ತಾಳ್ಮೆ, ಪ್ರಾಮಾಣಿಕತೆ ಕಾಪಾಡಿಕೊಂಡ್ರೆ ಅಧಿಕಾರ ಹುಡುಕಿಕೊಂಡು ಬರುತ್ತೆ ಎಂಬುದಕ್ಕೆ ಬೊಮ್ಮಾಯಿ ಸಾಕ್ಷಿ: ಪಂಡಿತಾರಾಧ್ಯ ಸ್ವಾಮೀಜಿ

ಚಿತ್ರದುರ್ಗ: ಪ್ರಾಮಾಣಿಕತೆ, ತಾಳ್ಮೆ ಹಾಗೂ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಂಡರೆ ಅಧಿಕಾರ ಹುಡುಕಿಕೊಂಡು ಬರುತ್ತದೆ ಎನ್ನುವುದಕ್ಕೆ ನೂತನ ಮುಖ್ಯಮಂತ್ರಿಗಳಾಗಿ ನೇಮಕಗೊಂಡಿರುವ ಬಸವರಾಜ ಬೊಮ್ಮಾಯಿಯವರೇ ಸಾಕ್ಷಿ ಎಂದು ಹಳ್ಳಿ ತರಳಬಾಳು ಶಾಖಾ ಮಠದ ಪೀಠಾಧ್ಯಕ್ಷ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮುತ್ತುಗದೂರು ಗ್ರಾಮದ ಪ್ರಗತಿಪರ ಕೃಷಿಕ ಗೋಣಿ ಬಸವಂತಪ್ಪನವರ ಸ್ಮರಣೋತ್ಸವ ಹಾಗು ಸರ್ವಶರಣರ ಸಮ್ಮೇಳನದ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಬಸವರಾಜ ಬೊಮ್ಮಾಯಿ ಶುದ್ಧ ನಡೆ ನುಡಿಯ ವ್ಯಕ್ತಿಯಾಗಿದ್ದು, ನೀರಾವರಿ ಹಾಗೂ ಗೃಹ ಸಚಿವರಾಗಿ ಅದ್ಭುತ ಕಾರ್ಯ ನಿರ್ವಹಿಸಿರುವ ಹೆಗ್ಗಳಿಕೆ ಅವರದ್ದಾಗಿದೆ. ಹೀಗಾಗಿ ನಿಷ್ಕಳಂಕ ವ್ಯಕ್ತಿತ್ವದೊಂದಿಗೆ ಅವರ ಅಧಿಕಾರ ಅವಧಿಯಲ್ಲಿ ನಾಡು ಉನ್ನತಿಯತ್ತ ಸಾಗಲಿ ಅವರು ಉತ್ತಮವಾಗಿ ಕಾರ್ಯವಹಿಸಿದರೆ ಅವರಿಗೆ ಶ್ರೀಮಠದ ಬೆಂಬಲವಿರುತ್ತದೆ ಎಂದು ನುಡಿದರು.

ಬಿಜೆಪಿ ಪಕ್ಷದ ಕೆಲವು ಸಿದ್ಧಾಂತಗಳು ನಮಗೆ ಒಪ್ಪಿಗೆ ಆಗುವುದಿಲ್ಲ. ಆದರೆ ಬಿ.ಎಸ್ ಯಡಿಯೂರಪ್ಪನವರ ವ್ಯಕ್ತಿತ್ವದ ಕೆಲವು ಅಂಶಗಳು ನಮಗೆ ಇಷ್ಟವಾಗುತ್ತವೆ. ಹಾಗಾಗಿ ಮುಖ್ಯಮಂತ್ರಿ ಸ್ಥಾನದಿಂದ ಅವರನ್ನು ಕೆಳಗಿಳಿಸದಂತೆ ನಾವು ಸಹ ಬಿಜೆಪಿ ಪಕ್ಷದ ನಾಯಕರಿಗೆ ಸೂಚಿಸಿದ್ದೆವು. ಆದರೆ ಅವರವರ ಆಲೋಚನೆ, ಲೆಕ್ಕಾಚಾರಗಳು ಏನೇನಾಗಿರುತ್ತದೆಯೋ ನಮಗೆ ಗೊತ್ತಿಲ್ಲ. ಯಾರೇ ಮುಖ್ಯಮಂತ್ರಿಗಳಾಗಲಿ ನಾಡು, ನುಡಿ, ನೆಲ-ಜಲ ಹಾಗೂ ಸರ್ವರ ಅಭ್ಯುದಯವಾಗಲಿ ಎಂದು ನಾವು ಬಯಸುತ್ತೇವೆಂದು ಎಂದು ಸ್ವಾಮೀಜಿ ಹೇಳಿದರು.

