ಜಮೀನು, ನೌಕರಿ ಇದ್ರೂ ದಶಕದಿಂದ ಈ ಗ್ರಾಮದ ಯುವಕರಿಗಿಲ್ಲ ಮದ್ವೆ ಭಾಗ್ಯ.. ಯಾಕೆ ಹುಡ್ಗಿ ಕೊಡ್ತಿಲ್ಲ ಗೊತ್ತಾ?

ಜಮೀನು, ನೌಕರಿ ಇದ್ರೂ ದಶಕದಿಂದ ಈ ಗ್ರಾಮದ ಯುವಕರಿಗಿಲ್ಲ ಮದ್ವೆ ಭಾಗ್ಯ.. ಯಾಕೆ ಹುಡ್ಗಿ ಕೊಡ್ತಿಲ್ಲ ಗೊತ್ತಾ?

ದಶಕವೇ ಕಳೆದ್ಹೋಯ್ತು ಕಣ್ರಿ.. ಈ ಊರಲ್ಲಿ ಡುಂ ಡುಂ..ಪೀ..ಪೀ ಸೌಂಡ್​ ಕೇಳಿ.. ಸುಮುಹೂರ್ತೆ ಸಾವಧಾನ.. ಅನ್ನೋ ಮಂತ್ರ ಮೊಳಗಿ.. ಹುಡುಗರ ಹಣೆಗೆ ಬಾಸಿಂಗ ಬಿದ್ದೇ ಇಲ್ಲ.. ಕಂಕಣ ಭಾಗ್ಯ ಕೂಡಿ ಬಂದಿಲ್ಲ.. ನೆಲ ಒದ್ದು ನೀರು ತೆಗೆಯೋ ಹುಮ್ಮಸ್ಸಿನ ಕೆಂಡದಂಥ ಯುವಕರು.. 40ರ ಆಸು ಪಾಸಿನ ಮಧ್ಯವಯಸ್ಕರು.. ಎಲ್ಲಾ ಇದ್ದಾರೆ.. ಆದ್ರೆ ಮನೆ ಮುಂದೆ ಹಂದಿರದ ಕಂಬ ಬಿದ್ದಿಲ್ಲ.. ಮನೆ ಮುಂದೆ ರಂಗೋಲಿ ಹಾಕುವ ಸುಂದರ ಬಳೆಗಳ ಸದ್ದು ಕೇಳ್ತಿಲ್ಲ.. ಮೈಗೆ ಘಂ ಎನಿಸೋ ಸೇಂಟು ಬಿದ್ದರೂ.. ಅರಿಶಿಣ ಬಿದ್ದಿಲ್ಲ.. ಈ ಊರಲ್ಲಿ ಹಲವು ವರ್ಷಗಳಿಂದ ಅರಿಶಿಣ ಮೈನ ನೋಟವೂ ಸಿಕ್ಕಿಲ್ಲ.. ಸೋ ಎನ್ನಿರೇ.. ಸೋಬಾನ ಎನ್ನಿರೋ ಅನ್ನೋ ಸೋಬಾನ ಗೀತೆ ಕೇಳಿಲ್ಲ… ಎದ್ದು..ಬಿದ್ದು ಗೆದ್ದು ಬಾ ಅಂತಾ ಫಸ್ಟ್​ನೈಟ್​ಗೆ ಸ್ನೇಹಿತರಿಗೆ ಹಾರೈಸುವ ಕಾಲೆಳೆಯುವಂಥ ಬೋರ್ಡ್​ಗಳೂ ಬಿದ್ದಿಲ್ಲ.. ಹಾಗಂತ ಇಲ್ಲಿನ ಯುವಕರೇನೂ ಅನಕ್ಷರ್ಸ್ಥರಲ್ಲ.. ಬಡವರಲ್ಲ.. ಉತ್ತಮ ಸಂಬಳ ತರೋ ನೌಕರಿ ಇದೆ.. ಮುಂದಿನ ತಲೆಮಾರುಗಳು ಕೂತು ಉಣ್ಣುವಷ್ಟು ಆಸ್ತಿ ಇದೆ.. ಆದ್ರೂ ಮನೆ ಬೆಳಗೋ ಮಡದಿ ಸಿಗ್ತಿಲ್ಲ.. ಹೊಸ್ತಿಲ ಮೇಲಿಟ್ಟ ಅಕ್ಕಿ ತುಂಬಿದ ಚಟಾಕಿ ಒದ್ದು ಮನೆಗೆ ಸಮೃದ್ಧಿ ತರೋ ವಧು ಸಿಗ್ತಿಲ್ಲ.. ಇನ್​ಫ್ಯಾಕ್ಟ್ ಮದುವೆ ಆಗೋ ಒಂದು ಹುಡುಗೀನು ಸಿಗ್ತಿಲ್ಲ..  ಅಂದಹಾಗೆ ಈ ಊರು ಯಾವುದೋ ಬೇರೆ ದೇಶದಲ್ಲೋ.. ಬೇರೆ ರಾಜ್ಯದಲ್ಲೋ ಇಲ್ಲ.. ಬದಲಿಗೆ ಹಾರ್ಟ್​ ಆಫ್​ ದಿ ಕರ್ನಾಟಕ.. ಗದಗ್​​ ಜಿಲ್ಲೆಯಲ್ಲೇ ಇದೆ.. ಇದಕ್ಕೆ ಕಾರಣ ಮಾತ್ರ ‘ಅವರೇ’ ಅಂತೆ..!

