ನೆರೆ ವಿಪತ್ತಿಗೆ ₹629 ಕೋಟಿ ಪರಿಹಾರ -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್

ನೆರೆ ವಿಪತ್ತಿಗೆ ₹629 ಕೋಟಿ ಪರಿಹಾರ -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್

1. ಇಂದು ಬಸವ‘ರಾಜ’ ಬೊಮ್ಮಾಯಿ ಪಟ್ಟಾಭಿಷೇಕ

blank

ನೂತನ ಸಿಎಂ ಆಗಿ ಆಯ್ಕೆಯಾಗಿರವ ಬಸವರಾಜ್ ಬೊಮ್ಮಾಯಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ರಾಜಭವನದಲ್ಲಿ ನೂತನ ಸಿಎಂಗೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಬೊಮ್ಮಾಯಿ ಅವರನ್ನ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಿದ ಬೆನ್ನಲ್ಲೇ, ಬಿಜೆಪಿ ನಿಯೋಗ ರಾಜ್ಯಪಾಲರನ್ನ ನಿನ್ನೆ ಭೇಟಿ ಮಾಡಿತ್ತು. ಬೊಮ್ಮಾಯಿ ನೇತೃತ್ವದ ನಿಯೋಗ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡುವಂತೆ ರಾಜ್ಯಪಾಲರ ಬಳಿ ಮನವಿ ಮಾಡಿಕೊಂಡಿತ್ತು. ಅದರಂತೆ ಇಂದು ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

2. ಎಸ್​.ವಿ.ರಾಮಚಂದ್ರಪ್ಪಗೆ ಸಚಿವ ಸ್ಥಾನ ನೀಡಲೇಬೇಕು

ಸಿಎಂ ಬದಲಾದ ಬೆನ್ನಲ್ಲೇ ದಾವಣಗೆರೆಯಲ್ಲೂ ಸಚಿವ ಸ್ಥಾನದ ಲಾಬಿ ಶುರುವಾಗಿದೆ. ವಾಲ್ಮೀಕಿ ಸಮುದಾಯ ಶಾಸಕ ಎಸ್‌.ವಿ.ರಾಮಚಂದ್ರಪ್ಪಗೆ ಈ ಬಾರಿ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ. ದಾವಣಗೆರೆಯಲ್ಲಿ ಮಾತನಾಡಿರುವ ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾಧ್ಯಕ್ಷ ಬಿ.‌ವೀರಣ್ಣ, ಈ ಮೊದಲು ಬಿಎಸ್​ವೈ ಸಂಪುಟದಲ್ಲಿಯೂ ಸಚಿವ ಸ್ಥಾನ ಕೊಡಲಿಲ್ಲ. ಈ ಬಾರಿಯಾದ್ರೂ ಜಗಳೂರು ಶಾಸಕ ಎಸ್​.ವಿ.ರಾಮಚಂದ್ರಪ್ಪಗೆ ಸಚಿವ ಸ್ಥಾನ ನೀಡಲೇಬೇಕು ಅಂತ ಆಗ್ರಹಿಸಿದ್ದಾರೆ.

3. ಕಳೆದ ವರ್ಷದ ನೆರೆ ವಿಪತ್ತಿಗೆ ₹629 ಕೋಟಿ ಪರಿಹಾರ

blank

ಕಳೆದ ವರ್ಷ ಕರ್ನಾಟಕದಲ್ಲಿ ಸಂಭವಿಸಿದ ಅತಿವೃಷ್ಟಿಯಿಂದಾಗಿ ಅಪಾರ ಪ್ರಮಾಣದ ಬೆಳೆ ನಾಶ ಹಾಗೂ ಆಸ್ತಿಪಾಸ್ತಿ ನಷ್ಟವಾಗಿತ್ತು. ಇದಕ್ಕೆ ಪರಿಹಾರವಾಗಿ ಕೇಂದ್ರ ಸರ್ಕಾರ 629 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ರಾಜ್ಯದಲ್ಲಿ ಪ್ರತಿ ವರ್ಷವೂ ವರುಣ ಅಬ್ಬರದಿಂದಾಗಿ ನೈಸರ್ಗಿಕ ವಿಪತ್ತುಗಳು ಸಂಭವಿಸುತ್ತಿವೆ. ಭಾರೀ ಮಳೆ, ನದಿಯ ಭೋರ್ಗರೆತದಿಂದಾಗಿ ರೈತರ ಜಮೀನುಗಳೂ ಜಲಾವೃತಗೊಳ್ಳುತ್ತಿವೆ, ಮನೆ, ಮಠಗಳು ಕುಸಿದು ಬೀಳುತ್ತಿವೆ. ಹೀಗಾಗಿ ಇಂಥ ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿರೋ ಕುಟುಂಬಗಳಿಗೆ ಕೇಂದ್ರ ಸರ್ಕಾರ ಪರಿಹಾರವನ್ನ ಘೋಷಣೆ ಮಾಡಿದೆ.