ಇದೇ ವೇಳೆ ಮನುಷ್ಯನಿಗೆ ಸಂಸ್ಕಾರಯುತ ಜೀವನ ಅತ್ಯಂತ ಮುಖ್ಯವಾಗುತ್ತದೆ. ಮೂಢನಂಬಿಕೆ ಕಂದಾಚಾರಗಳನ್ನು ಬದಿಗೊತ್ತಿ ಉತ್ತಮ ಜೀವನವನ್ನು ಹೊಂದಬೇಕು. ಹುಟ್ಟು, ಸಾವು ಪ್ರತಿಯೊಂದು ಜೀವರಾಶಿಯೂ ಅನಿವಾರ್ಯ. ಈ ನಡುವೆ ಸಮಾಜಕ್ಕೆ ನಾವೆಷ್ಟು ಉಪಕಾರಿಗಳಾಗಿ ಬದುಕಿದ್ದೇವೆ ಎನ್ನುವುದು ಪರಿಗಣಿಸಲ್ಪಡಿಸುತ್ತದೆ. ಅದೇ ರೀತಿ ಗೋಣಿ ಬಸಪ್ಪನವರು ವೃತ್ತಿಯಿಂದ ಕೃಷಿಕರಾಗಿದ್ದರು. ಸಮಾಜಸೇವೆ, ಮಠ ಪೀಠಗಳ ಅಭ್ಯದಯಕ್ಕಾಗಿ ಶ್ರಮಿಸಿದರು ಎಂದರು.

ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು ಸಹ ಮಾತನಾಡಿ, ಕಾಯಕ ದಾಸೋಹ ಪ್ರಜ್ಞೆಯನ್ನು ಹಾಗೂ ಸಮಾನತೆಯನ್ನು ಪ್ರತಿಪಾದಿಸಿದವರು ಬಸವಾದಿ ಪ್ರಮಥರು. ಅಂತಹ ಮಹನೀಯರ ಆದರ್ಶಗಳನ್ನು ಸಮಾಜದಲ್ಲಿ ಬಿತ್ತಿದವರು ಸಿರಿಗೆರೆ ತರಳಬಾಳು ಮಠದ ಪೀಠಾಧ್ಯಕ್ಷರಾಗಿದ್ದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರು ಅಂತಹ ಮಹನೀಯರು ಮುತ್ತುಗದೂರು ಗ್ರಾಮದವರು ಎನ್ನುವುದು ಇಡೀ ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಅಲ್ಲದೇ ಶರಣರ ಮಾರ್ಗದರ್ಶನದಲ್ಲಿ ನೆಡೆದು ಬಂದ ಸಾಧು ವೀರಶೈವ ಸಮಾಜ ಪರಿಶ್ರಮಕ್ಕೆ ಕಾರ್ಯದ ಮೂಲಕ ಬದುಕು ಕಟ್ಟಿಕೊಳ್ಳುವುದಕ್ಕೆ ಹೆಸರಾದ ಸಮಾಜ ಇಂತಹ ಸಮಾಜದಿಂದ ಬಂದ ವ್ಯಕ್ತಿಯೊಬ್ಬರು ನಾಡಿನ ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಿರುವುದು ಎಲ್ಲರೂ ಸಂತಸಪಡಬೇಕಾದ ವಿಷಯವಾಗಿದೆ ಎಂದು ಶ್ರೀಗಳು ನುಡಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಹೊಳಲ್ಕೆರೆ ಬಿಜೆಪಿ ಮಂಡಲ ಅಧ್ಯಕ್ಷ ಸಿದ್ದೇಶ್, ಯುಗದರ್ಮ ರಾಮಣ್ಣ ಸೇರಿದಂತೆ ಅನೇಕರು ಇದ್ದರು.

The post ತಾಳ್ಮೆ, ಪ್ರಾಮಾಣಿಕತೆ ಕಾಪಾಡಿಕೊಂಡ್ರೆ ಅಧಿಕಾರ ಹುಡುಕಿಕೊಂಡು ಬರುತ್ತೆ ಎಂಬುದಕ್ಕೆ ಬೊಮ್ಮಾಯಿ ಸಾಕ್ಷಿ: ಪಂಡಿತಾರಾಧ್ಯ ಸ್ವಾಮೀಜಿ appeared first on Public TV.

Source: publictv.in

Source link