ಎದೆಗೆ ಗುಂಡೇಟು ಬಿದ್ದರೂ ಶುತ್ರುಗಳ ಬೇಟೆಯಾಡಿದ್ದ ಕಾರ್ಗಿಲ್​ ಹೀರೋ ವಿಕ್ರಮ್ ಬಾತ್ರಾ ನೆನಪಿದೆಯಾ?

ಎದೆಗೆ ಗುಂಡೇಟು ಬಿದ್ದರೂ ಶುತ್ರುಗಳ ಬೇಟೆಯಾಡಿದ್ದ ಕಾರ್ಗಿಲ್​ ಹೀರೋ ವಿಕ್ರಮ್ ಬಾತ್ರಾ ನೆನಪಿದೆಯಾ?

‘ಯೇ ದಿಲ್‌ ಮಾಂಗೇ ಮೋರ್‌’ ಈ ಘೋಷವಾಕ್ಯ ಕಿವಿಗೆ ಬಿದ್ದಾಗ ನೆನಪಾಗುವುದೇ ಕಾರ್ಗಿಲ್‌ ವೀರ, ಕ್ಯಾಪ್ಟನ್‌ ವಿಕ್ರಮ್‌ ಬಾತ್ರಾ.  ಕಾರ್ಗಿಲ್‌ ಯುದ್ಧದಲ್ಲಿ ದೇಶಕ್ಕಾಗಿ ರಕ್ತ ಚೆಲ್ಲಿದ ಪರಮವೀರ ಚಕ್ರ ಪುರಷ್ಕೃತ ವಿಕ್ರಮ್‌ ಬಾತ್ರಾ ಶೌರ್ಯದ ಬಗ್ಗೆ ಹೇಳ್ತೀವಿ ಈ ಕ್ಷಣದ ಸ್ಪೆಷಲ್‌ ಸ್ಟೋರಿಯಲ್ಲಿ.

ಆಗತಾನೇ ಪದವಿ ಮುಗಿಸಿದ್ದ ಬಾಲಕ ವಿಕ್ರಮ್‌ ಬಾತ್ರಾ ಹಾಂಕಾಂಗ್‌ನಲ್ಲಿ ವಾಣಿಜ್ಯ ಹಡಗಿನಲ್ಲಿ ಕೆಲಸ ಮಾಡಲು ಸಂದರ್ಶನವನ್ನು ನೀಡಿ ವಾಪಸಾಗಿರುತ್ತಾರೆ. ಉದ್ಯೋಗಕ್ಕೆ ಆಯ್ಕೆಯಾಗಿದ್ದು ಖಚಿತವಾಗುತ್ತಿದ್ದಂತೆ ಬಾತ್ರಾ ಹಾಂಕಾಂಗ್‌ ಹಾರಲು ಯೂನಿ ಫಾರ್ಮ್‌ ಸಿದ್ಧಪಡಿಸಿರುತ್ತಾರೆ. ಆದ್ರೆ, ಪದವಿಯಲ್ಲಿ ಇರುವಾಗಲೇ ಎನ್‌ಸಿಸಿ ವಾಯುದಳ ಸೇರ್ಪಡೆಯಾಗಿ, ಉತ್ತರ ಭಾರತರ ಬೆಸ್ಟ್‌ ಕೆಡೆಟ್‌ ಎಂದು ಖ್ಯಾತಿಗಳಿಸುತ್ತಾರೆ.