 

blank

ಆ ಊರಿನ ಯುವಕರು ನೋಡೋಕೆ ಏನೋ ಸುಂದರವಾಗಿದ್ದಾರೆ. ದಷ್ಟಪುಷ್ಟವಾಗಿಯೂ ಇದ್ದಾರೆ. ಶ್ರೀಮಂತರೂ ಬೇರೆ. ಜಮೀನು ನೌಕರಿ ಎಲ್ಲವೂ ಇದೆ. ಆದ್ರೆ ಈ ಊರಿನಲ್ಲಿ ಸರಿ ಸುಮಾರು 100 ಕ್ಕೂ ಹೆಚ್ಚು ಜನ ಯುವಕರಿಗೆ ಮದುವೆನೇ ಆಗಿಲ್ಲ. ಬಹುತೇಕರು ನಲವತ್ತರ ಆಸುಪಾಸಿನಲ್ಲಿದ್ದರೂ ಇನ್ನೂ ಕುಮಾರರಾಗಿಯೇ ಇದ್ದಾರೆ. ಇಷ್ಟಕ್ಕೆಲ್ಲಾ ಕಾರಣ ‘ಅವರ’ ಬೇಜವಾದ್ದಾರಿತನ..

ಅಷ್ಟಕ್ಕೂ ಯಾರು ಅವರು? ಸಮಸ್ಯೆ ಏನು?

ಈ ಊರಿನ ಜನರು ಶ್ರೀಮಂತರಾಗಿದ್ರೂ.. ಒಂದು ಉತ್ತಮವಾದ ಮನೆ ಬೇಕಲ್ವಾ ಇರೋಕೆ.. ಹಾಗಂತ ಮನೆ ಮಾಡಿಕೊಳ್ಳದಿರೋಕೆ ಕಾರಣ ಇವರ ತಪ್ಪಲ್ಲ.. ಬದಲಿಗೆ ಇಲ್ಲಿ ಆಗಿದ್ದೇ ಒಂದು.. ಬಯಸಿದ್ದೇ ಇನ್ನೋಂದು ಅನ್ನುವಂಥ ಘಟನೆ.

ಹೌದು.. ಮೇಲಿನ ಫೋಟೋ ನೋಟಿ.. ಈ ಮನೆಗಳು ಕಿಟಕಿ ಬಾಗಿಲುಗಳಿಲ್ಲದೇ ಬಿದ್ದಿಹೋಗ್ತಿವೆ. ಬಿದ್ದುಹೋಗಿರೋ ಮನೆಗಳ ಮುಂದೆ ತಗಡಿನ ಶೆಡ್​ಗಳಲ್ಲಿ ಬದುಕು ದೂಡ್ತಿರೋ ಜನ. ನಮಗೆ ಯಾರೂ ಕನ್ಯೆ ಕೊಡ್ತಿಲ್ರಿ ಅಂತ ಗೋಳಾಡ್ತಿರೋ ಈ ಊರಿನ ಯುವಕರು.

ಇದು ಗದಗ ಜಿಲ್ಲೆಯ ರೋಣ ತಾಲೂಕಿನ ಗಾಡಗೋಳಿ ಗ್ರಾಮದ ಮಲಪ್ರಭಾ ನದಿಯ ಸಂತ್ರಸ್ತರ ಗೋಳು. ಹೌದು ಈ ಗ್ರಾಮದಲ್ಲಿ ಸರಿ ಸುಮಾರು 10 ವರ್ಷಗಳಿಂದ ಮದುವೆಗಳೇ ನಡೆದಿಲ್ಲವಂತೆ. ಇವರು ಮಲಪ್ರಭಾ ನದಿಯ ಪ್ರವಾಹಕ್ಕೆ ತುತ್ತಾಗಿ 2009ರಲ್ಲಿಯೇ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದವರು. ಆ ಸಂದರ್ಭದಲ್ಲಿ ಸರ್ಕಾರ ಸಂತ್ರಸ್ತರಿಗಾಗಿ ಕಟ್ಟಿಸಿದ್ದ ಸುಮಾರು 500 ಮನೆಗಳನ್ನ ಇನ್ನೂ ಹಂಚಿಕೆ ಮಾಡಿಲ್ಲ. ಪ್ರವಾಹ ಬಂದು ಇಡೀ ಊರು ಕೊಚ್ಚಿಹೋಗಿದೆ. ಹೀಗಾಗಿ ಊರನ್ನ ಬೇರೆ ಕಡೆ ಸ್ಥಳಾಂತರ ಮಾಡಿ ಮನೆ ಕಟ್ಟಿಸಿ ಸರಿಸುಮಾರು 10 ವರ್ಷ ಕಳೆದಿವೆ. ಆದ್ರೂ ಸಹ ಇವರಿಗೆ ಮನೆ ಹಂಚಿಕೆ ಮಾಡಿಲ್ಲ.

