ಸಾಲ ತೀರಿಸಲು ಕಿಡ್ನಿ ಮಾರಲು ಮುಂದಾದ ದಂಪತಿ; ₹40 ಲಕ್ಷ ಪಂಗನಾಮ ಹಾಕಿದ ಸೈಬರ್ ಖದೀಮ

ಸಾಲ ತೀರಿಸಲು ಕಿಡ್ನಿ ಮಾರಲು ಮುಂದಾದ ದಂಪತಿ; ₹40 ಲಕ್ಷ ಪಂಗನಾಮ ಹಾಕಿದ ಸೈಬರ್ ಖದೀಮ

ಹೈದರಾಬಾದ್: ದಂಪತಿಗಳಿಬ್ಬರು ತಮ್ಮ ಸಾಲ ತೀರಿಸಲು ಹಣವಿಲ್ಲದೇ ಕಿಡ್ನಿ ಮಾರಲು ಮುಂದಾಗಿ ಇದೀಗ ₹40 ಲಕ್ಷ ಕಳೆದುಕೊಂಡು ಕಣ್ಣೀರಿಡುವಂತಾಗಿದೆ. ಎಂ. ವೆಂಕಟೇಶ್ ಹಾಗೂ ಪತ್ನಿ ಲಾವಣ್ಯ ಹಣ ಕಳೆದುಕೊಂಡವರು.

ಸ್ಟೇಷನರಿ ಅಂಗಡಿಯೊಂದನ್ನ ಇಟ್ಟುಕೊಂಡಿದ್ದ ಈ ದಂಪತಿ ಬ್ಯುಸಿನೆಸ್ ಹಾಗೂ ಮನೆ ನಿರ್ಮಾಣಕ್ಕಾಗಿ ಸಾಲ ತೆಗೆದುಕೊಂಡಿದ್ದರಂತೆ. ಲಾಕ್​ಡೌನ್​ ಇದ್ದಿದ್ದರಿಂದ ಈ ದಂಪತಿಗೆ ಯಾವುದೇ ಆದಾಯ ಬರುತ್ತಿರಲಿಲ್ಲವಂತೆ.. ಹೀಗಾಗಿ ₹1. 5 ಕೋಟಿ ಸಾಲ ಮಾಡಿ ಮನೆ 4 ಅಂತಸ್ತಿನ ಕಟ್ಟಡ ನಿರ್ಮಿಸಿದ್ದರು. ಈ ಸಾಲ ತೀರಿಸಲು ಬೇರೆ ದಾರಿ ಸಿಗದೇ ದಂಪತಿ ಕಿಡ್ನಿ ಮಾರಲು ಮುಂದಾಗಿದ್ದಾರೆ. ಕಿಡ್ನಿ ಮಾರಾಟಕ್ಕಾಗಿ ಇಂಟರ್ನೆಟ್​​ ಮೊರೆ ಹೋಗಿದ್ದಾರೆ.

ಮಾರ್ಚ್ ತಿಂಗಳಲ್ಲಿ ಈ ದಂಪತಿಗೆ ಇಂಟರ್ನೆಟ್​​ನಲ್ಲಿ ವ್ಯಕ್ತಿಯೋರ್ವನ ನಂಬರ್ ಸಿಕ್ಕಿದೆ. ಆತ ತಾನು ಯುಕೆನಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿರೋದಾಗಿ ಹೇಳಿಕೊಂಡಿದ್ದಾನೆ. ಅಲ್ಲದೇ ಕಿಡ್ನಿಗೆ ₹5 ಕೋಟಿ ಕೊಟ್ಟು ಖರೀದಿಸುವುದಾಗಿ ದಂಪತಿಗೆ ನಂಬಿಸಿದ್ದಾನೆ.
ಈ ವೇಳೆ ಕಿಡ್ನಿ ಖರೀದಿಸುತ್ತೇನೆ ಎಂದವನು ನೋಂದಾವಣಿ, ನಿರ್ವಹಣಾ ವೆಚ್ಛ, ಕರೆನ್ಸಿ ಎಕ್ಸ್​ಚೇಂಜ್ ಅಂತೆಲ್ಲಾ ಕಥೆ ಕಟ್ಟಿ ದಂಪತಿಯಿಂದ ಮೊದಲಿಗೆ ₹26 ಲಕ್ಷ ಹಣ ಜಮೆ ಮಾಡಿಸಿಕೊಂಡಿದ್ದಾನೆ. ಇದಕ್ಕಾಗಿ ಆತ ಆರ್​ಬಿಐನ ಲೋಗೋ ಇದ್ದ ವೆಬ್​ಪೇಜ್​ ಲಿಂಕ್ ಕಳುಹಿಸಿ ಯಾಮಾರಿಸಿದ್ದಾನೆ. ಅಲ್ಲದೇ ಬೆಂಗಳೂರಿನ ಲಾಡ್ಜ್​ ಒಂದರಲ್ಲಿ ನಿಮ್ಮನ್ನ ಭೇಟಿಯಾಗುತ್ತೇನೆ ಎಂದು ನಂಬಿಸಿದ್ದಾನೆ.

ಕೊನೆಗೆ ಬೆಂಗಳೂರಿನ ಲಾಡ್ಜ್​ ಒಂದರಲ್ಲಿ ದಂಪತಿಯನ್ನ ಭೇಟಿಯಾದ ಆಫ್ರಿಕಾದ ಪ್ರಜೆಯೋರ್ವ ಅವರಿಗೆ ಸೂಟ್​​ಕೇಸ್​​ನಲ್ಲಿ ಕಪ್ಪು ನೋಟುಗಳನ್ನ ತಂದಿರುವುದನ್ನ ತೋರಿಸಿದ್ದಾನೆ. ಈ ಕಪ್ಪು ನೋಟಿಗೆ ಯಾವುದೋ ಕೆಮಿಕಲ್ ಮಿಕ್ಸ್ ಮಾಡಿ ಅದು 2 ಸಾವಿರ ರೂಪಾಯಿಯ ನೋಟಾಗಿ ಪರಿವರ್ತನೆಯಾಗುತ್ತದೆ ಎಂದಿದ್ದಾನೆ. ಇದನ್ನ ನಂಬಿದ ದಂಪತಿಗೆ ಕಪ್ಪು ನೋಟುಗಳನ್ನ ಕೊಟ್ಟು ನಿಮಗೆ ಇದಕ್ಕೆ ಬೇಕಿರೋ ಕೆಮಿಕಲ್ ಕಳಿಸುತ್ತೇನೆಂದು ಹೇಳಿ ಮತ್ತೆ ₹14 ಲಕ್ಷ ಹಣವನ್ನ ದಂಪತಿಯಿಂದ ಟ್ರಾನ್ಸ್​​ಫರ್ ಮಾಡಿಸಿಕೊಂಡಿದ್ದಾನೆ. ಹೀಗೆ ಬರೋಬ್ಬರಿ 40 ಲಕ್ಷ ಹಣ ಕಳೆದುಕೊಂಡು ಮೋಸ ಹೋದ ದಂಪತಿ ಸದ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

The post ಸಾಲ ತೀರಿಸಲು ಕಿಡ್ನಿ ಮಾರಲು ಮುಂದಾದ ದಂಪತಿ; ₹40 ಲಕ್ಷ ಪಂಗನಾಮ ಹಾಕಿದ ಸೈಬರ್ ಖದೀಮ appeared first on News First Kannada.

Source: newsfirstlive.com

Source link