ವಾಕಿಂಗ್​ಗೆ ಹೋಗಿದ್ದ ಜಡ್ಜ್​​​ ಹತ್ಯೆ? ಬೇಕಂತಲೇ ಗುದ್ದಿದ ಆಟೋದ ಹಿಂದಿನ ಕಹಾನಿ ಏನು?

ವಾಕಿಂಗ್​ಗೆ ಹೋಗಿದ್ದ ಜಡ್ಜ್​​​ ಹತ್ಯೆ? ಬೇಕಂತಲೇ ಗುದ್ದಿದ ಆಟೋದ ಹಿಂದಿನ ಕಹಾನಿ ಏನು?

ರಾಂಚಿ: ಬೆಳ್ಳಂಬೆಳಗ್ಗೆ ವಾಕಿಂಗ್​ಗೆ ಹೋಗಿದ್ದ ಜಡ್ಜ್​ಗೆ ಆಟೋ ಡಿಕ್ಕಿ ಹೊಡಿಸಿ ಸಾವಿಗೆ ಈಡು ಮಾಡಿರುವ ಘಟನೆ ಬುಧವಾರ ಜಾರ್ಖಂಡ್​ನ ಧನ್​ಬಾದ್ ಜಿಲ್ಲೆಯನಲ್ಲಿ ನಡೆದಿದೆ. ಧನ್​ಬಾದ್​ ಜಿಲ್ಲಾ ಸೆಷನ್ಸ್ ಕೋರ್ಟ್​​​ ನ್ಯಾಯಾಧೀಶ ಉತ್ತಮ್ ಆನಂದ್​ ಸಾವನ್ನಪ್ಪಿದ್ದು, ಇವರು ಹೈಪ್ರೊಫೈಲ್​ ಕೊಲೆ ಕೇಸ್​ಗಳನ್ನು ವಿಚಾರಣೆ ನಡೆಸುತ್ತಿದ್ದರು. ಅಲ್ಲದೇ ಇತ್ತೀಚೆಗೆ ಕೆಲವು ಪ್ರಮುಖ ಕ್ರಿಮಿನಲ್​ಗಳ ಜಾಮೀನು ತಿರಸ್ಕರಿಸಿದ್ದರು ಎನ್ನಲಾಗಿದೆ. ಸದ್ಯ ಉತ್ತಮ್​​ ಆನಂದ್​ ಅವರಿಗೆ ಅಪಘಾತವಾಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಉದ್ದೇಶ ಪೂರ್ವಕವಾಗಿಯೇ ಅವರನ್ನು ಕೊಲೆ ಮಾಡಲಾಗಿದೆಯಾ? ಎಂಬ ಪ್ರಶ್ನೆ ಉದ್ಭವವಾಗಿದೆ.

ಕ್ರಿಮಿನಲ್ಸ್​ಗಳಿಂದ ಜಡ್ಜ್​ ಉತ್ತಮ್ ಆನಂದ್​ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆಟೋ ಹಿಂಬದಿಯಿಂದ ಡಿಕ್ಕಿಯಾಗಿದ್ದ ಪರಿಣಾಮ ಅವರು ರಸ್ತೆಯ ಬದಿಯಲ್ಲೇ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಈ ಸ್ಥಳೀಯರೊಬ್ಬರು ಅವರನ್ನು ಶಹೀದ್​ ನಿರ್ಮಲ್ ಮಹ್ತೊ ಮೆಮೋರಿಯಲ್​ ಆಸ್ಪತ್ರೆಗೆ ದಾಖಲಾಸಿದ್ದರು. ಆದರೆ ತೀವ್ರ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೇ ಜಡ್ಜ್​​ ಸಾವನ್ನಪ್ಪಿದ್ದಾರೆ.

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಾರ್​ ಕೌನ್ಸಿಲ್​, ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಆಗ್ರಹ ಮಾಡಿದೆ. ಅಲ್ಲದೇ ಸುಪ್ರೀಂ ಕೋರ್ಟ್​ ವಕೀಲರು​ ಕೂಡ ಸಿಬಿಐ ತನಿಖೆ ಮಾಡುವಂತೆ ಕೋರಿದ್ದಾರೆ. ಜಾರ್ಖಂಡ್ ಸರ್ಕಾರ ಪ್ರಕರಣವನ್ನು ಎಸ್​ಐಟಿ ವಿಚಾರಣೆ ನಡೆಸಲು ಆದೇಶ ನೀಡಿದೆ. ಪ್ರಕರಣದ ಸಂಬಂಧ ಈಗಾಗಲೇ ಆಟೋ ಚಾಲಕ ಹಾಗೂ ಆತನ ಸಹಚರರನ್ನು ಬಂಧಿಸಿದ್ದಾರೆ.

