ತುಂಬಿ ಹರಿಯುತ್ತಿರುವ ಸಾವೆಹಕ್ಲು ಜಲಾಶಯ ನೋಡಲು ಪ್ರವಾಸಿಗರ ದಂಡು

ತುಂಬಿ ಹರಿಯುತ್ತಿರುವ ಸಾವೆಹಕ್ಲು ಜಲಾಶಯ ನೋಡಲು ಪ್ರವಾಸಿಗರ ದಂಡು

ಶಿವಮೊಗ್ಗ: ಮಲೆನಾಡಲ್ಲಿ ವರುಣನ ಆರ್ಭಟ ಮುಂದುವರೆದಿದ್ದು ಮಳೆಯನ್ನು ಲೆಕ್ಕಿಸದೆ ಪ್ರವಾಸಿಗರು ಮಲೆನಾಡ ಸೌಂದರ್ಯವನ್ನು ಸವಿಯಲು ಸಾಗರೋಪಾದಿಯಲ್ಲಿ ಆಗಮಿಸಿತ್ತಿದ್ದಾರೆ. ಜಿಲ್ಲೆಯ ಜಲಪಾತಗಳು ಮೈದುಂಬಿ ಹರಿಯುತ್ತಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.blank

ಲಿಂಗನಮಕ್ಕಿ ಜಲಾಶಯಕ್ಕೆ ನೀರು ತುಂಬಿಸುವ ಸಲುವಾಗಿ ಚಕ್ರಾ ಮತ್ತು ಅದರ ಉಪ ನದಿ ಸಾವೇಹಕ್ಲುಗೆ ಅಡ್ಡಲಾಗಿ ಕಟ್ಟಲಾಗಿರುವ ಡ್ಯಾಂಗಳು ಭರ್ತಿಯಾಗಿದ್ದು ಈ ರೌದ್ರ ರಮಣೀಯ ಸೊಬಗನ್ನು ನೋಡಲು ಪ್ರವಾಸಿಗರ ದಂಡೆ ಹರಿದು ಬರುತ್ತಿದೆ.

ರಾಜ್ಯದ ಪ್ರಮುಖ ಜಲಾಶಯ ಲಿಂಗನಮಕ್ಕಿಯಲ್ಲಿ ನೀರಿನ ಕೊರತೆ ಆಗಬಾರದೆಂಬ ಕಾರಣಕ್ಕೆ 80ರ ದಶಕದಲ್ಲಿ ನಿರ್ಮಾಣ ಕಂಡ ಚಕ್ರಾ ಮತ್ತು ಸಾವೇಹಕ್ಲು ಅವಳಿ ಜಲಾಶಯ ಪ್ರದೇಶ ಈಗ ಪ್ರವಾಸಿಗರ ಹಾಟ್‌ ಸ್ಪಾಟ್‌ ಆಗಿ ಮಾರ್ಪಾಡಾಗಿವೆ.

ಹೊಸನಗರ ತಾಲೂಕಿನ ನಗರ, ಹೋಬಳಿ, ಕರಿಮನೆ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಚಕ್ರಾ ಮತ್ತು ಸಾವೇಹಕ್ಲು ಜಲಾಶಯಗಳು ಲಿಂಗನಮಕ್ಕಿಗೆ ನೀರು ಹರಿಸುವ ಮೂಲಕ ವಿದ್ಯುತ್‌ ಉತ್ಪಾದನೆಯಲ್ಲಿ ತನ್ನದೇ ಕೊಡುಗೆ ನೀಡುತ್ತಾ ಬಂದಿವೆ.

blank

ಚಕ್ರಾ ನಗರ ಪ್ರವಾಸಿ ಮಂದಿರದ ಅಕ್ಕಪಕ್ಕದಲ್ಲಿ 6 ಕಿ.ಮೀ. ದೂರದ ಸಮಾನಾಂತರದಲ್ಲಿ ನಿಲುಕುವ ಈ ಅವಳಿ ಜಲಾಶಯ ಪ್ರವಾಸಿಗರನ್ನು ತನ್ನತ್ತ ಸೆಳೆಯತ್ತಿವೆ.  ಸುತ್ತಲೂ ಹಚ್ಚು ಹಸಿರಿನ ಪರಿಸರ ಹೊದ್ದು ಸದಾ ಗಮನ ಸೆಳೆಯುವ ಈ ಅವಳಿ ಜಲಾಶಯ ಮಳೆಗಾಲ ಬಂತೆಂದೆರೆ ಜಲಸಿರಿಯನ್ನು ಮೈದುಂಬಿಸಿಕೊಂಡು ಚಿತ್ತಾಕರ್ಷಕವಾಗಿ ಕಂಗೊಳಿಸುತ್ತದೆ.