blank

ಹೀಗಾಗಿ ಪದವಿ ಮುಗಿಯುತ್ತಲೇ ಭಾರತೀಯ ಸೇನೆ ಸೇರಲು ಕರೆ ಬರುತ್ತದೆ. ಈಗ ವಿಕ್ರಮ್‌ ಬಾತ್ರಾ ಮುಂದೆ ಎರಡು ಆಯ್ಕೆ ಇರುತ್ತದೆ. ಒಂದು ವಾಣಿಜ್ಯ ಹಡಗಿನಲ್ಲಿ ಡಾಲರ್‌ ಲೆಕ್ಕದಲ್ಲಿ ಸಂಬಳಕ್ಕೆ ಸೇರಿಕೊಳ್ಳುವುದು. ಮತ್ತೊಂದು ಭಾರತಾಂಬೆಯ ಸೇವೆ ಮಾಡುವುದು. ಬಾಲ್ಯದಲ್ಲಿ ತಂದೆಯಿಂದ ದೇಶಾಭಿಮಾನದ ಕಥೆ ಕೇಳಿಯೇ ಬೆಳೆದ ಬಾತ್ರಾ ಭಾರತೀಯ ಸೇನೆ ಸೇರಲು ತೀರ್ಮಾನಿಸುತ್ತಾರೆ. ಆ ಮೇಲೆ ಆತ ಇಟ್ಟ ಪ್ರತಿ ಹೆಜ್ಜೆಯೂ ಇತಿಹಾಸ ನಿರ್ಮಿಸಿದೆ. ಭಾರತ ಕಾರ್ಗಿಲ್‌ ಯುದ್ಧ ಗೆದ್ದು ವಿಜಯಪತಾಕೆ ಹಾರಿಸಿದೆ. ಆದ್ರೆ, ಯುದ್ಧಕ್ಕೆ ಟರ್ನಿಂಗ್‌ ಪಾಯಿಂಟ್‌ ನೀಡಿದ್ದೇ ಬಾತ್ರಾ ಅವರಾಗಿದ್ದಾರೆ. ದುರಾದೃಷ್ಟವಶಾತ್‌ ಅದೇ ಯುದ್ಧದಲ್ಲಿ ನಾವು ವೀರ ಯೋಧ ಬಾತ್ರಾ ಅವರನ್ನು ಕಳೆದುಕೊಂಡಿದ್ದೇವೆ.

ದೇಶಪ್ರೇಮದ ಕಥೆ ಕೇಳಿ ಬೆಳೆದ ವಿಕ್ರಮ್‌ ಬಾತ್ರಾ
1974 ಸೆಪ್ಟೆಂಬರ್‌ 9 ರಂದು ಹಿಮಾಚಲದ ಬಾತ್ರಾ ದಂಪತಿಗೆ ವಿಕ್ರಮ್‌ ಬಾತ್ರಾ ಜನಿಸುತ್ತಾರೆ. ತಂದೆ ಪಾಲಂಪುರ ಗಿರಿಧರ್‌ ಲಾಲ್‌ ಬಾತ್ರಾ ಹಾಗೂ ತಾಯಿ ಕಮಲ್‌ ಕಾಂತ್‌ ಬಾತ್ರಾ ವೃತ್ತಿಯಲ್ಲಿ ಶಿಕ್ಷಕರಾಗಿದ್ದವರು. ಹೀಗಾಗಿ ವಿಕ್ರಮ್‌ ಬಾತ್ರಾ ಶಿಸ್ತಿನಿಂದಲೇ ಬೆಳೆದಿದ್ದರು. ಗಿರಿಧರ್‌ ಲಾಲ್‌ ಬಾತ್ರಾ ಮಗನಿಗೆ ದೇಶಪ್ರೇಮದ ಕಥೆಗಳನ್ನು ಹೇಳುತ್ತಾರೆ. ಆ ಕಥೆಗಳೇ ವಿಕ್ರಮ್‌ ಬಾತ್ರಾ ಅವರನ್ನು ಭಾರತಾಂಬೆ ಸೇವೆಯತ್ತ ಸೆಳೆಯುತ್ತದೆ.

