ಕಿರಿಯರಿಗೆ ಅವಕಾಶ ನೀಡಲು ಶೆಟ್ಟರ್ ಸಂಪುಟ ತ್ಯಾಗ: ಬಿಎಸ್‍ವೈ

ಬೆಂಗಳೂರು: ಮಾಜಿ ಸಚಿವ ಜಗದೀಶ್ ಶೆಟ್ಟರ್ ಅವರು ಬೆಳಗ್ಗೆ ಬಂದು ಮಾತನಾಡಿದರು. ಕಿರಿಯರಿಗೆ ಅವಕಾಶ ನೀಡಲು ಸಂಪುಟ ತ್ಯಾಗ ಮಾಡುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಆರ್‍ಎಸ್‍ಎಸ್‍ನ ಕೇಶವಕೃಪಾಗೆ ಭೇಟಿ ನೀಡಿದ ವೇಳೆ ಈ ಕುರಿತು ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಬೆಳಗ್ಗೆ ಬಂದು ಮಾತನಾಡಿದರು. ತಮ್ಮ ನಿರ್ಧಾರದ ಬಗ್ಗೆ ನನಗೆ ತಿಳಿಸಿದರು. ಕಿರಿಯರಿಗೆ ಅವಕಾಶ ಆಗಲಿ ಎಂದು ಸಂಪುಟ ತ್ಯಾಗ ಮಾಡುತ್ತಿರುವ ನಿರ್ಧಾರಕ್ಕೆ ಬಂದಿರುವುದಾಗಿ ಶೆಟ್ಟರ್ ಹೇಳಿದರು ಎಂದು ವಿವರಿಸಿದರು.  ಇದನ್ನೂ ಓದಿ: ಶೆಟ್ಟರ್ ನನಗೆ ತುಂಬಾ ಆತ್ಮೀಯರು, ಅವರ ಬಳಿ ಮಾತಾಡ್ತೀನಿ: ಬೊಮ್ಮಾಯಿ

ವಲಸಿಗರಿಗೆ ಸಚಿವ ಸ್ಥಾನ ಕೊಡುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ. ಅವರು ಸರ್ಕಾರ ರಚನೆಗೆ ಕಾರಣ ಆದವರು, ಸೂಕ್ತ ಸ್ಥಾನಮಾನ ಕೊಡುವ ಬಗ್ಗೆ ಬೊಮ್ಮಾಯಿಯವರ ಜೊತೆ ಮಾತನಾಡುತ್ತೇನೆ ಎಂದರು.

ಸಂಪುಟ ರಚನೆ ವಿಚಾರ ಬೊಮ್ಮಾಯಿಯವರಿಗೆ ಮತ್ತು ವರಿಷ್ಠರಿಗೆ ಬಿಟ್ಟಿದ್ದು, ನಾನು ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಲ್ಲ. ಬೊಮ್ಮಾಯಿಯವರಿಗೆ ಯಾರು ಸೂಕ್ತವೋ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲಿ. ಸಂಪುಟಕ್ಕೆ ತೆಗೆದುಕೊಳ್ಳಿ ಎಂದು ನಾನು ಯಾರನ್ನೂ ಶಿಫಾರಸು ಮಾಡುವುದಿಲ್ಲ. ಏನೇ ಇದ್ದರೂ ಬೊಮ್ಮಾಯಿಯವರನ್ನು ಭೇಟಿ ಆಗಲು ಮುಖಂಡರಿಗೆ, ಕಾರ್ಯಕರ್ತರಿಗೆ ಹೇಳಿದ್ದೇನೆ. ಮಂತ್ರಿ ಮಾಡೋದು ಸೇರಿದಂತೆ ಏನೇ ಇದ್ದರೂ ಬೊಮ್ಮಾಯಿಯವರ ಜೊತೆ ಮಾತನಾಡಿ. ನನ್ನ ಮೇಲೆ ಒತ್ತಡ ಹಾಕಬೇಡಿ ಅಂದಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಶೆಟ್ಟರ್ ರೀತಿ ಮಂತ್ರಿ ಸ್ಥಾನ ಬೇಡ ಎನ್ನಲ್ಲ: ಈಶ್ವರಪ್ಪ