ಆಟೋದ ಹಿಂದಿದೆ ಭಯಾನಕ ಕಹಾನಿ

ಒಂದು ವೇಳೆ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗದೇ ಇದ್ದಿದ್ದರೆ ಮೇಲ್ನೋಟಕ್ಕೆ  ಇದೊಂದು ಸಾಮಾನ್ಯ ಅಪಘಾತ ಪ್ರಕರಣ ಎಂದು ಪರಿಗಣಿತವಾಗುತ್ತಿತ್ತೋ ಏನೋ ಗೊತ್ತಿಲ್ಲ. ಆದ್ರೆ, ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ನೋಡಿದ ಬಳಿಕ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದು ಸುಳ್ಳಲ್ಲ. ಮೊದಲನೇಯದಾಗಿ ಖಾಲಿ ರಸ್ತೆಯಲ್ಲಿರೋ ಈ ಆಟೋ.. ಬಲ ಭಾಗದಿಂದ ಎಡ ಭಾಗಕ್ಕೆ ವೇಗವಾಗಿ ಬಂದು ನ್ಯಾಯಾಧೀಶರಿಗೆ ಡಿಕ್ಕಿ ಹೊಡೆಯುತ್ತೆ. ಬಳಿಕ.. ಯಾರೊಬ್ಬರೂ ಹೊರ ಬಂದು ಏನಾಗಿದೆ? ಅಂತಾ ಕೂಡ ನೋಡದೇ ಅಷ್ಟೇ ವೇಗವಾಗಿ ಹೊರಟು ಹೋಗ್ತಾರೆ.

ಬಳಿಕ ತನಿಖೆ ಆರಂಭಿಸಿದ ಪೊಲೀಸರು ಈ ಆಟೋ ಓನರ್​ನನ್ನ ಪತ್ತೆ ಹಚ್ಚುತ್ತಾರೆ. ಆದ್ರೆ, ಈ ಅಪಘಾತ ನಡೆಯೋ ಕೆಲವೇ ಗಂಟೆ ಮೊದಲು ಅದನ್ನು ಇವರಿಂದ ಕದಿಯಲಾಗಿತ್ತು ಅಂತಾ ತಿಳಿದು ಬಂದಿತ್ತಂತೆ. ಬಳಿಕ ಈ ಅಪಘಾತದ ಬಗ್ಗೆ ಮತ್ತಷ್ಟು ಪೊಲೀಸರ ಸಂಶಯ ಬಲವಾಗಿದ್ದು ತನಿಖೆ ಚುರುಕು ಗೊಂಡಿತ್ತು. ಸದ್ಯ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ವೇಗ ಪಡೆದುಕೊಂಡಿದೆ.

ಇನ್ನು ಈ ಘಟನೆ ಸಾರ್ವಜನಿಕ ವಲಯದಲ್ಲೂ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದ್ದು, ನ್ಯಾಯಾಂಗದ ರಕ್ಷಣೆಯನ್ನು ರಾಜ್ಯಾಂಗ ಮಾಡಬೇಕಾಗಿದ್ದು.. ನ್ಯಾಯಾಧೀಶರ ಭದ್ರತೆಗೆ ರಾಜ್ಯ ಸರ್ಕಾರಗಳು ಗಮನ ಹರಿಸಬೇಕಿವೆ ಎಂದು ಒತ್ತಾಯ ಕೇಳಿ ಬಂದಿದೆ.

The post ವಾಕಿಂಗ್​ಗೆ ಹೋಗಿದ್ದ ಜಡ್ಜ್​​​ ಹತ್ಯೆ? ಬೇಕಂತಲೇ ಗುದ್ದಿದ ಆಟೋದ ಹಿಂದಿನ ಕಹಾನಿ ಏನು? appeared first on News First Kannada.

Source: newsfirstlive.com

Source link