ಕೇರಳ, ಮಹಾರಾಷ್ಟ್ರದಲ್ಲಿ ಕೋವಿಡ್ ಕಹಳೆ ಮತ್ತೆ ಶುರು -ಸೈಲೆಂಟಾಗಿ 3ನೇ ಅಲೆ ಎಚ್ಚರಿಕೆ ನೀಡ್ತಿದ್ಯಾ ಕೊರೊನಾ?

ಕೇರಳ, ಮಹಾರಾಷ್ಟ್ರದಲ್ಲಿ ಕೋವಿಡ್ ಕಹಳೆ ಮತ್ತೆ ಶುರು -ಸೈಲೆಂಟಾಗಿ 3ನೇ ಅಲೆ ಎಚ್ಚರಿಕೆ ನೀಡ್ತಿದ್ಯಾ ಕೊರೊನಾ?

ದೇಶ ಕೊರೊನಾ ಮುಕ್ತವಾಗಿ ಬಿಡ್ತಾ? ಎಲ್ಲಾ ರಾಜ್ಯಗಳು ಸಾಂಕ್ರಾಮಿಕದಿಂದ ದೂರ ಉಳಿದವಾ? ಎಲ್ಲ ಬಿಸಿ ಸುದ್ದಿಗಳ ನಡುವೆ, ಕೋವಿಡ್ ಸದ್ದು ಮಾಡ್ತಾನೆ ಇಲ್ಲ. ಆದರೆ ಸೈಲೆಂಟಾಗಿ ಕೊರೊನಾ ತನ್ನ ಮೂರನೇ ಅಲೆ ಎಬ್ಬಿಸಲು ತಯಾರಿ ನಡೆಸ್ತಾ ಇದೆ. ಈಗಾಗಲೇ ಕೇರಳ, ಮಹಾರಾಷ್ಟ್ರದಲ್ಲಿ ನಿಧಾನವಾಗಿ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ.

ಹೊಸ ಹೊಸ ರೂಪಾಂತರಿಯ ದರ್ಶನ ಮಾಡಿ ಬಂದಿದ್ದೂ ಆಯ್ತು. ಎರಡನೇ ಅಲೆಯೆಂಬ ಮುಳ್ಳಿನ ಹಾಸಿಗೆ ಮೇಲೆ ಬಿದ್ದು ಎದ್ದು, ದೇಶದ ಜನರೆಲ್ಲ ಸದ್ಯ ಸುಧಾರಿಸಿಕೊಳ್ತಿದ್ದಾರೆ. ಇದ್ರ ಮದ್ಯೆ ಮೂರನೇ ಅಲೆ ಹೆಚ್ಚು ದೂರ ಇಲ್ಲ, ಸಮೀಪದಲ್ಲೇ ಇದೆ ಎನ್ನುವ ಎಚ್ಚರಿಕೆ ತಜ್ಞರಿಂದ ಬರ್ತಾನೆ ಇದೆ. ಹೀಗಿದ್ರೂ ನಾವು ಕೊರೊನಾದಿಂದ ಮುಕ್ತವಾಗಿದ್ದೇವೆ ಅನ್ನೋ ಭಾವ ಎಲ್ಲರಲ್ಲೂ. ಆದ್ರೆ.. ಎಚ್ಚರ.. ಕೊರೊನಾ ವೈರಸ್ ನಿಧಾನವಾಗಿ ಮತ್ತೆ ಚಿಗುರೊಡೆದುಕೊಂಡಿದೆ.

blank

ಕೋವಿಡ್ ಹೊಸ ಕೇಸ್​ಗಳನ್ನ ಹೊತ್ತು ಬಂದಿರುವ ಕೇರಳ
ನಿತ್ಯ ಪ್ರಕರಣಗಳಲ್ಲಿ ಏರುಗತಿ ತೋರುತ್ತಿರುವ ದೇವರ ನಾಡು

