ಅಭಿನಯ ಶಾರದೆ, ಹಿರಿಯ ನಟಿ ಜಯಂತಿ ವಿಧಿವಶ

ಬೆಂಗಳೂರು: ಸ್ಯಾಂಡಲ್‍ವುಡ್‍ನ ಹಿರಿಯ ನಟಿ ಜಯಂತಿ(76) ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಅಭಿನಯ ಶಾರದೆ ಎಂದೇ ಕರೆಯಲ್ಪಡುವ ಜಯಂತಿ ದಕ್ಷಿಣ ಭಾರತ ಚಿತ್ರರಂಗದ ಮೇರು ನಟಿ ಆಗಿದ್ದರು. ಕನ್ನಡ, ತೆಲಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳೆಲ್ಲ ಸೇರಿ ಸುಮಾರು 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

1950 ರಲ್ಲಿ ಕರ್ನಾಟಕದ ಬಳ್ಳಾರಿಯಲ್ಲಿ ಜನಿಸಿದ ಜಯಂತಿ ಅವರ ಮೂಲ ಹೆಸರು ಕಮಲಾ ಕುಮಾರಿ. ತಂದೆ ಬಾಲಸುಬ್ರಹ್ಮಣ್ಯಂ ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಪಕರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ತಾಯಿ ಸಂತಾನಲಕ್ಷ್ಮೀ ಗೃಹಿಣಿ. ಮನೆಯಲ್ಲಿ ಹಿರಿಯ ಪುತ್ರಿಯಾಗಿ ಜನಿಸಿದ ಜಯಂತಿಗೆ ಇಬ್ಬರು ಕಿರಿಯ ಸಹೋದರರಿದ್ದಾರೆ. ಇವರ ತಂದೆ- ತಾಯಿಗಳು ವಿಚ್ಚೇದನ ಪಡೆದ ಕಾರಣ ಜಯಂತಿ ತಮ್ಮ ತಾಯಿಯ ಜೊತೆ ಮದ್ರಾಸ್‍ನಲ್ಲಿ ಬೆಳೆದರು.

ಜಯಂತಿಯ ತಾಯಿಯವರಿಗೆ ಇವರನ್ನು ಶಾಸ್ತ್ರೀಯ ನೃತ್ಯಗಾರ್ತಿಯನ್ನಾಗಿ ಮಾಡಬೇಕೆಂಬ ಬಯಕೆ ಇದ್ದುದ್ದರಿಂದ ಚಂದ್ರಕಲಾರವರ ನೃತ್ಯಶಾಲೆಗೆ ಸೇರಿಸಿದರು. ಇಲ್ಲಿ ಜಯಂತಿಯವರ ಸಹಪಾಠಿಯಾಗಿದ್ದ ಮನೋರಮಾರವರು ಮುಂದೆ ಪ್ರಖ್ಯಾತ ತಮಿಳು ನಟಿಯಾದರು. ಕನ್ನಡ ನಿರ್ದೇಶಕ ವೈ.ಆರ್.ಪುಟ್ಟಸ್ವಾಮಿಯವರು ಒಂದು ನೃತ್ಯಾಭ್ಯಾಸದಲ್ಲಿ ಜಯಂತಿಯವರನ್ನು ನೋಡಿ ತಮ್ಮ `ಜೇನು ಗೂಡು’ ಚಿತ್ರದಲ್ಲಿ ನಟಿಸುವ ಅವಕಾಶ ಕೊಟ್ಟರು. ಇಲ್ಲಿಂದ ಜಯಂತಿಯವರ ಅದೃಷ್ಟವೇ ಬದಲಾಯಿತು. ಕಮಲಾ ಕುಮಾರಿಗೆ ಜಯಂತಿ ಎಂದು ನಾಮಕರಣ ಮಾಡಿದ್ದು ಪುಟ್ಟಸ್ವಾಮಿಯವರೇ. ಕನ್ನಡದಲ್ಲಿ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ ಇವರು ಡಾ.ರಾಜ್ ಕುಮಾರ್ ಅವರ ಜೊತೆ 45 ಚಿತ್ರಗಳಲ್ಲಿ ನಟಿಸಿದ್ದಾರೆ.

The post ಅಭಿನಯ ಶಾರದೆ, ಹಿರಿಯ ನಟಿ ಜಯಂತಿ ವಿಧಿವಶ appeared first on Public TV.

Source: publictv.in

Source link