ಬೂಕನಕೆರೆಯ ಯಡಿಯೂರಪ್ಪ.. ಶಿಕಾರಿಪುರದಲ್ಲಿ ರಾಜಕೀಯದ ಸೈಕಲ್ ತುಳಿದದ್ದೇ ರೋಚಕ

ಬೂಕನಕೆರೆಯ ಯಡಿಯೂರಪ್ಪ.. ಶಿಕಾರಿಪುರದಲ್ಲಿ ರಾಜಕೀಯದ ಸೈಕಲ್ ತುಳಿದದ್ದೇ ರೋಚಕ

ಯಡಿಯೂರಪ್ಪ ಗುಡುಗಿದರೆ, ವಿಧಾನಸೌಧ ನಡುಗುವುದು ಹೌದು.. ಇದು ರಾಜ್ಯ ಕಂಡ ಅಪರೂಪದ ರಾಜಕಾರಣಿ, ಹೋರಾಟಗಾರ ಹಾಗೂ ಹಠವಾದಿ ಗುಣದ ಯಡಿಯೂರಪ್ಪ ಅವರ ಕುರಿತು ಚಾಲ್ತಿಯಲ್ಲಿರುವ ಮಾತು. ಆದರೆ ಈ ಮಾತು ಸುಖಾಸುಮ್ಮನೆ ಹುಟ್ಟಲಿಲ್ಲ. ನಿರಂತರ ಹೋರಾಟ, ಸತತ ಓಡಾಟ ಹಾಗೂ ವಿಧಾನ ಮಂಡಲದ ಉಭಯ ಸದನಗಳಲ್ಲಿ ಪಟ್ಟು ಬಿಡದ ಹಠದಿಂದ ಹುಟ್ಟಿಕೊಂಡದ್ದು.

ಮಂಡ್ಯದ ಬೂಕನಕೆರೆಯಿಂದ ಲಿಂಬೆಹಣ್ಣು ವ್ಯಾಪಾರಕ್ಕಾಗಿ ಬಂದು ನಂತರ ಜನಸಂಘದ ಸಂಪರ್ಕಕ್ಕೆ ಬಂದ ಯಡಿಯೂರಪ್ಪ ಅವರ ರಾಜಕೀಯ ಜೀವನದ ಹಾದಿ ಏನೂ ಹೂವಿನ ಹಾಸಿಗೆ ಅಲ್ಲ. ಅದು ಕಲ್ಲು-ಮುಳ್ಳಿನಿಂದ ಕೂಡಿದ ದುರ್ಗಮ ಮಾರ್ಗವೇ ಆಗಿತ್ತು. ಆದರೂ ಅವರಲ್ಲಿನ ಹೋರಾಟದ ಗುಣವನ್ನು ಗುರುತಿಸಿದ್ದ ಶಿಕಾರಿಪುರದ ಜನರು ಅವರನ್ನು ತಮ್ಮ ನಾಯಕನಾಗಿ ಒಪ್ಪಿಕೊಂಡು ಬೆಳೆಸಿದ ಪರಿ ನಿಜಕ್ಕೂ ಊಹೆಗೆ ನಿಲುಕದ್ದು.

blank

ಶಿಕಾರಿಪುರ ಪುರಸಭೆಗೆ ಸದಸ್ಯನಾಗುವ ಮೂಲಕ ಸಕ್ರೀಯ ರಾಜಕಾರಣಕ್ಕೆ ಕಾಲಿಟ್ಟ ಯಡಿಯೂರಪ್ಪರ ರಾಜಕೀಯ ಜೀವನ ಅಲ್ಲಿಗೆ ಮುಗಿಯಲಿಲ್ಲ. ಬದಲಿಗೆ ಅದು ಇನ್ನಷ್ಟು ಸಾಧಿಸುವ ಛಲದೊಂದಿಗೆ ಮುಂದುವರಿಯಿತು. ಇದರ ಪರಿಣಾಮ ಯಡಿಯೂರಪ್ಪ ನೇತೃತ್ವದಲ್ಲಿ ಅನೇಕ ಹೋರಾಟಗಳು ರೂಪುಗೊಂಡವು. ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಜೀತ ಪದ್ಧತಿ ರದ್ಧತಿ ಹೋರಾಟ, ಬಗರ್​ ಹುಕುಂ ರೈತರನ್ನು ಒಕ್ಕಲೆಬ್ಬಿಸುವುದರ ವಿರುದ್ಧದ ಹೋರಾಟ, ಕೂಲಿಗಾಗಿ ಕಾಳು ಹೋರಾಟ. ಮೆಕ್ಕೆಜೋಳಕ್ಕೆ ಬೆಂಬಲ ಘೋಷಣೆ ಹಾಗೂ ಖರೀದಿ ಕೇಂದ್ರ ಸ್ಥಾಪನೆ ಹೋರಾಟ. ಏತ ನೀರಾವರಿ ಹೋರಾಟ.

ತನ್ನ ಸಮಕಾಲೀನರಾದ ಪದ್ಮನಾಭ ಭಟ್​, ದಾನಿ ರುದ್ರಪ್ಪ, ಮಂಚಿ ವೆಂಕಟರಮಣಪ್ಪ, ಶಾಂತವೀರಪ್ಪ ಗೌಡ ಅವರೊಂದಿಗೆ ಸೈಕಲ್​ ಏರಿ ಶಿಕಾರಿಪುರ ತಾಲೂಕಿನಾದ್ಯಂತ ಸಂಚರಿಸಿ ಪಕ್ಷ ಕಟ್ಟಿದ ಕೀರ್ತಿ ಯಡಿಯೂರಪ್ಪರಿಗೆ ಸಲ್ಲುತ್ತದೆ.