ಇದನ್ನ ಕಡೆಗಣಿಸುವ ಹಾಗೇ ಇಲ್ಲ. ದೇಶ ಮತ್ತೆ ಕೊರೊನಾ ಸಾಂಕ್ರಾಮಿಕಕ್ಕೆ ತುತ್ತಾಗುತ್ತಿರುವುದು ಎಚ್ಚರಿಕೆಯ ಗಂಟೆಯಂತಾಗಿದೆ. ಎರಡನೇ ಅಲೆಯಲ್ಲಿ ಸಾಕಷ್ಟು ಸಾವು ನೋವುಗಳನ್ನು ಅನುಭವಿಸಿರುವ ಭಾರತ, ಮತ್ತೆ ಸಾಂಕ್ರಮಿಕದ ಸುಳಿಯಲ್ಲಿ ಸಿಲುಕುವ ಮುನ್ಸೂಚನೆ ನೀಡಿದೆ. ಈ ಎಚ್ಚರಿಕೆಗೆ ಕಾರಣ, ದೈನಂದಿನ ಪ್ರಕರಣದಲ್ಲಿ ಏರಿಕೆ ಕಂಡಿರುವ ಕೇರಳ. ಹೌದು ದೇಶದ ಒಟ್ಟು ಪ್ರಕರಣಗಳ ಲೆಕ್ಕದಲ್ಲಿ ಶೇಕಡ ಅರ್ಧದಷ್ಟು ಸೋಂಕಿತರ ಲೆಕ್ಕವನ್ನು ಕೊಟ್ಟಿರುವುದು ಗಾಡ್ಸ್ ಓನ್ ಕಂಟ್ರಿ ಕೇರಳ. ಈ ಹಿಂದೆಯೂ ದೇಶದ ಮೊದಲ ಕೇಸ್ ವರದಿಯಾಗಿದ್ದು ಕೇರಳದಲ್ಲಿ. ಅಲ್ಲದೆ ಎರಡನೇ ಅಲೆಯಲ್ಲಿ ಹೆಚ್ಚು ತಲ್ಲಣಿಸಿದ್ದು ಇದೆ ರಾಜ್ಯ. ಈಗ ಹೊಸ ಪ್ರಕರಣಗಳನ್ನು ಹೊತ್ತು ನಿಂತಿರುವ ಕೇರಳ, ಬಹುಶಃ ಮೂರನೆ ಅಲೆಯ ಸಂದೇಶವನ್ನು ದೇಶಕ್ಕೆ ನೀಡುತ್ತಿದೆ.

ದೇಶದಲ್ಲಿ ದಿನಕ್ಕೆ 40 ಸಾವಿರ ಹೊಸ ಪಾಸಿಟಿವ್ ಕೇಸ್ ದಾಖಲು
ಒಂದೇ ದಿನ 20 ಸಾವಿರ ಪ್ರಕರಣಗಳ ವರದಿ ಮಾಡಿರುವ ಕೇರಳ

ದೇಶದಲ್ಲಿ ಎರಡನೆ ಅಲೆ ಕಡಿಮೆಯಾಗುತ್ತಿದ್ದಾಗ ಜೂನ್ 6 ರಂದು ತಮಿಳುನಾಡು 20 ಸಾವಿರ ಹೊಸ ಪ್ರಕರಣಗಳನ್ನು ದಾಖಲು ಮಾಡಿತ್ತು. ಇದೇ ಕೊನೆಯದಾಗಿ ದಾಖಲಾದ ಅತಿ ಹೆಚ್ಚಿನ ಕೇಸ್. ಇದಾದ ಬಳಿಕ ಎಲ್ಲ ರಾಜ್ಯಗಳಲ್ಲೂ ಚೇತರಿಕೆಯ ರಿಪೋರ್ಟ್ ಕೊಟ್ಟಿದ್ದು ಸಮಾಧಾನ ತಂದಿತ್ತು. ಅದಾಗಿ 50 ದಿನಗಳ ಬಳಿಕ ಕೇರಳ ಒಂದೇ ರಾಜ್ಯದಲ್ಲಿ ಮತ್ತೆ 20 ಸಾವಿರ ಹೊಸ ಕೋವಿಡ್‌ ಕೇಸ್‌ಗಳು ದಾಖಲಾಗಿರೋದು ಆತಂಕ ಮೂಡಿಸಿದೆ. ದೇಶದಲ್ಲಿ ಪ್ರತಿ ನಿತ್ಯ ಸರಿಸುಮಾರು 40 ಸಾವಿರ ಹೊಸ ಪ್ರಕರಣಗಳು ಕಾಣಿಸಿಕೊಳ್ತಿದ್ದು ಅದ್ರಲ್ಲಿ ಅರ್ಧದಷ್ಟು ಕೊಡುಗೆ ಕೇರಳದ್ದೇ. ಹೀಗಾಗಿಯೇ ಕೇರಳದ ಮುಂದಿನ ಪರಿಸ್ಥಿತಿ ಬಗ್ಗೆ ಎಲ್ಲರಲ್ಲೂ ಆತಂಕ ಮೂಡಿದೆ.

