ಸಹ ಅಧಿಕೃತ ಮಕ್ಕಳಂತೆಯೇ ಎಂದು ಕಾನೂನು ಪರಿಗಣಿಸಬೇಕು. ರಾಜ್ಯ ಹೈಕೋರ್ಟ್ ಮಹತ್ವದ ಅಭಿಪ್ರಾಯಪಟ್ಟಿದೆ. ಈ ನಿಟ್ಟಿನಲ್ಲಿ ಸಂಸತ್ ಮಕ್ಕಳೆಲ್ಲರೂ ಸಮಾನರು ಎಂದು ಕಾನೂನು ಜಾರಿಗೊಳಿಸಬೇಕು. ಈ ಮೂಲಕ ವಿವಾಹೇತರ ಸಂಬಂಧದ ಮಕ್ಕಳಿಗೂ ನ್ಯಾಯ ಕೊಡಿಸಲು ಮುಂದಾಗಬೇಕು ಎಂದಿದೆ.

ಪ್ರಕರಣದ ಹಿನ್ನಲೆ:

ಬೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದ ರಾಮನಗರದ ವ್ಯಕ್ತಿ 2014ರಲ್ಲಿ ಸಾವನ್ನಪ್ಪಿದ್ದರು. ಅವರ ಎರಡನೇ ಪತ್ನಿ ಮಗ ಅನುಕಂಪದ ಆಧಾರದಲ್ಲಿ ಉದ್ಯೋಗಕ್ಕೆ ಅರ್ಜಿ ಹಾಕಿದ್ದರು. ಆದರೆ ಪುತ್ರನ ಈ ಅರ್ಜಿಯನ್ನು ಬೆಸ್ಕಾಂ 2015ರಲ್ಲಿ ತಿರಸ್ಕರಿಸಿತ್ತು. ತನ್ನ ತಿರಸ್ಕಾರಕ್ಕೆ ಬೆಸ್ಕಾಂ ಬಲವಾದ ಸಮರ್ಥನೆ ಕೊಟ್ಟಿತ್ತು.

ಈ ಬಗ್ಗೆ 2011ರಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಸುತ್ತೋಲೆ ಹೊರಡಿಸಿ ಎರಡನೇ ಪತ್ನಿ ಮಕ್ಕಳು ಅನುಕಂಪದ ನೌಕರಿ ಪಡೆಯಲು ಅರ್ಹರಲ್ಲ ಎಂದು ಹೇಳಿತ್ತು. ಮೊದಲ ಪತ್ನಿ ಬದುಕಿದ್ದಾಗಲೇ ಎರಡನೇ ಮದುವೆ ಆದ್ರೆ ಆ ಮದುವೆ ಅನೂರ್ಜಿತ. ಇಂತಹ ಅನಧಿಕೃತ ಪತ್ನಿಯ ಮಕ್ಕಳೂ ಅನಧಿಕೃತ. ಇಂತಹ ಅನುಕಂಪದ ಉದ್ಯೋಗ ನೀಡಲು ಸಾಧ್ಯವಿಲ್ಲ ಎಂದಿತ್ತು.

ಈ ಬೆಸ್ಕಾಂ ನಿರ್ಣಯ ಹಾಗೂ ಕೆಪಿಟಿಸಿಎಲ್ ನ ಸುತ್ತೋಲೆ ಪ್ರಶ್ನಿಸಿ‌ ಅರ್ಜಿ ಸಲ್ಲಿಸಲಾಗಿತ್ತು. ಮೊದಲು ಎರಡನೇ ಪತ್ನಿ ಮಗನ ಅರ್ಜಿಯನ್ನ ಹೈಕೋರ್ಟ್ ಏಕಸದಸ್ಯ ಪೀಠ ತಿರಸ್ಕರಿಸಿತ್ತು. ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಅರ್ಜಿ ಹಾಕಲಾಗಿತ್ತು. ಆ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾ. ಬಿ.ವಿ ನಾಗರತ್ನ ನೇತೃತ್ವದ ವಿಭಾಗೀಯ ಪೀಠ ಅರ್ಜಿದಾರರ ಮನವಿಯನ್ನು ಪರಿಗಣಿಸಲು ಕೆಪಿಟಿಸಿಎಲ್ ಗೆ ನಿರ್ದೇಶನ ನೀಡಿದ್ದಾರೆ.

The post “ಅಪ್ಪ-ಅಮ್ಮನ ಸಂಬಂಧ ಅನಧಿಕೃತ ಆದ್ರೂ.. ಅವರ ಮಗು ಅಧಿಕೃತ”- ಏನಿದು ಹೈಕೋರ್ಟ್ ತೀರ್ಪು..? appeared first on News First Kannada.

Source: newsfirstlive.com

Source link