ಬೆಳಗಾವಿಯಲ್ಲಿ ಕಮಾಂಡೋ ಟ್ರೈನಿಂಗ್‌
ಜಮ್ಮು-ಕಾಶ್ಮೀರ ರೈಫಲ್ಸ್‌ ವಿಭಾಗದಲ್ಲಿ ಸೇನಾ ಜೀವನ ಆರಂಭ

ಕಾಲೇಜು ಜೀವನದಲ್ಲಿ ವಿಕ್ರಮ್‌ ಬಾತ್ರಾಗೆ ಟೇಬಲ್‌ ಟೆನ್ನಿಸ್‌ ಮತ್ತು ಕರಟೆ ಅಂದ್ರೆ ಪಂಚ ಪ್ರಾಣವಾಗಿರುತ್ತೆ. ಟೇಬಲ್‌ ಟೆನ್ನಿಸ್‌ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧೆ ಮಾಡಿರುತ್ತಾರೆ. ಕರಾಟೆಯಲ್ಲಿ ಗ್ರೀನ್‌ ಬೆಲ್ಟ್‌ ಪಡೆದಿರುತ್ತಾರೆ. ನೋಡಲ ರಫ್ ಅಂಡ್‌ ಟಫ್‌ ಹ್ಯಾಂಡ್ಸಮ್‌ ಆಗಿರೋ ವಿಕ್ರಮ್‌ ಬಾತ್ರಾ ಭಾರತೀಯ ಸೇನೆ ಸೇರಿದ ಮೇಲೆ ನಮ್ಮ ಬೆಳಗಾವಿಯಲ್ಲಿ ಎರಡು ತಿಂಗಳು ಕಮಾಂಡೋ ಟ್ರೇನಿಂಗ್‌ ಪಡೆಯುತ್ತಾರೆ. ತದ ನಂತರ ಜಮ್ಮು ಕಾಶ್ಮೀರದ ರೈಫಲ್ಸ್‌ ವಿಭಾಗ ಸೇರುವ ಮೂಲಕ ಸೇನಾ ಜೀವನ ಆರಂಭಿಸುತ್ತಾರೆ.

ಸೇನೆ ಸೇರಿದ ಒಂದೇ ವರ್ಷದಲ್ಲಿ ಕ್ಯಾಪ್ಟನ್‌ ಪ್ರಮೋಷನ್‌
ಚಿಕ್ಕವಯಸ್ಸಿನಲ್ಲಿಯೇ ಕಲ್ಪನೆಯನ್ನೂ ಮೀರಿದ ಸಾಧನೆ

ಸೇನೆ ಸೇರಿದ ಮೇಲೆ ವಿಕ್ರಮ್‌ ಬಾತ್ರಾ ತನ್ನ ಪರಾಕ್ರಮ, ಶೌರ್ಯವರನ್ನು ತೋರಿಸುತ್ತಾರೆ. ವಿಶೇಷ ಅಂದ್ರೆ ವಿಕ್ರಮ್‌ ಪರಾಕ್ರಮಕ್ಕೆ ಸೇನೆ ಸೇರಿದ ಒಂದೇ ವರ್ಷಕ್ಕೆ ಕ್ಯಾಪ್ಟನ್‌ ಪ್ರಮೋಷನ್‌ ದೊರೆಯುತ್ತದೆ. ಚಿಕ್ಕ ವಯಸ್ಸಿನಲ್ಲಿ ಈ ಸಾಧನೆ ಕಡಿಮೆಯದಲ್ಲ. ನಿಜಕ್ಕೂ ಇದು ಊಹೆಗೂ ನಿಲುಕದ ಸಾಧನೆಯಾಗಿರುತ್ತದೆ. ಇದೇ ಉದ್ದೇಶಕ್ಕೆ ಮಹತ್ವದ ಜವಾಬ್ದಾರಿಗಳು ವಿಕ್ರಮ್‌ ಅವರನ್ನು ಹುಡುಕಿಕೊಂಡು ಬರುತ್ತವೆ.

ರಜೆ ಮೇಲೆ ಮನೆಗೆ ಬಂದಾಗ ಸೇನೆಯಿಂದ ಕರೆ ಬಂತು
ಗೆದ್ದು ಧ್ವಜ ಹಾರಿಸಿ ಬರ್ತನೆ, ಇಲ್ಲವೇ ಅದೇ ಧ್ವಜದಲ್ಲಿ ನನ್ನ ಶವ ಬರುತ್ತೆ ಎಂದಿದ್ದ ಬಾತ್ರಾ