ಬೊಮ್ಮಾಯಿಯವರು ನಿನ್ನೆ ಒಳ್ಳೆಯ ತೀರ್ಮಾನಗಳನ್ನು ಘೋಷಿಸಿದ್ದಾರೆ. ಬಡವರು, ರೈತರ ಬಗ್ಗೆ ಕಾಂಗ್ರೆಸ್ ನವರು ಕೇವಲ ಮಾತನಾಡುತ್ತಾರೆ. ನಾವು ಅಕ್ಷರಶಃ ತೀರ್ಮಾನ ತೆಗೆದುಕೊಂಡು ಜಾರಿ ಮಾಡ್ತೇವೆ. ಬೊಮ್ಮಾಯಿಯವರು ಮುಖ್ಯಮಂತ್ರಿ ಆಗಿ ಒಳ್ಳೆಯ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಬೊಮ್ಮಾಯಿಯವರ ಮೊದಲ ದಿನದ ಕಾರ್ಯವನ್ನು ಯಡಿಯೂರಪ್ಪ ಶ್ಲಾಘಿಸಿದ್ದಾರೆ.

ಇದೇ ವೇಳೆ ಆರ್‍ಎಸ್‍ಎಸ್ ಸಮನ್ವಯ ಬೈಠಕ್ ಕುರಿತು ಮಾತನಾಡಿದ ಅವರು, ಬಹಳ ದಿನಗಳ ನಂತರ ಸಂಘ ಪರಿವಾರದವರ ಜೊತೆ ಚರ್ಚೆಗೆ ಅವಕಾಶ ಸಿಕ್ಕಿತ್ತು. ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಪ್ರತಿ ವಾರ ಜಿಲ್ಲೆಗಳಿಗೆ ಭೇಟಿಗೆ ನಿರ್ಧರಿಸಲಾಗಿದೆ. ಗಣಪತಿ ಹಬ್ಬದ ಬಳಿಕ ಜಿಲ್ಲೆಗಳಿಗೆ ಪ್ರತಿ ವಾರ ಭೇಟಿ ನೀಡಲಾಗುವುದು. ಕಾರ್ಯಕರ್ತರ ಜೊತೆ ಸಭೆ, ಯೋಗ್ಯ ಅಭ್ಯರ್ಥಿಗಳಿಲ್ಲದ ಕಡೆ ಅಭ್ಯರ್ಥಿಗಳ ಆಯ್ಕೆಗೆ ಆದ್ಯತೆ, ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಸಂಘಟನೆ ಬಲಪಡಿಸುವ ಕೆಲಸ ಮಾಡುತ್ತೇನೆ. ಮುಂದಿನ ಚುನಾವಣೆಯಲ್ಲಿ 135-150 ಸೀಟ್ ಗೆದ್ದು ಅಧಿಕಾರಕ್ಕೆ ಬರುವ ಸಂಕಲ್ಪ ಮಾಡಿದ್ದೇವೆ. ಅಧಿಕಾರ ಇಲ್ಲದಿದ್ದರೂ ಒಳ್ಳೆಯ ಕೆಲಸಗಳನ್ನು ಮಾಡಲು ಸಾಧ್ಯವಿದೆ. ನಾಳೆ ಗುಂಡ್ಲುಪೇಟೆಗೆ ಹೋಗಿ ರವಿ ಅವರ ಕುಟುಂಬದವರಿಗೆ ಸಾಂತ್ವನ ಹೇಳುತ್ತೇನೆ. ಯಾರೂ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ತಿಳಿಸಿದರು. ಇದನ್ನೂ ಓದಿ: ನನ್ನನ್ನು ಬಿಟ್ಟು ಕ್ಯಾಬಿನೆಟ್ ಮಾಡಲ್ಲ – ಮಂತ್ರಿಗಿರಿಗಾಗಿ ದೆಹಲಿಯಲ್ಲಿ ಕತ್ತಿ ಲಾಬಿ