4. ಜುಲೈ 27ರಿಂದ 31 ರವರೆಗೆ ವ್ಯಾಪಕ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿ ಉತ್ತರ ಭಾಗದಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ಹಲವೆಡೆ ಜುಲೈ 31ರವರೆಗೆ ವ್ಯಾಪಕ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಲ್ಲಿ ಜುಲೈ 27ರಿಂದ ಜುಲೈ 31ರವರೆಗೆ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಮಾತ್ರ ಮಳೆಯಾಗುವ ಹೆಚ್ಚಿನ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಮುಂದುವರಿಯಲಿದೆ ಎಂದು ಪ್ರಾದೇಶಿಕ ನಿರ್ದೇಶಕ ಸಿ.ಎಸ್‌.ಪಾಟೀಲ್‌ ತಿಳಿಸಿದ್ದಾರೆ.

5. ಪ್ರತಿ ಗಂಟೆಗೆ 1.50 ಲಕ್ಷ ಮಂದಿಗೆ ಕೋವಿಡ್ ಲಸಿಕೆ

blank

ಭಾರತದಲ್ಲಿ ಪ್ರತಿ ಗಂಟೆಗೆ 1.50 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾ ಲಸಿಕೆಯನ್ನು ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 193 ದಿನಗಳೇ ಕಳೆದಿದ್ದು, ಈವರೆಗೂ 44 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ. ಮಂಗಳವಾರ ರಾತ್ರಿ 7 ಗಂಟೆ ವೇಳೆಗೆ 36 ಲಕ್ಷ 87 ಸಾವಿರದ 239 ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ. ದೇಶದಲ್ಲಿ ಈವರೆಗೂ 44 ಕೋಟಿ 58 ಲಕ್ಷ 39 ಸಾವಿರದ 699 ಫಲಾನುಭವಿಗಳಿಗೆ ಕೊವಿಡ್ ಲಸಿಕೆಯನ್ನು ವಿತರಿಸಲಾಗಿದೆ.

6. ಆಗಸ್ಟ್​ನಿಂದ ಮಕ್ಕಳಿಗೆ ಕೊರೊನಾ ಲಸಿಕೆ?

ಆಗಸ್ಟ್‌ನಿಂದ ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ನಿರೀಕ್ಷೆಯಿದೆ ಅಂತಾ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡೆೋವಿಯಾ ಹೇಳಿದ್ದಾರೆ. ಮಕ್ಕಳ ಮೇಲೆ ಭಾರತ್ ಬಯೋಟೆಕ್‌ ಸಿದ್ಧಪಡಿಸಿದ, ಕೋವಾಕ್ಸಿನ್ ಲಸಿಕೆಯ ಪ್ರಯೋಗಗಳು ನಡೆಯುತ್ತಿವೆ. ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಲಸಿಕೆ ನೀಡುವ ಸಾಧ್ಯತೆ ಇದೆ ಎಂದು ಕಳೆದ ವಾರ ಏಮ್ಸ್ ನಿರ್ದೇಶಕ ಡಾ. ರಂದೀಪ್ ಗುಲೇರಿಯಾ ಹೇಳಿದ್ದರು. ಪ್ರಸ್ತುತ ದೆಹಲಿ ಏಮ್ಸ್‌ನಲ್ಲಿ 2 ರಿಂದ 6 ವರ್ಷ ವಯಸ್ಸಿನ ಮಕ್ಕಳ ಮೇಲೆ ಕೋವ್ಯಾಕ್ಸಿನ್ ಪ್ರಯೋಗಗಳು ನಡೆಯುತ್ತಿವೆ.