ಅದು 1999ರಲ್ಲಿ ನಡೆದ ಘಟನೆ. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ ವಿಕ್ರಮ್‌ ಬಾತ್ರಾ ರಜೆಯ ಮೇಲೆ ಊರಿಗೆ ಬಂದಿರುತ್ತಾರೆ. ಅಪ್ಪ ಅಮ್ಮನ ಜೊತೆ ಸಂತೋಷದ ಸಮಯವನ್ನು ಕಳೆಯುತ್ತಾರೆ. ಆದ್ರೆ, ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧದ ಕಾರ್ಮೋಡ ಆರಂಭವಾಗಿರುತ್ತದೆ. ಊರಲ್ಲಿದ್ದ ವಿಕ್ರಮ್‌ ಪಾಲಂಪುರದಲ್ಲಿ ಹೋಟೆಲ್‌ಗೆ ಬಂದಿರುತ್ತಾರೆ. ಆ ಸಮಯದಲ್ಲಿ ಸಿಕ್ಕ ಪರಿಚಯಸ್ಥರು, ಯುದ್ಧದ ಕಾರ್ಮೋಡ ಇದೆ ನಿಮಗೆ ಯಾವಾಗಬೇಕಾದ್ರೂ ಕರೆ ಬರಬಹುದು ಅಂತ ಹೇಳುತ್ತಾರೆ. ಆ ಕ್ಷಣವೇ ವಿಕ್ರಮ್‌ ನೀಡಿದ ಉತ್ತರ ಏನು ಗೊತ್ತಾ? ತಲೆ ಕೆಡಿಸಿಕೊಳ್ಳಬೇಡಿ, ಗೆದ್ದು ಧ್ವಜ ಹಾರಿಸಿ ಬರುತ್ತೇನೆ. ಇಲ್ಲವೇ ಅದೇ ಧ್ವಜದಲ್ಲಿ ನನ್ನ ಶವ ಬರುತ್ತದೆ ಎಂದು ಹೇಳಿರುತ್ತಾರೆ. ಸೇನೆಯಿಂದ ಕರೆ ಬರುತ್ತೆ, ವಿಕ್ರಮ್‌ ಬಾತ್ರಾ ಮನೆಯಿಂದ ಹೊರಡುತ್ತಾರೆ.

ಕುತಂತ್ರದಿಂದ ಶಿಖರವೇರಿ ಕುಳಿತ್ತಿದ್ದ ಪಾಕ್‌ ಸೇನೆ
ಆಪರೇಷನ್‌ ಟೈಗರ್‌ ಹಿಲ್ಸ್‌ ವಿಕ್ರಮ್‌ ಹೆಗಲಿಗೆ

ಪಾಕಿಸ್ತಾನ ಸೇನೆ ಕುತಂತ್ರದಿಂದ ಎನ್‌ಒಸಿ, ಕಾರ್ಗಿಲ್‌, ದ್ರಾಸ್‌ನ ಅನೇಕ ಶಿಖರವೇರಿ ಕುಳಿತಿತ್ತು. ಶಿಖರಗಳನ್ನು ವಶಪಡಿಸಿಕೊಳ್ಳಲು ಅಂದಿನ ಪ್ರಧಾನಿ ವಾಜಪೇಯಿ ಅವರು ಭಾರತೀಯ ಸೇನೆಗೆ ಸಂಪೂರ್ಣ ಸ್ವಾತಂತ್ರ ನೀಡುತ್ತಾರೆ. ಒಂದೊಂದೆ ಭಾಗವನ್ನು ಭಾರತ ವಶಪಡಿಸಿಕೊಳ್ಳುತ್ತಾ ಸಾಗುತ್ತದೆ. ಆಪರೇಷನ್‌ ಟೈಗರ್‌ ಹಿಲ್ಸ್‌ ಅಂದ್ರೆ ಪಾಯಿಂಟ್‌ 5140 ಅನ್ನು ವಶಪಡಿಸಿಕೊಳ್ಳಲು ವಿಕ್ರಮ್‌ ಬಾತ್ರಾಗೆ ಜವಾಬ್ದಾರಿ ನೀಡಲಾಗುತ್ತೆ. ಬಾತ್ರಾ ನೇತೃತ್ವದ 5 ಜನರ ತಂಡ ರಾತ್ರಿ ವೇಳೆ ಶಿಖರವೇರಲು ಆರಂಭಿಸುತ್ತಾರೆ. ಅದು, ಅಷ್ಟು ಸುಲಭದ ಹಾದಿಯಾಗಿರಲಿಲ್ಲ. ಯಾಕೆಂದ್ರೆ ಶಿಖರದ ಮೇಲ್ಭಾಗದಲ್ಲಿ ಪಾಕ್ ಸೈನಿಕರು ಬಂಕರ್‌ ತೋಡಿಕುಳಿತುಕೊಂಡಿದ್ರು. ಕೊರೆಯುವ ಚಳಿ ಇತ್ತು. ಕಡಿದಾಡ ಶಿಖರವನ್ನು ಏರಬೇಕಾಗಿತ್ತು. ರಾತ್ರಿ ಬೆಳಗಾಗುವುದರೊಳಗೆ ಶಿಖರ ವಶಪಡಿಸಿಕೊಳ್ಳಬೇಕಿತ್ತು. ಒಮ್ಮೆ ಬೆಳಕು ಹರಿದು ಬಿಟ್ರೆ ಶತ್ರು ಸೈನಿಕರನ್ನು ಎದುರಿಸುವುದು ಕಷ್ಟವಾಗಿತ್ತು.

