ಚೆಕ್ ಬೌನ್ಸ್ ಕೇಸ್ ವಿಚಾರಣೆಗೆ ಹೈಕೋರ್ಟ್ ಅಸ್ತು.. ಶ್ರೀರಾಮುಲುಗೆ ಸಂಕಷ್ಟ

ಚೆಕ್ ಬೌನ್ಸ್ ಕೇಸ್ ವಿಚಾರಣೆಗೆ ಹೈಕೋರ್ಟ್ ಅಸ್ತು.. ಶ್ರೀರಾಮುಲುಗೆ ಸಂಕಷ್ಟ

ಬೆಂಗಳೂರು: ಮಾಜಿ ಸಚಿವ ಶ್ರೀರಾಮುಲುಗೆ ಚೆಕ್ ಬೌನ್ಸ್ ಸಂಕಷ್ಟ ಎದುರಾಗಿದ್ದು ಶ್ರೀರಾಮುಲು ವಿರುದ್ಧದ 2.9 ಕೋಟಿ ರೂಪಾಯಿಯ ಚೆಕ್ ಬೌನ್ಸ್ ಕೇಸ್ ವಿಚಾರಣೆಗೆ ಹೈಕೋರ್ಟ್ ಸಮ್ಮತಿಸಿದೆ.

ಮೈಸೂರು ನಿವಾಸಿ ಎಲ್.ಸೋಮಣ್ಣ ಎಂಬವರು ಶ್ರೀರಾಮುಲು ವಿರುದ್ಧ ದೂರು‌ ನೀಡಿದ್ದರು. ಪೊಲೀಸರು ಪ್ರಕರಣ ಕುರಿತಂತೆ ತನಿಖೆ ನಡೆಸಿ‌ ಚಾರ್ಜ್ ಶೀಟ್ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಅಧೀನ ನ್ಯಾಯಾಲಯ ಪ್ರಕರಣದಿಂದ ಶ್ರೀರಾಮುಲುರನ್ನ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್​​ನ ನ್ಯಾ. ಸುನಿಲ್ ದತ್ ಯಾದವ್ ಅವರಿದ್ದ ಏಕ ಸದಸ್ಯ ಪೀಠ, ಅರ್ಜಿದಾರರ ಪರ ವಕೀಲರ ವಾದ ಆಲಿಸಿ, ಮೇಲ್ಮನವಿಯನ್ನು ವಿಚಾರಣೆಗೆ ಅಂಗೀಕರಿಸಿ ಆ. 9ಕ್ಕೆ ಪ್ರಕರಣದ ವಿಚಾರಣೆ ಮುಂದೂಡಿಕೆ ಮಾಡಿದೆ.

blank

ಏನಿದು ಪ್ರಕರಣ?
2014ರಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಶ್ರೀರಾಮುಲು ಅವರು ಆ ವೇಳೆ ಎಲ್. ಸೋಮಣ್ಣರಿಂದ ಒಟ್ಟು 2,96,70,000 ರೂಪಾಯಿ ಹಣವನ್ನು ಮೂರು ಕಂತಿನಲ್ಲಿ ಪಡೆದುಕೊಂಡಿದ್ದರಂತೆ. ಆದರೆ ಈ ಹಣವನ್ನು ಹಿಂದಿರುಗಿಸಿರಲಿಲ್ಲವಂತೆ. ಅರ್ಜಿದಾರರು ಹಣ ಕೇಳಿದರೆ ವಿಧಾನ ಪರಿಷತ್ ಸದಸ್ಯ ಸ್ಥಾನ ಕೊಡಿಸುತ್ತೇನೆ.. ಇಲ್ಲಾ, ಬಳ್ಳಾರಿ ಲೋಕಸಭೆ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿದ್ದರು. ಈ ಎರಡೂ ಆಗದಿದ್ದರೆ ಹಣ ಹಿಂದಿರುಗಿಸುವುದಾಗಿ ತಿಳಿಸಿ ಅದಕ್ಕೆ ಭದ್ರತೆಗಾಗಿ ಚೆಕ್ ಕೊಟ್ಟಿದ್ದರು ಎಂದು ಅರ್ಜಿದಾರ ಸೋಮಣ್ಣ ಆರೋಪ ಮಾಡಿದ್ದರು.

ಅಂತಿಮವಾಗಿ ಹಣವನ್ನು ಶ್ರೀರಾಮುಲು ವಾಪಸ್ ನೀಡಿರಲಿಲ್ಲ. ಕೊನೆಗೆ ಚೆಕ್​​ಅನ್ನು ಬ್ಯಾಂಕಿಗೆ ಹಾಕಿದಾಗ ಬೌನ್ಸ್ ಆಗಿದೆ. ಹಣ ಕೇಳಿ ಸೋಮಣ್ಣ ಬಳ್ಳಾರಿಗೆ ತೆರಳಿ ಶ್ರೀರಾಮುಲು ಪ್ರಶ್ನಿಸಿದಕ್ಕೆ ಶ್ರೀರಾಮಲು ಅವರು ಹಲ್ಲೆ ನಡೆಸಿದ್ದರು ಎಂದು ಸೋಮಣ್ಣ ಆರೋಪಿಸಿ ಬಳ್ಳಾರಿಯ ಕೌಲ್ ಬಜಾರ್ ಠಾಣೆಗೆ ದೂರು ನೀಡಿದ್ದರು ಎನ್ನಲಾಗಿದೆ.

ದೂರಿನ ತನಿಖೆ ನಡೆಸಿ ಪೊಲೀಸರು ವಂಚನೆ ಆರೋಪದಡಿ ಚಾರ್ಜ್ ಶೀಟ್ ದಾಖಲಿಸಿದ್ದರು. ಬೌನ್ಸ್ ಆಗಿರುವ ಚೆಕ್‌ ಗಳನ್ನೂ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣವನ್ನು ವಿಚಾರಣೆ ನಡೆಸಿದ್ದ ಬಳ್ಳಾರಿಯ ವಿಚಾರಣಾ ನ್ಯಾಯಾಲಯ 2019ರಲ್ಲಿ ಶ್ರೀರಾಮುಲು ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶಿಸಿತ್ತು.

ಆದರೆ ಸಾಕ್ಷ್ಯಾಧಾರಗಳಿದ್ದರೂ ಶ್ರೀರಾಮುಲು ಅವರನ್ನು ಖುಲಾಸೆ ಮಾಡಿದ್ದಾರೆ. ಇದು ನ್ಯಾಯಸಮ್ಮತವಲ್ಲ ಎಂದು ಅರ್ಜಿದಾರ ಪರ ವಕೀಲ ಬಾಲನ್ ವಾದ ಮಂಡಿಸಿದ್ದು, ಸದ್ಯ ವಾದ ಪರಿಗಣಿಸಿದ ಪೀಠ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಲು ಸಮ್ಮಿತಿಸಿದೆ.

The post ಚೆಕ್ ಬೌನ್ಸ್ ಕೇಸ್ ವಿಚಾರಣೆಗೆ ಹೈಕೋರ್ಟ್ ಅಸ್ತು.. ಶ್ರೀರಾಮುಲುಗೆ ಸಂಕಷ್ಟ appeared first on News First Kannada.

Source: newsfirstlive.com

Source link