blank

ಈ ಭಾಗದ ಶಾಸಕರು ಮತ್ತು ಅಧಿಕಾರಿಗಳು ಇವರಿಗೆ ಶಾಶ್ವತ ನೆಲೆಯನ್ನ ಕಲ್ಪಿಸಿಲ್ಲ. ಇದೇ ಸಮಸ್ಯೆಯಿಂದ ಇಂದು ಗ್ರಾಮದಲ್ಲಿ ಯಾರೊಬ್ಬರಿಗೂ ಸ್ವಂತ ಸೂರಿಲ್ಲ. ಕೊನೆ ಪಕ್ಷ ತಾವಾದರೂ ಮನೆಕಟ್ಟಿಸಿಕೊಳ್ಳೋಣ ಅಂದ್ರೆ ಅವರ ಹೆಸರಲ್ಲಿ ಜಾಗವಿಲ್ಲ. ಹೀಗಾಗಿ ತಮಗೆ ಇಷ್ಟ ಬಂದಲ್ಲಿ ತಗಡಿನ ಸೆಡ್​ಗಳನ್ನ ನಿರ್ಮಿಸಿಕೊಂಡು ಜೀವನ ದೂಡ್ತಿದ್ದಾರೆ. ಮದುವೆ ಮಾಡಿಕೊಳ್ಳೋದಕ್ಕೂ ಈ ಊರಿನ ಯುವಕರು ಪರದಾಡ್ತಿದ್ದಾರೆ. ಸ್ವಂತ ಜಾಗವಿಲ್ಲ ಮನೆ ಇಲ್ಲ. ಹೇಗೆ ಇವರಿಗೆ ಮಗಳನ್ನ ಕೊಡೋದು ಅಂತ ಯಾರೂ ಕನ್ಯ ಕೊಡೋದಕ್ಕೆ ಮುಂದೆ ಬರ್ತಿಲ್ವಂತೆ.

blank

ಇನ್ನು ಸರ್ಕಾರ ಕಟ್ಟಿಸಿರೋ ಬಹುತೇಕ ಮನೆಗಳು ಬಿದ್ದು ಹೋಗಿವೆ. ಕೆಲವು ಮನೆಗಳಿಗೆ ಕಿಡಿಕಿ ಬಾಗಿಲುಗಳಿಲ್ಲ ಎಲ್ಲ ಕಿತ್ತುಹೋಗಿವೆ. ವಿದ್ಯುತ್ ವ್ಯವಸ್ಥೇ ಮೊದಲೇ ಇಲ್ಲ. ಅಂತದ್ರಲ್ಲೇ ಜೀವನ ಸಾಗಿಸ್ತಿದ್ದಾರೆ. ಒಟ್ಟಿನಲ್ಲಿ ಈ ಗ್ರಾಮಸ್ಥರು ಹತ್ತು ವರ್ಷಗಳಿಂದ ತಲೆ ಮ್ಯಾಲೆ ಒಂದ್ಸೂರಿಗಾಗಿ ಕಾದು ಕಾದು ಸುಸ್ತಾಗಿ ಹೋಗಿದ್ದಾರೆ. ಇಷ್ಟೆಲ್ಲಾ ಆದ್ರೂ ಶಾಸಕರು ಅಧಿಕಾರಿಗಳು ಬರೀ ಆಶ್ವಾಸನೆ ಕೊಟ್ಟು ಯಾಮಾರಿಸ್ತಿದ್ದಾರೆ ಅನ್ನೋದೆ ದುರಂತ. ಹೀಗಾಗಿಯೇ ನಮ್ಮ ಈ ಸ್ಥಿತಿಗೆ.. ನಮಗೆ ವಧು ಸಿಗದಿರೋದಿಕ್ಕೆ.. ಈ ಅಧಿಕಾರಿಗಳು ಹಾಗೂ ಶಾಸಕರೇ ಕಾರಣ ಅಂತಿದ್ದಾರೆ ಅಲ್ಲಿನ ಜನರು. ಒಟ್ಟಿನಲ್ಲಿ ಈ ಸಮಸ್ಯೆ ಆದಷ್ಟು ಬೇಗ ಬಗೆ ಹರಿದು.. ಈ ಊರಲ್ಲೂ ಸಂಭ್ರಮ ಮನೆ ಮಾಡಲಿ ಅನ್ನೋದು ನಮ್ಮ ಆಶಯ.

The post ಜಮೀನು, ನೌಕರಿ ಇದ್ರೂ ದಶಕದಿಂದ ಈ ಗ್ರಾಮದ ಯುವಕರಿಗಿಲ್ಲ ಮದ್ವೆ ಭಾಗ್ಯ.. ಯಾಕೆ ಹುಡ್ಗಿ ಕೊಡ್ತಿಲ್ಲ ಗೊತ್ತಾ? appeared first on News First Kannada.

Source: newsfirstlive.com

Source link