ಏಕಾಂಗಿಯಾಗಿ ಮೂವರು ಶತ್ರುಗಳನ್ನು ಹೊಡೆದುರುಳಿಸಿದ ಬಾತ್ರಾ
ಟೈಗರ್‌ ಹಿಲ್‌ 5140ರ ಮೇಲೆ ತ್ರೀವರ್ಣ ಧ್ವಜ ಹಾರಾಟ
ಟೈಗರ್‌ ಹಿಲ್‌ನಿಂದ ಕಾರ್ಗಿಲ್‌ ಯುದ್ಧಕ್ಕೆ ಟರ್ನಿಂಗ್‌ ಪಾಯಿಂಟ್‌

ಕೊರೆಯುವ ಚಳಿಯಲ್ಲಿಯೇ ವಿಕ್ರಮ್‌ ಬಾತ್ರಾ ಮುಂಚೂಣಿಯಲ್ಲಿ ನುಗ್ಗುತ್ತಾರೆ. ಮೂರು ಪಾಕ್‌ ಸೈನಿಕರನ್ನು ವೀರಾವೇಶದಿಂದ ಒಬ್ಬರೇ ಹೊಡೆದುರುಳಿಸುತ್ತಾರೆ. ಅಂತಿಮವಾಗಿ ಈ ಕಾಳದಲ್ಲಿ ಪಾಕ್‌ನ ಸುಮಾರು 10 ಸೈನಿಕರು ಜೀವಕಳೆದುಕೊಳ್ಳುತ್ತಾರೆ. ಟೈಗರ್‌ ಹಿಲ್‌ ಮೇಲೆ ತ್ರೀವರ್ಣ ಧ್ವಜ ಹಾರಿಸಲಾಗುತ್ತೆ. ಕಮಾಂಡಿಂಗ್‌ ಆಫೀಸರ್‌ಗೆ ಕರೆ ಮಾಡಿದ ಬಾತ್ರಾ, ‘ಟೈಗರ್‌ ಹಿಲ್‌ ನಮ್ಮ ವಶವಾಗಿದೆ. ಯೇ ದಿಲ್‌ ಮಾಂಗೇ ಮೋರ್‌’ ಅಂತ ಮಾಹಿತಿ ರವಾನಿಸುತ್ತಾರೆ. ಇಡೀ ದೇಶವೇ ವಿಕ್ರಮ್‌ ಬಾತ್ರಾ ಅವರ ಸೌರ್ಯವನ್ನು ಕೊಂಡಾಡುತ್ತೆ. ಯೇ ದಿಲ್‌ ಮಾಂಗೇ ಮೋರ್ ಎಂದು ಘೋಷಣೆ ಕೂಗುತ್ತೆ. ಕಾರ್ಗಿಲ್‌ ಯುದ್ಧಕ್ಕೆ ಟರ್ನಿಂಗ್‌ ಪಾಯಿಂಟ್‌ ನೀಡಿದ್ದೇ ಟೈಗರ್‌ ಹಿಲ್‌ ವಿಜಯವಾಗಿರುತ್ತೆ.

