ಅಪಹರಣವಾಗ್ತಿದ್ದ ವ್ಯಕ್ತಿಯನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಪೊಲೀಸರು!

ಹಾಸನ: ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಅಪಹರಣ ಮಾಡುತ್ತಿದ್ದ ಕಿಡಿಗೇಡಿಗಳ ತಂಡದಿಂದ ಪೊಲೀಸರು ತಮ್ಮ ಪ್ರಾಣದ ಹಂಗು ತೊರೆದು ಸಿನಿಮೀಯ ರೀತಿಯಲ್ಲಿ ಆತನನ್ನು ರಕ್ಷಿಸಿದ ಘಟನೆ ಹಾಸನದ ಗೊರೂರಿನಲ್ಲಿ ನಡೆದಿದೆ.

ಹಣಕಾಸಿನ ವಿಷಯ ಸಂಬಂಧ ಕಾಸರಗೋಡಿನ ಅನ್ವರ್(33) ಎಂಬ ಯುವಕನನ್ನು ಕಿಡಿಗೇಡಿಗಳ ತಂಡವೊಂದು ಕಿಡ್ನಾಪ್ ಮಾಡಿ ಹಾಸನಕ್ಕೆ ಎಂಟ್ರಿಯಾಗಿತ್ತು. ಈ ವೇಳೆ ಕಾರು ಗೊರೂರಿನ ಮೂಲಕ ಪಾಸ್ ಆಗುತ್ತಿರುವುದು ತಿಳಿದ ಪೊಲೀಸರು, ಅವರನ್ನು ಹಿಡಿಯುವ ಸಲುವಾಗಿಯೇ ಯಾರಿಗೂ ಅನುಮಾನ ಬಾರದಂತೆ ರಸ್ತೆಗೆ ಅಡ್ಡಲಾಗಿ ಲಾರಿ, ಜೆಸಿಬಿ ನಿಲ್ಲಿಸಿಕೊಂಡು ಕಾಯುತ್ತಿದ್ದರು. ಇದನ್ನೂ ಓದಿ: ಅಂತರ್ ಜಿಲ್ಲಾ ಖದೀಮರ ಬಂಧನ- 1 ಕೋಟಿಗೂ ಅಧಿಕ ಮೌಲ್ಯದ ವಾಹನಗಳು ವಶಕ್ಕೆ

ಲಾರಿ ಅಡ್ಡ ಇರುವುದನ್ನು ನೋಡಿದ ಚಾಲಕ ಕಾರಿನ ವೇಗ ತಗ್ಗಿಸಿದ್ದಾನೆ. ತಕ್ಷಣ ಕಾರಿನ ಬಳಿ ಶರವೇಗದಿಂದ ಓಡಿ ಬಂದ ಗೊರೂರಿನ ಪೊಲೀಸರು, ಕಾರು ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರನ್ನು ಕಂಡೊಡನೇ ಕಾರನ್ನು ಯೂಟರ್ನ್ ಮಾಡಿ ಎಸ್ಕೇಪ್ ಆಗಲು ಕಿಡ್ನಾಪರ್ಸ್ ತಂಡ ಯತ್ನಿಸಿದೆ. ಈ ವೇಳೆ  ಪೊಲೀಸರು ತಮ್ಮ ಪ್ರಾಣದ ಹಂಗನ್ನು ತೊರೆದು, ಚಲಿಸುತ್ತಿದ್ದ ಕಾರಿನ ಹಿಂಬದಿ ಬಾಗಿಲು ತೆರೆದು ಯುವಕನ್ನು ರಕ್ಷಿಸಿದ್ದಾರೆ. ಈ ದೃಶ್ಯ ಸ್ಥಳೀಯರ ಮೊಬೈಲ್‍ನಲ್ಲಿ ಸೆರೆಯಾಗಿದ್ದು, ಸಿನಿಮಾಗಳ ಸಾಹಸ ದೃಶ್ಯಗಳನ್ನು ಮೀರಿಸುವಂತಿದೆ.

ಕಾರಿನಿಂದ ಕಿಡ್ನಾಪ್ ಆದ ಅನ್ವರ್‍ನನ್ನು ಬಚಾವ್ ಮಾಡಿದ್ದರೂ ಕಿಡ್ನಾಪರ್ಸ್ ಕಾರ್ ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಸ್ಥಳೀಯರು ಹಾಗೂ ಪೊಲೀಸರು ಕಾರಿನ ಹಿಂದೆಯೇ ಓಡುತ್ತಾ ತಡೆಯಲು ಯತ್ನಿಸಿದ್ದಾರೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು, ರಸ್ತೆ ಪಕ್ಕದ ಕಾಂಪೌಂಡ್‍ಗೆ ಗುದ್ದಿದೆ. ತಕ್ಷಣ ಕಾರಿನಿಂದ ಇಳಿದ ಕಿಡ್ನಾಪರ್ಸ್ ತಪ್ಪಿಸಿಕೊಂಡಿದ್ದಾರೆ. ಆದರೆ ಪ್ರಾಣದ ಹಂಗು ತೊರೆದು ಕಿಡ್ನಾಪ್ ಆದ ಯುವಕನನ್ನು ರಕ್ಷಿಸಿದ ಪೊಲೀಸರ ತಂಡಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಿಡ್ನಾಪ್ ಆಗಿದ್ದ ಅನ್ವರ್‍ನನ್ನು ರಕ್ಷಿಸಿದ ನಂತರ ಹಾಸನ ಪೊಲೀಸರು ಆತನನ್ನು ಕಾಸರಗೋಡು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಒಟ್ಟಾರೆ ಕಿಡ್ನಾಪ್ ಆಗಿದ್ದ ಯುವಕನನ್ನು ರಕ್ಷಿಸಿದ ಹಾಸನ ಪೊಲೀಸರ ಸಾಹಸ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

The post ಅಪಹರಣವಾಗ್ತಿದ್ದ ವ್ಯಕ್ತಿಯನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಪೊಲೀಸರು! appeared first on Public TV.

Source: publictv.in

Source link