7. ಮಕ್ಕಳ ಮೇಲೆ ‘ಕೋವೊವ್ಯಾಕ್ಸ್‌’​ ಟ್ರಯಲ್​ಗೆ ಅನುಮತಿ

2 ರಿಂದ 17 ವರ್ಷ ವಯೋಮಾನದವರ ಮೇಲೆ ಕೋವಿಡ್‌ ಲಸಿಕೆ ‘ಕೋವೊವ್ಯಾಕ್ಸ್‌’ನ 2 ಮತ್ತು 3ನೇ ಹಂತದ ಟ್ರಯಲ್‌ಗಳನ್ನು ನಡೆಸಲು ಸೀರಂ ಇನ್ಸ್‌ಟಿಟ್ಯೂಟ್‌ ಆಫ್‌ ಇಂಡಿಯಾಗೆ ಅನುಮತಿ ನೀಡುವಂತೆ ಡಿಸಿಜಿಐ ಶಿಫಾರಸು ಮಾಡಿದೆ. ಅಮೆರಿಕ ಮೂಲದ ನೋವಾವ್ಯಾಕ್ಸ್‌ ಕಂಪನಿ ‘ಕೋವೊವ್ಯಾಕ್ಸ್‌’ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಭಾರತದಲ್ಲಿ ಈ ಲಸಿಕೆಯ ಉತ್ಪಾದನೆಗೆ ಎಸ್‌ಐಐಗೆ ಕಳೆದ ವರ್ಷ ಆಗಸ್ಟ್‌ನಲ್ಲಿ ಕಂಪನಿ ಪರವಾನಗಿ ನೀಡಿದೆ. ‘ಕೆಲವು ಷರತ್ತುಗಳೊಂದಿಗೆ ಟ್ರಯಲ್‌ ನಡೆಸಲು ಅನುಮತಿ ನೀಡುವಂತೆ ಡಿಸಿಜಿಐ ಕೇಂದ್ರ ಆರೋಗ್ಯ ಇಲಾಖೆಗೆ ಶಿಫಾರಸು ಮಾಡಿದೆ.

8. ರಾಜ್​ ಕುಂದ್ರಾ ಸತ್ಯಾಂಶ ಬಿಚ್ಚಿಟ್ಟ ಮಾಡೆಲ್

blank
ಅಶ್ಲೀಲ ಚಿತ್ರ ನಿರ್ಮಾಣ ಆರೋಪದಡಿ ಉದ್ಯಮಿ ರಾಜ್​ ಕುಂದ್ರಾ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿದ್ದಾರೆ. ಅಶ್ಲೀಲ ಚಿತ್ರ ನಿರ್ಮಾಣ ಪ್ರಕರಣಕ್ಕೆ ಮಾಡೆಲ್ ಸಾಗರಿಕಾರಿಂದ ಮತ್ತಷ್ಟು ಮಾಹಿತಿ ದೊರಕಿದೆ. ಪ್ರಕರಣದ ಆರೋಪಿ ರಾಜ್​ಕುಂದ್ರಾರ ಬಗ್ಗೆ ಮಾಡೆಲ್ ಸಾಗರಿಕಾ ಸತ್ಯಾಂಶವನ್ನ ಚಿಚ್ಚಿಟ್ಟಿದ್ದಾರೆ. ರಾಜ್​ ಕುಂದ್ರಾ ಅವರು ಅಶ್ಲೀಲ ಚಿತ್ರಗಳನ್ನ ನಿರ್ಮಿಸಲು, ಬಿಗ್​ ಬಾಸ್​ ಸ್ಪರ್ಧಿಗಳನ್ನೇ ಟಾರ್ಗೆಟ್​ ಮಾಡುತ್ತಿದ್ರು. ಅದಕ್ಕೆ ಬಿಗ್​ ಬಾಸ್​ ಸ್ಪರ್ಧಿ, ಆರ್ಶಿಖಾನ್​ ಅವರನ್ನ ಕೂಡ ಕೇಳಿದ್ದಾಗಿ ತಿಳಿಸಿದ್ರು. ಇದಕ್ಕೆ ಆರ್ಶಿಖಾನ್​ 5 ಲಕ್ಷ ರೂಪಾಯಿ ಹಣವನ್ನ ಕೇಳಿದ್ದಕ್ಕಾಗಿ, ಅವರನ್ನ ಕೈ ಬಿಡಲಾಗಿತ್ತು ಅನ್ನೋ ಮಾಹಿತಿ ಬಿಚ್ಚಿಟ್ಟಿದ್ದಾರೆ.