ಪಾಯಿಂಟ್‌ 4875 ವಶಪಡಿಸಿಕೊಳ್ಳೋ ಜವಾಬ್ದಾರಿ ಬಾತ್ರಾ ಟೀಂಗೆ
ಆತ್ಮವನ್ನೇ ಕಂಪಿಸುವಷ್ಟು ಶೀತಗಾಳಿಯಲ್ಲಿ ಶಿಖರ ಏರಿದ ಬಾತ್ರಾ

ಟೈಗರ್‌ ಹಿಲ್‌ ವಶಪಡಿಸಿಕೊಳ್ಳುತ್ತಿದ್ದಂತೆ ದೇಶಾದ್ಯಂತ ವಿಕ್ರಮ್‌ ಬಾತ್ರಾ ಶೌರ್ಯದ ಬಗ್ಗೆ ಗುಣಗಾನ ನಡೆಯುತ್ತಿತ್ತು. ಪಾಕ್‌ ಸೈನಿಕರಿಗೂ ವಿಕ್ರಮ್‌ ಬಾತ್ರಾ ನಡುಕ ಹುಟ್ಟಿಸಿದ್ರು. ಆದ್ರೆ, ಅದಾಗಿ 9ನೇ ದಿನಕ್ಕೆ ವಿಕ್ರಮ್‌ ಬಾತ್ರಾಗೆ ಮತ್ತೊಂದು ಮಹತ್ವದ ಜವಾಬ್ದಾರಿ ನೀಡಲಾಗಿರುತ್ತೆ. ಅದೇನಂದ್ರೆ 7 ಸಾವಿರ ಅಡಿ ಎತ್ತರದಲ್ಲಿರೋ 4875 ಪಾಯಿಂಟ್‌ ಶಿಖರ ವಶಪಡಿಸಿಕೊಳ್ಳುವುದು. ಅದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. 17 ಸಾವಿರ ಅಡಿ ಎತ್ತರದಲ್ಲಿರೋ ಶಿಖರದಲ್ಲಿ ಪಾಕ್‌ ಸೈನಿಕರು ಶಸ್ತ್ರಸಜ್ಜಿತವಾಗಿ ಯುದ್ಧಕ್ಕೆ ಸಿದ್ಧವಾಗಿದ್ರು. ಆತ್ಮವನ್ನೇ ಕಂಪಿಸುವಷ್ಟು ಚಳಿಯಿತ್ತು. ಆದ್ರೆ, ಭಾರತಾಂಬೆ ರಕ್ಷಣೆಗೆ ಸಿದ್ಧರಾಗಿದ್ದ ಬಾತ್ರಾ ಅವರಿಗೆ ಅದ್ಯಾವುದು ಅಡ್ಡಿಯಾಗಲಿಲ್ಲ.

ನಿನಗೆ ಮಕ್ಕಳಿವೆ ದೂರ ಸರಿ ಎಂದ ವಿಕ್ರಮ್‌ ಬಾತ್ರಾ
ಸಹೋದ್ಯೋಗಿಯನ್ನು ಹೆಗಲ ಮೇಲೆ ಹೊತ್ತಾಗ ಗುಂಡಿನ ದಾಳಿ
ಎದೆಗೆ ಗುಂಡೇಟು ಬಿದ್ರೂ ಐದು ಶತ್ರುಗಳನ್ನು ಸಾಯಿಸಿದ ಬಾತ್ರಾ

ಶಿಖರದ ಮೇಲೆ ಅಡಗಿ ಕುಳಿತಿದ್ದ ಪಾಕ್‌ ಸೈನಿಕರು ಕುತಂತ್ರದಿಂದ ದಾಳಿ ನಡೆಸುತ್ತಾರೆ. ಅದಕ್ಕೆ ಅಂಜದೇ ವಿಕ್ರಮ್‌ ಬಾತ್ರಾ ತಂಡ ಹೇ ದಿಲ್‌ ಮಾಂಗೇ ಮೋರ್‌ ಘೋಷಣೆ ಕೂಗುತ್ತಾ ಮುನ್ನುಗ್ಗುತ್ತೆ. ಎದುರಾಳಿ ಸೈನಿಕರನ್ನು ಒಬ್ಬಬ್ಬರನ್ನಾಗಿಯೇ ಹೊಡೆದುರುಳಿಸುತ್ತೆ. ಆದ್ರೆ, ಈ ಕಾರ್ಯಾಚರಣೆ ವೇಳೆ ಸಹದ್ಯೋಗಿಯೊಬ್ಬರ ಕಾಲಿಗೆ ಗುಂಡು ತಗುಲುತ್ತೆ. ಆ ಕ್ಷಣವೇ ಮತ್ತೊಬ್ಬ ಸೈನಿಕ ರಕ್ಷಣೆಗೆ ಮುಂದಾಗುತ್ತಾನೆ.

