ರಾಜ್ಯಕ್ಕೆ ನಾಲ್ವರು ಸಿಎಂ ಕೊಟ್ಟ ಶಿವಮೊಗ್ಗ.. ಆದ್ರೆ ಪೂರ್ಣಾವಧಿ ಮುಖ್ಯಮಂತ್ರಿ ಯಾರೂ ಆಗಲೇ ಇಲ್ಲ

ರಾಜ್ಯಕ್ಕೆ ನಾಲ್ವರು ಸಿಎಂ ಕೊಟ್ಟ ಶಿವಮೊಗ್ಗ.. ಆದ್ರೆ ಪೂರ್ಣಾವಧಿ ಮುಖ್ಯಮಂತ್ರಿ ಯಾರೂ ಆಗಲೇ ಇಲ್ಲ

ಶಿವಮೊಗ್ಗ: ರಾಜ್ಯ ರಾಜಕೀಯದ ಶಕ್ತಿ ಕೇಂದ್ರ ಎಂದೇ ಗುರುತಿಸಿಕೊಂಡಿದ್ದ ಶಿವಮೊಗ್ಗ ಈಗ ಮತ್ತೊಮ್ಮೆ ಚರ್ಚೆಯಲ್ಲಿದೆ. ಯಡಿಯೂರಪ್ಪ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಶಿವಮೊಗ್ಗ ಈಗ ಚರ್ಚಾ ವಸ್ತುವಾಗಿದೆ.

ಲಾಗಾಯ್ತಿನಿಂದಲೂ ರಾಜ್ಯದ ಆಡಳಿತ ಕೇಂದ್ರವಾದ ವಿಧಾನ ಸೌಧದ ಮೇಲೆ ಅಧಿಪತ್ಯ ಸ್ಥಾಪಿಸುತ್ತಾ ಬಂದಿದ್ದು ಶಿವಮೊಗ್ಗ ಜಿಲ್ಲೆ. ಸ್ವಾತಂತ್ರ್ಯಾನಂತರ ನಡೆದ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್​ ಪಕ್ಷದಿಂದ ಆರಿಸಿ ಹೋದ ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರದಲ್ಲಿ ಪ್ರಮುಖ ಸ್ಥಾನ ಪಡೆದಿದ್ದು ಇತಿಹಾಸ.

ಅದಕ್ಕೀಗ ಮುಖ್ಯವಾಗಿ ರಾಜ್ಯಕ್ಕೆ ನಾಲ್ಕು ಜನ ಮುಖ್ಯಮಂತ್ರಿಗಳನ್ನು ನೀಡಿದ ಕೀರ್ತಿ ಶಿವಮೊಗ್ಗಕ್ಕೆ ಸಲ್ಲುತ್ತದೆ. ತೀರ್ಥಹಳ್ಳಿಯ ಕಡಿದಾಳ್​ ಮಂಜಪ್ಪ, ಸೊರಬದ ಎಸ್​.ಜೆ.ಎಚ್​.ಬಂಗಾರಪ್ಪ, ಅವಿಭಜಿತ ಶಿವಮೊಗ್ಗ ಜಿಲ್ಲೆಯ ಚನ್ನಗಿರಿಯ ಜೆ.ಹೆಚ್​.ಪಟೇಲ್​ ಹಾಗೂ ಶಿಕಾರಿಪುರದ ಬಿ.ಎಸ್​.ಯಡಿಯೂರಪ್ಪ ಅವರು ಸಿಎಂ ಆಗಿ ಇತಿಹಾಸ ಸೃಷ್ಟಿಸಿದ್ದಾರೆ.

ಆದರೆ ವಿಪರ್ಯಾಸ ಎಂಬಂತೆ ಇವರ್ಯಾರೂ ಪೂರ್ಣಾವಧಿ ಅಧಿಕಾರ ಅನುಭವಿಸಲಿಲ್ಲ. ರಾಜಕೀಯ ಸ್ಥಿತ್ಯಂತರದ ಕಾರಣ ಸಿಎಂ ಗಾದಿಗೆ ಏರಿದಷ್ಟೇ ವೇಗವಾಗಿ ಇಳಿಯುವ ಮೂಲಕ ಅಲ್ಪ ಕಾಲ ಸಿಎಂ ಆಗಿ ಆಡಳಿತ ನಡೆಸಿದ್ದಾರೆ.

