ವಾನಿಂದು ಹಸರಂಗ ಮಾರಕ ದಾಳಿ- ಭಾರತ ವಿರುದ್ಧ ಟಿ20 ಸರಣಿ ಕೈವಶ ಪಡಿಸಿಕೊಂಡ ಶ್ರೀಲಂಕಾ

ಕೊಲಂಬೋ: ವಾನಿಂದು ಹಸರಂಗ ಮಾರಕ ದಾಳಿಗೆ ತತ್ತರಿಸಿದ ಭಾರತ ತಂಡ ಮೂರನೇ ಟಿ20 ಸರಣಿಯನ್ನು ಹೀನಾಯವಾಗಿ ಸೋತು ಸರಣಿ ಕೈ ಚೆಲ್ಲಿದೆ.

ವಾನಿಂದು ಹಸರಂಗ 4 ಓವರ್ 4 ವಿಕೆಟ್ ಮತ್ತು ಧನಂಜಯ ಡಿ ಸಿಲ್ವಾ ಅಜೇಯ 23ರನ್( 20 ಎಸೆತ, 2 ಬೌಂಡರಿ) ಜವಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಭಾರತ ವಿರುದ್ಧ 7 ವಿಕೆಟ್‍ಗಳ ಭರ್ಜರಿ ಜಯ ದಾಖಲಿಸಿ 2-1 ರಿಂದ ಟಿ20 ಸರಣಿಯನ್ನು ವಶಪಡಿಸಿಕೊಂಡಿದೆ.

ಭಾರತ ನೀಡಿದ 88 ರನ್‍ಗಳ ಮೊತ್ತವನ್ನು ಬೆನ್ನಟ್ಟಿದ ಶ್ರೀಲಂಕಾ ತಂಡ ಆರಂಭದಲ್ಲಿ ಅವಿಷ್ಕಾ ಫರ್ನಾಂಡೊ 12ರನ್(18 ಎಸೆತ, 1 ಬೌಂಡರಿ) ಮತ್ತು ಮಿನೋಡ್ ಭನುಕಾ 18 ರನ್(27 ಎಸೆತ, 1 ಬೌಂಡರಿ) ಬೇಗನೆ ವಿಕೆಟ್ ಕಳೆದುಕೊಂಡಿತು. ಆದರೆ ನಂತರ ಬಂದ ಧನಂಜಯ ಡಿ ಸಿಲ್ವಾ ಅವರ ಸಮಯೋಚಿತ ಬ್ಯಾಟಿಂಗ್‍ನಿಂದಾಗಿ 14.3 ಓವರ್‍ ಗಳಲ್ಲಿ 3 ವಿಕೆಟ್ ಕಳೆದುಕೊಂಡು 82ರನ್‍ಗಳನ್ನು ಚೇಸ್ ಮಾಡಿ ಗೆದ್ದು ಬೀಗಿತು.

ಭಾರತದ ಆಟಗಾರರ ಪೆವಿಲಿಯನ್ ಪರೇಡ್
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡಕ್ಕೆ ವಾನಿಂದು ಹಸರಂಗ ಮಾರಕವಾದರು. ಇವರ ಬೌಲಿಂಗ್‍ಗೆ ಆರಂಭದಿಂದಲೇ ವಿಕೆಟ್ ಕಳೆದುಕೊಂಡ ಸಾಗಿದ ಭಾರತ ತಂಡದ ಯುವ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದರು. ಋತುರಾಜ್ ಗಾಯಕ್ವಾಡ್ 14 ರನ್(10 ಎಸೆತ, 2 ಬೌಂಡರಿ), ಭುವನೇಶ್ವರ್ ಕುಮಾರ್ 16 ರನ್(32 ಎಸೆತ) ಮತ್ತು ಕುಲದೀಪ್ ಯಾದವ್ ಅಜೇಯ 23 ರನ್( 28 ಎಸೆತ) ಸಿಡಿಸಿದನ್ನು ಹೊರತು ಪಡಿಸಿ ಉಳಿದ ಯಾವೊಬ್ಬ ಬ್ಯಾಟ್ಸ್‌ಮ್ಯಾನ್ ಕೂಡ ಒಂದಕ್ಕಿ ಮೊತ್ತ ದಾಟಲಿಲ್ಲ. ಭಾರತ 3 ಆಟಗಾರರು ಸೊನ್ನೆ ಸುತ್ತಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಅಂತಿಮವಾಗಿ 20 ಓವರ್‍ ಗಳಲ್ಲಿ 8 ವಿಕೆಟ್ ಕಳೆದುಕೊಂಡು 81 ರನ್ ಹೊಡೆಯಲಷ್ಟೇ ಭಾರತ ಶಕ್ತವಾಯಿತು.

ದಾಸುನ್ ಶಾನಕಾ 2 ವಿಕೆಟ್ ಪಡೆದರೆ, ರಮೇಶ್ ಮೆಂಡಿಸ್ , ದುಷ್ಮಂತ ಚಮೀರ ತಲಾ 1 ವಿಕೆಟ್ ಕಿತ್ತರು.

The post ವಾನಿಂದು ಹಸರಂಗ ಮಾರಕ ದಾಳಿ- ಭಾರತ ವಿರುದ್ಧ ಟಿ20 ಸರಣಿ ಕೈವಶ ಪಡಿಸಿಕೊಂಡ ಶ್ರೀಲಂಕಾ appeared first on Public TV.

Source: publictv.in

Source link