ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಂಕಿತ ಉಗ್ರರ ಕೈಗೆ ಸ್ಮಾರ್ಟ್​ಫೋನ್; ಹೈಕೋರ್ಟ್​​ ಗರಂ

ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಂಕಿತ ಉಗ್ರರ ಕೈಗೆ ಸ್ಮಾರ್ಟ್​ಫೋನ್; ಹೈಕೋರ್ಟ್​​ ಗರಂ

ಬೆಂಗಳೂರು: ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದುಕೊಂಡು ಕೋರ್ಟ್​ ಕಲಾಪವನ್ನ ವೀಕ್ಷಿಸಿದ ಪ್ರಕರಣದ ತನಿಖೆಯನ್ನ ನಡೆಸಲು ಹೈಕೋರ್ಟ್​ ಚಿಂತನೆ ನಡೆಸಿದೆ.

ನಿನ್ನೆ ಹಾಗೂ ಇಂದು ವಿಚಾರಣೆಯನ್ನ ನಡೆಸಿದ ಕೋರ್ಟ್​, ಜೈಲಿನಲ್ಲಿ ಆರೋಪಿಗಳು ಫೋನ್ ಮೂಲಕ ಕಲಾಪವನ್ನ ವೀಕ್ಷಿಸಿರೋದನ್ನ ತನಿಖೆ ನಡೆಸಲು ಸೂಚನೆ ನೀಡಿದೆ. ನಿವೃತ್ತ ನ್ಯಾಯಮೂರ್ತಿ, ಐಪಿಎಸ್,‌ ಐಎಎಸ್ ಅಧಿಕಾರಿ‌ಗಳಿಂದ‌‌ ತನಿಖೆಗೆ ಚಿಂತನೆ ನಡೆಸಿದೆ. ಅದರಂತೆ ನಿವೃತ್ತ ಅಧಿಕಾರಿಗಳ‌ ಹೆಸರು ನೀಡಲು ಸರ್ಕಾರಕ್ಕೆ ಸೂಚನೆಯನ್ನ ಕೊಟ್ಟಿದೆ. ಹೀಗಾಗಿ ದಕ್ಷಿಣ ವಲಯ ಐಜಿಪಿಯಿಂದ ತನಿಖೆಗೆ ಸರ್ಕಾರ ಪ್ರಸ್ತಾಪ ಮಾಡಿತು. ಇನ್ನು ಸರ್ಕಾರದ ಪ್ರಸ್ತಾಪವನ್ನ ಹೈಕೋರ್ಟ್ ತಿರಸ್ಕರಿಸಿದೆ. ಜೈಲಿನಿಂದಲೂ ಉಗ್ರ ಕೃತ್ಯ ನಡೆಸಿದ ಉದಾಹರಣೆಗಳಿವೆ. ಹೀಗಾಗಿ ಮೊಬೈಲ್ ಬಳಕೆ ಬಗ್ಗೆ ತನಿಖೆ ಅಗತ್ಯ ಎಂದು ನ್ಯಾ.ಅರವಿಂದ್ ಕುಮಾರ್, ನ್ಯಾ. ಪ್ರದೀಪ್ ಸಿಂಗ್ ಯೆರೂರ್ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.

ನಿನ್ನೆ ಕೋರ್ಟ್​ನಲ್ಲಿ ನಡೆದಿದ್ದೇನು..?
ಕೆಜಿ ಹಳ್ಳಿ & ಡಿಜೆ ಹಳ್ಳಿ ಪೊಲೀಸ್ ಠಾಣೆ ಗಲಾಟೆ ಪ್ರಕರಣಲ್ಲಿ ಬಂಧಿತರಾಗಿರುವ ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನ ವಿಚಾರಣೆಯನ್ನ ನಿನ್ನೆ ಹೈಕೋರ್ಟ್​ ನಡೆಸಿತ್ತು. ಈ ಜಾಮೀನು ಅರ್ಜಿಯ ವಿಚಾರಣೆ ವೇಳೆ ಅಚ್ಚರಿಯ ಬೆಳವಣಿಗೆಗೆ ಹೈಕೋರ್ಟ್ ಸಾಕ್ಷಿಯಾಗಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿಗಳು ಮೊಬೈಲ್ ಮೂಲಕ ಕಲಾಪವನ್ನ ವೀಕ್ಷಿಸುತ್ತಿರೋದು ಗೊತ್ತಾಯಿತು. ಆರೋಪಿಗಳಾದ ಮಹಮ್ಮದ್ ಶರೀಫ್, ಶೇಖ್ ಮೊಹಮ್ಮದ್ ಬಿಲಾಲ್ ಜೈಲಿನ ಒಳಗೆ ಫೋನ್ ಬಳಸಿ ವಿಡಿಯೋ ಕಾನ್ಫರೆನ್ಸ್​ನಲ್ಲಿದ್ದರು.