ಯಾರೆಲ್ಲ ಎಷ್ಟು ದಿನ ಅಧಿಕಾರದಲ್ಲಿದ್ದರು?
ಅಧಿಕ ಸಂಖ್ಯೆಯ ಮುಖ್ಯಮಂತ್ರಿಗಳನ್ನು ರಾಜ್ಯಕ್ಕೆ ನೀಡಿದ ಹೆಮ್ಮೆ ಶಿವಮೊಗ್ಗ ಜಿಲ್ಲೆಯದ್ದು. ಆದರೆ ಈ ಜಿಲ್ಲೆಯಿಂದ ಆಯ್ಕೆಯಾಗಿ ಹೋಗಿ, ಸಿಎಂ ಆದವರು ಪೂರ್ಣಾವಧಿ ಅಧಿಕಾರ ನಡೆಸಲು ಆಗಲಿಲ್ಲ. ಇವತ್ತು ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಮತ್ತೊಮ್ಮೆ ಅರ್ಧಕ್ಕೆ ಸಿಎಂ ಸ್ಥಾನ ಮೊಟಕಾದಂತಾಗಿದೆ.

73 ದಿನಕ್ಕಷ್ಟೆ ಸಿಎಂ
ಅದು ಮೈಸೂರು ರಾಜ್ಯವಾಗಿದ್ದ ಸಂದರ್ಭ. ತೀರ್ಥಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಕಡಿದಾಳು ಮಂಜಪ್ಪ ಅವರು ಮುಖ್ಯಮಂತ್ರಿ ಗಾದಿಗೆ ಏರಿದರು. 1956ರ ಆಗಸ್ಟ್ 19ರಂದು ಸಿಎಂ ಪದವಿಗೇರಿದ ಕಡಿದಾಳ್ ಮಂಜಪ್ಪ ಅವರು 1956ರ ಅಕ್ಟೋಬರ್ 31ಕ್ಕೆ ಅಧಿಕಾರ ಕಳೆದುಕೊಂಡರು. ಕೇವಲ 73 ದಿನ ಸಿಎಂ ಆಗಿದ್ದರು.

ಬಂಗಾರಪ್ಪಗೆ ಪೂರ್ಣಾವಧಿ ಅಧಿಕಾರ ಸಿಗಲಿಲ್ಲ
ಸೊರಬ ಶಾಸಕರಾಗಿದ್ದ ಎಸ್.ಬಂಗಾರಪ್ಪ ಅವರು 1990ರ ಅಕ್ಟೋಬರ್ 17ರಂದು ಮುಖ್ಯಮಂತ್ರಿಯಾದರು. 1992ರ ನವೆಂಬರ್ 19ರಂದು ರಾಜೀನಾಮೆ ಸಲ್ಲಿಸಿದರು. 2 ವರ್ಷ 33 ದಿನಗಳಷ್ಟೆ ಬಂಗಾರಪ್ಪ ಅವರು ಸಿಎಂ ಗಾದಿಯಲ್ಲಿದ್ದರು. ಕ್ಲಾಸಿಕ್ ಕಂಪ್ಯೂಟರ್ ಹಗರಣದಲ್ಲಿ ಹೆಸರು ಕೇಳಿ ಬಂದಿದ್ದರಿಂದ ಬಂಗಾರಪ್ಪ ಅವರು ಅಧಿಕಾರ ತ್ಯಜಿಸಬೇಕಾಯಿತು. ನಿಧನರಾಗುವ ಸ್ವಲ್ಪ ದಿನ ಮುಂಚೆ, ಹಗರಣದ ಆರೋಪದಿಂದ ಬಂಗಾರಪ್ಪ ಅವರಿಗೆ ಕ್ಲೀನ್ ಚಿಟ್ ಸಿಕ್ಕಿತ್ತು.

ಜೆ.ಹೆಚ್.ಪಾಟೇಲ್ ಅವರಿಗೂ ಅರ್ಧಚಂದ್ರ
ವರ್ಣರಂಜಿತ ರಾಜಕಾರಣಿ ಅನಿಸಿಕೊಂಡಿದ್ದ ಜೆ.ಹೆಚ್.ಪಟೇಲ್ ಅವರು ಚನ್ನಗಿರಿ ಕ್ಷೇತ್ರದಿಂದ ಶಾಸಕರಾಗಿದ್ದರು. ಆಗಿನ್ನೂ ಚನ್ನಗಿರಿ ತಾಲೂಕು ಶಿವಮೊಗ್ಗ ಜಿಲ್ಲೆಯ ವ್ಯಾಪ್ತಿಯಲ್ಲಿತ್ತು. 1996ರ ಮೇ 31ರಂದು ಜೆ.ಹೆಚ್.ಪಟೇಲ್ ಅವರು ಸಿಎಂ ಆಗಿ ಅಧಿಕಾರ ಆರಂಭಿಸಿದರು. 3 ವರ್ಷ 129 ದಿನ ಮುಖ್ಯಮಂತ್ರಿಯಾಗಿದ್ದ ಜೆ.ಹೆಚ್.ಪಟೇಲ್ ಅವರು 7 ಅಕ್ಟೋಬರ್ 1999ರಂದು ಪದತ್ಯಾಗ ಮಾಡಬೇಕಾಯಿತು.

