ಯಡಿಯೂರಪ್ಪ ಬದಲಾವಣೆ ಬಗ್ಗೆ ನಾನು ಮಾತನಾಡಲ್ಲ: ಹೆಚ್.ಡಿ.ದೇವೇಗೌಡ

– ಬಿಜೆಪಿ ಪಾರ್ಟಿ ನಿರ್ಣಯಕ್ಕೂ ನನಗೂ ಸಂಬಂಧ ಇಲ್ಲ

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬದಲಾವಣೆ ವಿಚಾರ ಸಂಬಂಧ ನಾನೇನು ಮಾತನಾಡುವುದಿಲ್ಲ. ಬಿಜೆಪಿ ಪಾರ್ಟಿ ನಿರ್ಣಯಕ್ಕೂ ನನಗೂ ಸಂಬಂಧ ಇಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಅಲ್ಲೀಪುರ ಗ್ರಾಮಕ್ಕೆ ಆಪ್ತರೊಬ್ಬರ ಮದುವೆ ಕಾರ್ಯಕ್ರಮ ಸಂಬಂಧ ಹೆಲಿಕಾಪ್ಟರ್ ಮೂಲಕ ದೇವೇಗೌಡರು ಆಗಮಿಸಿದ್ದರು. ಈ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಬಗ್ಗೆ ನಾನು ಮಾತನಾಡಲ್ಲ. ಅದರ ಬಗ್ಗೆ ನಾನು ಗಮನ ಹರಿಸಿಲ್ಲ. ಹಾಗಾಗಿ ವ್ಯಾಖ್ಯಾನ ಮಾಡಲ್ಲ ಎಂದು ಪ್ರತಿಕ್ರಿಯಿಸಿದರು. ಇದನ್ನೂ ಓದಿ: ಮೂರು ಬಾರಿ ಒಂದೇ ಹೇಳಿಕೆ – ಹೈಕಮಾಂಡ್‍ಗೆ ಶಾಕ್ ಕೊಟ್ಟ ರಾಜಾಹುಲಿ?

ಬಿಜೆಪಿಯಲ್ಲಿ 75 ವರ್ಷ ವಯಸ್ಸು ಮೀರಿದ ಯಾರಿಗೂ ಜವಾಬ್ದಾರಿ ಸ್ಥಾನ ಕೊಟ್ಟಿಲ್ಲ. ಯಡಿಯೂರಪ್ಪಗೆ ಮಾತ್ರ 3 ವರ್ಷ ಹೆಚ್ಚುವರಿ ಅಧಿಕಾರ ಕೊಟ್ಟಿದ್ದಾರೆ. ಅದು ವಿಶೇಷವಾಗಿ ಹೈಕಮಾಂಡ್ ಯಡಿಯೂರಪ್ಪನವರಿಗೆ ಕೊಟ್ಟಿರುವ ಬೆಂಬಲ. ಸದ್ಯದ ಬೆಳವಣಿಗೆಗಳ ಬಗ್ಗೆ ರಾಜ್ಯದ ಎಲ್ಲಾ ಬಿಜೆಪಿ ಶಾಸಕರು ಮುಖಂಡರು ನಿರ್ಣಯ ಮಾಡುತ್ತಾರೆ. ಆ ನಿರ್ಣಯ ಏನು ಎಂಬುದು ನನಗೆ ಗೊತ್ತಿಲ್ಲ. ಆ ಸಂದೇಶ ಹೊರಬೀಳುವ ಮುನ್ನ ನಾನು ಯಾವ ಅಭಿಪ್ರಾಯವ್ಯಕ್ತಪಡಿಸಲ್ಲ ಎಂದರು.

The post ಯಡಿಯೂರಪ್ಪ ಬದಲಾವಣೆ ಬಗ್ಗೆ ನಾನು ಮಾತನಾಡಲ್ಲ: ಹೆಚ್.ಡಿ.ದೇವೇಗೌಡ appeared first on Public TV.

Source: publictv.in

Source link