ಗೋಕರ್ಣದಲ್ಲಿ ಮಹಾಬಲೇಶ್ವರನಿಗೆ ಸ್ಪರ್ಶಿಸಿದ ಗಂಗೆ- ಒಂದೇ ವರ್ಷದಲ್ಲಿ ಎರಡನೇ ಬಾರಿ ಗರ್ಭಗುಡಿಗೆ ನೀರು

ಕಾರವಾರ: ಅಬ್ಬರದ ಮಳೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಪ್ರಸಿದ್ಧ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ನೀರು ತುಂಬುವ ಮೂಲಕ ಅಂತರ ಗಂಗೆಯು ಆತ್ಮಲಿಂಗ ಸ್ಪರ್ಷ ಮಾಡಿದ್ದಾಳೆ.

ಇಂದು ಏಕಾ ಏಕಿ ಗರ್ಭಗುಡಿ ಕೆಳಭಾಗದಿಂದ ಜಲ ಒಡೆಯುವ ಮೂಲಕ ಗರ್ಭಗುಡಿಯ ತುಂಬ ನೀರು ತುಂಬಿಕೊಂಡಿದೆ. ದೇವಸ್ಥಾನದ ಗರ್ಭಗುಡಿಯಲ್ಲಿ ಅಭಿಷೇಕ ಮಾಡಿದ ನೀರು ಹೋಗುವ ಸೋಮಸೂತ್ರ ನಾಲಾದ ಭಾಗದಿಂದ ನೀರು ಬರುತ್ತಿದ್ದು, ಸಾತ್ವಿಕರನ್ನು ಪುಳಕ ಗೊಳಿಸಿದೆ. ಈ ವಿಷಯ ತಿಳಿದ ಆಡಳಿತ ಮಂಡಳಿ ದೇವರ ಪೂಜಾ ಕಾರ್ಯಕ್ಕೆ ತೊಂದರೆಯಾಗುವ ನಿಟ್ಟಿನಲ್ಲಿ ನೀರನ್ನು ತೆಗೆಸಿ ಸ್ವಚ್ಛಗೊಳಿಸಿದರು.

ಇತಿಹಾಸದಲ್ಲೇ ಇದು ಎರಡನೇ ಬಾರಿ:
ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಗೋಕರ್ಣ ಮಹಾಬಲೇಷ್ವರನ ಗರ್ಭಗುಡಿಯಲ್ಲಿ ನೀರು ತುಂಬಿದ ದಾಖಲೆಗಳಿಲ್ಲ. ಆದರೇ ಇದೇ ವರ್ಷದಲ್ಲಿ ಇದು ಎರಡನೇ ಬಾರಿ ಈ ರೀತಿ ಗರ್ಭಗುಡಿಯಲ್ಲಿ ನೀರು ತುಂಬಿದೆ.

ನೀರು ತುಂಬಲು ಕಾರಣ ಏನು?
ಪ್ರತಿ ಬಾರಿ ದೇವಸ್ಥಾನದ ಗರ್ಭಗುಡಿ ಭಾಗದಲ್ಲಿ ದೇವರಿಗೆ ಅಭಿಷೇಕ ಮಾಡಿದ ನೀರು ಹೋಗಲು ಸ್ಥಳಾವಕಾಶ ಮಾಡಿಕೊಡಲಾಗಿದೆ. ಈ ನೀರು ಪಕ್ಕದಲ್ಲೇ ಇರುವ ಸೋಮಸೂತ್ರ ನಾಲದ ಮೂಲಕ ಸಮುದ್ರಕ್ಕೆ ಹೋಗುತ್ತದೆ. ಪ್ರತಿ ವರ್ಷ ನೀರು ಹೋಗಲು ಗ್ರಾಮಪಂಚಾಯ್ತಿ ವತಿಯಿಂದ ನಾಲಾದಲ್ಲಿ ಸ್ವಚ್ಛ ಕಾರ್ಯ ಮಾಡಲಾಗುತ್ತದೆ. ಈ ಬಾರಿ ಗ್ರಾಮ ಪಂಚಾಯ್ತಿಯಿಂದ ಈ ಕೆಲಸವಾಗಿಲ್ಲ. ಇದನ್ನೂ ಓದಿ: ಗೋಕರ್ಣದಲ್ಲಿ ವಿದ್ಯುಕ್ತವಾಗಿ ನೆರವೇರಿತು ಶಿವಗಂಗಾ ವಿವಾಹ ಮಹೋತ್ಸವ

ಗರ್ಭಗುಡಿಯ ನೀರು ಹೋಗುವ ಭಾಗದ ಸ್ಥಳವನ್ನು ಕೂಡ ಬಂದ್ ಮಾಡಲಾಗಿದ್ದು, ಜಲವಡೆದಾಗ ನೀರು ನಾಲದಲ್ಲಿ ಹೋಗದೇ ಹಿಮ್ಮುಖವಾಗಿ ಚಲಿಸಿ ಗರ್ಭಗುಡಿಗೆ ಬರುತ್ತಿದೆ ಎಂಬುದು ಸ್ಥಳೀಯರ ದೂರು. ಇನ್ನು ಗರ್ಭಗುಡಿಯಲ್ಲಿ ತುಂಬಿದ ನೀರಿನೊಂದಿಗೆ ಕಲ್ಮಶ ನೀರು ಸಹ ಸೇರಿ ದೇವರ ಗರ್ಭಗುಡಿ ಆವರಿಸಿದೆ. ಹೀಗಾಗಿ ಸ್ಥಳೀಯರು ಇದು ಮುಂದಿನ ಕೆಡುಕಿನ ಸಂಕೇತ ಎಂದು ಮಾತನಾಡಿಕೊಳ್ಳುತಿದ್ದಾರೆ. ಸದ್ಯ ಗರ್ಭಗುಡಿಯಲ್ಲಿ ತುಂಬಿದ ನೀರನ್ನು ಆಡಳಿತ ಮಂಡಳಿ ಸ್ವಚ್ಛಗೊಳಿಸಿದೆ. ಇದನ್ನೂ ಓದಿ: ಗೋಕರ್ಣ ಭಕ್ತರಿಂದ ದಕ್ಷಿಣೆ ಸ್ವೀಕಾರ ವಿವಾದ- ರಾಮಚಂದ್ರಾಪುರ ಮಠಕ್ಕೆ ಮಹತ್ವದ ಗೆಲುವು

The post ಗೋಕರ್ಣದಲ್ಲಿ ಮಹಾಬಲೇಶ್ವರನಿಗೆ ಸ್ಪರ್ಶಿಸಿದ ಗಂಗೆ- ಒಂದೇ ವರ್ಷದಲ್ಲಿ ಎರಡನೇ ಬಾರಿ ಗರ್ಭಗುಡಿಗೆ ನೀರು appeared first on Public TV.

Source: publictv.in

Source link