9. ಆ.1ರಿಂದ ಭಾರತ-ರಷ್ಯಾ ಸೇನಾ ಸಮರಾಭ್ಯಾಸ
ರಷ್ಯಾದ ವೋಲ್ಗೊಗ್ರ್ಯಾಡ್‌ನಲ್ಲಿ ಆಗಸ್ಟ್‌ 1ರಿಂದ 13ರವರೆಗೆ ಭಾರತ ಮತ್ತು ರಷ್ಯಾ ಜಂಟಿಯಾಗಿ ಮಿಲಿಟರಿ ತಾಲೀಮು ನಡೆಸಲಿವೆ ಎಂದು ಭಾರತೀಯ ಸೇನೆ ತಿಳಿಸಿದೆ. ‘12ನೇ ಆವೃತ್ತಿಯ ‘ಇಂದ್ರ’ ತಾಲೀಮು ಉಭಯ ದೇಶಗಳ ನಡುವಿನ ಭದ್ರತಾ ಸಹಕಾರವನ್ನು ಬಲಪಡಿಸುವಲ್ಲಿ ಮತ್ತೊಂದು ಮೈಲಿಗಲ್ಲು ಆಗಲಿದೆ. ಭಾರತ ಮತ್ತು ರಷ್ಯಾದ ನಡುವಿನ ದೀರ್ಘಕಾಲದ ಸ್ನೇಹ ಬಲಪಡಿಸುವಲ್ಲಿಯೂ ಇದು ಸಹಾಯವಾಗಲಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ. ಮಿಲಿಟರಿ ತಾಲೀಮಿನಲ್ಲಿ ಎರಡೂ ದೇಶಗಳ ತಲಾ 250 ಸೇನಾ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ.

10. ಸ್ಪೇನ್​ ಮಣಿಸಿದ ಭಾರತದ ಪುರುಷರ ಹಾಕಿ ಟೀಂ

blank

ಟೋಕಿಯೋ ಒಲಂಪಿಕ್ಸ್‌ನಲ್ಲಿ ಆಸ್ಟ್ರೇಲಿಯಾ ಎದುರಿನ ಪಂದ್ಯದಲ್ಲಿ ಸೋಲಿನಿಂದ ಕಂಗೆಟ್ಟಿದ್ದ ಭಾರತದ ಪುರುಷರ ಹಾಕಿ ತಂಡ ಪುಟಿದೆದ್ದಿದ್ದು ಗೆಲುವಿನ ಲಯಕ್ಕೆ ಮರಳಿದೆ. ಸ್ಪೇನ್ ವಿರುದ್ಧದ ಪಂದ್ಯದಲ್ಲಿ ಭಾರತ 3-0 ಅಂತರದಿಂದ ಜಯ ಗಳಿಸಿದೆ. ಡ್ರ್ಯಾಗ್‌ ಫ್ಲಿಕ್ಕರ್ ರೂಪಿಂದರ್ ಪಾಲ್ ಸಿಂಗ್‌ರ ಎರಡು ಗೋಲುಗಳು ಮತ್ತು ಸಿಮ್ರನ್‌ಜೀತ್ ಸಿಂಗ್‌ ಗಳಿಸಿದ ಒಂದು ಗೋಲು ತಂಡ ಮೇಲುಗೈ ಸಾಧಿಸಲು ಕಾರಣವಾಯಿತು. ಇದರೊಂದಿಗೆ ಮನ್‌ಪ್ರೀತ್ ಸಿಂಗ್ ಬಳಗದ ಕ್ವಾರ್ಟರ್ ಫೈನಲ್ ಪಂದ್ಯ ಫೈನಲ್ ಕನಸಿಗೆ ರೆಕ್ಕೆ ಪುಕ್ಕ ಬಂದಂತಾಗಿದೆ.

The post ನೆರೆ ವಿಪತ್ತಿಗೆ ₹629 ಕೋಟಿ ಪರಿಹಾರ -ಈ ಹೊತ್ತಿನ ಟಾಪ್ 10 ಸುದ್ದಿಗಳ ಕ್ವಿಕ್​ ರೌಂಡ್​​ಅಪ್ appeared first on News First Kannada.

Source: newsfirstlive.com

Source link