ಭುವಿ ದಾಳಿಗೆ ಧೂಳಿಪಟವಾದ ಶ್ರೀಲಂಕಾ – ಭಾರತಕ್ಕೆ 38 ರನ್‍ಗಳ ಜಯ

ಕೊಲಂಬೋ: ಭುವನೇಶ್ವರ್ ಕುಮಾರ್ ದಾಳಿಗೆ ನಲುಗಿದ ಶ್ರೀಲಂಕಾ ತಂಡ ಮೊದಲ ಟಿ20 ಪಂದ್ಯದಲ್ಲಿ ಭಾರತದೆದುರು ಮಂಡಿಯೂರಿದೆ. ಭಾರತ ತಂಡ 38ರನ್‍ಗಳ ಭರ್ಜರಿ ಜಯ ದಾಖಲಿಸಿದೆ.

ಶ್ರೀಲಂಕಾ ತಂಡಕ್ಕೆ ಮಾರಕವಾಗಿ ಎರಗಿದ ಭುವನೇಶ್ವರ್ ಕುಮಾರ್ 3.3 ಓವರ್ ಎಸೆದು 22 ರನ್ ನೀಡಿ 4 ವಿಕೆಟ್ ಕಿತ್ತು ಮಿಂಚಿದರು. ಈ ಮೂಲಕ ಭುವಿ ಭಾರತಕ್ಕೆ 39ರನ್‍ಗಳ ಗೆಲುವು ತಂದು ಕೊಟ್ಟರು.

ಗೆಲ್ಲಲು 165ರನ್‍ಗಳ ಗುರಿ ಪಡೆದ ಶ್ರೀಲಂಕಾ ತಂಡಕ್ಕೆ ಚರಿತ್ ಅಸಲಂಕಾ 44ರನ್(26 ಎಸೆತ, 3 ಬೌಂಡರಿ, 3 ಸಿಕ್ಸ್), ಅವಿಷ್ಕಾ ಫರ್ನಾಂಡೊ 26ರನ್(23 ಎಸೆತ, 3 ಬೌಂಡರಿ), ದಾಸುನ್ ಶಾನಕಾ 16ರನ್(14 ಎಸೆತ, 1 ಸಿಕ್ಸ್) ಮಿನೋಡ್ ಭನುಕಾ 10ರನ್( 7 ಎಸೆತ, 2 ಬೌಂಡರಿ) ಬಾರಿಸಿದ್ದನ್ನು ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‍ಮ್ಯಾನ್ ಕೂಡ ಒಂದಂಕಿ ಮೊತ್ತ ದಾಟಲಿಲ್ಲ. ಅಂತಿಮವಾಗಿ 18.3 ಓವರ್‍ಗಳಲ್ಲಿ 126 ರನ್‍ಗಳಿಗೆ ಶ್ರೀಲಂಕಾ ತಂಡ ಸರ್ವಪತನ ಕಂಡಿತು.

ದೀಪಕ್ ಚಹರ್ 2 ವಿಕೆಟ್ ಕಿತ್ತರೆ, ಯಜುವೇಂದ್ರ ಚಹಲ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಕಿತ್ತರು.