ಡ್ಯಾಂ ತುಂಬಿದ ಮೇಲೆ ಕಂಡು ಬರುವ ಓವರ್‌ಫ್ಲೋಗೆ ಪ್ರವಾಸಿಗರು ಆಕರ್ಷಿತರಾಗಿದ್ದಾರೆ. ಹಾಗಾಗಿ ಮಳೆಗಾಲ ಆರಂಭವಾಗುತ್ತಿದ್ದಂತೆ ರಾಜ್ಯದ ವಿವಿಧ ಭಾಗಗಳಿಂದ ಪ್ರವಾಸಿಗರು ಹರಿದು ಬರುತ್ತಾರೆ. ಲಿಂಗನಮಕ್ಕಿಯಲ್ಲಿ ಜಲ ಸಮತೋಲನ ಕಾಪಾಡುವಲ್ಲಿ ಹೊಸನಗರ ತಾಲೂಕಿನಲ್ಲಿರುವ ಚಕ್ರಾ ಮತ್ತು ಸಾವೇಹಕ್ಲು ಡ್ಯಾಂಗಳ ಪಾತ್ರ ಮಹತ್ವದ್ದಾಗಿದೆ. ಪಶ್ಚಿಮಾಭಿಮುಖವಾಗಿ ಹರಿಯುತ್ತಿದ್ದ ಈ ನದಿಗಳಿಗೆ ಅಡ್ಡಲಾಗಿ ಆಣೆಕಟ್ಟು ನಿರ್ಮಿಸಿ, ವಿರುದ್ಧ ದಿಕ್ಕಿನಲ್ಲಿ ಲಿಂಗನಮಕ್ಕಿ ಕಡೆಗೆ ಹರಿಯುವಂತೆ ಮಾಡಲಾಗಿದೆ.

blank

1.90 ಟಿಎಂಸಿ ಸಾಮರ್ಥ್ಯದ ಜಲಾಶಯ 8 ಮೀಟರ್‌ ಅಗಲ, 575 ಮೀ. ಉದ್ದ, ಹಾಗೂ 53 ಮೀಟರ್‌ ಎತ್ತರ ಇದೆ. ಒಳ ಹರಿವು 4-5 ಸಾವಿರ ಕ್ಯೂಸೆಕ್‌ ಇದ್ದು, ಮಳೆಯ ಪ್ರಮಾಣ ಹೆಚ್ಚಿ ನೀರು ಹರಿಸಲು ಸಾಧ್ಯವಾಗದಿದ್ದಲ್ಲಿ ನೀರು ತಾನಾಗಿಯೇ ಹರಿದು ಅರಬ್ಬಿ ಸಮುದ್ರ ಸೇರುತ್ತದೆ. ಗರಿಷ್ಠವಾಗಿ ನೀರು ಬಿಡುಗಡೆ ಮಾಡುವ ಉದ್ದೇಶದಿಂದ ಸಾವೇಹಕ್ಲು ಜಲಾಶಯವನ್ನು ‘ಡಕ್‌ ಬಿಲ್‌’ ವಿನ್ಯಾಸದಲ್ಲಿ ನಿರ್ಮಿಲಾಗಿದೆ.

ಚಕ್ರಾ ನದಿಗೆ ಅಡ್ಡಲಾಗಿ 1985ರಲ್ಲಿ ಕಟ್ಟಲಾಗಿರುವ ಚಕ್ರಾ ಜಲಾಶಯವು 1990ರಲ್ಲಿ ಮೊಟ್ಟಮೊದಲು ತುಂಬಿದ್ದು ಇತಿಹಾಸ. ಇದೂ ಚಕ್ರಾ ವಿಮುಖ ಯೋಜನೆಯಲ್ಲಿ ಬರುವ ಪ್ರಮುಖ ಉಪ ನದಿಯಾಗಿದ್ದು, ಇದರ ನೀರು ಲಿಂಗನಮಕ್ಕಿ ಹಾಗೂ ವರಾಹಿಗೆ ಬಿಡಲಾಗುತ್ತದೆ.
ಈ ಸಲ ಈ ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿರುವುದರಿಂದ ಜಲಾಶಯ ಭರ್ತಿಯಾಗಿದ್ದು ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ.

ವಿಶೇಷ ವರದಿ: ಪ್ರಸನ್ನ, ನ್ಯೂಸ್ ಫಸ್ಟ್‌, ಶಿವಮೊಗ್ಗ.

The post ತುಂಬಿ ಹರಿಯುತ್ತಿರುವ ಸಾವೆಹಕ್ಲು ಜಲಾಶಯ ನೋಡಲು ಪ್ರವಾಸಿಗರ ದಂಡು appeared first on News First Kannada.

Source: newsfirstlive.com

Source link