ವೈದ್ಯರು ಬದಕುವುದು ಕಷ್ಟ ಎಂದಿದ್ದರೂ ಅಭಿಮಾನಿಗಳ ಹಾರೈಕೆಯಿಂದ ಗುಣವಾಗಿದ್ರು – ಮಗ ಕೃಷ್ಣಕುಮಾರ್

– ಅಭಿಮಾನಿಗಳೇ ನಮ್ಮ ಕುಟುಂಬ
– ತಾಯಿಯ ಕೊನೆ ದಿನಗಳನ್ನು ಹೇಳಿಕೊಂಡ ಪುತ್ರ

ಬೆಂಗಳೂರು: ಕನ್ನಡದ ಹಿರಿಯ ನಟಿ ಜಯಂತಿ ಅವರು ಇಂದು ನಿಧನರಾಗಿದ್ದು, ಈ ಕುರಿತು ಅವರ ಮಗ ಕೃಷ್ಣ ಕುಮಾರ್ ತಾಯಿಯ ಕೊನೆ ದಿನಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಪುತ್ರ ಹೇಳಿದ್ದು ಏನು?
ಬೆಳಗಿನ ಜಾವ ಸುಮಾರು 3-4 ಗಂಟೆಗೆ ಅವರು ನಿಧನರಾಗಿದ್ದಾರೆ. ನಾವು ಅವರನ್ನು 1 ಗಂಟೆಗೊಮ್ಮೆ ನೋಡಿಕೊಂಡು ಬರುತ್ತಿದ್ದೆವು. ಏಕೆಂದರೆ ಅವರಿಗೆ ರಾತ್ರಿ ಕಾಫಿ ಕುಡಿಯುವ ಅಭ್ಯಾಸ ಕೂಡ ಇತ್ತು. ಅದಕ್ಕೆ ಇವತ್ತು ಅದೇ ರೀತಿ ಅವರನ್ನು ನೋಡಲು ಹೋದಾಗ ಅವರು ಮಲಗಿದ್ದಾಗಲೇ ಸಾವನ್ನಪ್ಪಿರುವುದು ಗೊತ್ತಾಗಿದೆ.

ಈ ಸಮಯದಲ್ಲಿ ನಾನು ಊರಿನಲ್ಲಿ ಇರಲಿಲ್ಲ. ಸುದ್ದಿ ತಿಳಿದ ಕೂಡಲೇ ನಾನು ಇಲ್ಲಿಗೆ ಬಂದಿದ್ದೇನೆ. ಅವರು ಕಾಯಿಲೆಯಿಂದ ಏನು ಬಳಲುತ್ತಿರಲಿಲ್ಲ. ಕಳೆದ ವರ್ಷ ನಿಮಗೆಲ್ಲ ತಿಳಿದಿರುವಂತೆ 40 ದಿನ ಆಸ್ಪತ್ರೆಯಲ್ಲಿದ್ದರು. ಅದು ಅವರಿಗೆ ತುಂಬಾ ಕಷ್ಟದ ದಿನಗಳು. ಡಾಕ್ಟರ್‍ಗಳು ಕೂಡ ಅವರು ಬದುಕುವುದು ಕಷ್ಟ ಎಂದಿದ್ದರು. ಅದರೂ ಸಹ ಅವರ ಸುಧಾರಿಸಿಕೊಂಡು ಮನೆಗೆ ಬಂದಿದ್ದರು.

ಡಾಕ್ಟರ್‍ಗಳು ಅವರು ಜೀವನಪೂರ್ತಿ ಆಕ್ಸಿಜನ್ ನೇರವಿನಿಂದಲೇ ಉಸಿರಾಡಬೇಕು ಎಂದಿದ್ದರು. ಆದರೆ ಅವರು 1 ತಿಂಗಳಲ್ಲೇ ಸಹಜವಾಗಿಯೇ ಉಸಿರು ತೆಗೆದುಕೊಳ್ಳುತ್ತಿದ್ದರು. ಅವರು 3-4 ವರ್ಷದಿಂದ ಆರೋಗ್ಯ ವಿಚಾರವಾಗಿ ತುಂಬಾ ಕಷ್ಟಪಡುತ್ತಿದ್ದರು. ಆದರೆ ಕೊನೆಗೆ ಇಂದು ಕೊನೆಯುಸಿರೆಳೆದಿದ್ದಾರೆ.

ಒಂದು ಖುಷಿ ವಿಚಾರವೆಂದರೆ ಅವರು ಹೆಚ್ಚು ಕಷ್ಟ ಪಡಲಿಲ್ಲ. ಮನೆಯಲ್ಲೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಅವರು ನರಳಾಡಿ ಸಾವನ್ನಪ್ಪಿಲ್ಲವೆಂಬುವುದೇ ಒಂದು ಸಮಾಧಾನದ ವಿಚಾರ. ಪ್ರತಿಬಾರಿ ಆಸ್ಪತ್ರೆಗೆ ದಾಖಲಾಗಿದ್ದರೂ ಬರೀ ರಕ್ತ ಸಂಬಂಧಿಗಳಿಂದ ಮಾತ್ರವಲ್ಲ ಅಭಿಮಾನಿಗಳ ಮತ್ತು ಚಿತ್ರರಂಗದವರ ಹಾರೈಕೆಯಿಂದಲೇ ಅವರು ಚೇತರಿಸಿಕೊಂಡು ಮತ್ತೆ ಮನೆಗೆ ಬರುತ್ತಿದ್ದರು. ಆ ನಮ್ಮ ಕುಟುಂಬಕ್ಕೆ ನಾನು ಧನ್ಯವಾದವನ್ನು ತಿಳಿಸುತ್ತೇನೆ.

ಅಭಿಮಾನಿಗಳಿಗೆ ಅವರ ಅಂತಿಮ ದರ್ಶನ ಪಡೆಯಲು ಅವಕಾಶವಿದೆಯಾ ಎಂಬುದಕ್ಕೆ ಉತ್ತರಿಸಿದ ಅವರು, ಅಂತಿಮ ಸಂಸ್ಕಾರದ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಅದನ್ನು ತಾರಾ ಮತ್ತೆ ಗಿರಿಜಮ್ಮ ಅವರು ನೋಡುತ್ತಾರೆ. ದರ್ಶನಕ್ಕೆ ಏರ್ಪಡು ಮಾಡಬೇಕು ಎಂದುಕೊಂಡಿದ್ದೇವೆ. ಆದರೆ ಈ ಕೊರೊನಾ ಸಮಯದಲ್ಲಿ ಅದು ಎಷ್ಟು ಸೂಕ್ತ ಎಂಬುದು ನಮಗೆ ತಿಳಿಯುತ್ತಿಲ್ಲ. ಇನ್ನೂ ಅದನ್ನು ಚರ್ಚೆ ಮಾಡಿ ತಿಳಿಸುತ್ತೇವೆ. ಏಕೆಂದರೆ ಯಾರಿಗೂ ಯಾವ ರೀತಿಯ ತೊಂದರೆಯಾಗಬಾರದು ಎಂದರು.

The post ವೈದ್ಯರು ಬದಕುವುದು ಕಷ್ಟ ಎಂದಿದ್ದರೂ ಅಭಿಮಾನಿಗಳ ಹಾರೈಕೆಯಿಂದ ಗುಣವಾಗಿದ್ರು – ಮಗ ಕೃಷ್ಣಕುಮಾರ್ appeared first on Public TV.

Source: publictv.in

Source link