ಪೈಪೋಟಿ ಮೊತ್ತ ಕಲೆಹಾಕಿದ ಭಾರತ
ಟಾಸ್ ಸೋತು ಬ್ಯಾಟಿಂಗ್‍ಗಿಳಿದ ಭಾರತ ತಂಡ ಖಾತೆ ತೆರೆಯುದರೊಳಗಡೆ ಆರಂಭಿಕ ಆಟಗಾರ ಪೃಥ್ವಿ ಶಾ ಅವರನ್ನು ಕಳೆದುಕೊಂಡಿತು. ಶಾ ತನ್ನ ಡೆಬ್ಯೂ ಪಂದ್ಯದಲ್ಲೇ ಶೂನ್ಯ ಸುತ್ತಿದ್ದರು. ಬಳಿಕ ಜೊತೆಯಾದ ಶಿಖರ್ ಧವನ್ ಮತ್ತು ಸಂಜು ಸ್ಯಾಮ್ಸನ್ ಎರಡನೇ ವಿಕೆಟ್ 51ರನ್ (36 ಎಸೆತ)ಗಳ ಜೊತೆಯಾಟವಾಡಿದರು. ಈ ವೇಳೆ ಎಲ್‍ಬಿ ಬಲೆಗೆ ಬಿದ್ದ ಸಂಜು ಸ್ಯಾಮ್ಸನ್ 27 ರನ್(20 ಎಸೆತ, 1 ಸಿಕ್ಸ್) ಸಿಡಿಸಿ, ಡಿ ಸಿಲ್ವಾ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಸೂರ್ಯಕುಮಾರ್ ಯಾದವ್ ಭರ್ಜರಿ ಬ್ಯಾಟ್ ಬೀಸಿದರು. ಧವನ್ ಜೊತೆಗೂಡಿ 3 ವಿಕೆಟ್‍ಗೆ 62(48)ರನ್ ಗಳ ಜೊತೆಯಾಟವಾಡಿ ಈ ಜೋಡಿ ಭಾರತದ ಮೊತ್ತವನ್ನು ನೂರರ ಗಡಿದಾಟಿಸಿತು.

ಇನ್ನೇನೂ ಅರ್ಧಶತಕದ ಹೊಸ್ತಿಲ್ಲಲ್ಲಿ ಎಡವಿದ ಧವನ್ 46ರನ್(36 ಎಸೆತ, 4 ಬೌಂಡರಿ, 1 ಸಿಕ್ಸ್) ಸಿಡಿಸಿ ಔಟ್ ಆದರು. ಇವರ ಹಿಂದೆಯೇ ಅರ್ಧಶತಕ ಸಿಡಿಸಿ ಉತ್ತಮವಾಗಿ ಆಡುತ್ತಿದ್ದ ಸೂರ್ಯಕುಮಾರ್ ಯಾದವ್ 50 ರನ್(34 ಎಸೆತ, 5 ಬೌಂಡರಿ, 2 ಸಿಕ್ಸ್) ಬಾರಿಸಿ ವಿಕೆಟ್ ಕಳೆದುಕೊಂಡರು. ಕಡೆಯಲ್ಲಿ ಇಶಾನ್ ಕಿಶಾನ್ ಅಜೇಯ 20 ರನ್(14 ಎಸೆತ, 1 ಬೌಂಡರಿ, 1 ಸಿಕ್ಸ್) ಚಚ್ಚಿ ಭಾರತದ ಮೊತ್ತವನ್ನು 160ರ ಗಡಿ ದಾಟಿಸಿದರು. ಅಂತಿಮವಾಗಿ ಭಾರತ ತಂಡ ನಿಗದಿತ 20 ಓವರ್‍ಗಳಲ್ಲಿ 5 ವಿಕೆಟ್ ಕಳೆದುಕೊಂಡು 164ರನ್ ಗಳಿಸಿತು.

ಶ್ರೀಲಂಕಾ ಪರ ದುಷ್ಮಂತ ಚಮೀರ ಮತ್ತು ವಾನಿಂದು ಹಸರಂಗ ತಲಾ 2 ವಿಕೆಟ್ ಕಿತ್ತು ಮಿಂಚಿದರು. ಚಮಿಕಾ ಕರುಣರತ್ನ 1 ವಿಕೆಟ್ ಪಡೆದರು.

The post ಭುವಿ ದಾಳಿಗೆ ಧೂಳಿಪಟವಾದ ಶ್ರೀಲಂಕಾ – ಭಾರತಕ್ಕೆ 38 ರನ್‍ಗಳ ಜಯ appeared first on Public TV.

Source: publictv.in

Source link