ಕಳೆದ ವಾರದಿಂದ 20 ಸಾವಿರದ ಗಡಿಯತ್ತ ಸಾಗಿದ್ದ ಕೇರಳ
ಒಟ್ಟು 33 ಲಕ್ಷ ಕೊರೊನಾ ಕೇಸ್‌ಗಳ ಗಡಿ ದಾಟಿದ ರಾಜ್ಯ

ಎರಡನೇ ಅಲೆಯ ತೀವ್ರತೆಯನ್ನು ಅತಿ ವೇಗವಾಗಿ ಕಂಟ್ರೋಲ್‌ಗೆ ತಂದ ಕೇರಳ, ಮೇ 29 ರಂದು ಅತಿ ಹೆಚ್ಚು ಕೇಸ್‌ಗಳ ವರದಿ ಮಾಡಿ, ನಿಧಾನವಾಗಿ ಇಳಿಕೆಯ ಮಾರ್ಗವನ್ನು ಹಿಡಿದಿತ್ತು. ದೈನಂದಿನ ಪ್ರಕರಣಗಳು ಸಾವಿರದ ಅಂಚಿಗೆ ಇಳಿಕೆಯಾಗುವಷ್ಟರ ಮಟ್ಟಿಗೆ ಕಂಟ್ರೋಲ್ ಮಾಡಿದ್ದು ಕೇರಳ. ಆದರೆ ಕಳೆದ ವಾರದಿಂದ 16 ಸಾವಿರ, 18 ಸಾವಿರದಿಂದ ಏಕಾಏಕಿ 20 ಸಾವಿರ ಹೊಸ ಪ್ರಕರಣಗಳು ವರದಿಯಾಗಿವೆ. ಇದರಿಂದ ಕೇರಳದಲ್ಲಿ ಸೋಂಕಿಗೆ ತುತ್ತಾದವರ ಒಟ್ಟು ಸಂಖ್ಯೆ 33 ಲಕ್ಷದ ಗಡಿಯನ್ನು ದಾಟಿ ಬಿಟ್ಟಿದೆ.

ಮಹಾರಾಷ್ಟ್ರದಲ್ಲೂ ಕೋವಿಡ್ ಕಹಳೆ ಮತ್ತೆ ಶುರು
ಒಂದೇ ದಿನ 6 ಸಾವಿರ ಪ್ರಕರಣದ ಲೆಕ್ಕ ತಂತು ಆತಂಕ

ಕೇರಳ ಮಾತ್ರವಲ್ಲ, ಕರ್ನಾಟಕದ ನೆರೆ ರಾಜ್ಯ ಮಹಾರಾಷ್ಟ್ರದಲ್ಲೂ ಕೋವಿಡ್ ಕಹಳೆ ಮತ್ತೆ ಶುರುವಾಗಿದೆ. ಮೊದಲ ಅಲೆ ಹಾಗೂ ಎರಡನೇ ಅಲೆಯಲ್ಲಿ ಹೆಚ್ಚು ಸಾವು- ನೋವು ಅನುಭವಿಸಿದ ರಾಜ್ಯ ಮಹಾರಾಷ್ಟ್ರ. ಹಂತ ಹಂತವಾಗಿ ಚೇತರಿಸಿಕೊಂಡಿತ್ತು. ಆದರೆ ಇದೀಗ ಒಂದೇ ದಿನ 6258 ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಮಹಾರಾಷ್ಟ್ರದಲ್ಲಿ ಮತ್ತೆ ಕೋವಿಡ್ ಕಾರ್ಮೋಡ ಆವರಿಸುವ ಆತಂಕ ಶುರುವಾಗಿದೆ.

