ಅಂದು ಮಾದರಿ ರಾಜ್ಯ – ಇಂದು ಕೇರಳದಲ್ಲಿ ದಾಖಲಾಗುತ್ತಿದೆ ದೇಶದ ಅರ್ಧದಷ್ಟು ಕೇಸ್

– ದೇಶದಲ್ಲಿ ಮೂರನೇ ಅಲೆಯ ಆತಂಕ?
– ಒಂದೇ ದಿನ 22,056 ಕೇಸ್ ಪತ್ತೆ

ತಿರುವನಂತಪುರಂ/ನವದೆಹಲಿ: ಅಂದು ದೇಶಕ್ಕೆ ಮಾದರಿ ರಾಜ್ಯ ಎಂದು ಗುರುತಿಸಿಕೊಂಡಿದ್ದ ಕೇರಳದಲ್ಲಿ ಈಗ ದೇಶದ ಅರ್ಧದಷ್ಟು ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದು, ಇದು ಮೂರನೇ ಅಲೆಯ ಆರಂಭವೇ ಎಂಬ ಪ್ರಶ್ನೆ ಎದ್ದಿದೆ.

ಕಳೆದೆರೆಡು ದಿನಗಳಿಂದ ಕೇರಳದಲ್ಲಿ 40 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಕೊರೊನಾ ಪತ್ತೆಯಾಗಿದೆ. ಹೊಸತಾಗಿ ದೃಢಪಡುತ್ತಿರುವ ಸೋಂಕು ಪ್ರಮಾಣದ ಶೇ.50ರಷ್ಟು ಕೇರಳದಲ್ಲಿಯೇ ಇದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಬುಧವಾರ ಒಂದೇ ದಿನ 22,056 ಹೊಸ ಪ್ರಕರಣಗಳು ದಾಖಲಾಗಿದ್ದು, 131 ಮಂದಿ ಸೋಂಕಿತರು ಅಸುನೀಗಿದ್ದಾರೆ.

ಕೇರಳ ಸರ್ಕಾರ ಬಕ್ರಿದ್ ಹಿನ್ನೆಲೆಯಲ್ಲಿ ಕೋವಿಡ್ ನಿಯಮಗಳನ್ನು ಸಡಿಲಗೊಳಿಸಿದ್ದರಿಂದ ಸೋಂಕಿತರ ಸಂಖ್ಯೆ ಭಾರೀ ಏರಿಕೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಇತ್ತೀಚೆಗೆ ನಡೆದ ಕಾರ್ಯಕ್ರಮಗಳೇ ಕೇರಳದಲ್ಲಿ ಸೂಪರ್ ಸ್ಪ್ರೆಡರ್ ಆಗಲು ಕಾರಣ ಎಂದಿದ್ದಾರೆ. ಹೋಮ್ ಐಸೊಲೇಷನ್‍ನಲ್ಲಿರುವವರ ಬಗ್ಗೆ ನಿಗಾ ಇರಿಸಿ ಎಂದಿದ್ದಾರೆ. ಇದನ್ನೂ ಓದಿ : ಕೆಲವು ಸಂಬಂಧಗಳು ಶಾಶ್ವತವಾಗಿ ಉಳಿಯುತ್ತವೆ – ಮುನಿಸು ಮರೆತು ಒಂದಾದ ದರ್ಶನ್, ರಕ್ಷಿತಾ

ಜೂನ್ 24 ರಿಂದ ಇಲ್ಲಿಯವರೆಗೆ ಕೊಟ್ಟಾಯಂ ಜಿಲ್ಲೆಯಲ್ಲಿ ಶೇ.64ರಷ್ಟು ಪ್ರಕರಣಗಳು ಏರಿಕೆಯಾದರೆ ಮಲಪ್ಪುರಂನಲ್ಲಿ ಶೇ.59, ಎರ್ನಾಕುಳಂನಲ್ಲಿ ಶೇ.46.5, ತ್ರಿಶ್ಯೂರಿನಲ್ಲಿ ಶೇ.45.4ರಷ್ಟು ಪ್ರಕರಣಗಳು ಏರಿಕೆಯಾಗಿದೆ.

ಬುಧವಾರ ಒಂದೇ ದಿನ ಕೇರಳದಲ್ಲಿ 22,156 ಮಂದಿಗೆ ಸೋಂಕು ದೃಢಪಟ್ಟರೆ, ಮಹಾರಾಷ್ಟ್ರದಲ್ಲಿ 6,258, ಮಿಜೋರಾಂ 1,845, ತಮಿಳುನಾಡು 1,767 ಹಾಗೂ ಒಡಿಶಾದಲ್ಲಿ 1,629 ಜನಕ್ಕೆ ಸೋಂಕು ತಗುಲಿದೆ. ಒಟ್ಟು ಸೋಂಕಿತರಲ್ಲಿ ಈ ಐದು ರಾಜ್ಯಗಳಿಂದಲೇ ಶೇ.77ರಷ್ಟು ಪ್ರಕರಣ ವರದಿಯಾಗಿವೆ. ಇದೇ ಅವಧಿಯಲ್ಲಿ ದೇಶಾದ್ಯಂತ 640 ಜನ ಮೃತಪಟ್ಟಿದ್ದಾರೆ. ಮಹಾರಾಷ್ಟ್ರ 254 ಮತ್ತು ಕೇರಳದಲ್ಲಿ 156 ಮಂದಿ ಬಲಿಯಾಗಿದ್ದಾರೆ.

ಬುಧವಾರದವರೆಗೆ ದೇಶದಲ್ಲಿ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 3,99,436 ಇದ್ದರೆ ಕೇರಳದಲ್ಲಿ 1,45,87 ಸಕ್ರಿಯ ಪ್ರಕರಣಗಳಿವೆ.

blank

ದೇಶದ 12 ರಾಜ್ಯಗಳ 54 ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.10ಕ್ಕೆ ಏರಿಕೆಯಾಗಿರುವ ಕುರಿತು ಕೇಂದ್ರ ಸರ್ಕಾರ ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೆ ದಿನದ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಮೂರನೇ ಅಲೆಯ ಆರಂಭವೇ ಎಂಬ ಪ್ರಶ್ನೆ ಎದ್ದಿದೆ.

ಈ ಹಿಂದೆ ಹೆಮ್ಮಾರಿ ಕೋವಿಡ್-19 ಹರಡುವುದನ್ನು ನಿಯಂತ್ರಿಸಿದ್ದಕ್ಕಾಗಿ ಕೇರಳದ ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಅವರಿಗೆ ವಿಶ್ವಸಂಸ್ಥೆ ವಿಶೇಷ ಗೌರವ ಸಲ್ಲಿಸಿತ್ತು.

The post ಅಂದು ಮಾದರಿ ರಾಜ್ಯ – ಇಂದು ಕೇರಳದಲ್ಲಿ ದಾಖಲಾಗುತ್ತಿದೆ ದೇಶದ ಅರ್ಧದಷ್ಟು ಕೇಸ್ appeared first on Public TV.

Source: publictv.in

Source link