ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆ – ರಸ್ತೆ, ಭೂ ಕುಸಿತ, ಆತಂಕದಲ್ಲಿ ಮಲೆನಾಡಿಗರು

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣದೇವ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಕಳೆದ ರಾತ್ರಿ ಭಾರೀ ಮಳೆಯಾಗಿದ್ದ ಮಲೆನಾಡಲ್ಲಿ ಇಂದು ಹಗಲಲ್ಲಿ ಸ್ವಲ್ಪ ಬಿಡುವು ನೀಡಿದ್ದಾನೆ. ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಮಲೆನಾಡಿನಾದ್ಯಂತ ಇಂದು ಅಲ್ಲಲ್ಲೇ ಸಣ್ಣ-ಪುಟ್ಟ ಅನಾಹುತ, ಅವಘಡಗಳು ಸಂಭವಿಸಿವೆ.

ಭಾರೀ ಮಳೆಯಿಂದ ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ಸಮೀಪದ ಹೊನ್ನಾಳ ಚೆಕ್‍ಪೋಸ್ಟ್ ಬಳಿ ರಸ್ತೆ ಬಿರುಕು ಬಿಟ್ಟಿದ್ದು, ರಸ್ತೆ ಬದಿಯ ಮಣ್ಣು ಕುಸಿದು ಬಿದ್ದಿದೆ. ಹಾಗಾಗಿ, ಈ ಮಾರ್ಗದಲ್ಲಿ ಸಂಚರಿಸುವ ಹತ್ತಾರು ಹಳ್ಳಿಯ ಜನ ಆತಂಕಕ್ಕೀಡಾಗಿದ್ದಾರೆ. ಇಲ್ಲಿನ ಜನಕ್ಕೆ ಈ ಮಾರ್ಗ ಹೊರತುಪಡಿಸಿ ಬೇರ್ಯಾವುದೇ ಮಾರ್ಗವಿಲ್ಲ. ಇಲ್ಲಿನ ಹತ್ತಾರು ಹಳ್ಳಿಯ ಜನ ಪ್ರತಿಯೊಂದಕ್ಕೂ ಚಿಕ್ಕಮಗಳೂರು ನಗರವನ್ನೇ ಆಶ್ರಯಿಸಿದ್ದಾರೆ. ಹಾಗಾಗಿ, ಇಲ್ಲಿನ ಜನ ಈ ಭಾಗದಲ್ಲಿ ಭಾರೀ ವಾಹನಗಳಿಗೆ ನಿಷೇಧ ಹೇರುವಂತೆ ಆಗ್ರಹಿಸಿದ್ದಾರೆ.

ಕಳಸ ತಾಲೂಕಿನ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಕಳಸ-ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆ ಕೂಡ ಮುಳುಗುವ ಹಂತ ತಲುಪಿದೆ. ಹೆಬ್ಬಾಳೆ ಸೇತುವೆ ಮುಳುಗಡೆಗೆ ಮೂರ್ನಾಲ್ಕು ಅಡಿಯಷ್ಟೆ ಬಾಕಿ ಇದೆ. ಇದೇ ವೇಳೆ, ಮೂಡಿಗೆರೆ ತಾಲೂಕಿನ ಬೊಮ್ಮನಗದ್ದೆ ಎಂಬ ಗ್ರಾಮದಲ್ಲಿ ಮನೆ ಮೇಲೆ ಮರ ಬಿದ್ದು ಮನೆಯ ಮೇಲ್ಛಾವಣಿಗೆ ಕುಸಿದು ಬಿದ್ದಿದೆ. ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ ಮನೆ ದುರಸ್ಥಿಗೊಳಿಸಿದೆ. ಇದನ್ನೂ ಓದಿ: ಕುಂದಾಪುರದಲ್ಲಿ ಭಾರೀ ಮಳೆ- ಮರ ಬಿದ್ದು ದಂಪತಿ ಆಸ್ಪತ್ರೆಗೆ ದಾಖಲು

blank

ಕೊಪ್ಪ ತಾಲೂಕಿನ ಅಬ್ಬಿಕಲ್ಲು ಹಾಗೂ ಮಲ್ಲಿಗೆ ಗ್ರಾಮದಲ್ಲೂ ಧರೆ ಕುಸಿದು ರಸ್ತೆಬದಿಯ ಮರಗಳು ಧರೆಗುರುಳಿವೆ. ಅತ್ತಿಕೂಡಿಗೆ ಗ್ರಾಮದಿಂದ ಹೊರನಾಡು, ಶೃಂಗೇರಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಕೂಡ ಬಂದ್ ಆಗಿದೆ. ಮಲೆನಾಡಲ್ಲಿ ಕಳೆದ ರಾತ್ರಿಯಿಂದ ಸುರಿದ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಲೆನಾಡ ಕೆಲ ಗ್ರಾಮಗಳು ಕತ್ತಲಲ್ಲಿ ಬದುಕುವಂತಾಗಿದೆ. ಜಿಲ್ಲಾದ್ಯಂತ ಸುರಿಯುತ್ತಿರೋ ಭಾರೀ ಮಳೆಯಿಂದಾಗಿ ತುಂಗಾ-ಭದ್ರಾ, ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ಇದನ್ನೂ ಓದಿ: ಮಡಿಕೇರಿ ಮಂಗಳೂರು ರಸ್ತೆ ಬದಿಯಲ್ಲಿ ಭೂಕುಸಿತ – ಆರು ಕುಟುಂಬಗಳ ಸ್ಥಳಾಂತರಕ್ಕೆ ಸೂಚನೆ

The post ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಮಳೆ – ರಸ್ತೆ, ಭೂ ಕುಸಿತ, ಆತಂಕದಲ್ಲಿ ಮಲೆನಾಡಿಗರು appeared first on Public TV.

Source: publictv.in

Source link