ಮೂರನೇ ಅಲೆಯ ಪ್ರಾರಂಭದ ಮುನ್ಸೂಚನೆ
ಹರಡುವಿಕೆಯ ಪ್ರಮಾಣದಲ್ಲೂ ಭಾರೀ ಏರಿಕೆ

ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಕೋವಿಡ್‌ ಕೇಸ್‌ಗಳಲ್ಲಿ ಏಕಾಏಕಿ ಏರುಗತಿ ಕಾಣಿಸಿದ್ದು, ದೇಶದ ಎಲ್ಲ ರಾಜ್ಯಗಳು ಎಚ್ಚೆತ್ತುಕೊಳ್ಳಬೇಕಾಗಿ ತಜ್ಞರು ಹೇಳುತ್ತಿದ್ದಾರೆ. ಇದು ಕೊರೊನಾ ಸಾಂಕ್ರಮಿಕದ ಮೂರನೆ ಅಲೆಯಾಗಬಹುದು ಎನ್ನುವ ಮುನ್ಸೂಚನೆಯನ್ನು ನೀಡುತ್ತಿದ್ದಾರೆ. ಅಲ್ಲದೆ ಹರಡುವಿಕೆಯ ಪ್ರಮಾಣದಲ್ಲೂ ಏರಿಕೆಯ ಲೆಕ್ಕಾಚಾರವಿದ್ದು, ಆರ್ ನಾಟ್‌ ವ್ಯಾಲ್ಯೂ ಒಂದರ ಸಮೀಪ ತಲುಪಿರುವುದು ಇನ್ನಷ್ಟು ಆತಂಕ ಸೃಷ್ಟಿಸಿದೆ.

blank

ಕರ್ನಾಟಕದಲ್ಲಿ 1500 ಹೊಸ ಕೇಸ್‌ ದಾಖಲು
ರಾಜ್ಯದಲ್ಲಿ 32 ಸೋಂಕಿತರು ಮೃತ್ಯು ಪಾಲು

ಕರ್ನಾಟಕಕ್ಕೆ ಹತ್ತಿರವಿರುವ ಎರಡೂ ರಾಜ್ಯಗಳಲ್ಲಿ ಕೋವಿಡ್ ಸಂಖ್ಯೆಯಲ್ಲಿ ಹೆಚ್ಚಳವಾಗ್ತಿದೆ. ಆದರೆ ಕರ್ನಾಟಕ ಇದುವರೆಗೂ ಸುಧಾರಿತ ಹಂತದಲ್ಲೇ ಸೋಂಕಿತರ ಲೆಕ್ಕ ತೋರುತ್ತಿದೆ. ದೈನಂದಿನ ಪ್ರಕರಣದಲ್ಲಿ ಕರ್ನಾಟಕ 1500 ಕೇಸ್‌ಗಳನ್ನು ದಾಖಲಿಸಿಕೊಳ್ಳುವ ಜೊತೆಗೆ 32 ಜನ ಸೋಂಕಿತರು ಸಾವಿಗೀಡಾಗಿದ್ದಾರೆ. ಇದರಲ್ಲಿ ರಾಜಧಾನಿ ಬೆಂಗಳೂರು 400 ಸೋಂಕಿತರ ವರದಿ ನೀಡಿದೆ. ಈ ಲೆಕ್ಕಾಚಾರವನ್ನು ಮನದಲ್ಲಿಟ್ಟುಕೊಂಡು ನಮ್ಮ ಎಚ್ಚರಿಕೆಯನ್ನು ನಾವು ಮರೆತರೆ, ಮೂರನೆ ಅಲೆಯನ್ನು ರಾಜ್ಯಕ್ಕೆ ನಾವೇ ಸ್ವಾಗತಿಸಿದಂತಾಗುತ್ತದೆ.

