ಸಕ್ಕರೆ ನಾಡಲ್ಲಿ ಹನಿಟ್ರ್ಯಾಪ್ ದಂಧೆ, ಯುವಕನಿಂದ ಹಣ ದೋಚಿದ್ದ ಗ್ಯಾಂಗ್ ಅಂದರ್

ಮಂಡ್ಯ: ಬೆಂಗಳೂರು ಸೇರಿದಂತೆ ದೊಡ್ಡ ನಗರಗಳಲ್ಲಿ ನಡೆಯುತ್ತಿದ್ದ ಹನಿಟ್ರ್ಯಾಪ್ ದಂಧೆ ಸಕ್ಕರೆ ನಾಡು ಮಂಡ್ಯಕ್ಕೂ ಕಾಲಿಟ್ಟಿದೆ. ಮಹಿಳೆಯನ್ನು ಮುಂದಿಟ್ಟುಕೊಂಡು ಯುವಕರನ್ನು ವಂಚಿಸುತ್ತಿದ್ದ ಕತರ್ನಾಕ್ ಗ್ಯಾಂಗ್ ಅನ್ನು ಮಂಡ್ಯ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

ಯುವತಿಯ ಮೋಹಕ್ಕೆ ಮರುಳಾಗಿ ವಂಚನೆಗೊಳಗಾಗಿದ್ದ ಗುತ್ತಲು ಬಡಾವಣೆಯ ಗಿರೀಶ್ ದೂರು ನೀಡಿದ ಹಿನ್ನೆಲೆಯಲ್ಲಿ ತನಿಖೆ ಆರಂಭಿಸಿದ ಪೊಲೀಸರು, ಓರ್ವ ಯುವತಿ ಹಾಗೂ ಆಕೆಯ ಪ್ರಿಯಕರ ರವಿಚಂದ್ರ ಅಲಿಯಾಸ್ ನಾಯಿ ರವಿ, ಕಾರ್ತಿಕ್, ಕಿರಣ್ ಮತ್ತು ಚೆನ್ನಪಟ್ಟಣ ಮೂಲದ ಮಂಜು ಸೇರಿ ಐವರನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.

ಬಲೆ ಬೀಸಿದ್ದು ಹೇಗೆ?
ಕಾರ್ ಶೋರೂಂನಲ್ಲಿ ಕೆಲಸ ಮಾಡುತ್ತಿದ್ದ ಗಿರಿಶ್ ತನ್ನ ಸಂಬಂಧಿ ಕಿರಣ್ ಬಳಿ ನನಗೊಬ್ಬಳು ಹುಡುಗಿಯನ್ನು ಪರಿಚಯಿಸುವಂತೆ ಕೇಳಿಕೊಂಡಿದ್ದ. ಕಿರಣ್ ಯುವತಿಯ ನಂಬರ್ ನೀಡಿ ಪರಿಚಯ ಮಾಡಿಕೊಳ್ಳುವಂತೆ ಹೇಳಿದ್ದ. ಗಿರೀಶ್ ಪರಿಚಯ ಮಾಡಿಕೊಳ್ಳುತ್ತಿದ್ದಂತೆ ಆ ಯುವತಿ ಬಣ್ಣದ ಮಾತುಗಳನ್ನಾಡಿ, ಹಣ ನೀಡುವಂತೆ ಕೇಳಿದ್ದಾಳೆ. ಹಣ ನೀಡುವುದಕ್ಕೆ ಒಪ್ಪಿದ ಗಿರೀಶ್‍ನನ್ನು ಜುಲೈ 22ರಂದು ಮಂಡ್ಯ ತಾಲೂಕಿನ ಕೊತ್ತತ್ತಿ ಗ್ರಾಮದ ಜ್ವಾಲಾಮುಖಿ ದೇವಾಲಯ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದಿದ್ದಾಳೆ.

ಮೊದಲೇ ಯುವತಿಯ ಸಂಘ ಬಯಸಿದ್ದ ಗಿರೀಶನಿಗೆ ನಿರ್ಜನ ಪ್ರದೇಶ ಕಂಡು ಲಾಡು ಬಂದು ಬಾಯಿಗೆ ಬಿತ್ತು ಎಂದುಕೊಂಡಿದ್ದ. ಆದರೆ ಮೊದಲೇ ಪ್ಲಾನ್ ಮಾಡಿದಂತೆ ಕೆಲಹೊತ್ತಿನಲ್ಲೇ ಯುವತಿಯ ಪ್ರಿಯಕರ ರವಿಚಂದ್ರ ಹಾಗೂ ಆತನ ಸ್ನೆಹಿತರು ಅಲ್ಲಿಗೆ ಬಂದು ಗಿರೀಶನ ಬಳಿಯಿದ್ದ 30 ಸಾವಿರ ಹಣ, ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು.

blank

ಹಣ ಮತ್ತು ಮೊಬೈಲ್ ಕಳೆದುಕೊಂಡ ಗಿರೀಶ್, ಮಂಡ್ಯ ಗ್ರಾಮಾಂತರ ಪೊಲೀಸರ ಮುಂದೆ ನಡೆದ ಅಷ್ಟೂ ವಿಚಾರವನ್ನು ವಿವರಿಸಿದ್ದ. ಬಳಿಕ ಆತನ ಹೇಳಿಕೆಯನ್ನು ದಾಖಲಿಸಿಕೊಂಡ ಪೊಲೀಸರು, ಹನಿಟ್ರ್ಯಾಪ್ ನಡೆಸಿದ್ದ ಯುವತಿ ಮತ್ತು ಆಕೆಯ ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ಇನ್ನು ನಗರ ಪ್ರದೇಶಗಳಲ್ಲಿ ನಡೆಯುತ್ತಿದ್ದ ಹನಿಟ್ರ್ಯಾಪ್ ದಂಧೆ, ಹಳ್ಳಿಗಳಿಗೂ ವ್ಯಾಪಿಸುತ್ತಿರುವುದಕ್ಕೆ ಕೊತ್ತತ್ತಿ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

The post ಸಕ್ಕರೆ ನಾಡಲ್ಲಿ ಹನಿಟ್ರ್ಯಾಪ್ ದಂಧೆ, ಯುವಕನಿಂದ ಹಣ ದೋಚಿದ್ದ ಗ್ಯಾಂಗ್ ಅಂದರ್ appeared first on Public TV.

Source: publictv.in

Source link