ಭಾರತ ತಂಡಕ್ಕೆ ಒಟ್ಟಿಗೆ ಪಾದಾರ್ಪಣೆ ಮಾಡಿದ ಧೋನಿ, ಕೊಹ್ಲಿ ಶಿಷ್ಯರು

ಕೊಲಂಬೋ: ಭಾರತ ಟಿ20 ತಂಡಕ್ಕೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಪ್ರಸ್ತುತ ನಾಯಕ ವಿರಾಟ್ ಕೊಹ್ಲಿ ಅವರ ಶಿಷ್ಯರಿಬ್ಬರು ಒಟ್ಟಿಗೆ ಪಾದಾರ್ಪಣೆ ಮಾಡಿದ್ದಾರೆ.

ಭಾರತ ಕ್ರಿಕೆಟ್‍ಗೆ ಉತ್ತಮ ಆಟಗಾರರನ್ನು ಸಿದ್ಧಪಡಿಸಿದ ಕೀರ್ತಿ ಐಪಿಎಲ್‍ಗೆ ಸಲ್ಲುತ್ತದೆ. ಯುವ ಆಟಗಾರರಿಗೆ ಭಾರತ ತಂಡ ಸೇರಲು ಐಪಿಎಲ್ ಒಂದು ಉತ್ತಮ ವೇದಿಕೆಯಾಗಿದೆ. ಈಗಾಗಲೇ ಸಾಕಷ್ಟು ಅಟಗಾರರು ಐಪಿಎಲ್ ಮೂಲಕ ಬೆಳಕಿಗೆ ಬಂದು ಟೀಂ ಇಂಡಿಯಾ ಪರ ಅಬ್ಬರಿಸಿದ್ದಾರೆ. ಅದರಂತೆ ಇದೀಗ ಪ್ರಸ್ತುತ ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಭಾರತ ತಂಡದಲ್ಲಿರುವ ಸಾಕಷ್ಟು ಆಟಗಾರರು ಐಪಿಎಲ್‍ನಲ್ಲಿ ಆಡಿ ಮಿಂಚು ಹರಿಸಿದವರಾಗಿದ್ದಾರೆ.

ಐಪಿಎಲ್‍ನಿಂದಾಗಿ ಭಾರತ ತಂಡದ ಬೆಂಚ್ ಸ್ಟ್ರೇಂತ್ ಕೂಡ ಬಲವಾಗಿದೆ. ಸಾಕಷ್ಟು ಆಟಗಾರರು ಭಾರತ ತಂಡಕ್ಕೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಅದರಂತೆ ಇದೀಗ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಧೋನಿ ಶಿಷ್ಯ ಋತುರಾಜ್ ಗಾಯಕ್ವಾಡ್ ಮತ್ತು ಕೊಹ್ಲಿ ಶಿಷ್ಯ ದೇವದತ್ ಪಡಿಕ್ಕಲ್ ಒಟ್ಟಿಗೆ ಟಿ20 ಕ್ರಿಕೆಟ್ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಇದನ್ನೂ ಓದಿ: ಮೀರಾಬಾಯಿ ಗೆದ್ದಿರುವ ಬೆಳ್ಳಿ ಪದಕ ಚಿನ್ನದ್ದಾಗುವ ಸಾಧ್ಯತೆ

blank

ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಗರಡಿಯಲ್ಲಿ ಪಳಗಿರುವ ಋತುರಾಜ್ ಗಾಯಕ್ವಾಡ್ ಮತ್ತು ಆರ್​ಸಿಬಿ ತಂಡದ ಕ್ಯಾಪ್ಟನ್ ಕೊಹ್ಲಿಯ ನಂಬಿಕಸ್ಥ ಬ್ಯಾಟ್ಸ್‌ಮ್ಯಾನ್ ಆಗಿ ಗುರುತಿಸಿಕೊಂಡಿರುವ ಪಡಿಕ್ಕಲ್ ಒಟ್ಟಿಗೆ ಭಾರತದ ಪರ ಡೆಬ್ಯೂ ಪಂದ್ಯವಾಡಿರುವುದು ವಿಶೇಷ. ಈ ಇಬ್ಬರು ಕೂಡ ಐಪಿಎಲ್‍ನಲ್ಲಿ ದಿಗ್ಗಜ ಆಟಗಾರರ ನಡುವೆ ಉತ್ತಮ ಪ್ರದರ್ಶನ ತೋರಿ ಇದೀಗ ಭಾರತ ತಂಡದ ಪರ ಆಡುವ ಅವಕಾಶ ಪಡೆದಿದ್ದಾರೆ.

ಧೋನಿ ಶಿಷ್ಯ ಗಾಯಕ್ವಾಡ್ ಸಿಎಸ್‍ಕೆ ಪರ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಆರಂಭಿಕ ಆಟಗಾರನಾಗಿ 7 ಪಂದ್ಯಗಳಿಂದ 2 ಅರ್ಧಶತಕ ಸಹಿತ 196 ರನ್ ಸಿಡಿಸಿದ್ದಾರೆ. ಕೊಹ್ಲಿ ಶಿಷ್ಯ ಪಡಿಕ್ಕಲ್ ಆರ್​ಸಿಬಿ ಪರ 6 ಪಂದ್ಯಗಳಿಂದ 1 ಶತಕ ಸಹಿತ 195 ರನ್ ಚಚ್ಚಿದ್ದಾರೆ. ಈ ಮೂಲಕ ಐಪಿಎಲ್‍ನಿಂದಾಗಿ ಈ ಇಬ್ಬರು ಆಟಗಾರರು ಇದೀಗ ಟೀಂ ಇಂಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ.

The post ಭಾರತ ತಂಡಕ್ಕೆ ಒಟ್ಟಿಗೆ ಪಾದಾರ್ಪಣೆ ಮಾಡಿದ ಧೋನಿ, ಕೊಹ್ಲಿ ಶಿಷ್ಯರು appeared first on Public TV.

Source: publictv.in

Source link