ಆರ್‍ಎಸ್‍ಎಸ್‍ನ ಕೇಶವಕೃಪಾಗೆ ಭೇಟಿ ನೀಡಿದ ಯಡಿಯೂರಪ್ಪ, ರಾಜೀನಾಮೆ ಬಳಿಕ ಆರ್‍ಎಸ್‍ಎಸ್ ಮುಖಂಡರ ಭೇಟಿ ಮಾಡಿ ಚರ್ಚೆ ನಡೆಸಿದರು. ನಿನ್ನೆಯಷ್ಟೇ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದ ಆರ್‍ಎಸ್‍ಎಸ್ ಮುಖಂಡ ಮುಕುಂದ್, ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದರು. ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಮತ್ತು ಎಂಎಲ್‍ಸಿ ರವಿಕುಮಾರ್ ಸಹ ಇದ್ದರು.

ಸುಮಾರು ಎರಡು ಗಂಟೆಗಳಿಂದಲೂ ಹೆಚ್ಚು ಕಾಲ ಕೇಶವಕೃಪಾದಲ್ಲಿ ಮಾತುಕತೆ ನಡೆಸಿದ್ದು, ಇದೇ ವೇಳೆ ಯಡಿಯೂರಪ್ಪ ಅವರ ಪಕ್ಷ ಕಟ್ಟಿದ ರೀತಿ, ಶ್ರಮ, ತ್ಯಾಗ, ನಿಷ್ಠೆಯನ್ನು ಆರ್‍ಎಸ್‍ಎಸ್ ಮುಖಂಡರು ಶ್ಲಾಘಿಸಿದ್ದಾರೆ. ಈ ವೇಳೆ ಆರ್‍ಎಸ್‍ಎಸ್ ಮುಖಂಡರು ಯಡಿಯೂರಪ್ಪನವರಿಗೆ ಸನ್ಮಾನ ಸಹ ಮಾಡಿದ್ದಾರೆ. ಯಡಿಯೂರಪ್ಪ ಸಾಧನೆ, ಜನ-ರೈತ ಪರ ಕಾಳಜಿಗಳನ್ನು ಹಾಡಿ ಹೊಗಳಿದ್ದಾರೆ.

ಈ ವೇಳೆ ಆರ್‍ಎಸ್‍ಎಸ್ ಸಮನ್ವಯ ಬೈಠಕ್ ನಡೆದಿದ್ದು, ಮಾಜಿ ಸಿಎಂ ಯಡಿಯೂರಪ್ಪ, ಆರ್‍ಎಸ್‍ಎಸ್ ಮುಖಂಡರಾದ ಸಿ.ಆರ್.ಮುಕುಂದ್, ಸುಧೀರ್, ವಿ.ನಾಗರಾಜ್ ಮತ್ತು ಇತರರು ಭಾಗಿಯಾಗಿದ್ದರು. ಆರ್‍ಎಸ್‍ಎಸ್ ಸ್ವಯಂ ಸೇವಕನಾಗಿ ತಾವು ಕೆಲಸ ಆರಂಭಿಸಿದ ದಿನಗಳ ಬಗ್ಗೆ ಯಡಿಯೂರಪ್ಪ ಮಾತನಾಡಿದರು. ಸುಮಾರು 20 ನಿಮಿಷಗಳ ಕಾಲ ಅನುಭವ ಹಂಚಿಕೊಂಡರು. ಇದೇ ವೇಳೆ ಸುಮಾರು 18ಕ್ಕೂ ಹೆಚ್ಚು ಆರ್‍ಎಸ್‍ಎಸ್ ಮುಖಂಡರು ಯಡಿಯೂರಪ್ಪ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

The post ಕಿರಿಯರಿಗೆ ಅವಕಾಶ ನೀಡಲು ಶೆಟ್ಟರ್ ಸಂಪುಟ ತ್ಯಾಗ: ಬಿಎಸ್‍ವೈ appeared first on Public TV.

Source: publictv.in

Source link