ಯಡಿಯೂರಪ್ಪಗೆ ನಾಲ್ಕು ಬಾರಿ ಅವಕಾಶ
ರಾಜ್ಯದ ಇತಿಹಾಸದಲ್ಲಿ ನಾಲ್ಕು ಸಲ ಸಿಎಂ ಗದ್ದುಗೆ ಮೇಲೆ ಕುಳಿತ ಹಿರಿಮೆ ಬಿ.ಎಸ್.ಯಡಿಯೂರಪ್ಪ ಅವರದ್ದು. 2007ರ ನವೆಂಬರ್ 12ರಿಂದ 2007ರ ನವೆಂಬರ್ 19ರವರೆಗೆ ಏಳು ದಿನ ಸಿಎಂ ಆಗಿದ್ದರು. ಜೆಡಿಎಸ್ ಪಕ್ಷ ಬೆಂಬಲ ಹಿಂಪಡೆದಿದ್ದರಿಂದ ಯಡಿಯೂರಪ್ಪ ಅವರು ಅಧಿಕಾರ ಕಳೆದುಕೊಂಡಿದ್ದರು.

2008ರಲ್ಲಿ ಬಿಜೆಪಿಗೆ ಬಹುಮತ ಲಭಿಸಿ, ಯಡಿಯೂರಪ್ಪ ಅವರು ಸಿಎಂ ಆದರು. 2008ರ ಮೇ 30ರಿಂದ ಮೂರು ವರ್ಷ 66 ದಿನ ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದರು. ಆದರೆ ಭ್ರಷ್ಟಾಚಾರ ಆರೋಪ ಸಂಬಂಧ 2011ರ ಆಗಸ್ಟ್ 4ರಂದು ರಾಜೀನಾಮೆ ಸಲ್ಲಿಸಬೇಕಾಯಿತು. 2018ರ ಮೇ 17ರಂದು ಮತ್ತೆ ಸಿಎಂ ಆದ ಯಡಿಯೂರಪ್ಪ ಅವರು ಬಹುಮತ ಇಲ್ಲದೆ ಆರು ದಿನದಲ್ಲಿ, ಅಂದರೆ, 2018ರ ಮೇ 23ರಂದು ಸಿಎಂ ಸ್ಥಾನದಿಂದ ಕೆಳಗಿಳಿಯಬೇಕಾಯಿತು.

ಬಳಿಕ 2019ರ ಜುಲೈ 26ರಂದು ಮತ್ತೆ ಅಧಿಕಾರಕ್ಕೇರಿದ ಯಡಿಯೂರಪ್ಪ ಅವರು ಇಂದು ಪದತ್ಯಾಗ ಮಾಡಿದ್ದಾರೆ. ಈ ಮೂಲಕ ರಾಜ್ಯಕ್ಕೆ ಅತ್ಯಧಿಕ ಸಿಎಂಗಳನ್ನು ಕೊಟ್ಟರೂ, ಶಿವಮೊಗ್ಗ ಜಿಲ್ಲೆಯವರು ಪೂರ್ಣಾವಧಿ ಅಧಿಕಾರ ನಡೆಸಲು ಸಾಧ್ಯವಾಗದಿರುವುದು ವಿಪಯಾರ್ಯಸವೇ ಸರಿ.

ವಿಶೇಷ ವರದಿ: ಪ್ರಸನ್ನ, ನ್ಯೂಸ್ ಫಸ್ಟ್​, ಶಿವಮೊಗ್ಗ

The post ರಾಜ್ಯಕ್ಕೆ ನಾಲ್ವರು ಸಿಎಂ ಕೊಟ್ಟ ಶಿವಮೊಗ್ಗ.. ಆದ್ರೆ ಪೂರ್ಣಾವಧಿ ಮುಖ್ಯಮಂತ್ರಿ ಯಾರೂ ಆಗಲೇ ಇಲ್ಲ appeared first on News First Kannada.

Source: newsfirstlive.com

Source link