blank

ಆದರೆ ಅಲ್ಲೇ ಇದ್ದ ವಿಕ್ರಮ್‌ ಬಾತ್ರಾ, ತಡಿ ನೀನು ಹೋಗಬೇಡ, ನಿನಗೆ ಪತ್ನಿ ಮಕ್ಕಳು ಇದ್ದಾರೆ ಅಂತ ಹೇಳಿ ಆ ಸೈನಿಕನನ್ನು ತಡೆದು ಸ್ವತಃ ತಾನೇ ರಕ್ಷಣೆಗೆ ಮುಂದಾಗುತ್ತಾರೆ. ಒಂದು ಕಡೆ ಶಿಖರ ವಶಪಡಿಸಿಕೊಳ್ಳುವುದು ಮತ್ತೊಂದೆಡೆ ಸಹೋದ್ಯೋಗಿ ರಕ್ಷಣೆ ಎರಡೂ ಬಾತ್ರಾ ಹೆಗಲೇರಿರುತ್ತೆ. ಗಾಯಗೊಂಡ ಸೈನಿಕನನ್ನು ಹೆಗಲ ಮೇಲೆ ಹೊತ್ತುಕೊಂಡು ಸಾಗುತ್ತಿರುವಾಗಲೇ ಕುತಂತ್ರದಿಂದ ಪಾಕ್‌ ಸೈನಿಕರು ಗುಂಡಿನ ದಾಳಿ ನಡೆಸುತ್ತಾರೆ. ಶತ್ರುವಿನ ಗುಂಡು ವಿಕ್ರಮ್‌ ಬಾತ್ರಾ ಎದೆ ಸೀಳುತ್ತೆ. ಆದ್ರೆ, ಆಕ್ಷಣದಲ್ಲಿಯೂ ಅಂಜದ ವಿಕ್ರಮ್‌ ಐವರು ಭಯೋತ್ಪಾದಕರನ್ನು ಹೊಡೆದುರುಳಿಸುತ್ತಾರೆ. ರಾತ್ರಿ ಬೆಳಗಾಗುವುದರೊಳಗೆ 4875 ಪಾಯಿಂಟ್‌ ಭಾರತ ವಶವಾಗುತ್ತೆ. ಆದ್ರೆ, ದುರಾದೃಷ್ಟವಶಾತ್‌ ವೀರ ವಿಕ್ರಮ್‌ ಬಾತ್ರಾ ಅವರನ್ನು ನಾವು ಕಳೆದುಕೊಳ್ಳುತ್ತೇವೆ.
ಶೇರ್‌ ಷಾ ಕ್ಯಾಪ್ಟನ್‌ ವಿಕ್ರಮ್‌ ಬಾತ್ರಾ ಪರಾಕ್ರಮ ಅಜರಾಮರವಾಗಿದೆ. ಭಾರತಾಂಬೆ ನೆಮ್ಮದಿಯಾಗಿ ಇದ್ದಾಳೆ ಅಂದ್ರೆ ಅದಕ್ಕೆ ಬಾತ್ರಾ ಅವರಂಥ ದೇಶಪ್ರೇಮಿಗಳ ಕೊಡುಗೆ ದೊಡ್ಡದಿದೆ. ಇಂದು ನಮ್ಮೊಂದಿಗೆ ಬಾತ್ರಾ ಇಲ್ಲದಿರಬಹುದು. ಆದ್ರೆ, ಕೋಟ್ಯಂತರ ಭಾರತೀಯರ ಹೃದಯಲ್ಲಿ ಇದ್ದಾರೆ.

The post ಎದೆಗೆ ಗುಂಡೇಟು ಬಿದ್ದರೂ ಶುತ್ರುಗಳ ಬೇಟೆಯಾಡಿದ್ದ ಕಾರ್ಗಿಲ್​ ಹೀರೋ ವಿಕ್ರಮ್ ಬಾತ್ರಾ ನೆನಪಿದೆಯಾ? appeared first on News First Kannada.

Source: newsfirstlive.com

Source link