ಬಿಜೆಪಿ ತೊಲಗದಿದ್ದರೆ ರಾಜ್ಯಕ್ಕೆ ಮುಕ್ತಿ ಇಲ್ಲ: ಸಿದ್ದರಾಮಯ್ಯ

ಗದಗ: ಯಡಿಯೂರಪ್ಪ ರಾಜ್ಯ ಕಂಡ ಕಡು ಭ್ರಷ್ಟ ಮುಖ್ಯಮಂತ್ರಿ, ಅವರು ರಾಜೀನಾಮೆ ಕೊಡುವುದರಿಂದ ಅಥವಾ ಇನ್ನೊಬ್ಬ ಮುಖ್ಯಮಂತ್ರಿ ಬರುವುದರಿಂದ ರಾಜ್ಯಕ್ಕೆ ಒಳ್ಳೆಯದಾಗುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸ್ವ ಕ್ಷೇತ್ರ ಬಾದಾಮಿಗೆ ಹೋಗುವ ಮುನ್ನ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುವ ವಿಚಾರವಾಗಿ ನಗರದಲ್ಲಿ ಪ್ರತಿಕ್ರಿಯಿಸಿದರು. ಬಿಜೆಪಿಯೇ ಒಂದು ಭ್ರಷ್ಟ ಪಕ್ಷ, ಬಿಜೆಪಿ ತೊಲಗದಿದ್ದರೆ ರಾಜ್ಯಕ್ಕೆ ಮುಕ್ತಿ ಇಲ್ಲ. ಯಡಿಯೂರಪ್ಪ ಕರ್ನಾಟಕ ಕಂಡ ಒಬ್ಬ ಭ್ರಷ್ಟ ಮುಖ್ಯಮಂತ್ರಿ, ಇನ್ನೊಬ್ಬ ಬಂದರೂ ಭ್ರಷ್ಟ ಮುಖ್ಯಮಂತ್ರಿಯೇ ಆಗಿರುತ್ತಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಯಡಿಯೂರಪ್ಪ ಸಂಪುಟ ವಿಸರ್ಜನೆ – ಸಚಿವರೆಲ್ಲ ಮಾಜಿ

ಮುಂದಿನ ಸಿಎಂ ಯಾರಾಗಬಹುದು ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನೇನು ಬಿಜೆಪಿ ಅಧ್ಯಕ್ಷನೇ? ಅದು ಅವರ ಪಕ್ಷದ ವಿಚಾರ ಎಂದು ಉತ್ತರಿಸಿದರು. ಯಡಿಯೂರಪ್ಪನವರ ಪರ ಸ್ವಾಮೀಜಿಗಳು ನಿಂತಿರುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಸ್ವಾಮೀಜಿಗಳು ರಾಜಕಾರಣದಲ್ಲಿ ಬರದೇ ಇರುವುದು ಒಳ್ಳೆಯದು, ಧರ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತ ಇರಬೇಕು ಎಂದು ಹೇಳಿದರು. ಇದನ್ನೂ ಓದಿ: ಕೇಂದ್ರ ಸಚಿವರಾಗುವಂತೆ ವಾಜಪೇಯಿ ಹೇಳಿದ್ದನ್ನು ನೆನೆದು ಕಣ್ಣೀರಿಟ್ಟ ಸಿಎಂ ಯಡಿಯೂರಪ್ಪ

ರಾಜ್ಯಕ್ಕೆ ಹೊಸ ಸಿಎಂ ಬಂದರೂ ಸರ್ಕಾರದ ಭ್ರಷ್ಟಾಚಾರ ಬಯಲು ಮಾಡವ ನಮ್ಮ ಹೋರಾಟ ಮುಂದುವರಿಯಲಿದೆ. ಕಾಂಗ್ರೆಸ್ ವಲಸಿಗರ ಪರಿಸ್ಥಿತಿ ನನಗೆ ಗೊತ್ತಿಲ್ಲ. ನಮ್ಮ ಪಕ್ಷ ಬಿಟ್ಟು ಬಿಜೆಪಿಗೆ ಹೋದವರಿಗೆ ಜನ ಪಾಠ ಕಲಿಸುತ್ತಾರೆ ಎಂದು ಗುಡುಗಿದರು.

The post ಬಿಜೆಪಿ ತೊಲಗದಿದ್ದರೆ ರಾಜ್ಯಕ್ಕೆ ಮುಕ್ತಿ ಇಲ್ಲ: ಸಿದ್ದರಾಮಯ್ಯ appeared first on Public TV.

Source: publictv.in

Source link