ಮಗನನ್ನು ಕಾಲುವೆಗೆ ತಳ್ಳಿ ಕೊಲೆಗೈದ ಅಪ್ಪ

ರಾಯಚೂರು: ಸಾಲ ತೀರಿಸಲು ಮಗ ಆಸ್ತಿ ಮಾರುವುದಕ್ಕೆ ಬಿಡುತ್ತಿಲ್ಲಾ ಎನ್ನುವ ಕಾರಣಕ್ಕೆ ಮಗನನ್ನೇ ಪಾಪಿ ತಂದೆಯೊಬ್ಬ ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ತುರವಿಹಾಳದಲ್ಲಿ ನಡೆದಿದೆ.

ಭೀಮಣ್ಣ (20) ಕೊಲೆಯಾದ ದುರ್ದೈವಿ ಯುವಕ. ಎರಡು ಮದುವೆಯಾಗಿದ್ದ ಭೀಮಣ್ಣನ ತಂದೆ ಹನುಮಂತ ಆಸ್ತಿ ವಿಚಾರವಾಗಿ ಮಗನೊಂದಿಗೆ ಆಗಾಗ ಜಗಳವಾಡುತ್ತಿದ್ದ. ಆಸ್ತಿ ಮಾರಲು ಹೊರಟಾಗ ಮಗ ಅಡ್ಡಿಪಡಿಸಿದ್ದ. ಹೀಗಾಗಿ ಮಗನನ್ನು ನಂಬಿಸಿ ಕಾಲುವೆ ಬಳಿ ಕರೆದೊಯ್ದು ಕಾಲುವೆಗೆ ನೂಕಿ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಮುಳುಗಡೆಯಾದ ಸೇತುವೆ ಮೇಲೆ ಕಾರು ಚಾಲಕನ ದುಸ್ಸಾಹಸ

ಅಪ್ಪನ ಮಾತನ್ನು ನಂಬಿ ಕಾಲುವೆ ಬಳಿ ಬಂದ ಭೀಮಣ್ಣನನ್ನು ತಂದೆಯೇ ಕಾಲುವೆಗೆ ತಳ್ಳಿದ್ದಾನೆ. ಈಜು ಬಾರದ ಭೀಮಣ್ಣ ಹರಿಯುವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಘಟನೆ ಹಿನ್ನೆಲೆ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಹನುಮಂತನನ್ನು ಪೊಲೀಸರು ಬಂಧಿಸಿದ್ದಾರೆ.

The post ಮಗನನ್ನು ಕಾಲುವೆಗೆ ತಳ್ಳಿ ಕೊಲೆಗೈದ ಅಪ್ಪ appeared first on Public TV.

Source: publictv.in

Source link