ಪ್ರಯೋಜನಕಾರಿಯಾಗಿ ವರ್ತಿಸುತ್ತಿರುವ ಭಾರತೀಯ ಲಸಿಕೆ
ದಿನ ಒಂದಕ್ಕೆ 40 ಲಕ್ಷ ಲಸಿಕೆ ನೀಡುತ್ತಿರುವ ಭಾರತ ಸರ್ಕಾರ

ಇನ್ನು ದೇಶದಲ್ಲಿ ಲಸಿಕೆ ಡ್ರೈವ್ ಬರದಿಂದ ಸಾಗಿದೆ. ದಿನಕ್ಕೆ 40 ಲಕ್ಷ ಲಸಿಕೆಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ವಿತರಿಸಲಾಗುತ್ತಿದೆ. ಇದರಿಂದ ದೇಶದ ಸುಮಾರು ಶೇಕಡ 20ರಷ್ಟು ಜನರಿಗೆ 1 ಡೋಸ್ ಲಸಿಕೆ ಪೂರೈಕೆಯಾಗಿದೆ ಎನ್ನಾಲಾಗುತ್ತಿದೆ. ಅಲ್ಲದೆ ಶೇಕಡ 10 ರಷ್ಟು ಜನರಿಗೆ ಮಾತ್ರ ಎರಡು ಡೋಸ್ ಲಸಿಕೆ ನೀಡಿದ್ದು, ಇದು ಪರಿಣಾಮಕಾರಿಯಾಗಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಆಗಸ್ಟ್ ಮುಗಿಯೋ ವೇಳೆಗೆ 15 ಕೋಟಿ ವ್ಯಾಕ್ಸಿನ್ ವಿತರಿಸುವ ಗುರಿಯನ್ನು ಸಹ ಸರ್ಕಾರ ಹೊಂದಿದೆ. ಆದರೆ ಲಸಿಕೆ ಪೂರೈಕೆ ಆದ ಮಾತ್ರಕ್ಕೆ ಕೋವಿಡ್ ತಗುಲುವುದಿಲ್ಲ ಎನ್ನುವ ಕಲ್ಪನೆಯಿಂದ ಹೊರ ಬರುವ ಎಚ್ಚರಿಕೆಗಳು ಕೇಳಿ ಬರ್ತಾ ಇದೆ.

ಒಟ್ಟಿನಲ್ಲಿ ಕೊರೊನಾ ಮುಗಿದಿದೆ, ಲಸಿಕೆ ತೆಗೆದುಕೊಂಡಿದ್ದೇವೆ ಎನ್ನುವ ನಿರ್ಲಕ್ಷ್ಯದಿಂದ ಮತ್ತೆ ಎಚ್ಚರ ತಪ್ಪಿದರೆ, ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಸೃಷ್ಟಿಯಾಗುತ್ತಿರುವ ಪರಿಸ್ಥಿತಿ ನಮ್ಮ ರಾಜ್ಯದಲ್ಲಿ ಸೃಷ್ಟಿಯಾಗುವ ಕಾಲ ಹೆಚ್ಚು ದೂರವಿಲ್ಲ. ಇದರಿಂದ ಕೊರೊನಾದಿಂದ ಆದಷ್ಟು ದೂರ ಇರಲು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿದೆ.

ಇಲ್ಲ, ಇನ್ನು ಕೊರೊನಾ ಕಾಲ ಮುಗಿದಿಲ್ಲ. ನೀವು ಎಚ್ಚರಿಕೆ ತಪ್ಪುತ್ತಿದ್ರೆ, ಆ ವೈರಸ್ ನಿಮಗೆ ಹತ್ತಿರವಾಗ್ತಿದೆ ಎನ್ನುವುದು ಮಾತ್ರ ಸತ್ಯ. ಕೊರೊನಾದಿಂದ ದೂರ ಉಳಿಯಲು ನಮ್ಮ ಬಳಿ ಇರುವುದು ಒಂದೇ ಮಂತ್ರ ಮುಂಜಾಗೃತೆ ಇರಲಿ, ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಮಾತ್ರ ಮರೆಯಬೇಡಿ.

The post ಕೇರಳ, ಮಹಾರಾಷ್ಟ್ರದಲ್ಲಿ ಕೋವಿಡ್ ಕಹಳೆ ಮತ್ತೆ ಶುರು -ಸೈಲೆಂಟಾಗಿ 3ನೇ ಅಲೆ ಎಚ್ಚರಿಕೆ ನೀಡ್ತಿದ್ಯಾ ಕೊರೊನಾ? appeared first on News First Kannada.

Source: newsfirstlive.com

Source link