ಅಧಿಕಾರ ಇರಲಿ, ಇಲ್ಲದಿರಲಿ. ಪಕ್ಷದ ಶಾಸಕರ ಸಂಖ್ಯೆ ಕಡಿಮೆ ಇರಲಿ, ಹೆಚ್ಚಿರಲಿ. ಇದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಹಠಾತ್​ ನಿರ್ಧಾರ ತೆಗೆದುಕೊಂಡು ಅದನ್ನು ಸಾಧಿಸುವ ತನಕ ಛಲ ಬಿಡದ ತಿವಿಕ್ರಮನಂತೆ ಹೋರಾಟ ನಡೆಸುವುದು ಯಡಿಯೂರಪ್ಪ ಅವರ ಗುಣ ಎಂದು ಸಮಕಾಲೀನರು ಹೇಳುತ್ತಾರೆ.

blank

ವಿಧಾನಸಭೆ, ವಿಧಾನ ಪರಿಷತ್​ ಹಾಗೂ ಲೋಕಸಭೆಯನ್ನು ಪ್ರತಿನಿಧಿಸಿದ ಕೀರ್ತಿಗೆ ಭಾಜನರಾಗಿರುವ ಯಡಿಯೂರಪ್ಪ ರಾಜಕೀಯ ಜೀವನದ ಇಳಿ ವಯಸ್ಸಿನಲ್ಲೂ ತಮ್ಮ ಸ್ವ ಕ್ಷೇತ್ರ ಶಿಕಾರಿಪುರ ಹಾಗೂ ತವರು ಜಿಲ್ಲೆ ಶಿವಮೊಗ್ಗದ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು.
ಇದರ ಪರಿಣಾಮವಾಗಿ ಶಿವಮೊಗ್ಗ ಇಂದು ನಿರೀಕ್ಷೆಗೂ ಮೀರಿ ಪ್ರಗತಿ ಸಾಧಿಸಿದೆ. ರೈಲ್ವೆ, ಹೆದ್ದಾರಿ, ವಿಮಾನ ನಿಲ್ದಾಣ, ಸರ್ಕಾರಿ ಮೆಡಿಕಲ್​ ಕಾಲೇಜು, ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯ, ಸಿಗಂದೂರು ಸೇತುವೆ ಹೀಗೆ ಪ್ರತಿಯೊಂದು ಯೋಜನೆ ಹಾಗೂ ಸೌಕರ್ಯದ ಹಿಂದೆ ಯಡಿಯೂರಪ್ಪ ಅವರ ಶ್ರಮ ಇದೆ.

ಮಾಜಿ ಸಿಎಂ ದಿವಂಗತ ಎಸ್​.ಬಂಗಾರಪ್ಪ ಹಾಗೂ ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರಂತಹ ಮುತ್ಸದ್ಧಿಗಳ ಪ್ರಭಾವವಿದ್ದ ಜಿಲ್ಲೆಯ ಕಾಂಗ್ರೆಸ್​ನ್ನು ಮೂಲೆಗುಂಪು ಮಾಡಿ ಇಡೀ ಜಿಲ್ಲೆಯಲ್ಲಿ ಕಮಲ ಅರಳಿಸಿರುವುದರ ಹಿಂದೆ ಯಡಿಯೂರಪ್ಪರ ವರ್ಚಸ್ಸು ಮತ್ತು ಶ್ರಮ ಕೆಲಸ ಮಾಡಿದೆ ಎಂದರೆ ತಪ್ಪಾಗಲಾರದು.

blank

ಮಾತೃ ಬಿಜೆಪಿಯಲ್ಲಿದ್ದಾಗಲೂ, ಬಿಜೆಪಿಯಿಂದ ಹೊರಬಂದು ಕೆಜೆಪಿ ಕಟ್ಟಿದಾಗಲೂ ಹಾಗೂ ಆ ನಂತರದ ಬೆಳವಣಿಗೆಯಿಂದಾಗಿ ಮತ್ತೆ ಮಾತೃ ಪಕ್ಷಕ್ಕೆ ಸೇರ್ಪಡೆಗೊಂಡಾಗಲೂ ಯಡಿಯೂರಪ್ಪ ಅವರ ಹೋರಾಟದ ಸ್ವಭಾವದಲ್ಲಿ ಬದಲಾವಣೆ ಕಾಣಲಿಲ್ಲ. ಜಿಗುಟು ವ್ಯಕ್ತಿತ್ವ ಹೋಗಲಿಲ್ಲ. ಬಹುಶಃ ಇದೇ ಕಾರಣಕ್ಕೆ ಯಡಿಯೂರಪ್ಪ ಗುಡುಗಿದರೆ, ವಿಧಾನಸೌಧ ನಡುಗುವುದು ಎಂಬ ಘೋಷಣೆ ಹುಟ್ಟಿಕೊಂಡಿತೋ ಏನು?

ವಿಶೇಷ ವರದಿ: ಪ್ರಸನ್ನ, ನ್ಯೂಸ್​ ಫಸ್ಟ್​, ಶಿವಮೊಗ್ಗ.

The post ಬೂಕನಕೆರೆಯ ಯಡಿಯೂರಪ್ಪ.. ಶಿಕಾರಿಪುರದಲ್ಲಿ ರಾಜಕೀಯದ ಸೈಕಲ್ ತುಳಿದದ್ದೇ ರೋಚಕ appeared first on News First Kannada.

Source: newsfirstlive.com

Source link