ನ್ಯಾ.ಅರವಿಂದ್ ಕುಮಾರ್, ನ್ಯಾ. ಪ್ರದೀಪ್ ಸಿಂಗ್ ಯೆರೂರ್ ನೇತೃತ್ವದ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದಾಗ ಫೋನ್​​ನಲ್ಲಿ ಕಲಾಪವನ್ನ ವೀಕ್ಷಿಸಿದ್ದರು. ಈ ಮೂಲಕ ತಮ್ಮ ಕೇಸ್ ಏನಾಗ್ತಿದೆ ಅಂತಾ ಆರೋಪಿಗಳು ನೇರವಾಗಿ ನೋಡುತ್ತಿರುವ ಬಗ್ಗೆ ನ್ಯಾಯಾಧೀಶರ ಗಮನಕ್ಕೆ ಬಂದಿದೆ.

ಇವರಿಗೆ ಉಗ್ರ ಸಂಘಟನೆಯ ಜೊತೆ ಲಿಂಕ್ ಇರುವ ಆರೋಪ ಇದೆ. ಈ ಅಂಶವನ್ನು ಪತ್ತೆ ಮಾಡಿ ಎನ್​ಐಎ ಕೋರ್ಟ್​ಗೆ ಮಾಹಿತಿ ನೀಡಿದೆ. ಎನ್ಐಎ ಪರ ವಕೀಲ‌ ಪ್ರಸನ್ನ ಕುಮಾರ್ ಮಾಹಿತಿ ಸಲ್ಲಿಕೆ ಮಾಡಿದ್ದರು. ಇದನ್ನ ಗಂಭೀರವಾಗಿ ಪರಿಗಣಿಸಿದ್ದ ಕೋರ್ಟ್​, ಶಂಕಿತ ಉಗ್ರರಿಗೆ ಜೈಲಿನಲ್ಲಿ ಸ್ಮಾರ್ಟ್ ಫೋನ್ ಸಿಕ್ಕರೆ ತನಿಖೆ ಹೇಗೆ ಸಾಧ್ಯ? ಅಂತಾ ಬಂಧಿಖಾನೆ ಇಲಾಖೆಯ ಕಾರ್ಯವೈಖರಿ ಬಗ್ಗೆ ಕೋರ್ಟ್​ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಕೈದಿಗಳಿಗೆ ಜೈಲಿನಲ್ಲಿ ಸ್ಮಾರ್ಟ್ ಪೋನ್ ಸಿಕ್ಕಿದ್ದಾದ್ರೂ ಹೇಗೆ? ಈ ಬಗ್ಗೆ ನಾಳೆ ಖುದ್ದು ಸರ್ಕಾರದ ಅಡ್ವೋಕೇಟ್ ಜನರಲ್ ಉತ್ತರಿಸಬೇಕು ಎಂದು ಇಂದಿಗೆ ವಿಚಾರಣೆಯನ್ನ ಮುಂದೂಡಿತ್ತು.

ಪ್ರಕರಣದ ಹಿನ್ನೆಲೆ:
ಡಿಜಿ ಹಳ್ಳಿ & ಡಿಜೆ ಹಳ್ಳಿ ಠಾಣೆಯಲ್ಲಿ ಗಲಾಟೆ ಗಲಭೆ ಪ್ರಕರಣದ ಆರೋಪಿಗಳಲ್ಲಿ ಎನ್ಐಎ ಕೈಗೆತ್ತಿಕೊಂಡು ಎಫ್ಐಆರ್ ದಾಖಲಿಸಿಕೊಂಡಿತ್ತು. ಅದರಲ್ಲಿ ಕೇಸ್​ನ ಎ 15 & ಎ25 ಇಬ್ಬರು ಜಾಮೀನು ಅರ್ಜಿ ಸಲ್ಲಿಸಿದ್ದರು. ಆರೋಪಿಗಳಾದ SDPI ನಗರ ಅಧ್ಯಕ್ಷ ಮೊಹಮ್ಮದ್ ಶರೀಫ್, SDPI ಕಾರ್ಯಕರ್ತ ಶೇಖ್ ಮೊಹಮ್ಮದ್ ಬಿಲಾಲ್ ಅರ್ಜಿ ಹಾಕಿದ್ದರು. ಅದರಂತೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿತ್ತು. ಈ ವೇಳೆ ಆರೋಪಿಗಳು ಜೈಲಿನ ಒಳಗೆ ಜೂಮ್ ಌಪ್ ಮೂಲಕ ಲಾಗ್ ಇನ್ ಆಗಿ ವಾದ ಪ್ರತಿವಾದ ಕೇಳುತ್ತಿದ್ದರು. ಇದರ ಬಗ್ಗೆ ಮಾಹಿತಿ ಪಡೆದ ಎನ್ಐಎ ಈ ಬಗ್ಗೆ ಸಾಕ್ಷಿ ಸಮೇತ ಇಂದು ಕೋರ್ಟ್ ಮುಂದೆ ಹಾಜರುಪಡಿಸಿತು.

The post ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಂಕಿತ ಉಗ್ರರ ಕೈಗೆ ಸ್ಮಾರ್ಟ್​ಫೋನ್; ಹೈಕೋರ್ಟ್​​ ಗರಂ appeared first on News First Kannada.

Source: newsfirstlive.com

Source link